ತ.ನಾಡಿಗೆ ರಾತ್ರೋ ರಾತ್ರಿ ಹರಿದ ಕಾವೇರಿ; ಮಂಡ್ಯದಲ್ಲಿ ಭುಗಿಲೆದ್ದ ರೈತರ ಆಕ್ರೋಶ!
ಸುಪ್ರೀಂ ಕೋರ್ಟ್ ತೀರ್ಪು ಹಿನ್ನಲೆಯಲ್ಲಿ ಮಂಗಳವಾರ ರಾತ್ರಿಯಿಂದಲೇ ಕರ್ನಾಟಕ ಸರ್ಕಾರ ತಮಿಳುನಾಡಿಗೆ ನೀರು ಬಿಡಲು ಆರಂಭಿಸಿದ್ದು, ಕೃಷ್ಣ ರಾಜ ಸಾಗರ, ಕಬಿನಿ ಹಾಗೂ ಹಾರಂಗಿ ಜಲಾಶಯಗಳ ಮೂಲಕ ನೀರು ಹರಿಸುತ್ತಿದೆ.

ಮಂಡ್ಯ: ಸುಪ್ರೀಂ ಕೋರ್ಟ್ ತೀರ್ಪು ಹಿನ್ನಲೆಯಲ್ಲಿ ಮಂಗಳವಾರ ರಾತ್ರಿಯಿಂದಲೇ ಕರ್ನಾಟಕ ಸರ್ಕಾರ ತಮಿಳುನಾಡಿಗೆ ನೀರು ಬಿಡಲು ಆರಂಭಿಸಿದ್ದು, ಕೃಷ್ಣ ರಾಜ ಸಾಗರ, ಕಬಿನಿ ಹಾಗೂ ಹಾರಂಗಿ ಜಲಾಶಯಗಳ ಮೂಲಕ ನೀರು ಹರಿಸುತ್ತಿದೆ.
ಮೂಲಗಳ ಪ್ರಕಾರ ನಿನ್ನೆ ನಡೆದ ಸರ್ವಪಕ್ಷ ಸಭೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನಂತೆ ತಮಿಳುನಾಡಿಗೆ ನೀರು ಹರಿಸಲು ತೀರ್ಮಾನ ಕೈಗೊಳ್ಳಲಾಗಿದ್ದು, ಅದರಂತೆ ಮಂಗಳವಾರ ರಾತ್ರಿಯಿಂದಲೇ ರಾಜ್ಯದ ಮೂರು ಪ್ರಮುಖ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ. ಕೆಆರ್ ಎಸ್ ನಿಂದ ನಿನ್ನೆ ರಾತ್ರಿ ಸುಮಾರು 11 ಸಾವಿರ ಕ್ಯೂಸೆಕ್ ನೀರು ಹರಿದಿದ್ದು, ಕಬಿನಿ ಜಲಾಶಯದಿಂದ 1 ಸಾವಿರ ಕ್ಯೂಸೆಕ್ ಹಾಗೂ ಹಾರಂಗಿ ಜಲಾಶಯದಿಂದ 4 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ. ಮೂರೂ ಜಲಾಶಯಗಳಲ್ಲಿ ವ್ಯಾಪಕ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದ್ದು, ಹೆಚ್ಚುವರಿ ಭದ್ರತೆ ನಡುವೆ ನೀರು ಹರಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಮಂಡ್ಯದಲ್ಲಿ ಭುಗಿಲೆದ್ದ ಆಕ್ರೋಶ
ಇನ್ನು ಸರ್ಕಾರದ ಈ ಕ್ರಮವನ್ನು ವಿರೋಧಿಸಿ ಮಂಡ್ಯದಲ್ಲಿ ರೈತರ ಆಕ್ರೋಶ ಭುಗಿಲೆದ್ದಿದ್ದು, ರಾತ್ರಿಯಿಂದಲೇ ರೈತರು ಪ್ರತಿಭಟನೆಗೆ ಮುಂದಾಗಿದ್ದಾರೆ. ಇನ್ನು ಇಂದು ಬೆಳಗ್ಗೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಬಳಿ ಇರುವ ವೆಲ್ಲೆಸಿ ಸೇತುವೆ ಬಳಿ ರೈತರು ನದಿಗಿಳಿದು ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸದಂತೆ ಆಗ್ರಹಿಸುತ್ತಿದ್ದಾರೆ.
ಮದ್ದೂರು-ಮಳವಳ್ಳಿ ಹೆದ್ದಾರಿ ಬಂದ್
ಇದೇ ವೇಳೆ ತಮಿಳುನಾಡಿಗೆ ನೀರು ಬಿಟ್ಟಿರುವುದನ್ನು ವಿರೋಧಿಸಿ ಮಳವಳ್ಳಿ ತಾಲ್ಲೂಕಿನ ಉಪ್ಪಿನ ಕೆರೆ ಗ್ರಾಮಸ್ಥರು ವ್ಯಾಪಕ ಪ್ರತಿಭಟನೆ ನಡೆಸುತ್ತಿದ್ದು, ಬೆಳಗ್ಗೆ 6 ಗಂಟೆಯಿಂದಲೇ ಹೆದ್ದಾರಿ ತಡೆ ನಡೆಸಿದ್ದಾರೆ. ಮದ್ದೂರು-ಮಳವಳ್ಳಿ ಹೆದ್ದಾರಿಯಲ್ಲಿ ರಸ್ತೆಯಲ್ಲೇ ಕುಳಿತು ಗ್ರಾಮಸ್ಥರು ಧರಣಿ ನಡೆಸುತ್ತಿದ್ದು, ಈ ಮಾರ್ಗದ ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ಹೀಗಾಗಿ ಮದ್ದೂರು ಸಮೀಪದಿಂದಲೇ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ಮತ್ತೊಂದೆಡೆ ಸ್ಥಳೀಯ ಟ್ರಾಫಿಕ್ ಪೊಲೀಸರು ಮದ್ದೂರಿನಿಂದ ಮಳವಳ್ಳಿಗೆ ತೆರಳುವ ವಾಹನಗಳನ್ನು ಬದಲಿ ಮಾರ್ಗಕ್ಕೆ ಕಳುಹಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


