ದಾಳಿ ಮಾಡಲು ಕಾದಿದ್ದಾರೆ 100ಕ್ಕೂ ಹೆಚ್ಚು ಉಗ್ರರು: ಕೇಂದ್ರ ಸಚಿವ ಸಂಪುಟಕ್ಕೆ ಅಜಿತ್ ಧೋವಲ್ ಮಾಹಿತಿ
ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಮೂಲದ 100ಕ್ಕೂ ಹೆಚ್ಚು ಉಗ್ರರು ಭಾರತದ ಮೇಲೆ ದಾಳಿ ಮಾಡಲು ಕಾದಿದ್ದಾರೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರು ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ನವದೆಹಲಿ: ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಮೂಲದ 100ಕ್ಕೂ ಹೆಚ್ಚು ಉಗ್ರರು ಭಾರತದ ಮೇಲೆ ದಾಳಿ ಮಾಡಲು ಕಾದಿದ್ದಾರೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರು ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
ರಾಜಧಾನಿ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಮಹತ್ವದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅಜಿತ್ ಧೋವಲ್ ಅವರು ಈ ಆಘಾತಕಾರಿ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಉರಿ ಉಗ್ರ ದಾಳಿ ಬಳಿಕ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಸಿದ ಸೀಮಿತ ದಾಳಿ ಬಳಿಕ ಗಡಿಯಲ್ಲಿ ಉಗ್ರಗಾಮಿ ಚಟುವಟಿಕೆಗಳು ಹೆಚ್ಚಾಗಿದ್ದು, ಯಾವುದೇ ಸಂದರ್ಭದಲ್ಲಿ ಉಗ್ರರು ಭಾರತ ಮೇಲೆ ದಾಳಿ ನಡೆಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಸಭೆಲ್ಲಿ ಪಾಲ್ಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಜಿತ್ ಧೋವಲ್ ಸಂಪೂರ್ಣ ವಿವರಗಳನ್ನು ನೀಡಿದ್ದು, ಅಂತೆಯೇ ಉಗ್ರ ದಾಳಿ ಎದುರಿಸುವ ನಿಟ್ಟಿನಲ್ಲಿ ಭಾರತ ಕೈಗೊಳ್ಳಬೇಕಾಗ ಕಾರ್ಯಗಳ ಕುರಿತೂ ಕೂಡ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಪ್ರಸ್ತುತ ಗಡಿ ನಿಯಂತ್ರಣ ರೇಖೆ ಬಳಿ ಅಪಾಯಕಾರಿಯಾಗಿ ಕಾಣುತ್ತಿರುವ 12ಕ್ಕೂ ಹೆಚ್ಚು ಉಗ್ರ ನೆಲೆಗಳ ಕುರಿತು ಅಜಿತ್ ಧೋವಲ್ ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ಇಂದಿನ ಮಹತ್ವದ ಸಭೆಯಲ್ಲಿ ಕೇಂದ್ರ ಗೃಹ ಇಲಾಖೆ, ರಕ್ಷಣಾ ಇಲಾಖೆ ಹಾಗೂ ವಿದೇಶಾಂಗ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಚಳಿಗಾಲದೊಳಗೆ ಮತ್ತಷ್ಟು ಸೀಮಿತ ದಾಳಿ ಸಾಧ್ಯತೆ
ಉಗ್ರರ ವಿರುದ್ಧ ಯಾವುದೇ ರೀತಿಯ ಕಾರ್ಯಾಚರಣೆ ಕೈಗೊಂಡರೂ ಚಳಿಗಾಲದೊಳಗೆ ಕೈಗೊಳ್ಳುವಂತೆ ಕೇಂದ್ರ ಗುಪ್ತಚರ ಇಲಾಖೆ ಕೇಂದ್ರಕ್ಕೆ ಸಲಗೆ ನೀಡಿದೆ. ಚಳಿಗಾಲದ ಸಂದರ್ಭದಲ್ಲಿ ಗಡಿಯಲ್ಲಿ ದಟ್ಟ ಮಂಜು ಆವರಿಸುವುದರಿಂದ ಕಾರ್ಯಾಚರಣೆಗೆ ತೀವ್ರ ತೊಡಕಾಗಲಿದೆ. ಈ ವೇಳೆ ಉಗ್ರರು ಮಂಜಿನ ಬದಿಯಲ್ಲಿ ಸುಲಭವಾದಿ ತಪ್ಪಿಸಿಕೊಳ್ಳುತ್ತಾರೆ. ಹೀಗಾಗಿ ಚಳಿಗಾಲದೊಳಗೆ ಕಾರ್ಯಾಚರಣೆ ನಡೆಸುವಂತೆ ಗುಪ್ತಚರ ಇಲಾಖೆ ಸಲಹೆ ನೀಡಿದೆ.
ಈಗಾಗಲೇ ದಾಳಿ ಪ್ರಯತ್ನಗಳನ್ನು ಮುಂದುವರೆಸಿರುವ ಉಗ್ರರು ಇತ್ತೀಚೆಗೆ ಬಾರಾಮುಲ್ಲಾ ಸೇನಾ ಕ್ಯಾಂಪ್ ಮೇಲೆ ದಾಳಿ ನಡೆಸಿ ಓರ್ವ ಸೈನಿಕನನ್ನು ಕೊಂದು ಹಾಕಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


