ಪ್ರಧಾನ ಸುದ್ದಿ

ಮೋದಿ ನಿವಾಸದೆದುರು ಮಮತಾ ಪ್ರತಿಭಟನೆಯ ಬೆದರಿಕೆ; ಅಧಿಕಾರದಿಂದ ಕಿತ್ತೊಗೆಯುವ ಪ್ರಮಾಣ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮೇಲೆ ತೀವ್ರ ವಾಗ್ದಾಳಿ ನಡೆಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ನೋಟು ಹಿಂಪಡೆತ ನಿರ್ಧಾರ ವಿರೋಧಿಸಿ ಮೋದಿ ಅವರ ನಿವಾಸದ

ಮೋದಿ ನಿವಾಸದೆದುರು ಮಮತಾ ಪ್ರತಿಭಟನೆಯ ಬೆದರಿಕೆ; ಅಧಿಕಾರದಿಂದ ಕಿತ್ತೊಗೆಯುವ ಪ್ರಮಾಣ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
Published On :
ಕೋಲ್ಕತ್ತಾ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮೇಲೆ ತೀವ್ರ ವಾಗ್ದಾಳಿ ನಡೆಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ನೋಟು ಹಿಂಪಡೆತ ನಿರ್ಧಾರ ವಿರೋಧಿಸಿ ಮೋದಿ ಅವರ ನಿವಾಸದ ಮುಂದೆ ಪ್ರತಿಭಟಿಸುವ ಬೆದರಿಕೆ ಒಡ್ಡಿರುವುದಲ್ಲದೆ, ರಾಜಕೀಯದಿಂದ ಅವರನ್ನು ಕಿತ್ತೊಗೆಯುವ ಪ್ರಮಾಣ ಮಾಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಇಂತಹ ಸರ್ವಾಧಿಕಾರಿಗಳಿಗೆ ಜಾಗ ಇಲ್ಲ ಎಂದು ಕೂಡ ಅವರು ಹೇಳಿದ್ದಾರೆ. 
"ನಾನು ಎಲ್ಲರಲ್ಲೂ ಮನವಿ ಮಾಡುತ್ತೇನೆ. ಪ್ರಮಾಣ ಸ್ವೀಕರಿಸಿ-- ನಾನು ಸಾಯಬಲ್ಲೆ ಅಥವಾ ಬದುಕಬಲ್ಲೆ ಆದರೆ ಮೋದಿಯನ್ನು ರಾಜಕೀಯದಿಂದ ಕಿತ್ತೊಗೆಯಬೇಕು. ಮೋದಿ ಅವರೇ ನಿಮ್ಮಂತಹ ಸರ್ವಾಧಿಕಾರಿಗಳಿಗೆ ಪ್ರಜಾಪ್ರಭುತ್ವದಲ್ಲಿ ಜಾಗವಿಲ್ಲ. ಇದು ಪ್ರಜಾಪ್ರಭುತ್ವ ದೇಶ" ಎಂದು ನವೆಂಬರ್ ೮ ರ ನೋಟು ಹಿಂಪಡೆತವನ್ನು ವಿರೋಧಿಸಿ ಆಯೋಜಿಸಿದ್ದ ಬೃಹತ್ ರ್ಯಾಲಿಯನ್ನುದ್ದೇಶಿಸಿ ಮಮತಾ ಹೇಳಿದ್ದಾರೆ. 
೫೦೦ ಮತ್ತು ೧೦೦೦ ರೂ ನೋಟುಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಮಮತಾ ಮೋದಿ ಅವರಿಗೆ ಆಗ್ರಹಿಸಿದ್ದಾರೆ. 
"ಯಾವುದೇ ನಿರ್ಧಾರವನ್ನು ಸರಿಯಾಗಿ ಯೋಜಿಸಿ ತೆಗೆದುಕೊಳ್ಳಬೇಕು, ಇಲ್ಲದೆ ಹೋದರೆ ಇದು ಜನರಿಗೆ ಹಾನಿ ಉಂಟುಮಾಡುತ್ತದೆ. ನಿಮ್ಮ ನಿರ್ಧಾರದಿಂದ ಸುಮಾರು ೮೦ ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬ್ಯಾಂಕ್ ನಲ್ಲಾಗಲಿ ಜನರ ಜೇಬಿನಲ್ಲಾಗಲಿ ಹಣ ಇಲ್ಲ. ರೈತರಿಗೆ, ಕಾರ್ಮಿಕರಿಗೆ ಆಹಾರವಿಲ್ಲ. ರಸ್ತೆ ಬದಿ ಮಾರಾಟಗಾರರು ಮತ್ತು ಸಣ್ಣ ಅಂಗಡಿ ಮಾಲೀಕರು ಅಳುತ್ತಿದ್ದಾರೆ.
"ಇಡೀ ಭಾರತ ಕೆಟ್ಟ ಪರಿಸ್ಥಿತಿ ಎದುರಿಸುತ್ತಿದೆ, ಮೋದಿ ಮಲಗಿದ್ದಾರೆ ಮತ್ತು ದೊಡ್ಡ ದೊಡ್ಡ ಭಾಷಣ ಮಾಡುತ್ತಿದ್ದಾರೆ. ಮನ್ ಕಿ ಬಾತ್ ನಲ್ಲಿ ಪಾಠ ಹೇಳುತ್ತಿದ್ದಾರೆ" ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. 
ಮತ್ತೆ ದೆಹಲಿಗೆ ತೆರಳಿ ಈ ನಿರ್ಧಾರದ ವಿರುದ್ಧ ಪ್ರತಿಭಟನಾ ನಡಿಗೆಯನ್ನು ಆಯೋಜಿಸುವುದಾಗಿ ಹೇಳಿರುವ ಮಮತಾ "ಅಗತ್ಯ ಬಿದ್ದರೆ ಮೋದಿ ನಿವಾಸದ ಎದುರಿಗೂ ಪ್ರತಿಭಟಿಸಲಿದ್ದೇನೆ" ಎಂದಿದ್ದಾರೆ. 
ಮೋದಿ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರೆಸಿ ಅವರನ್ನು ೧೪ ನೇ ಶತಮಾನದ ದೆಹಲಿ ರಾಜ ಮೊಹಮದ್ ಬಿನ್ ತುಘಲಕ್ ಅವರಿಗೆ ಹೋಲಿಸಿ "ಇದು ತುಘಲಕ್ ದರ್ಬಾರ್. ಹಿಟ್ಲರ್ ಕೂಡ ಇಂತಹ ಕ್ರಮಕ್ಕೆ ಮುಂದಾಗಿರಲಿಲ್ಲ" ಎಂದು ಕೂಡ ಅವರು ಹರಿಹಾಯ್ದಿದ್ದಾರೆ. 
ನಾನು ಮೋದಿಯವರ ಜಾಗದಲ್ಲಿದ್ದಿದ್ದರೆ ಇಂತಹ ಕ್ರಮಕ್ಕೆ ಮುಂದಾಗುತ್ತಿರಲಿಲ್ಲ ಎಂದಿರುವ ಬ್ಯಾನರ್ಜಿ "ಒಂದು ಪಕ್ಷ ಇಂತಹ ತಪ್ಪು ಮಾಡಿದ್ದರು, ಅದನ್ನು ಹಿಂಪಡೆಯುತ್ತಿದ್ದೆ" ಎಂದಿದ್ದಾರೆ. 
ಈ ಕ್ರಮದ ವಿರುದ್ಧ ಪ್ರತಿಭಟಿಸುತ್ತಿರುವವರನ್ನು ಕೇಂದ್ರ ಏಜೆನ್ಸಿಗಳು ಬೆದರಿಸುತ್ತಿವೆ ಮತ್ತು ಅವರು ದಿನಪತ್ರಿಕೆಯ ಮಾಲೀಕರನ್ನು ಕೂಡ ಬಿಟ್ಟಿಲ್ಲ ಎಂದಿರುವ ಮಮತಾ "ಕೆಲವು ಪಕ್ಷಗಳನ್ನು ನಿಮ್ಮ ಕಡೆಗೆ ಒಲಿಸಿಕೊಳ್ಳಬಹುದು, ಆದರೆ ಎಲ್ಲರನ್ನು ಅಲ್ಲ. ನೀವು ಎಲ್ಲರಿಗು ಬೆದರಿಕೆ ಹಾಕಲು ಮುಂದಾದರೆ ನಾವು ಬಗ್ಗುವುದಿಲ್ಲ. ನಾನು ಕೊನೆಯವರೆಗೂ ಇರುತ್ತೇವೆ" ಎಂದಿದ್ದಾರೆ.
ನಗದುರಹಿತ ಆರ್ಥಿಕ ವ್ಯವಸ್ಥೆ ನಮ್ಮ ಗುರಿ ಎಂದಿರುವ ಮೋದಿ ಹೇಳಿಕೆಯನ್ನು ಅಪಹಾಸ್ಯ ಮಾಡಿರುವ ಮಮತಾ "ಬಡಜನರು ಏನು ಮಾಡಬೇಕು. ಸಾಮಾನ್ಯರ ಭಾಷೆಯನ್ನು ನಾಯಕ ಮಾತನಾಡಬೇಕು. ತಳಬುಡವಿಲ್ಲ, ಮುಖವಿಲ್ಲದ ವ್ಯಕ್ತಿ ಈಗ ದೇಶದ ನಾಯಕನಾಗಿದ್ದಾರೆ.
"ಇದ್ದಕ್ಕಿದ್ದ ಹಾಗೆ ಮೋದಿ ಬಾಬು ದೇವರುಗಳ ದೇವರು ಎಂದುಕೊಂಡಿದ್ದಾರೆ. ರಸ್ತೆಯಲ್ಲಿ ನಡೆಯಲು, ಆಹಾರ ಕೊಳ್ಳಲು ಕೂಡ ಮೋದಿ ಅವರ ಪರವಾನಗಿ ಪಡೆಯಬೇಕಂತೆ. ಮೋದಿ ಎಷ್ಟು ಜನರನ್ನು ಜೈಲಿಗೆ ಕಳುಹಿಸಲಿದ್ದಾರೆ? ಅದು ಅಷ್ಟು ಸುಲಭವಲ್ಲ. ಭಾರತ ೧೨೮ ಕೋಟಿ ಜನರಿರುವ ದೇಶ" ಎಂದು ಕೂಡ ಅವರು ಹೇಳಿದ್ದಾರೆ. 
ಈ ನಿರ್ಧಾರದ ಬಗ್ಗೆ ಬಿಜೆಪಿ ಪಕ್ಷಕ್ಕೆ ಹೇಗೆ ತಿಳಿಯಿತು ಮತ್ತು "ಬಿಹಾರದಲ್ಲಿ ಆ ಸಮಯಕ್ಕೆ ಸ್ವಲ್ಪ ಸಮಯ ಮುಂಚಿತವಾಗಿ ಜಾಮೀನು ಕೊಂಡದ್ದು ಹೇಗೆ?"
"ಇನ್ನು ಹಲವು ಪ್ರದೇಶಗಳಲ್ಲಿ ಅವರು ವಜ್ರ, ಚಿನ್ನ ಮತ್ತು ಮುತ್ತುಗಳನ್ನು ಖರೀದಿಸಿದ್ದಾರೆ. ಮತ್ತು ಈಗ ಮೋದಿ ೮೬% ಜನಸಂಖ್ಯೆಯನ್ನು ಕಪ್ಪು ಹಣ ಹೊಂದಿರುವವರು ಎಂದು ಘೋಷಿಸಿದ್ದಾರೆ" ಎಂದಿರುವ ಮಮತಾ ಸಾಮಾಜಿಕ ಕಾರ್ಯಕರ್ತರು ಮತ್ತು ಸಮಾಜದ ಇತರ ವರ್ಗದ ಜನ ಬೀದಿಗಿಳಿದು ಪ್ರತಿಭಟಿಸುವಂತೆ ಕೋರಿದ್ದಾರೆ. 
"ಇಂದು ಕೋಲ್ಕತ್ತಾ ದಾರಿ ತೋರಿದೆ. ರಸ್ತೆಗೆ ಇಳಿಯಿರಿ. ಹೋರಾಟ ಜಾರಿಯಲ್ಲಿರಲಿ, ಜನರು ಜಯಗಳಿಸಬೇಕು" ಎಂದು ಕೂಡ ಬ್ಯಾನರ್ಜಿ ಹೇಳಿದ್ದಾರೆ. 
ಮಮತಾ ಬ್ಯಾನರ್ಜಿ ಅವರು ಆಯೋಜಿಸಿದ್ದ ಬೃಹತ್ ರ್ಯಾಲಿಯಲ್ಲಿ ಖ್ಯಾತ ಸಿನೆಮಾಕರ್ತರು, ಬರಹಗಾರರು, ಸಂಗೀತಗಾರರು, ಕ್ರೀಡಾಪಟುಗಳು ಭಾಗವಹಿಸಿದ್ದರು. ಜೊತೆಗೆ ಮಧ್ಯಮವರ್ಗದ ಜನ, ಯುವಕರು, ಕಾರ್ಖಾನೆ ಕಾರ್ಮಿಕರು ಮತ್ತು ಸಾಮಾನ್ಯ ಜನ ಕೂಡ ಮಮತಾ ಜೊತೆಗೂಡಿ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.