ನೋಟು ಹಿಂಪಡೆತ ಯೋಜನೆ 'ಫ್ಲಾಪ್ ಪ್ರದರ್ಶನ': ಕೇಜ್ರಿವಾಲ್
ಪ್ರಧಾನಿ ನರೇಂದ್ರ ಮೋದಿ ಅವರ ೫೦೦ ಮತ್ತು ೧೦೦೦ ರೂ ನೋಟುಗಳನ್ನು ಹಿಂಪಡೆಯುವ ನಿರ್ಧಾರ ತನ್ನ ಗುರಿಗಳನ್ನು ಸಾಧಿಸಲು ಸೋತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ

Published On :
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ೫೦೦ ಮತ್ತು ೧೦೦೦ ರೂ ನೋಟುಗಳನ್ನು ಹಿಂಪಡೆಯುವ ನಿರ್ಧಾರ ತನ್ನ ಗುರಿಗಳನ್ನು ಸಾಧಿಸಲು ಸೋತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ ಹೇಳಿದ್ದಾರೆ.
"ಇಡೀ ಯೋಜನೆ ಫ್ಲಾಪ್ ಆಗಿದೆ ಮತ್ತು ಇದು ಸೋತಿರುವುದು ಸಾಬೀತಾಗಿದೆ" ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ್ದಾರೆ.
ಮೋದಿಯವರ ಅಹಂಕಾರ ಇಡೀ ದೇಶವನ್ನು ಸಂಕಷ್ಟದಲ್ಲಿ ಸಿಲುಕಿಸಿರುವುದಲ್ಲದೆ, ಕೇವಲ ೨೦ ದಿನಗಳಲ್ಲಿ ದೇಶದ ಆರ್ಥಿಕ ವ್ಯವಸ್ಥೆಯನ್ನು ದಶಕದಷ್ಟು ಹಿಂದಕ್ಕೆ ನೂಕಿದೆ ಎಂದು ಕೂಡ ಕೇಜ್ರಿವಾಲ್ ಹೇಳಿದ್ದಾರೆ.
ಕಪ್ಪು ಹಣ, ಭಯೋತ್ಪಾದಕರ ನಿಧಿ ಮತ್ತು ನಕಲಿ ನೋಟುಗಳ ವಿರುದ್ಧ ಈ ಯೋಜನೆ ಸಮರ ಸಾರಲಿದೆ ಎಂದು ಘೋಷಿಸಿದ್ದ ಪ್ರಧಾನಿ ನರೇಂದ್ರ ಮೋದಿ ನವೆಂಬರ್ ೮ ರಂದು ೫೦೦ ಮತ್ತು ೧೦೦೦ ರೂ ನೋಟುಗಳನ್ನು ಹಿಂಪಡೆಯುವ ನಿರ್ಧಾರ ತೆಗೆದುಕೊಂಡು, ಬ್ಯಾಂಕ್ ನಲ್ಲಿ ಖಾತೆಗೆ ಹಣ ಹಾಕುವ ಮತ್ತು ಹಿಂಪಡೆಯುವ ಬಗ್ಗೆ ಸಾರ್ವಜನಿಕರಿಗೆ ನಿರ್ಬಂಧ ಹೇರಿದ್ದರು.
ಈ ಎಲ್ಲ ಗುರಿಗಳನ್ನು ಸಾಧಿಸಲು ಈ ಯೋಜನೆ ಸೋತಿದೆ ಎಂದಿರುವ ಕೇಜ್ರಿವಾಲ್, ಈಗ ಹೊಸ ನೋಟುಗಳ ಜೊತೆಗೆ ಭ್ರಷ್ಟಾಚಾರ ಹಿಂದಿರುಗಿದೆ ಎಂದಿದ್ದಾರೆ. "ನವೆಂಬರ್ ೮ ರ ನಂತರ ಭ್ರಷ್ಟಾಚಾರ ೧೦ ಪಟ್ಟು ಹೆಚ್ಚಿದೆ. ೨೦೦೦ ರೂ ನೋಟುಗಳಲ್ಲಿ ಲಂಚ ತೆಗೆದುಕೊಳ್ಳುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಈಗ ಲಂಚ ತೆಗೆದುಕೊಳ್ಳಲು ಮೋದಿ ಹಾದಿ ಸುಗಮಗೊಳಿಸಿದ್ದಾರೆ" ಎಂದು ಕೇಜ್ರಿವಾಲ್ ಹೇಳಿದ್ದಾರೆ.
"ಭಯೋತ್ಪಾದಕರ ಬಳಿ ಈಗಾಗಲೇ ಹೊಸ ನೋಟುಗಳು ಇವೆ ಆದರೆ ಸಾಮಾನ್ಯ ಜನರು ತಮ್ಮ ಹಣ ಪಡೆಯಲು ಹೆಣಗಾಡುತ್ತಿದ್ದಾರೆ" ಎಂದು ಎಎಪಿ ಮುಖಂಡ ಆರೋಪಿಸಿದ್ದಾರೆ.
ಜನರು ಇಷ್ಟೆಲ್ಲಾ ಸಂಕಷ್ಟ ಪಡುತ್ತಿದ್ದರು, ಇಲ್ಲಿಯವರೆಗೂ ಒಂದು ಪೈಸೆ ಕಪ್ಪು ಹಣವನ್ನು ಹಿಂಪಡೆದಿಲ್ಲ. ಜನ ಕಷ್ಟ ಪಟ್ಟು ಸಂಪಾದಿಸಿದ ೮ ಲಕ್ಷ ಕೋಟಿಯನ್ನು ಖಾತೆಗಳಿಗೆ ಜಮಾ ಮಾಡಿದ್ದಾರೆ. ನಕಲಿ ನೋಟುಗಳನ್ನು ಮುದ್ರಿಸುವ ಕಾರ್ಖಾನೆಗಳು ಈಗಾಗಲೇ ಆರ್ ಬಿ ಐ ಮುದ್ರಣ ಸಂಸ್ಥೆಗಳಿಗಿಂತಲೂ ವೇಗವಾಗಿ ಕೆಲಸ ಮಾಡುತ್ತಿವೆ ಎಂದು ದೂರಿರುವ ಕೇಜ್ರಿವಾಲ್ "ಈ ಕ್ರಮದ ನಂತರ ನಕಲಿ ೧೦೦೦ ಮತ್ತು ೫೦೦ ರೂ ನೋಟುಗಳನ್ನು ಕೂಡ ಹೊಸ ೨೦೦೦ ನೋಟಿಗೆ ಬದಲಾಯಿಸಿಕೊಳ್ಳಲಾಗುತ್ತಿದೆ" ಎಂದು ಆರೋಪಿಸಿದ್ದಾರೆ.
"ದೇಶಕ್ಕೆ ಮೋಸ ಮಾಡಲಾಗಿದೆ. ಇದಕ್ಕೆ ಕಾರಣಕರ್ತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಆಗ್ರಹಿಸುತ್ತೇವೆ.
"ಜನರು ಎಂದಿನಿಂದ ತಮ್ಮ ಹಣವನ್ನು ಅವರಿಚ್ಛೆಯಂತೆ ಹಿಂಪಡೆಯಬಹುದೆಂದು ಪ್ರಧಾನಿ ತಿಳಿಸಬೇಕು, ಏಕೆಂದರೆ ಸದ್ಯದ ಪರಿಸ್ಥಿತಿಯಲ್ಲಿ ಇದು ಜನವರಿ ೧ ರಿಂದ ಸಾಧ್ಯವಾಗುವಂತೆ ತೋರುತ್ತಿಲ್ಲ" ಎಂದಿರುವ ಕೇಜ್ರಿವಾಲ್ ಮೋದಿ ಸಂಸತ್ತಿಗೆ ಬರಲು ಹೆದರಿದ್ದಾರೆ ಏಕೆಂದರೆ ಸಹರಾ ಮತ್ತು ಬಿರ್ಲಾ ಲಂಚದ ಪ್ರಕರಣಗಳನ್ನು ವಿರೋಧಪಕ್ಷಗಳು ಎತ್ತಬಹುದೆಂದು ಅವರು ಭಯಭೀತರಾಗಿದ್ದಾರೆ.
"ಅವರು ಮುಗ್ಧರಾಗಿದ್ದರೆ ಸಂಸತ್ತಿನಲ್ಲಿ ವಿಪಕ್ಷಗಳನ್ನು ಎದುರಿಸಬೇಕು. ಈಗ ಅವರು ಗೈರು ಹಾಜರಾಗುತ್ತಿರುವುದು, ಅವರು ಲಂಚ ತೆಗೆದುಕೊಂಡಿರುವುದು ನಿಜ ಎಂಬ ಸಂಶಯ ಮೂಡಿಸುತ್ತದೆ" ಎಂದು ಕೂಡ ಕೇಜ್ರಿವಾಲ್ ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


