ನೋಟು ಹಿಂಪಡೆತ ನಿರ್ಧಾರ ಎಫೆಕ್ಟ್: ತೆಲಂಗಾಣದಲ್ಲಿ ಇಬ್ಬರು ರೈತರ ಆತ್ಮಹತ್ಯೆ
ಕೇಂದ್ರ ಸರ್ಕಾರದ ನೋಟು ಹಿಂಪಡೆತ ನಿರ್ಧಾರದಿಂದ, ಜಮೀನಿನ ಬೆಲೆ ಧಿಢೀರ್ ಕುಸಿದಿದ್ದಕ್ಕೆ ಭೀತನಾದ ರೈತ ಮತ್ತು ಅವರ ತಂದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ ಎಂದು

Published On :
ಹೈದರಾಬಾದ್: ಕೇಂದ್ರ ಸರ್ಕಾರದ ನೋಟು ಹಿಂಪಡೆತ ನಿರ್ಧಾರದಿಂದ, ಜಮೀನಿನ ಬೆಲೆ ಧಿಢೀರ್ ಕುಸಿದಿದ್ದಕ್ಕೆ ಭೀತನಾದ ರೈತ ಮತ್ತು ಅವರ ತಂದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ ಎಂದು ಪೊಲೀಸರು ಗುರುವಾರ ಹೇಳಿದ್ದಾರೆ.
ಈ ಘಟನೆ ಬುಧವಾರ ಸಿದ್ದಿಪೇಟ್ ಜಿಲ್ಲೆಯ ಧರ್ಮಾರಾಮ್ ಗ್ರಾಮದಲ್ಲಿ ನಡೆದಿದೆ. ರೈತ ವಿ ಬಾಲಯ್ಯ (೪೦) ತಮ್ಮನ್ನು ಒಳಗೊಂಡಂತೆ ತಮ್ಮ ಕುಟುಂಬದ ಇತರ ಮೂವರು ಸದಸ್ಯರಿಗೆ ಕೋಳಿ ಮಾಂಸದ ಸಾರಿನಲ್ಲಿ ಕ್ರಿಮಿನಾಶಕ ಬೆರೆಸಿ ನೀಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬಾಲಯ್ಯ ಮತ್ತು ಅವರ ತಂದೆ ವಿ ಗಾಲಯ್ಯ (೬೫) ಮೃತಪಟ್ಟಿದ್ದು, ಅವರ ಪತ್ನಿ ಮತ್ತು ಪುತ್ರ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಪೊಲೀಸರು ಹೇಳುವ ಪ್ರಕಾರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿರುವ ವಿಷಯವೇನೆಂದರೆ ಬಾಲಯ್ಯ ತನ್ನ ಮಗಳ ಮದುವೆಗಾಗಿ ಲೇವಾದೇವಿಯವರಿಂದ ಪಡೆದಿದ್ದ ಸಾಲ ತೀರಿಸಲು ತನ್ನ ವ್ಯವಸಾಯ ಭೂಮಿಯನ್ನು ಮಾರಲು ಮುಂದಾಗಿದ್ದರು. ಕೆಲವು ವಾರಗಳ ಹಿಂದೆಯಷ್ಟೇ ಆ ಜಮೀನಿಗೆ ೧೨ ಲಕ್ಷ ಕೊಡಲು ಕೆಲವರು ಒಪ್ಪಿ ಮುಂದೆ ಬಂದಿದ್ದರು. ಆದರೆ ೫೦೦ ಮತ್ತು ೧೦೦೦ ರೂ ಹಿಂಪಡೆತದ ನಿರ್ಧಾರದಿಂದ ಭೂಮಿಯ ಬೆಲೆ ಧಿಢೀರ್ ಕುಸಿತ ಕಂಡು, ಅದಕ್ಕೆ ಅರ್ಧ ಬೆಲೆಯೂ ಸಿಗಲಾರದೆ ಹೋಗಿದ್ದರಿಂದ ಭೀತರಾದ ಬಾಲಯ್ಯ ಈ ಕ್ರಮಕ್ಕೆ ಮುಂದಾಗಿದ್ದಾರೆ.
ಈ ರೈತರ ಆತ್ಮಹತ್ಯೆಗೆ ಕೇಂದ್ರ ಸರ್ಕಾರ ಹೊಣೆ ಹೊತ್ತಿಕೊಳ್ಳಬೇಕು ಎಂದು ಟಿ ಆರ್ ಎಸ್ ಪಕ್ಷದ ಶಾಸಕ ಎಸ್ ರಾಮಲಿಂಗ ರೆಡ್ಡಿ ಹೇಳಿದ್ದಾರೆ.
ಇಲ್ಲಿಯವರೆಗೂ ಈ ನಿರ್ಧಾರದಿಂದ ತೆಲಂಗಾಣದಲ್ಲಿಯೇ ೪ ಜನ ಪ್ರಾಣ ಕಳೆದುಕೊಂಡಿದ್ದಾರೆ, ದೇಶದಾದ್ಯಂತ ೪೦ ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ.
ಹೈದರಾಬಾದ್ ನಲ್ಲಿ ನೋಟು ಬದಲಾಯಿಸಿಕೊಳ್ಳಲು ಸರತಿಯಲ್ಲಿ ನಿಂತಿದ್ದ ಹಿರಿಯ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟ ಘಟನೆ ವರದಿಯಾಗಿದೆ. ನಿಜಾಮಾಬಾದ್ ಜಿಲ್ಲೆಯಲ್ಲಿ ಲೇವಾದೇವಿಯವರು ಹಳೆಯ ನೋಟುಗಳನ್ನು ತೆಗೆದುಕೊಳ್ಳಲು ನಿರಾಕರಿಸಿದ್ದರಿಂದ ವಾಹನ ಕೊಳ್ಳಲು ಸಾಲ ಪಡೆದಿದ್ದ ಆಟೋ ರಿಕ್ಷಾ ಚಾಲಕ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


