ಇಹಲೋಕ ತ್ಯಜಿಸಿದ ಚಿಕ್ಕಅರಸಿನಕೆರೆಯ ಬಸವ
ಭೂ ಒತ್ತುವರಿದಾರರನ್ನು ಗುರುತಿಸಿ ಶಿಕ್ಷಿಸುವ ಮೂಲಕ ವಂಚಕರಿಗೆ ಕಂಟಕವಾಗಿ ರಾಜ್ಯದೆಲ್ಲೆಡೆ ಮನೆ ಮಾತಾಗಿದ್ದ ಚಿಕ್ಕಅರಸಿನಕೆರೆ ಕಾಲಭೈರವೇಶ್ವರ ದೇಗುಲದ ಬೋರೆದೇವರ ಬಸವ ಮಂಗಳವಾರ ಸಂಜೆ ಇಹಲೋಕ ತ್ಯಜಿಸಿದೆ...

ಮಂಡ್ಯ: ಭೂ ಒತ್ತುವರಿದಾರರನ್ನು ಗುರುತಿಸಿ ಶಿಕ್ಷಿಸುವ ಮೂಲಕ ವಂಚಕರಿಗೆ ಕಂಟಕವಾಗಿ ರಾಜ್ಯದೆಲ್ಲೆಡೆ ಮನೆ ಮಾತಾಗಿದ್ದ ಚಿಕ್ಕಅರಸಿನಕೆರೆ ಕಾಲಭೈರವೇಶ್ವರ ದೇಗುಲದ ಬೋರೆದೇವರ ಬಸವ ಮಂಗಳವಾರ ಸಂಜೆ ಇಹಲೋಕ ತ್ಯಜಿಸಿದೆ.
25 ವರ್ಷದ ಬಸವಣ್ಣನ ಸಾವಿನ ಸುದ್ದಿ ಹರಡುತ್ತಿದ್ದಂತೆ ಭಕ್ತಸಾಗರದ ಆಕ್ರಂದನ ಮುಗಿಲು ಮುಟ್ಟಿದ್ದು, ಕೆಎಂ ದೊಡ್ಡಿಯಲ್ಲಿರುವ ಕಾಲಭೈರವೇಶ್ವ ದೇಗುಲದತ್ತ ಭಕ್ತಸಾಗರವೇ ಹರಿದು ಬರುತ್ತಿದೆ. ಎರಡು ವರ್ಷಗಳ ಹಿಂದೆ ಬಸವನ ಕೊಂಬು ಮುರಿದಿದ್ದರಿಂದ ಕೊಂಚ ಮಂಕಾಗಿದ್ದ ಬಸವಣ್ಣ ನಿನ್ನೆ ಸಾವಿಗೀಡಾಗಿದ್ದು, ಬಸವಣ್ಣನ ಅಂತ್ಯಕ್ರಿಯೆ ಬುಧವಾರ ದೇವಾಲಯದ ಸಮೀಪದಲ್ಲಿಯೇ ನಡೆಯಲಿದೆ ಎಂದು ದೇವಾಲಯದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜೋಗಿಗೌಡ ತಿಳಿಸಿದ್ದಾರೆ.
ಇಂದು ಮೃತ ಬಸವನ ಪಾರ್ಥೀವ ಶರೀರವನ್ನು ಸಮೀಪದ ಗ್ರಾಮಗಳಲ್ಲಿ ಮೆರವಣಿಗೆ ಮಾಡಲಾಗುತ್ತಿದ್ದು, ಮೆರವಣೆಗೆ ಬಳಿಕ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಲಾಗುತ್ತಿದೆ.
ಬಸವನ ಹಿನ್ನಲೆ
ಮಂಡ್ಯ ಜಿಲ್ಲೆಯ ಕೆಎಂ ದೊಡ್ಡಿಯಲ್ಲಿರುವ ಈ ಬಸವ ತನ್ನ ಚಮತ್ಕಾರಿ ಕಾರ್ಯಗಳಿಂದಲೇ ರಾಜ್ಯಾದ್ಯಂತ ಖ್ಯಾತಿಗಳಿಸಿತ್ತು. 2006ರಲ್ಲಿ ಗ್ರಾಮದ ಹೂಮಾಲಮ್ಮ ದೇಗುಲದ ಬಳಿ ಹೋಗಿ ನಿಂತು ಒತ್ತುವರಿಯಾಗಿದ್ದ ಸ್ಥಳ ಗುರುತಿಸಿ, ಅದನ್ನು ತೆರವುಗೊಳಿಸುವ ಮೂಲಕ ಬಸವಣ್ಣ ಪ್ರಚಾರಕ್ಕೆ ಬಂದಿತ್ತು. ಇದಾದ ಬಳಿಕ ಗುರುದೇವರಹಳ್ಳಿಯಲ್ಲಿ ತನ್ನ ಮೈಮೇಲೆ ದೇವರು ಬರುತ್ತದೆ ಎಂದುಹೇಳಿ ಜನರಿಗೆ ವಂಚಿಸುತ್ತಿದ್ದ ವ್ಯಕ್ತಿಯನ್ನು ಅಟ್ಟಾಡಿಸಿಕೊಂಡು ಊರನ್ನು ಖಾಲಿ ಮಾಡಿಸಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.
1995ರಲ್ಲಿ ಮುಡುಕುತೊರೆ ಜಾತ್ರೆಯಿಂದ ತಂದು ಚಿಕ್ಕಅರಸಿನಕೆರೆ ಕಾಲಭೈರವೇಶ್ವರಸ್ವಾಮಿ ಸಾರಥಿಯಾದ ಬಸವಣ್ಣ ಭೂ ಒತ್ತುವರಿದಾರರು ಹಾಗೂ ದುಷ್ಟರಿಗೆ ಸಿಂಹಸ್ವಪ್ನವಾಗಿದ್ದ. ನಂಜುಂಡ ಎಂಬ ವ್ಯಕ್ತಿ ಅಕ್ರಮವಾಗಿ ಗುಡಿಸಲು ಹಾಕಿಕೊಂಡು ಕೊಳ್ಳೇಗಾಲದಿಂದ ಮಾಟ ಮಾಡಿಸಿ, ಅಲ್ಲಿ ಹೂಳಿಸಿ ಜನರಿಗೆ ಮಂಕುಬೂದಿ ಎರಚುತ್ತಿದ್ದ. ಅಲ್ಲಿಗೆ ತೆರಳಿದ ಬಸವಣ್ಣ ಆತನನ್ನ ಹೊರಗೆ ದಬ್ಬಿದ್ದಲ್ಲದೆ, ಗುಡಿಸಲನ್ನೆಲ್ಲ ಕಿತ್ತುಹಾಕಿ, ಮಾಟ ಮಾಡಿಸಿದ್ದನ್ನು ಕಿತ್ತು ಎಸೆದಿತ್ತು. ಇದರಿಂದ ಸಿಟ್ಟಿಗೆದ್ದ ನಂಜುಂಡ ಬಸವಣ್ಣನಿಗೆ ಮಾಟ ಮಾಡಿಸಿ, ತನ್ನ ತಾಕತ್ತು ತೋರಿಸುವುದಾಗಿ ಬಹಿರಂಗ ಸವಾಲು ಹಾಕಿದ್ದ. ಆದರೆ, ಆತನ ಬೇಳೆ ಬೇಯಲಿಲ್ಲ. ಈ ಘಟನೆ ಬಳಿಕ ಬಸವಣ್ಣ ಅಕ್ಕಪಕ್ಕದ ಹಳ್ಳಿಗಳ ದೇವಸ್ಥಾನಕ್ಕೆ ತೆರಳಿ, ಅಲ್ಲಿ ಆಗಿರುವ ಒತ್ತುವರಿ ತೆರವುಗೊಳಿಸುವುದು. ಕಳ್ಳತನ ಪ್ರಕರಣ ಭೇದಿಸುವ ಕಾರ್ಯ ಬೆಳಕಿಗೆ ಬಂದು ಬಸವ ಖ್ಯಾತಿ ಗಳಿಸಿದ್ದ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


