"ಝಿಕಾ" ತಡೆಗೆ ಮುಂದಾದ ಕೇಂದ್ರ
ವಿಶ್ಯಾದ್ಯಂತ ಆಂತಕ ಸೃಷ್ಟಿಸಿರುವ ಮಾರಕ ಝಿಕಾ ವೈರಾಣು ರೋಗವನ್ನು ಸಾಂಕ್ರಾಮಿಕ ರೋಗವೆಂದು ಘೋಷಣೆ ಮಾಡಲು ವಿಶ್ವ ಆರೋಗ್ಯ ಸಂಸ್ಥೆ (WHO) ಸಮಾಲೋಚನೆ ನಡೆಸುತ್ತಿರುವ ಬೆನ್ನಲ್ಲೇ, ಈ ಮಾರಕ ತಡೆಗೆ ಭಾರತ ಸರ್ಕಾರ ಕ್ರಮಕ್ಕೆ ಮುಂದಾಗಿದೆ...

ನವದೆಹಲಿ: ವಿಶ್ಯಾದ್ಯಂತ ಆಂತಕ ಸೃಷ್ಟಿಸಿರುವ ಮಾರಕ ಝಿಕಾ ವೈರಾಣು ರೋಗವನ್ನು ಸಾಂಕ್ರಾಮಿಕ ರೋಗವೆಂದು ಘೋಷಣೆ ಮಾಡಲು ವಿಶ್ವ ಆರೋಗ್ಯ ಸಂಸ್ಥೆ (WHO) ಸಮಾಲೋಚನೆ ನಡೆಸುತ್ತಿರುವ ಬೆನ್ನಲ್ಲೇ, ಈ ಮಾರಕ ತಡೆಗೆ ಭಾರತ ಸರ್ಕಾರ ಕ್ರಮಕ್ಕೆ ಮುಂದಾಗಿದೆ.
ರೋಗದ ಗಾಂಭೀರ್ಯತೆಯನ್ನು ಪರಿಗಣಿಸಿರುವ ಕೇಂದ್ರ ಸರ್ಕಾರ ಈ ಬಗ್ಗೆ ವಿಶೇಷ ತಾಂತ್ರಿಕ ಸಮಿತಿಯನ್ನು ರಚನೆ ಮಾಡುವ ಮೂಲಕ ವ್ಯಾಪಕವಾಗಿ ಹರಡುತ್ತಿರುವ ರೋಗ ನಿಯಂತ್ರಣ ಕ್ರಮಗಳಿಗೆ ಚಾಲನೆ ನೀಡಿದೆ. ನೂತನ ಸಮಿತಿಗೆ ರೋಗಪೀಡಿತ ಪ್ರದೇಶದ ಪ್ರಯಾಣಿಕರ ತಪಾಸಣೆಗೆ ಮಾರ್ಗದರ್ಶಿ ಸೂತ್ರಗಳನ್ನು ಸಿದ್ದಪಡಿಸುವ ಹೊಣೆ ವಹಿಸಿದ್ದು, ದೇಶದಲ್ಲಿ ಈಗಾಗಲೇ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿರುವ ಡೆಂಘೀ ಮತ್ತು ಚಿಕೂನ್ ಗೂನ್ಯ ಹರಡುವ ಇಡಿಸ್ ಈಜಿಪ್ಟಿ ಸೊಳ್ಳೆಯೇ ಝಿಕಾ ವೈರಾಣುವಾಹಕವೂ ಆಗಿರುವುದರಿಂದ ಭಾರತ ಸೋಂಕನ್ನು ಗಂಭೀರವಾಗಿ ಪರಿಗಣಿಸಿದೆ.
ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಅವರ ಅಧ್ಯತೆಯಲ್ಲಿ ಶುಕ್ರವಾರ ನಡೆದ ಆರೋಗ್ಯ ಕ್ಷೇತ್ರದ ತಜ್ಞರ ಉನ್ನತ ಮಟ್ಟದ ತುರ್ತು ಸಭೆಯಲ್ಲಿ ಸಮಿತಿ ರಚನೆ ನಿರ್ಧಾರ ಕೈಗೊಳ್ಳಲಾಗಿದೆ. ಸಮಿತಿ ದೇಶದಲ್ಲಿ ರೋಗ ತಡೆ ಸೂಚನಾ ಕ್ರಮಗಳೊಂದಿಗೆ ಜಾಗತಿಕವಾಗಿ ಬೇರೆ-ಬೇರೆ ದೇಶಗಳ ಪರಿಸ್ಥಿತಿಯನ್ನು ಪ್ರತಿವಾರ ಅವಲೋಕಿಸಿ ಅಗತ್ಯ ಸಲಹೆಗಳನ್ನು ನೀಡಲಿದೆ. ದೇಶದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಝಿಕಾ ಸೋಂಕಿತ ರಾಷ್ಟ್ರಗಳಿಂದ ದೇಶದೊಳಕ್ಕೆ ಪ್ರವೇಶಿಸುವ ಎಲ್ಲ ಪ್ರಯಾಣಿಕರ ಆರೋಗ್ಯ ತಪಾಸಣೆ, ಆರಂಭಿಕ ರೋಗ ಲಕ್ಷಣಗಳ ತಪಾಸಣೆಗಾಗಿ ವೈದ್ಯ ಭೇಟಿ ಕಡ್ಡಾಯ, ರೋಗ ತಡೆ ಮುಂಜಾಗ್ರತಾ ಕ್ರಮಗಳ ಕುರಿತ ಮಾಹಿತಿಯೊಳಗೊಂಡ ಭಿತ್ತಿ ಪತ್ರಗಳನ್ನು ಪ್ರದರ್ಶಿಸುವುದನ್ನು ಕಡ್ಡಾಯ ಮಾಡಿ ಸೂಚನೆ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಶನಿವಾರ ಹೊತ್ತಿಗೆ ಈ ಸಂಬಂಧ ಮಾರ್ಗದರ್ಶಿ ಸೂತ್ರಗಳನ್ನು ಅಂತಿಮಗೊಳಿಸಲು ವಿಶೇಷ ತನಿಖಾ ಸಮಿತಿಗೆ ಸೂಚಿಸಲಾಗಿದೆ. ಮುಂದಿನ ವಾರದ ಹೊತ್ತಿಗೆ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಮಾರ್ಗದರ್ಶಿ ಸೂಚನೆಗಳು ಜಾರಿಗೆ ಬರಲಿವೆ. ವೈರಾಣು ಪ್ರಮುಖವಾಗಿ ಗರ್ಭದಲ್ಲಿರುವ ಮಗುವಿನ ಮೇಲೆ ದಾಳಿ ಮಾಡುವುದರಿಂದ ಪ್ರಮುಖವಾಗಿ ಗರ್ಭಿಣಿಯರ ಪ್ರಯಾಣವನ್ನು ನಾವು ಗಂಭೀರವಾಗಿ ಪರಿಗಣಿಸಬೇಕಿದೆ. ಎಂದು ಭಾರತ ಸಾರ್ವಜನಿಕ ಆರೋಗ್ಯ ಸೇವೆಯ ನಿರ್ದೇಶಕ ಡಾ.ಜಗದೀಶ್ ಪ್ರಸಾದ್ ಹೇಳಿದ್ದಾರೆ.
ಈಗಾಗಲೇ ಪುಣೆ ಮೂಲದ ರಾಷ್ಟ್ರೀಯ ವೈರಾಣು ಸಂಶೋಧನಾ ಕೇಂದ್ರ ಝಇಕಾ ಶಂಕಿತರ ರಕ್ತದ ಮಾದರಿಗಳ ಪರೀಕ್ಷೆ ನಡೆಸುತ್ತಿದ್ದು, ಈ ವರೆಗೆ ದೇಶದಲ್ಲಿ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ಈ ನಡುವೆ ಮುಂಜಾಗ್ರತಾ ಕ್ರಮವಾಗಿದೇಶದ ವಿವಿಧೆಡೆ ಇನ್ನೂ ಆರು ಪ್ರಯೋಗಾಲಯಗಳಲ್ಲಿ ರೋಗ ಪತ್ತೆ ತಂತ್ರಜ್ಞಾನ ಅಳವಡಿಸುವಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಗೆ ಕೇಂದ್ರ ಸೂಚಿಸಿದೆ ಎಂದು ಡಾ. ಪ್ರಸಾದ್ ಹೇಳಿದ್ದಾರೆ.
ವರ್ಷಾಂತ್ಯಕ್ಕೆ ಚುಚ್ಚುಮದ್ದು
ವರ್ಷಾಂತ್ಯದ ವೇಳೆಗೆ ಝಿಕಾ ವೈರಾಣುವಿಗೆ ಔಷಧಿ ಸಿದ್ಧವಾಗಲಿದೆ ಎಂದು ವೈದ್ಯಕೀಯ ಸಂಶೋಧಕ ತಂಡ ಹೇಳಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಆಗಸ್ಟ್ ವೇಳೆಗೆ ಮಾನವನ ಮೇಲಿನ ಔಷಧದ ಪರಿಣಾಮಗಳ ಪರೀಕ್ಷೆ ಆರಂಭವಾಗಲಿದ್ದು, ಪರ್ಷದ ಅಂತ್ಯಕ್ಕೆ ಚಿಕಿತ್ಸೆಗೆ ಲಭ್ಯವಾಗಲಿದೆ ಎಂದು ಸಂಶೋಧಕರ ತಂಡದ ಕೆನಡಾ ಮೂಲದ ವಿಜ್ಞಾನಿ ಗ್ಯಾರಿ ಕಾಬಿಂಜರ್ ಹೇಳಿದ್ದಾರೆ.
ಈ ದೇಶಗಳಿಗೆ ಹೋಗುವ ಮುನ್ನು ಮುನ್ನೆಚ್ಚರಿಕೆ ಇರಲಿ
14 ಮಧ್ಯ-ದಕ್ಷಿಣ ಅಮೆರಿಕಾ ರಾಷ್ಟ್ರಗಳು
ಬ್ರೆಜಿಲ್, ಕೊಲಂಬಿಯಾ, ಎಲ್ ಸಲ್ವಡಾರ್, ಫ್ರೆಂಚ್ ಗಯಾನ, ಗ್ವಾಟೆಮಾಲ, ಹೈಟಿ ಹುಂಡುರಾಸ್, ಮಾರ್ಟಿನಿಕಿ, ಮೆಕ್ಸಿಕೋ, ಪನಾಮ, ಪೆರುಗ್ವೆ, ಸುರಿನೇಮ್, ವೆನಿಜುವೆಲಾ, ಪೋರ್ಟ್ ರಿಕೋ ಗಣರಾಜ್ಯ.
6 ಕೆರಿಬಿಯನ್-ದಕ್ಷಿಣ ಅಮೆರಿಕ ರಾಷ್ಟ್ರ
ಬಾರ್ಬಡಸ್, ಬೊಲಿವಿಯಾ, ಈಕ್ವೇಡಾರ್, ಗ್ವಡೆಲೋಪ್, ಸೈಂಟ್ ಮಾರ್ಟಿನ್, ಗಯಾನ ಮತ್ತು ಕೇಪ್ ವರ್ಡೆ ಹಾಗೂ ಸಮೊವ
ದೇಶದೊಳಕ್ಕೆ ವೈರಾಣು ಪ್ರವೇಶಿಸದಂತೆ ತಡೆಯುವುದೇ ನಮ್ಮ ಮೊದಲ ಆದ್ಯತೆ. ಹಾಗಾಗಿ ವಿಮಾನ ನಿಲ್ದಾಣದಂತಹ ದೇಶದ ಪ್ರವೇಶ ಸ್ಥಳಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ.
-ಜೆಪಿ ನಡ್ಡಾ, ಕೇಂದ್ರ ಆರೋಗ್ಯ ಸಚಿವ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


