ಬೇನಾಮಿ ಆಸ್ತಿ ಹೆಸರಿನಲ್ಲಿ ಸಾರ್ವಜನಿಕರನ್ನು ಬೆತ್ತಲಾಗಿಸಬೇಡಿ: ಮೋದಿಗೆ ಠಾಕ್ರೆ ಆಗ್ರಹ
ಬಿಜೆಪಿ ಮೇಲೆ ಮತ್ತೆ ವಾಗ್ದಾಳಿ ನಡೆಸಿರುವ ಶಿವಸೇನೆ, ದೇಶದಲ್ಲಿ ಬೇನಾಮಿ ಆಸ್ತಿಯನ್ನು ಬಯಲಿಗೆಳೆಯುವ ಹೆಸರಿನಲ್ಲಿ ಸಾರ್ವಜನಿಕರ ಚಡ್ಡಿ ಬನಿಯನ್ ಕಳಚಬೇಡಿ ಎಂದು...

Published On :
ಮುಂಬೈ: ಬಿಜೆಪಿ ಮೇಲೆ ಮತ್ತೆ ವಾಗ್ದಾಳಿ ನಡೆಸಿರುವ ಶಿವಸೇನೆ, ದೇಶದಲ್ಲಿ ಬೇನಾಮಿ ಆಸ್ತಿಯನ್ನು ಬಯಲಿಗೆಳೆಯುವ ಹೆಸರಿನಲ್ಲಿ ಸಾರ್ವಜನಿಕರ ಚಡ್ಡಿ ಬನಿಯನ್ ಕಳಚಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಗ್ರಹಿಸಿದೆ.
"ನೋಟು ಹಿಂಪಡೆತದ ನಂತರ ಈಗ ಪ್ರಧಾನಿ ಬೇನಾಮಿ ಆಸ್ತಿಗಳನ್ನು ಗುರಿಯಾಗಿಸಿಕೊಂಡಿರುವುದು ಬಹಳ ಒಳ್ಳೆಯ ನಡೆ... ಆದರೆ ನೋಟು ಹಿಂಪಡೆತ ಕ್ರಮದಂತೆಯೇ, ಬೇನಾಮಿ ಆಸ್ತಿಯ ಮುಖವಾಡ ಹಾಕಿಕೊಂಡು ಬಡ ಮತ್ತು ಮಧ್ಯಮ ವರ್ಗವನ್ನು ತುಳಿಯಬಾರದು" ಎಂದು ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಮುಖ್ಯಸ್ಥ ಉದ್ಧವ್ ಠಾಕ್ರೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಹಲವು ರಾಜಕೀಯ ನಾಯಕರು, ಉದ್ದಿಮೆದಾರರು, ಅನಿವಾಸಿ ಭಾರತೀಯರು ಮತ್ತು ಮಾಫಿಯಾದವರು ಈಗಾಗಲೇ ಆಸ್ತಿಗಳಲ್ಲಿ ಕಪ್ಪು ಹಣ ಹೂಡಿದ್ದಾರೆ ಆದರೆ ವಿಪರ್ಯಾಸ ಎಂದರೆ ನೋಟು ಹಿಂಪಡೆತದ ನಂತರ ಸಾಮಾನ್ಯ ಜನರನ್ನು ಅಪ್ರಾಮಾಣಿಕ ಎಂದು ಕರೆಯಲಾಯಿತು ಎಂದು ಕೂಡ ಅವರು ಹೇಳಿದ್ದಾರೆ.
"ವಿದೇಶಿ ಬ್ಯಾಂಕ್ ಗಳಲ್ಲಿ ಬಚ್ಚಿಟ್ಟಿರುವ ಅಕ್ರಮ ಸಂಪತ್ತನ್ನು ವಾಪಸ್ ತರುವುದಾಗಿ ಮೋದಿ ವಚನ ನೀಡಿದ್ದರು, ಆದರೆ ಅದರ ಒಂದು ಪೈಸೆ ಕೂಡ ಹಿಂದಿರುಗಲಿಲ್ಲ ಎಂಬುದು ಸತ್ಯಾಂಶ. ಆ ಸಂಪತ್ತು ಇಟ್ಟಿದ್ದ ಜನರು ಕೂಡ ಒಂದು ಪೈಸೆ ಕಳೆದುಕೊಳ್ಳಲಿಲ್ಲ. ಆದರೆ ಸಾಮಾನ್ಯ ಜನರಿಗೆ ನೋಟು ಹಿಂಪಡೆತದಿಂದ ತೀವ್ರ ತೊಂದರೆಯಾಯಿತು ಮತ್ತು ಇನ್ನು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ" ಎಂದು ಠಾಕ್ರೆ ಹೇಳಿದ್ದಾರೆ.
ನೋಟು ಹಿಂಪಡೆತ ನಿರ್ಧಾರದ ನಂತರ ಜನರ ತೊಂದರೆಗಳು ಹೆಚ್ಚಿವೆ ಆದರೆ ಕಪ್ಪು ಹಣ ಶೇಖರಿಸಿದ್ದ ವ್ಯಕ್ತಿಯಾಗಲಿ ಅಥವಾ ಉದ್ದಿಮೆದಾರರಾಗಲಿ ಯಾರನ್ನು ಜೈಲಿಗೆ ತಳ್ಳಲಾಗಿಲ್ಲ ಎಂದು ಕೂಡ ಹೇಳಿದ್ದಾರೆ.
ಸೆಪ್ಟೆಂಬರ್ ನಲ್ಲಿ ಪಾಕಿಸ್ತಾನದ ಮೇಲೆ ನಡೆದ ನಿರ್ಧಿಷ್ಟ ದಾಳಿಗೆ ಹೋಲಿಸಿದ ಠಾಕ್ರೆ, ಪಕ್ಕದ ದೇಶ (ಪಾಕಿಸ್ತಾನ) ಭಯೋತ್ಪಾದನೆಯನ್ನು ಇನ್ನು ಉತ್ಪಾದಿಸುತ್ತಲೇ ಇದ್ದು, ಇಲ್ಲಿಯವರೆಗೂ ೫೦ ಭಾರತೀಯ ಸೈನಿಕರ ಸಾವಿಗೆ ಕಾರಣವಾಗಿದ್ದಾರೆ ಎಂದಿದ್ದಾರೆ.
"ನಿರ್ಧಿಷ್ಟ ದಾಳಿ ಸರ್ಕಾರದ ಅತಿ ದೊಡ್ಡ ಗೆಲುವು ಎಂದು ಪುಂಗಿ ಊದಲಾಗಿತ್ತು ಆದರೆ ನಮ್ಮ ಸೈನಿಕರನ್ನು ರಕ್ಷಿಸಲು ಅವರು ಸೋತಿದ್ದಾರೆ... ಈಗ ಪ್ರಶ್ನೆಯೆಂದರೆ ನಿಜವಾಗಿಯೂ ಯಾರು ಅಪ್ರಮಾಣಿಕರು?" ಎಂದು ಬಿಜೆಪಿ ಮೈತ್ರಿ ಪಕ್ಷ ಶಿವಸೇನಾ ಅಧ್ಯಕ್ಷ ಪ್ರಶ್ನಿಸಿದ್ದಾರೆ.
ಕಾಶ್ಮೀರದಿಂದ ಹೊರದಬ್ಬಲ್ಪಟ್ಟ ಕಾಶ್ಮೀರಿ ಪಂಡಿತರ ಬಗ್ಗೆ ಮಾತನಾಡಿರುವ ಠಾಕ್ರೆ, ಬೇನಾಮಿ ಆಸ್ತಿಯ ಮೇಲೆ ದಾಳಿ ಮಾಡುವುದಕ್ಕೂ ಮೊದಲು, ಕಾಶ್ಮೀರದಿಂದ ಹೊರಹಾಕಲಾಗಿರುವ ಪಂಡಿತರ ಆಸ್ತಿಯನ್ನು ಮತ್ತೆ ದೊರಕಿಸಿಕೊಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
"ಈ ನಿರಾಶ್ರಿತ ಕಾಶ್ಮೀರಿಗಳಿಗಾಗಿ ಸರ್ಕಾರ ನಿರ್ಧಿಷ್ಟ ದಾಳಿ ನಡೆಸಲಿದೆಯೇ?ಕಾಶ್ಮೀರಿ ಪಂಡಿತರ ಕಾನೂನುಬದ್ಧವಾದ ಆಸ್ತಿಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ನಂಬಿದ್ದೇನೆ" ಎಂದು ಕೂಡ ಠಾಕ್ರೆ ಹೇಳಿದ್ದಾರೆ.
ಬೇನಾಮಿ ಆಸ್ತಿ ವಿರುದ್ಧದ ಕ್ರಮಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರಿಕೆ ತೆಗೆದುಕೊಳ್ಳುವಂತೆ ಆಗ್ರಹಿಸಿರುವ ಠಾಕ್ರೆ "ದೇಶದ ಅಪ್ರಾಮಾಣಿಕ ಕಳ್ಳರ ವಿರುದ್ಧ ಮೋದಿ ಹೋರಾಡುತ್ತಿರುವುದನ್ನು ಪ್ರಶಂಸಿಸುವುದಾಗಿ" ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


