ಪ್ರಧಾನ ಸುದ್ದಿ

ಅಗ್ನಿ-5 ಯಶಸ್ಸಿನ ಬೆನ್ನಲ್ಲೇ ಮತ್ತೊಂದು ಪ್ರಬಲ ಅಗ್ನಿ-6 ಪರೀಕ್ಷೆಗೆ ಮುಂದಾದ ಭಾರತ!

ಅಗ್ನಿ 5 ಕ್ಷಿಪಣಿಗಿಂತಲೂ ಪ್ರಬಲ ಮತ್ತು ಭಾರಿ ವಿಧ್ವಂಸಕ ಕ್ಷಿಪಣಿಯೊಂದರ ಸಂಶೋಧನೆಯನ್ನು ಕೈಗೆತ್ತಿಕೊಂಡಿದೆ ಎಂದು ಹೇಳಲಾಗುತ್ತಿದೆ.

ಅಗ್ನಿ-5 ಯಶಸ್ಸಿನ ಬೆನ್ನಲ್ಲೇ ಮತ್ತೊಂದು ಪ್ರಬಲ ಅಗ್ನಿ-6 ಪರೀಕ್ಷೆಗೆ ಮುಂದಾದ ಭಾರತ!
ಸಂಗ್ರಹ ಚಿತ್ರ
Published On :

ನವದೆಹಲಿ: 5 ಸಾವಿರ ಕಿ.ಮೀ ವ್ಯಾಪ್ತಿಯ ಅಗ್ನಿ-5 ಕ್ಷಿಪಣಿ ಯಶಸ್ಸಿನ ಬೆನ್ನಲ್ಲೇ ಭಾರತದ ಹೆಮ್ಮೆಯ ರಕ್ಷಣಾ ಅಭಿವೃದ್ಧಿ ಮತ್ತು ಸಂಶೋಧನಾ ಕೇಂದ್ರ (ಡಿಆರ್ ಡಿಒ) ಮತ್ತೊಂದು ಮಹತ್ವದ ಮೈಲುಗಲ್ಲು ಸ್ಥಾಪಿಸಲು ಹೊರಟಿದ್ದು, ಅಗ್ನಿ 5  ಕ್ಷಿಪಣಿಗಿಂತಲೂ ಪ್ರಬಲ ಮತ್ತು ಭಾರಿ ವಿಧ್ವಂಸಕ ಕ್ಷಿಪಣಿಯೊಂದರ ಸಂಶೋಧನೆಯನ್ನು ಕೈಗೆತ್ತಿಕೊಂಡಿದೆ ಎಂದು ಹೇಳಲಾಗುತ್ತಿದೆ.

ಪ್ರಸ್ತುತ ಭಾರತದಲ್ಲಿರುವ ಕ್ಷಿಪಣಿಗಳಲ್ಲೇ ಅಗ್ನಿ-5 ಕ್ಷಿಪಣಿ ಅತ್ಯಂತ ಪ್ರಬಲ ಕ್ಷಿಪಣಿಯಾಗಿದ್ದು, ಇದನ್ನೂ ಮೀರಿಸಬಲ್ಲ ಪ್ರಬಲ ಮತ್ತು ವಿಧ್ವಂಸಕ ಕ್ಷಿಪಣಿಯನ್ನು ತಯಾರಿಸುವ ಯೋಜನೆಗೆ ಡಿರ್ ಡಿಒ ಕೈಹಾಕಿದೆ. 5 ಸಾವಿರ ಕಿ.ಮೀ  ವ್ಯಾಪ್ತಿಯ ಸಾಮರ್ಥ್ಯ ಹೊಂದಿರುವ ಅಗ್ನಿ-5 ಕ್ಷಿಪಣಿ ಸಂಪೂರ್ಣ ಪಾಕಿಸ್ತಾನ ಅಥವಾ ಚೀನಾದ ಅರ್ಧ ಭಾಗದಷ್ಟು ಭೂಪ್ರದೇಶದ ಯಾವುದೇ ಭಾಗದಲ್ಲಿನ ಗುರಿಯನ್ನು ನಿರಾಯಾಸವಾಗಿ ತಲುಪಬಲ್ಲ ಸಾಮರ್ಥ್ಯವನ್ನು ಹೊಂದಿದೆ.  ಆದರೆ ಪ್ರಸ್ತುತ ಡಿಆರ್ ಡಿಒ ವಿಜ್ಞಾನಿಗಳು ಕೈಗೆತ್ತಿಕೊಂಡಿರುವ ಅಗ್ನಿ-6 ಕ್ಷಿಪಣಿ ಇದಕ್ಕಿಂತಲೂ ದುಪ್ಪಟ್ಟು ಅಂದರೆ ಸುಮಾರು 12 ಸಾವಿರ ಕಿ.ಮೀ ವ್ಯಾಪ್ತಿಯಲ್ಲಿನ ಯಾವುದೇ ಗುರಿಯನ್ನು ತಲುಪಬಲ್ಲ ಸಾಮರ್ಥ್ಯವನ್ನು ಹೊಂದಿರಲಿದೆ  ಎಂದು ಹೇಳಲಾಗುತ್ತಿದೆ.

Story image



ಪ್ರಸ್ತುತ ಅಗ್ನಿ-6 ಕ್ಷಿಪಣಿ ಯೋಜನೆನ್ನು ಕೈಗೆತ್ತಿಕೊಂಡ ಸಂದರ್ಭದಲ್ಲಿ ಇದರ ಸಾಮರ್ಥ್ಯವನ್ನು 8 ಸಾವಿರ ಕಿ.ಮೀಗೆ ನಿಗದಿ ಪಡಿಸಲಾಗಿತ್ತಾದರೂ, ಬಳಿಕ ವಿಜ್ಞಾನಿಗಳು ಇದರ ಸಾಮರ್ಥ್ಯವನ್ನು ಹೆಚ್ಚಿಸುವ ನಿರ್ಧಾರ ಕೈಗೊಂಡಿದ್ದರು  ಎಂದು ಹೇಳಲಾಗುತ್ತಿದೆ. ಇತ್ತೀಚೆಗಷ್ಟೇ ಭಾರತ ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಒಕ್ಕೂಟಕ್ಕೆ ಸೇರ್ಪಡೆಯಾಗಿತ್ತು. ಆ ಮೂಲಕ ಇತರೆ ದೇಶಗಳಿಂದ ಅತ್ಯಾಧುನಿಕ ಕ್ಷಿಪಣಿ ತಂತ್ರಜ್ಞಾನ ಸ್ವೀಕರಿಸುವ ಹಾಗೂ ನೀಡುವ  ಅವಕಾಶವನ್ನು ಭಾರತ ಪಡೆದಿದೆ.

ಮೂಲಗಳ ಪ್ರಕಾರ ಅಗ್ನಿ- 5 ಕ್ಷಿಪಣಿಗಿಂತಲೂ ಅಗ್ನಿ -6 ಹೆಚ್ಚು ಉದ್ದವಿರಲಿದ್ದು, ಹೆಚ್ಚಿನ ಸ್ಪೋಟಕ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರಲಿದೆ. ಅಂತೆಯೇ ಈ ಮಹತ್ವದ ಕ್ಷಿಪಣಿ ಅತ್ಯುನ್ನತ ಎಂಐಆರ್ ವಿ (manoeuvring  warheads or intelligent re-entry vehicles) ತಂತ್ರಜ್ಞಾನ ಹೊಂದಿರಲಿದ್ದು, ಅಗ್ನಿ-6 ಕ್ಷಿಪಣಿ ಏಕಕಾಲಕ್ಕೆ 10 ಸಿಡಿತಲೆಗಳನ್ನು ಹೊತ್ತೊಯ್ಯುವ ಮತ್ತು ವಿವಿಧ ಸ್ಥಳಗಳ ಮೇಲೆ ನಿಖರವಾಗಿ ದಾಳಿ ನಡೆಸು ಸಾಮರ್ಥ್ಯ  ಹೊಂದಿರಲಿದೆ ಎಂದು ಹೇಳಲಾಗುತ್ತಿದೆ. 8 ಸಾವಿರ ಕಿ.ಮೀನಿಂದ 12 ಸಾವಿರ ಕಿ.ಮೀ. ದೂರದ ಯಾವುದೇ ಪ್ರದೇಶಗಳ ಮೇಲೆ ದಾಳಿ ನಡೆಸುವ ಸಾಮರ್ಥ್ಯ ಅಗ್ನಿ-6 ಕ್ಷಿಪಣಿಗಿರಲಿದೆ ಎಂದು ಹೇಳಲಾಗುತ್ತಿದೆ. ಪ್ರಮುಖವಾಗಿ ಚೀನಾ  ಹಾಗೂ ಪಾಕಿಸ್ತಾನವನ್ನು ಗಮನದಲ್ಲಿಟ್ಟುಕೊಂಡು ಡಿಆರ್ ಜಿಒ ಈ ವಿಧ್ವಂಸಕ ಕ್ಷಿಪಣಿ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಶತ್ರುರಾಷ್ಟ್ರಗಳ ಭದ್ರತಾ ವ್ಯವಸ್ಥೆಯನ್ನು ಭೇದಿಸಿ, ರಡಾರ್​ಗಳ ಕಣ್ತಪ್ಪಿಸಿ ಹಲವು ಪ್ರದೇಶಗಳ ಮೇಲೆ  ಏಕಕಾಲದಲ್ಲಿ ದಾಳಿ ನಡೆಸುವ ರೀತಿಯಲ್ಲಿ ಅಗ್ನಿ- 6 ಕ್ಷಿಪಣಿಯನ್ನು ವಿನ್ಯಾಸಗೊಳಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಅಂತೆಯೇ ಈ ಕ್ಷಿಪಣಿ ಅಣ್ವಸ್ತ್ರ ದಾಳಿ ನಡೆಸುವ ಸಾಮರ್ಥ್ಯವನ್ನೂ ಹೊಂದಿರಲಿದೆ ಎಂದು ಹೇಳಲಾಗುತ್ತಿದೆ.

Story image



ಕೇಂದ್ರ ಸರ್ಕಾರ ಈ ಕ್ಷಿಪಣಿ ಅಭಿವೃದ್ಧಿಗೆ ಈಗಾಗಲೇ ಹಸಿರು ನಿಶಾನೆ ತೋರಿಸಿದೆ. ತಂತ್ರಾಂಶ ಮತ್ತಿತರ ಅಂಶಗಳ ಕುರಿತು ವಿಜ್ಞಾನಿಗಳು ಪರಾಮರ್ಶೆ ನಡೆಸುತ್ತಿದ್ದಾರೆ. 2012ರಲ್ಲಿ ಅಗ್ನಿ -5 ಕ್ಷಿಪಣಿಯ ಪ್ರಾಯೋಗಿಕ ಪರೀಕ್ಷೆ  ನಡೆಸಿದ್ದ ಡಿಆರ್​ಡಿಒ, ಸೋಮವಾರ ಅಂತಿಮ ಪ್ರಾಯೋಗಿಕ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತ್ತು. ಅಗ್ನಿ -6 ಕ್ಷಿಪಣಿಯ ಪ್ರಾಯೋಗಿಕ ಪರೀಕ್ಷೆ ಮುಂದಿನ ವರ್ಷ ಆರಂಭವಾಗುವ ನಿರೀಕ್ಷೆಯಿದ್ದು, ಮುಂದಿನ 2-3 ವರ್ಷಗಳಲ್ಲಿ ಈ  ಕ್ಷಿಪಣಿ ಸೇನೆಯ ಬಳಕೆಗೆ ಲಭ್ಯವಾಗುವ ಸಾಧ್ಯತೆ ಇದೆ. ಆದರೆ ಅಗ್ನಿ-6 ಕ್ಷಿಪಣಿ ಯೋಜನೆಯನ್ನು ರಹಸ್ಯವಾಗಿಡಲು ಡಿಆರ್ ಡಿಒ ನಿರ್ಧರಿಸಿದಂತಿದ್ದು, ಕ್ಷಿಪಣಿ ಯೋಜನೆಯ ಯಾವುದೇ ವಿಚಾರಗಳ ಬಗ್ಗೆ ಡಿಆರ್​ಡಿಒ ಮಾಹಿತಿ  ನೀಡಿಲ್ಲ.

ಒಟ್ಟಾರೆ ಅಮೆರಿಕ ಮತ್ತು ರಷ್ಯಾ ದೇಶಗಳಂತೆ ಭಾರತ ಕೂಡ ವಿಶ್ವದ ಬಲಿಷ್ಟ ರಕ್ಷಣಾ ಸಾಮರ್ಥ್ಯ ಹೊಂದಿರುವ ರಾಷ್ಟ್ರವಾಗುವತ್ತ ಮಹತ್ವದ ಹೆಜ್ಜೆಯನ್ನಿಡುತ್ತಿದ್ದು, ಅಗ್ನಿ-6 ಯಶಸ್ವಿಯಾದರೆ ಭಾರತ ರಕ್ಷಣಾ ಬಲ ಮತ್ತಷ್ಟು ಹೆಚ್ಚಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.