ಪ್ರಧಾನ ಸುದ್ದಿ

ಸೇನೆ ಆಧುನೀಕರಣಕ್ಕೆ 6 ಸಾವಿರ ಕೋಟಿ ವ್ಯಯ; 'ಸರ್ಜಿಕಲ್ ಸ್ಟ್ರೈಕ್ ಭಾಗ-2'ಕ್ಕೆ ಸಿದ್ಧತೆಯೇ?

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಸೀಮಿತ ದಾಳಿ ನಡೆಸಿದ ಭಾರತೀಯ ಸೇನಾ ಪಡೆಗಳು ಇದೀಗ ಆ ದಾಳಿಯ 2ನೇ ಭಾಗಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿವೆಯೇ ಎಂಬ ಅನುಮಾನಗಳು ಮೂಡುತ್ತಿವೆ.

ಸೇನೆ ಆಧುನೀಕರಣಕ್ಕೆ 6 ಸಾವಿರ ಕೋಟಿ ವ್ಯಯ; 'ಸರ್ಜಿಕಲ್ ಸ್ಟ್ರೈಕ್ ಭಾಗ-2'ಕ್ಕೆ ಸಿದ್ಧತೆಯೇ?
ಸಂಗ್ರಹ ಚಿತ್ರ
Published On :

ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಸೀಮಿತ ದಾಳಿ ನಡೆಸಿದ ಭಾರತೀಯ ಸೇನಾ ಪಡೆಗಳು ಇದೀಗ ಆ ದಾಳಿಯ 2ನೇ ಭಾಗಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿವೆಯೇ ಎಂಬ ಅನುಮಾನಗಳು ಮೂಡುತ್ತಿವೆ.

ಕೆಲ ಮಾಧ್ಯಮಗಳ ವರದಿಯಂತೆ ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ಭಾಗ-2ಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಇದಕ್ಕಾಗಿ ಸುಮಾರು 6 ಸಾವಿರ ಕೋಟಿ ರು. ವೆಚ್ಚದಲ್ಲಿ ಯುದ್ಧ ವಿಮಾನ, ಅತ್ಯಾಧುನಿಕ ರೈಫಲ್, ಮೆಷಿನ್ ಗನ್,  ಗ್ರೆನೇಡ್ ಲಾಂಚರ್ ಗಳನ್ನು ಖರೀದಿ ಮಾಡಿದೆ ಎಂದು ಹೇಳಲಾಗುತ್ತಿದೆ. ಮಾಧ್ಯಮಗಳಿಗೆ ಲಭ್ಯವಾಗಿರುವ ಉನ್ನತ ಮೂಲಗಳ ಪ್ರಕಾರ ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಸೇನೆಯ ಸುಮಾರು 6 ಸಾವಿರ ಕೋಟಿ ರು.ಗಳ  ಪ್ರಸ್ತಾವನೆಯೊಂದಕ್ಕೆ ಅನುಮೋದನೆ ನೀಡಿತ್ತು. ಆದರೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದ ಸೇನಾಪಡೆಗಳ ಪ್ರಸ್ತಾವನೆಯಲ್ಲಿ ಏನಿತ್ತು ಎಂಬುದು ಬಹಿರಂಗವಾಗಿರಲಿಲ್ಲ.

ಇದೀಗ ಆ ರಹಸ್ಯ ಪ್ರಸ್ತಾವನೆಯಲ್ಲಿದ್ದ ಅಂಶಗಳ ಬಹಿರಂಗವಾಗಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದು, ಅದರಂತೆ ಭಾರತ 6 ಸಾವಿರ ಕೋಟಿ ರು.ಗಳ ಯುದ್ಧೋಪಕರಣಗಳ ಖರೀದಿಗೆ ಅನುಮೋದನೆ ನೀಡಿದೆ ಎಂದು  ಹೇಳಲಾಗುತ್ತಿದೆ. ಈ 6 ಸಾವಿರ ಕೋಟಿ ರು.ಗಳ ಪೈಕಿ 5500 ಕೋಟಿ ರು.ಗಳಲ್ಲಿ 6 ಅತ್ಯಾಧುನಿಕ ಯುದ್ಧ ವಿಮಾನಗಳನ್ನು ಖರೀದಿಸಲಾಗುತ್ತಿದೆ. ಇನ್ನುಳಿದ ಹಣದಲ್ಲಿ 300 ಕೋಟಿ ರು.ಗಳನ್ನು ವ್ಯಯಿಸಿ ಸೇನಾಪಡೆಗೆ ಬೇಕಾದ  ಅತ್ಯಾಧುನಿಕ ರೈಫಲ್ ಗಳು, ಮೆಷಿನ್ ಗನ್ ಗಳು, ಅತ್ಯಾಧುನಿಕ ಗ್ರೆನೇಡ್ ಲಾಂಚರ್ ಗಳನ್ನು ಖರೀದಿಸಲು ಸೇನಾಧಿಕಾರಿಗಳು ಮುಂದಾಗಿದ್ದಾರೆ.

ಇದಲ್ಲದೆ ಕರಾವಳಿ ಪಡೆಗೆ 6 ಹೊಸ ಕಣ್ಗಾವಲು ವಿಮಾನ ನೀಡಲಾಗುತ್ತಿದ್ದು, ಭಾರತೀಯ ವಾಯುಪಡೆಗೆ ಒಂದು ಸಿ-17 ಸರಕು ಸಾಗಾಣಿಕೆ ವಿಮಾನ ಖರೀದಿಸಲಾಗಿದೆ. ಅಂತೆಯೇ ವಿಶೇಷ ಪಡೆಗೆ ಆಟೋಮ್ಯಾಟಿಕ್ ಗ್ರೆನೇಡ್  ಲಾಂಚರ್​ಗಳನ್ನು ಪೂರೈಸಲಾಗಿದೆ. ಇವುಗಳನ್ನು ಬಳಸಿಕೊಂಡು ಉಗ್ರರ ಹುಟ್ಟಡಗಿಸುವ ಮತ್ತೊಂದು ಸುತ್ತಿನ ಕಾರ್ಯಾಚರಣೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಮೇಕ್ ಇನ್ ಇಂಡಿಯಾ ಅಡಿಯಲ್ಲಿ 6 ಗಸ್ತು ವಿಮಾನ ನಿರ್ಮಾಣ

ಇನ್ನು ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ಕರಾವಳಿ ರಕ್ಷಣಾ ಪಡೆಗೆ ಅಗತ್ಯವಿರುವ ಆರು ಗಸ್ತು ವಿಮಾನಗಳನ್ನು ಭಾರತದಲ್ಲೇ ನಿರ್ಮಿಸುವ ಪ್ರಸ್ತಾವನೆಗೆ ರಕ್ಷಣಾ  ಸಚಿವ ಮನೋಹರ್ ಪರಿಕ್ಕರ್ ಅವರು ಸಹಿ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಪ್ರಸ್ತುತ ಭಾರತೀಯ ವಾಯುಪಡೆಗೆ 56 ವಿಮಾನಗಳ ಅಗತ್ಯವಿದ್ದು, ಕರಾವಳಿ ರಕ್ಷಣಾ ಪಡೆಯನ್ನೂ ಸೇರಿಸಿದರೆ 62 ಗಸ್ತು ವಿಮಾನಗಳು  ಬೇಕಾಗಲಿವೆ. ಇವುಗಳಲ್ಲಿ ಬಹುತೇಕ ವಿಮಾನಗಳನ್ನು ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲೇ ತಯಾರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.