ಎಲ್ಲ ಜಲವಿವಾದಗಳಿಗೆ ಒಂದೇ ನ್ಯಾಯಾಧಿಕರಣ; ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ
ಮಹತ್ವದ ಬೆಳವಣಿಗೆಯೊಂದರಲ್ಲಿ ಅಂತರರಾಜ್ಯ ಜಲವಿವಾದಗಳನ್ನು ಬಗೆಹರಿಸಲು ಕೇಂದ್ರ ಸರ್ಕಾರ ಒಂದೇ ನ್ಯಾಯಾಧಿಕರಣ ಸ್ಥಾಪಿಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಅಂತರರಾಜ್ಯ ಜಲವಿವಾದಗಳನ್ನು ಬಗೆಹರಿಸಲು ಕೇಂದ್ರ ಸರ್ಕಾರ ಒಂದೇ ನ್ಯಾಯಾಧಿಕರಣ ಸ್ಥಾಪಿಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಪ್ರಸ್ತುತ ಇರುವ ಒಂದೊಂದು ಅಂತಾರಾಜ್ಯ ನದಿ ನೀರು ಹಂಚಿಕೆ ಬಿಕ್ಕಟ್ಟಿಗೆ ಒಂದೊಂದು ನ್ಯಾಯಾಧಿಕರಣಗಳಿದ್ದು, ಈ ಎಲ್ಲ ನ್ಯಾಯಾಧಿಕಣಗಳನ್ನು ಒಂದೇ ನ್ಯಾಯಾಧಿಕರಣದ ಅಡಿಗೆ ತಂದು ಎಲ್ಲವನ್ನೂ ವಿಲೀನಗೊಳಿಸಲು ಕೇಂದ್ರ ಸರ್ಕಾರ ಕಳೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿತ್ತು. ಹೀಗಾಗಿ ನದಿ ವ್ಯಾಜ್ಯಗಳ ಕಾಯ್ದೆ-1956ಕ್ಕೆ ತಿದ್ದುಪಡಿ ತರಲು ಒಪ್ಪಿಗೆ ಸೂಚಿಸಲಾಗಿತ್ತು. ಅಂತೆಯೇ ಜನವರಿಯಲ್ಲಿ ಆರಂಭವಾಗುವ ಬಜೆಟ್ ಅಧಿವೇಶನದಲ್ಲಿ ಇದನ್ನು ಮಂಡಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಇದೇ ವೇಳೆ ನದಿ ವ್ಯಾಜ್ಯ ನಿರ್ಣಯ ಸಮಿತಿ (Dispute Resolution Committee-DRC)ಯನ್ನು ಕೂಡ ರಚನೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದ್ದು, ವಿವಾದ ಸಂಬಂಧ ನಿರ್ಣಯ ಕೈಗೊಳ್ಳಲು ಈ ಸಮಿತಿ ನೆರವಾಗಲಿದೆ. ಬಹುತೇಕ ಎಲ್ಲ ನದಿ ವ್ಯಾಜ್ಯಗಳನ್ನು ಡಿಆರ್ ಸಿಯಲ್ಲೇ ಪರಿಹರಿಸಲು ಪ್ರಯತ್ನಿಸಲಾಗುತ್ತದೆ. ಒಂದು ವೇಳೆ ಡಿಆರ್ ಸಿ ನಿರ್ಣಯದಿಂದ ರಾಜ್ಯಗಳು ಸಂತೃಪ್ತರಾಗದಿದ್ದಲ್ಲಿ ಮಾತ್ರ ನ್ಯಾಯಾಧಿಕರಣದ ಮೆಟ್ಟೇಲೇರಬಹುದಾಗಿದೆ.
ಪ್ರಸ್ತಾವಿತ ತಿದ್ದುಪಡಿ ಕಾಯ್ದೆಯಡಿ 2 ವರ್ಷದೊಳಗೆ ನದಿ ವಿವಾದ ಇತ್ಯರ್ಥಗೊಳಿಸುವ ಗಡುವು ವಿಧಿಸಲಾಗಿದ್ದು, ಈಗಿರುವ ಕಾಯ್ದೆಯಲ್ಲಿ 3 ವರ್ಷದೊಳಗೆ ತೀರ್ಪು ಕೊಡಬೇಕು. ಆಗದಿದ್ದರೆ ವಿಸ್ತರಣೆಗೆ ಅರ್ಜಿ ಸಲ್ಲಿಸಬೇಕು ಎಂಬ ನಿಯಮವಿದೆ. ಈ ವರೆಗೆ ಕಾವೇರಿ ನ್ಯಾಯಾಧಿಕರಣ, ಮಹದಾಯಿ ನ್ಯಾಯಾಧಿಕರಣ, ಕೃಷ್ಣಾ ನ್ಯಾಯಾಧಿಕರಣ ಸೇರಿ ವಿವಿಧ 8 ನ್ಯಾಯಾಧಿಕರಣಗಳು ರಚಿತವಾಗಿವೆ. ಯಾವುದಾದರೂ ರಾಜ್ಯವೊಂದು ಅಂತಾರಾಜ್ಯ ನದಿ ವಿವಾದ ಮಾತುಕತೆಯಲ್ಲಿ ಇತ್ಯರ್ಥವಾಗಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರೆ, ಸರ್ಕಾರವು ನ್ಯಾಯಾಧಿಕರಣ ರಚಿಸುವ ಅಧಿಕಾರ ಹೊಂದಿದೆ.
ಈ ಬಗ್ಗೆ ಮಾತನಾಡಿರುವ ಕೇಂದ್ರ ಜಲ ಸಂಪನ್ಮೂಲ ಸಚಿವಾಲಯ ಕಾರ್ಯದರ್ಶಿ ಶಶಿ ಶೇಖರ್ ಅವರು, ಅಂತಾರಾಜ್ಯ ಜಲ ವ್ಯಾಜ್ಯಗಳನ್ನು ಪರಿಷ್ಕರಣೆಗಾಗಿ ಇನ್ನು ಮುಂದೆ ಒಂದೇ ನ್ಯಾಯಾಧಿಕರಣವಿರಲಿದೆ. ಈ ನ್ಯಾಯಾಧಿಕರಣದ ಅಡಿಯಲ್ಲೇ ಎಲ್ಲ ರಾಜ್ಯಗಳ ನದಿ ವ್ಯಾಜ್ಯೆಗಳ ವಿಚಾರಣೆ ನಡೆಯಲಿದೆ. ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರ ಈ ನ್ಯಾಯಾಧಿರಣದ ನೇತೃತ್ವ ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


