ಡಿಮಾನೆಟೈಸೇಷನ್ ನಿಂದ ಗಮನ ಬೇರೆಡೆ ಸೆಳೆಯಲು ಕೇಂದ್ರದಿಂದ ಸಿಬಿಐ ದುರ್ಬಳಕೆ: ಭೂಷಣ್
ಅಗಸ್ಟಾ ವೆಸ್ಟ್ ಲ್ಯಾಂಡ್ ಒಪ್ಪಂದ ಪ್ರಕರಣದಲ್ಲಿ ಮಾಜಿ ಏರ್ ಚೀಫ್ ಮಾರ್ಷಲ್ ಎಸ್ ಪಿ ತ್ಯಾಗಿ ಅವರನ್ನು ಸಿಬಿಐ ಬಂಧಿಸಿರುವುದರ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ವಕೀಲ ಪ್ರಶಾಂತ್ ಭೂಷಣ್,

Published On :
ನೋಯ್ಡಾ: ಅಗಸ್ಟಾ ವೆಸ್ಟ್ ಲ್ಯಾಂಡ್ ಒಪ್ಪಂದ ಪ್ರಕರಣದಲ್ಲಿ ಮಾಜಿ ಏರ್ ಚೀಫ್ ಮಾರ್ಷಲ್ ಎಸ್ ಪಿ ತ್ಯಾಗಿ ಅವರನ್ನು ಸಿಬಿಐ ಬಂಧಿಸಿರುವುದರ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ವಕೀಲ ಪ್ರಶಾಂತ್ ಭೂಷಣ್, ನೋಟು ಹಿಂಪಡೆತ ನಿರ್ಧಾರದಿಂದ ಉಂಟಾಗಿರುವ ಅವ್ಯವಸ್ಥೆಯಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಕೇಂದ್ರ ಸರ್ಕಾರದ ನಿರ್ದೇಶನದಲ್ಲಿ ಸಿಬಿಐ ಕೆಲಸ ಮಾಡುತ್ತಿದೆ ಎಂದು ಶನಿವಾರ ದೂರಿದ್ದಾರೆ.
"ಏರ್ ಚೀಫ್ ಮಾರ್ಷಲ್ ತ್ಯಾಗಿ ಅವರ ಬಗೆಗಿನ ಮಾಹಿತಿ ಎರಡು ವರ್ಷಗಳಿಂದ ಲಭ್ಯವಿದ್ದವು, ಆದರೂ ಅವರನ್ನು ಇಲ್ಲಿಯವರೆಗೆ ಬಂಧಿಸಿರಲಿಲ್ಲ. ಈಗ ನೋಟು ಹಿಂಪಡೆತ ನಿರ್ಧಾರದಿಂದ ಉಂಟಾಗಿರುವ ಅವ್ಯವಸ್ಥೆಯಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಅವರನ್ನು ತುರ್ತಾಗಿ ಬಂಧಿಸಲಾಗಿದೆ" ಎಂದು ಭೂಷಣ್ ಆರೋಪಿಸಿದ್ದಾರೆ.
ಸಿಬಿಐ ಮತ್ತು ಕೇಂದ್ರ ಸರ್ಕಾರ ಭ್ರಷ್ಟಾಚಾರವನ್ನು ತೊಲಗಿಸಲು ಗಂಭೀರವಾಗಿದ್ದರೆ ಛತ್ತೀಸ್ ಘರ್, ರಾಜಸ್ಥಾನ ಮತ್ತು ಜಾರ್ಖಂಡ ರಾಜ್ಯಗಳು ಕೂಡ ಮಾಡಿಕೊಂಡಿರುವ ಅಗಸ್ಟಾ ವೆಸ್ಟ್ ಲ್ಯಾಂಡ್ ಭದ್ರತಾ ಒಪ್ಪಂದಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಮುಂದುವರೆದು ಅವರು ಹೇಳಿದ್ದಾರೆ.
"ಅವರು ಭ್ರಷ್ಟಾಚಾರವನ್ನು ಕೊನೆಗೊಳಿಸಲು ಗಂಭೀರವಾಗಿದ್ದರೆ, ಛತ್ತೀಸ್ ಘರ್, ಜಾರ್ಖಂಡ ಮತ್ತು ರಾಜಸ್ಥಾನ ಸರ್ಕಾರಗಳು ಮಾಡಿರುವ ಅಗಸ್ಟಾ ವೆಸ್ಟ್ ಲ್ಯಾಂಡ್ ಖರೀದಿಗಳ ಬಗ್ಗೆ ಮೌನವಾಗಿರುವುದೇಕೆ" ಎಂದು ಪ್ರಶ್ನಿಸಿದ್ದಾರೆ.
ಹೆಚ್ಚು ಬೆಲೆಗೆ ಖರೀದಿಸುವುದು ಮತ್ತು ಭ್ರಷ್ಟಾಚಾರವೆಸಗುವುದಕ್ಕೆ ಭದ್ರತಾ ಒಪ್ಪಂದಗಳು ಭಾರತದಲ್ಲಿ ಹೆಸರುವಾಸಿ ಎಂದಿರುವ ಭೂಷಣ್ "ಈಗ ಕೂಡ ರಫೇಲ್ ಒಪ್ಪಂದದಲ್ಲಿ, ಯುದ್ಧ ವಿಮಾನಗಳ ಬೆಲೆಯನ್ನು ದುಪ್ಪಟ್ಟುಗೊಳಿಸಲಾಗಿದೆ ಮತ್ತು ರಫೇಲ್ ಗೆ ೫೮೦೦೦ ಕೋಟಿ ಡೀಲ್ ನೀಡಿದ್ದು, ಅದರಲ್ಲಿ ಅರ್ಧದಷ್ಟು ಒಪ್ಪಂದವನ್ನು ಭದ್ರತಾ ಉಪಕರಣಗಳನ್ನು ಉತ್ಪಾದಿಸುವ ಯಾವುದೇ ಅನುಭವವಿಲ್ಲದ ಅನಿಲ್ ಅಂಬಾನಿ ಸಂಸ್ಥೆಗೆ ನೀಡಲಾಗಿದೆ" ಎಂದು ಕೂಡ ಭೂಷಣ್ ಆರೋಪಿಸಿದ್ದಾರೆ.
ಬಿಜೆಪಿ ಅಧ್ಯಕ್ಷ ಅಮಿತ್ ಷಾ ಆಯ್ಕೆ ಮಾಡಿರುವ ಹಂಗಾಮಿ ಸಿಬಿಐ ನಿರ್ದೇಶಕ ಕೇಂದ್ರದ ಆದೇಶಕ್ಕೆ ತಲೆಬಾಗಿ ವರ್ತಿಸುತ್ತಿದ್ದಾರೆ ಎಂದು ಕೂಡ ಭೂಷಣ್ ಆರೋಪಿಸಿದ್ದಾರೆ.
ಬೊಫೋರ್ಸ್ ನಂತರದ ಅತಿ ದೊಡ್ಡ ಭದ್ರತಾ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐ ನೆನ್ನೆ ತ್ಯಾಗಿ ಅವರನ್ನು ಬಂಧಿಸಿತ್ತು. ಇದೆ ಸಂಬಂಧದಲ್ಲಿ ದೆಹಲಿ ಮೂಲದ ವಕೀಲ ಗೌತಮ್ ಖೈತಾನ್, ಸಂಜೀವ್ ತ್ಯಾಗಿ ಅಲಿಯಾಸ್ ಜೂಲಿ ತ್ಯಾಗಿ ಅವರುಗಳನ್ನು ಕೂಡ ಬಂಧಿಸಲಾಗಿದೆ. ಈ ಮೂವರು ಈ ಭ್ರಷ್ಟಾಚಾರದ ಪ್ರಕರಣದಲ್ಲಿ ಲಂಚ ಸ್ವೀಕರಿಸಿದ್ದಾರೆ ಎಂದು ಆರೋಪಪಟ್ಟಿ ಸಲ್ಲಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
CBIಸಿಬಿಐPrashant Bhushanಪ್ರಶಾಂತ್ ಭೂಷಣ್ಎಸ್ ಪಿ ತ್ಯಾಗಿಅಗಸ್ಟಾ ವೆಸ್ಟ್ ಲ್ಯಾಂಡ್DemonetisationS.P. TyagiAugustaWestaland
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


