ಪ್ರಧಾನ ಸುದ್ದಿ

ಕೆಎಎಸ್ ಅಧಿಕಾರಿ ಚಾಲಕ ಆತ್ಮಹತ್ಯೆಗೆ ಶರಣು, ಡೆತ್ ನೋಟ್ ನಲ್ಲಿ ಜನಾರ್ದನ ರೆಡ್ಡಿ, ಮೇಲಾಧಿಕಾರಿಯ ಅಕ್ರಮ ಬಹಿರಂಗ

ಬೆಂಗಳೂರಿನ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿರುವ ಕೆಎಎಸ್ ಅಧಿಕಾರಿ ಭೀಮಾ ನಾಯಕ್‌ ಅವರ ಕಾರು ಚಾಲಕ ರಮೇಶ್ ಗೌಡ(30)...

ಕೆಎಎಸ್ ಅಧಿಕಾರಿ ಚಾಲಕ ಆತ್ಮಹತ್ಯೆಗೆ ಶರಣು, ಡೆತ್ ನೋಟ್ ನಲ್ಲಿ ಜನಾರ್ದನ ರೆಡ್ಡಿ, ಮೇಲಾಧಿಕಾರಿಯ ಅಕ್ರಮ ಬಹಿರಂಗ
ರಮೇಶ್ ಗೌಡ ಹಾಗೂ ಡೆತ್ ನೋಟ್
Published On :
ಮಂಡ್ಯ: ಬೆಂಗಳೂರಿನ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿರುವ ಕೆಎಎಸ್ ಅಧಿಕಾರಿ ಭೀಮಾ ನಾಯಕ್‌ ಅವರ ಕಾರು ಚಾಲಕ ರಮೇಶ್ ಗೌಡ (30) ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೂ ಮುನ್ನ ಬರೆದ ಮರಣ ಪತ್ರದಲ್ಲಿ ತನ್ನ ಅಧಿಕಾರಿಯ ಅಕ್ರಮ ಆಸ್ತಿಗೆ ಸಂಬಂಧಿಸಿದಂತೆ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹಾಗೂ ಕಂದಾಯ ಸಚಿವರ ಆಪ್ತರ ಹೆಸರನ್ನೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ,
ನಗರದ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಯಲ್ಲಿ ಚಾಲಕನಾಗಿದ್ದ ರಮೇಶಗೌಡ ಅವರು ಭೀಮಾ ನಾಯಕ್ ಅವರ ಒತ್ತಡ ಹಾಗೂ ಮಾನಸಿಕ ಕಿರುಕುಳ ಸಹಿಸದೆ ಮಂಡ್ಯ ಜಿಲ್ಲೆಯ ಮದ್ದೂರಿನ ಸಮೃದ್ಧ್ ಲಾಡ್ಜ್ ನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ರಮೇಶ್ ಗೌಡ ಅವರು ತನ್ನ ಮೇಲಾಧಿಕಾರಿಯ ಭ್ರಷ್ಟಾಚಾರವನ್ನು ಎಳೆ ಎಳೆಯಾಗಿ ಬರೆದಿಟ್ಟಿದ್ದು, ಭೀಮಾನಾಯಕ್ ಅವರು ಬೆಳಗಾವಿಯ ಸದಾಶಿವನಗರದಲ್ಲಿ ಬಂಗಲೆ, ಹೊಸಪೇಟೆಯಲ್ಲಿ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಸಾಲ ಮಾಡಿ ಅಲ್ಲಿನ ಬಂಬೂ ಬಜಾರ್‌ ಬಳಿ 30 ಗುಂಟೆ ಖಾಲಿ ನಿವೇಶನ, ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಹೊಣಬಪುರದಲ್ಲಿ 30 ಎಕರೆ ಭೂಮಿ ಖರೀದಿಸಿದ್ದಾರೆ.
ಮರಿಯಮ್ಮನಹಳ್ಳಿಯಲ್ಲಿ ಅಣ್ಣ –ತಮ್ಮಂದಿರ 10 ಎಕರೆ ಭೂಮಿ, ಬೆಂಗಳೂರಿನ ಎಂ.ಎಸ್‌. ಪಾಳ್ಯದ ಬಳಿ ಡೋನಾಟಾ ಕಂಪೆನಿಯಲ್ಲಿ ಅನಿಲ್‌ ಜೈನ್‌ ಎಂಬುವವರ ಬಳಿ 5 ಕೋಟಿ ಮೌಲ್ಯದ ಆಸ್ತಿ ಖರೀದಿಸಿದ್ದಾರೆ. ಯಲಹಂಕದಲ್ಲಿ ಸ್ವಂತ ಮನೆ ಹೊಂದಿದ್ದು, ಪಕ್ಕದಲ್ಲಿ ಮೂರು ನಿವೇಶನಗಳನ್ನು ಅವರ ಹೆಂಡತಿ ಹೆಸರಿನಲ್ಲಿ ಖರೀದಿದ್ದಾರೆ ಎಂದು ಆರೋಪಿಸಿದ್ದಾರೆ.
ಭೀಮಾ ನಾಯಕ್ ಅವರ ತಮ್ಮ ಕೃಷ್ಣನಾಯಕ್ ಹೆಸರಿನಲ್ಲಿ ಪೆಟ್ರೊಲ್‌ ಬಂಕ್‌ ಮಾಡಿದ್ದಾರೆ. ಹಾಗೆಯೇ ಮೂರು ದುಬಾರಿ ಕಾರು ಖರೀದಿಸಿದ್ದಾರೆ. ಇಲಾಖೆಯ ತನಿಖೆ ಪ್ರಕರಣ ಮುಚ್ಚಲು ಕಂದಾಯ ಸಚಿವರ ಆಪ್ತ ಕಾರ್ಯದರ್ಶಿಗೆ 25 ಲಕ್ಷ ಲಂಚ ನೀಡಿದ್ದಾರೆ. ಕೃಷ್ಣಯ್ಯ ಶೆಟ್ಟಿ ಅಂಡ್‌ ಸನ್ಸ್‌ನಲ್ಲಿ ಒಂದು ಕೋಟಿಗೂ  ಹೆಚ್ಚು ವ್ಯವಹಾರ ನಡೆಸಿದ್ದಾರೆ. 50 ಲಕ್ಷ ಬೆಲೆ ಬಾಳುವ ವಜ್ರದ ಉಂಗುರ ಕೈಯಲ್ಲಿ ಹಾಕಿದ್ದಾರೆ ಎಂದು ರಮೇಶ್ ತನ್ನ ಅಧಿಕಾರಿಯ ಅಕ್ರಮ ಆಸ್ತಿಯ ಬಗ್ಗೆ ಡೆತ್‌ ನೋಟ್‌ನಲ್ಲಿ ವಿವರಿಸಿದ್ದಾರೆ.
ಇನ್ನು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹಾಗೂ ಸಂಸದ ಶ್ರೀರಾಮುಲು ಅವರನ್ನು ಪಾರಿಜಾತ ಗೆಸ್ಟ್‌ ಹೌಸ್‌ನಲ್ಲಿ ಭೀಮಾ ನಾಯಕ್ ಭೇಟಿ ಮಾಡಿದ್ದು, 25 ಕೋಟಿ ಕೊಡುತ್ತೇನೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹಗರಿಬೊಮ್ಮನಹಳ್ಳಿಯಿಂದ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಕೊಡಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಭೀಮಾ ನಾಯಕ್ ಅವರು ರೆಡ್ಡಿ ಅವರ ಮಗಳ ಮದುವೆಗಾಗಿ ಅವರ ಬಳಿ ಇದ್ದ 100 ಕೋಟಿ ಕಪ್ಪು ಹಣವನ್ನು ಬಿಳಿ ಮಾಡಿಕೊಟ್ಟಿದ್ದಾರೆ. ಇದನ್ನೆಲ್ಲ ತಿಳಿದಿದ್ದ ನನಗೆ ಬೇರೆಯವರಿಗೆ ಹೇಳಿದರೆ ಜೀವ ಬೆದರಿಕೆ ಹಾಕಿದ್ದಾರೆ. ರೌಡಿಗಳಿಂದ ಕೊಲೆ ಮಾಡಿಸುವ ಬೆದರಿಕೆಯೂ ನೀಡಿದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ನನ್ನ ಕೊನೆ ಆಸೆಯಂತೆ ಅಕ್ಕನ ಮಗ ಮನೋಜ್‌ ಗೌಡ ದೇಹಕ್ಕೆ ಅಗ್ನಿ ಸ್ಪರ್ಶ ಮಾಡಬೇಕು. ನನ್ನ ಸಾವಿಗೆ ಅಧಿಕಾರಿ ಭೀಮಾ ನಾಯ್ಕ ಹಾಗೂ ಅವರ ಮನೆಯ ವಾಹನ ಚಾಲಕ ಮಹಮದ್‌ ಕಾರಣ ಎಂದು ರಮೇಶ್ ಗೌಡ ದೂರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.