ರಟ್ಟಾಗಲ್ಲ ಮತದಾನದ ಗುಟ್ಟು; ಮತ ಕ್ರೋಡೀಕರಣಕ್ಕೆ ಬಂತು ಟೋಟಲೈಸರ್!
ಮತಗಟ್ಟೆವಾರು ಫಲಿತಾಂಶಕ್ಕೆ ಕೇಂದ್ರ ಚುನಾವಣಾ ಆಯೋಗ ತಿಲಾಂಜಲಿ ಹಾಡಲಿದ್ದು, ಮತ ಕ್ರೋಡೀಕರಣಕ್ಕೆ ಟೋಟಲೈಸರ್ ಯಂತ್ರ ಬಳಕೆಗೆ ಸಿದ್ಧತೆ ನಡೆಸಿದೆ.

ನವದೆಹಲಿ: ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ಇನ್ನು ಮುಂದೆ ಮತದಾನ ಪ್ರಕ್ರಿಯೆ ಮತ್ತಷ್ಟು ಕಠಿಣವಾಗಲಿದ್ದು, ಇಷ್ಟು ದಿನಗಳ ಕಾಲ ಚಾಲ್ತಿಯಲ್ಲಿದ್ದ ಮತಗಟ್ಟೆವಾರು ಫಲಿತಾಂಶಕ್ಕೆ ಕೇಂದ್ರ ಚುನಾವಣಾ ಆಯೋಗ ತಿಲಾಂಜಲಿ ಹಾಡಲಿದ್ದು, ಮತ ಕ್ರೋಡೀಕರಣಕ್ಕೆ ಟೋಟಲೈಸರ್ ಯಂತ್ರ ಬಳಕೆಗೆ ಸಿದ್ಧತೆ ನಡೆಸಿದೆ.
ದೇಶದಲ್ಲಿನ ಮತದಾನ ವ್ಯವಸ್ಥೆಯನ್ನು ಗೌಪ್ಯವಾಗಿಡುವ ನಿಟ್ಟಿನಲ್ಲಿ ಮತ್ತಷ್ಟು ಕಠಿಣ ಕ್ರಮಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ, ಮತ ಎಣಿಕೆ ವೇಳೆ ಮತಗಟ್ಟೆವಾರು ಫಲಿತಾಂಶ ಪ್ರಕಟಿಸುವ ಪದ್ಧತಿಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಈ ಪದ್ಧತಿಗೆ ಪರ್ಯಾಯವಾಗಿ ಟೋಟಲೈಸರ್ ಎಂಬ ಯಂತ್ರದ ಸಹಾಯದಿಂದ ಒಂದು ಕ್ಷೇತ್ರದ ಹಲವು ಮತಗಟ್ಟೆಗಳ ಮತಗಳನ್ನು ಕ್ರೋಡೀಕರಿಸಿ ಒಂದೇ ಬಾರಿಗೆ ಫಲಿತಾಂಶ ಪ್ರಕಟಿಸುವ ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಿದೆ.
ಮೂಲಗಳ ಪ್ರಕಾರ ಈ ವಿನೂತನ ವಿಧಾನಕ್ಕೆ ಕೇಂದ್ರ ಕಾನೂನು ಸಚಿವಾಲಯ ಒಪ್ಪಿಗೆ ಸೂಚಿಸಿದ್ದು, 1961ರ ಚುನಾವಣಾ ಪ್ರಕ್ರಿಯೆ ನೀತಿಗೆ ತಿದ್ದುಪಡಿ ಮಾಡಿದರೆ ಹೊಸ ನಿಯಮ ಜಾರಿಗೆ ಬರಲಿದೆ. ಶೀಘ್ರದಲ್ಲೇ ಕೇಂದ್ರ ಚುನಾವಣಾ ಆಯೋಗ ಈ ವ್ಯವಸ್ಥೆಯನ್ನು ಜಾರಿಗೆ ತರುವ ಸಾಧ್ಯತೆ ಇದೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾನೂನು ತಜ್ಞರು ಪ್ರಜಾಪ್ರತಿನಿಧಿ ಕಾಯ್ದೆಗೆ ಯಾವುದೇ ತಿದ್ದುಪಡಿ ತರುವ ಅಗತ್ಯವಿಲ್ಲ. ಹೀಗಾಗಿ ಮತ ಎಣಿಕೆಗೆ ಟೋಟಲೈಸರ್ ಯಂತ್ರಗಳ ಬಳಕೆಯನ್ನು ಚುನಾವಣಾ ಆಯೋಗ ಶೀಘ್ರವೇ ಜಾರಿಗೆ ತಂದರೆ ಅಚ್ಚರಿಯೇನಿಲ್ಲ ಎಂದು ಹೇಳಿದ್ದಾರೆ.
ಟೋಟಲೈಸರ್ ನ ಅನುಕೂಲಗಳೇನು?
ಹಾಲಿ ಇರುವ ಮತ ಎಣಿಕೆ ಪ್ರಕ್ರಿಯೆಯಲ್ಲಿ ಮತಗಟ್ಟೆವಾರು ಫಲಿತಾಂಶ ಪ್ರಕಟಿಸುವುದರಿಂದ ಪಕ್ಷಗಳಿಗೆ ಮತ್ತು ಆಯಾ ಕ್ಷೇತ್ರದ ಅಭ್ಯರ್ಥಿಗಳಿಗೆ ಮತ ವಿಶ್ಲೇಷಣೆ ನಡೆಸಲು ಅನುಕೂಲವಾಗುತ್ತದೆ. ಯಾವ ಮತಗಟ್ಟೆಯಲ್ಲಿ ತಮಗೆ ಹೆಚ್ಚು ಅಥವಾ ಕಡಿಮೆ ಮತ ಬಂದಿದೆ ಎಂಬುದನ್ನು ರಾಜಕೀಯ ನಾಯಕರು ಸುಲಭವಾಗಿ ನಿರ್ಧರಿಸಬಹುದಾಗಿದೆ. ಇದರಿಂದ ಮತದಾನ ಪ್ರಕ್ರಿಯೆ ಗೌಪ್ಯತೆಗೆ ಧಕ್ಕೆಯಾಗುವುದಲ್ಲದೆ ಕಡಿಮೆ ಮತ ಬಂದಿರುವ ಮತಗಟ್ಟೆ ವ್ಯಾಪ್ತಿಯ ಸಾರ್ವಜನಿಕರ ಮೇಲೆ ರಾಜಕಾರಣಿಗಳು ಪ್ರತೀಕಾರ ತೀರಿಸಿಕೊಳ್ಳುವ ಅಥವಾ ಆ ನಿರ್ಧಿಷ್ಟ ಕ್ಷೇತ್ರದ ಬಗ್ಗೆ ನಿರ್ಲಕ್ಷ್ಯ ವಹಿಸುವುದಕ್ಕೆ ಅವಕಾಶ ಮಾಡಿಕೊಡಲಿದೆ. ಯೋಜನೆ, ವಿವಿಧ ಅನುದಾನ ಹಂಚಿಕೆ, ಅಭಿವೃದ್ಧಿ ವಿಚಾರದಲ್ಲೂ ತಾರತಮ್ಯ ಎಸಗುವ ಸಾಧ್ಯತೆ ಇರುತ್ತದೆ.
ಹೀಗಾಗಿ ಇಂತಹ ಅವ್ಯವಸ್ಥೆಯನ್ನು ತಡೆಯಲು ಕೇಂದ್ರ ಸರ್ಕಾರ ಹಾಗೂ ಕೇಂದ್ರ ಚುನಾವಣಾ ಆಯೋಗ ಮಾಸ್ಟರ್ ಪ್ಲಾನ್ ರೂಪಿಸಿದ್ದು, ಟೋಟಲೈಸರ್ ಯಂತ್ರವನ್ನು ಚಾಲ್ತಿಗೆ ತರಲು ಸಿದ್ಧತೆ ನಡೆಸಿದೆ. ಈ ಯಂತ್ರವನ್ನು ಬಳಸಿದಲ್ಲಿ ಈ ಎಲ್ಲ ಸಮಸ್ಯೆಗಳು ಬಗೆಹರಿಯಲಿವೆ ಎಂಬುದು ಸರ್ಕಾರದ ಅಭಿಪ್ರಾಯವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


