ಸಚಿವರ ಹಿಂಬಾಲಕರಿಂದ ಅಣ್ಣನ ಕೊಲೆ!
ಸ್ವಾಮಿ, ಕಾನೂನು ಸಚಿವರ ಹಿಂಬಾಲಕರಿಂದಲೇ ನನ್ನ ಅಣ್ಣನ ಕೊಲೆಯಾಗಿದೆ. ಒಂದೋ ಆರೋಪಿಗಳನ್ನು ಬಂಧಿಸಿ, ಇಲ್ಲವಾದರೆ ನಮ್ಮೆಲ್ಲರಿಗೂ ದಯಾಮರಣಕ್ಕೆ ಅಪ್ಪಣೆ ಕೊಡಿಸಿ...!...

ಬೆಂಗಳೂರು: ಸ್ವಾಮಿ, ಕಾನೂನು ಸಚಿವರ ಹಿಂಬಾಲಕರಿಂದಲೇ ನನ್ನ ಅಣ್ಣನ ಕೊಲೆಯಾಗಿದೆ. ಒಂದೋ ಆರೋಪಿಗಳನ್ನು ಬಂಧಿಸಿ, ಇಲ್ಲವಾದರೆ ನಮ್ಮೆಲ್ಲರಿಗೂ ದಯಾಮರಣಕ್ಕೆ ಅಪ್ಪಣೆ ಕೊಡಿಸಿ...!
ಬರೋಬ್ಬರಿ 11 ತಿಂಗಳ ನಂತರ ಗೃಹ ಕಚೇರಿ ಕೃಷ್ಣಾದಲ್ಲಿ ಅಧಿಕೃತ ಜನತಾ ದರ್ಶನ ಕಾರ್ಯಕ್ರಮಕ್ಕೆ ಮತ್ತೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ ಅರ್ಜಿ ತೆಗೆದುಕೊಳ್ಳುವುದರಲ್ಲಿ ಮಗ್ನರಾಗಿರುವಾಗ ಬಂದ ಇಂಥದೊಂದು ಮನವಿಯಿಂದ ಕ್ಷಣ ಕಾಲ ತಬ್ಬಿಬ್ಬಾದರು. ತಮ್ಮ ಆತ್ಮೀಯ ಸಚಿವರೊಬ್ಬರ ಬಗ್ಗೆ ಐವರು ಪುಟಾಣಿ ಮಕ್ಕಳು, ಇಬ್ಬರು ಮಹಿಳೆಯರ ಜತೆ ಕಣ್ಣೀರಿಡುತ್ತಾ ಕೈ ಮುಗಿದು ಮನವಿ ಸಲ್ಲಿಸಿದ ಶಿರಾ ತಾಲೂಕಿನ ಯರದಕಟ್ಟೆಯ ಭೂತೇಶ್ ಕುಟುಂಬದ ಅಳಲು ಕೇಳುವುದಕ್ಕೆ ಕೆಲ ನಿಮಿಷಗಳ ಸಮಯ ತೆಗೆದುಕೊಂಡ ಸಿದ್ದರಾಮಯ್ಯ ಈ ಬಗ್ಗೆ ಪರಿಶೀಲನೆ ನಡೆಸುವಂತೆ ಎಡಿಜಿಪಿ ಪ್ರವೀಣ್ ಸೂದ್ ಅವರಿಗೆ ತಕ್ಷಣ ಸೂಚನೆ ನೀಡಿದರು.
ಶಾಸಕರ ವಿರುದ್ಧ ದೂರು: ತುಮಕೂರು ಗ್ರಾಮಾಂತರ ಶಾಸಕ ಬಿಜೆಪಿಯ ಸುರೇಶ್ಗೌಡ ಅವರ ವಿರುದ್ಧವೂ ಜನತಾ ದರ್ಶನದಲ್ಲಿ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ. ಆಸ್ತಿ ಕಬಳಿಕೆ ಸಂಬಂಧ ನನಗೆ ಶಾಸಕರು ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ರಹೀಮ್ ಪಾಷಾ ಎಂಬುವರು ದೂರು ನೀಡಿದ್ದಾರೆ. ಅದೇ ರೀತಿ ಬೆಂಗಳೂರಿನ ವೈಟ್ ಫೀಲ್ಡ್ ನಿವಾಸಿಗಳಾದ ಸುಶೀಲಾ ಎಂಬುವರು ತಮ್ಮ ಮಗಳನ್ನು ಅಪಾರ್ಟ್ಮೆಂಟ್ ನಿರ್ಮಾಣಕ್ಕಾಗಿ ಬಲಿ ನೀಡಲಾಗಿದೆ ಎಂದು ದೂರು ನೀಡಿದ್ದಾರೆ.
9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ತಮ್ಮ ಮಗಳು ಏಪ್ರಿಲ್ 6ರಂದು ಮೃತಪಟ್ಟಿದ್ದಾರೆ. ಶಾಲಾ ಶಿಕ್ಷಕಿ ನಿರ್ಮಲಾ ಎಂಬುವರ ಬಗ್ಗೆ ಅನುಮಾನವಿದೆ ಎಂದು ಸಿದ್ದರಾಮಯ್ಯ ಅವರಿಗೆ ಮನವಿ ನೀಡಿದ್ದಾರೆ.
ಲೀಲಾವತಿ ಮನವಿ: ಹಿರಿಯ ಚಿತ್ರನಟಿ ಲೀಲಾವತಿ ಹಾಗೂ ಪುತ್ರ ವಿನೋದ್ ರಾಜ್ ಅವರೂ ಜನತಾ ದರ್ಶನ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ನೀಡಿದ್ದಾರೆ. ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿ ರೈತರ ಕಂದಾಯಭೂಮಿಗೆ ಅರಣ್ಯ ಇಲಾಖೆಯವರು ಒಕ್ಕಲೆಬ್ಬಿಸುತ್ತಿದ್ದಾರೆ. ಈಗಾಗಲೇ ನೀವು ಸೂಚನೆ ನೀಡಿದ್ದರೂ ಅರಣ್ಯ ಇಲಾಖೆ ಯವರು ಒಕ್ಕಲೆಬ್ಬಿಸುವುದನ್ನು ನಿಲ್ಲಿಸುತ್ತಿಲ್ಲ ಎಂದು ದೂರು ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


