ಆಸ್ತಿಗಾಗಿನ ಹತ್ಯೆ ಅಲ್ಲ, ಹಂತಕರ ಸುಳಿವು ಇನ್ನೂ ಸಿಕ್ಕಿಲ್ಲ ಎಂದ ಸಿಐಡಿ
ಡಾ. ಎಂ.ಎಂ. ಕಲಬುರ್ಗಿ ಅವರ ಹತ್ಯೆ ಕುರಿತು ತಾವು ನಡೆಸಿದ ತನಿಖೆಯ ಮಧ್ಯಂತರ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ...

ಧಾರವಾಡ: ಡಾ. ಎಂ.ಎಂ. ಕಲಬುರ್ಗಿ ಅವರ ಹತ್ಯೆ ಕುರಿತು ತಾವು ನಡೆಸಿದ ತನಿಖೆಯ ಮಧ್ಯಂತರ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಸಿಐಡಿ ತಂಡ, ಇನ್ನೂ ಹಂತಕರ ಸುಳಿವು ಸಿಕ್ಕಿಲ್ಲ ಎನ್ನುವ ಅಸಹಾಯಕತೆ ವ್ಯಕ್ತಪಡಿಸಿದೆ.
ಸೆ. 1ರಿಂದ ಸೆ. 12ರ ವರೆಗೆ ತಾವು ಈ ಪ್ರಕರಣ ಭೇದಿಸುವಲ್ಲಿ ತೆಗೆದುಕೊಂಡ ಕ್ರಮಗಳ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಿರುವ ಎಸ್ಪಿ ಡಿ.ಸಿ. ರಾಜಪ್ಪ ಅವರಿದ್ದ ಸಿಐಡಿ ತಂಡ, `ಕಲಬುರ್ಗಿ ಅವರನ್ನು ಉದ್ದೇಶಪೂರ್ವಕವಾಗಿ ಕೊಲೆ ಮಾಡಲಾಗಿದೆ. ಆದರೆ, ಈ ಕೊಲೆಗೆ ಇಲ್ಲಿಯವರೆಗೂ ಸ್ಪಷ್ಟವಾದ ಸಾಕ್ಷ್ಯಗಳು ದೊರೆತಿಲ್ಲ. ಘಟನೆಗೆ ಸಾಕ್ಷಿಯಾದ ಎಂಟು ಜನರನ್ನು ವಿಚಾರಣೆಗೆ ಒಳಪಡಿಸಿದ್ದೇವೆ. ಅವರ ಮಾಹಿತಿ ಮೇರೆಗೆ ಇಬ್ಬರು ಹಂತಕರ ರೇಖಾಚಿತ್ರವನ್ನು ಬಿಡುಗಡೆ ಮಾಡಲಾಗಿದೆ. ಜೊತೆಗೆ 20ಕ್ಕೂ ಹೆಚ್ಚು ಸಂಶಯಾಸ್ಪದ ವ್ಯಕ್ತಿಗಳನ್ನು ಕರೆಯಿಸಿ ವಿಚಾರಣೆ ಮಾಡಲಾಗಿದೆ. ಆದರೆ, ಹಂತಕರ ಬಗ್ಗೆ ಸುಳಿವು ಸಿಕ್ಕಿಲ್ಲ' ಎಂದು ವರದಿಯಲ್ಲಿ ತಿಳಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಆರಂಭದಲ್ಲಿ ಆಸ್ತಿ ವಿವಾದ ಇರಬಹು ದೆನ್ನುವ ಗುಮಾನಿಯಿಂದ ಕಲಬುರ್ಗಿ ಅವರ ಹುಟ್ಟೂರು, ಸಂಬಂಧಿಕರು ಇರುವ ವಿಜಯಪುರ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ತನಿಖೆ ಮಾಡಲಾಯಿತು. ಆದರೆ, ಆಸ್ತಿಗಾಗಿ ಈ ಹತ್ಯೆ ನಡೆದಿಲ್ಲ ಎಂಬುದು ಸ್ಪಷ್ಟವಾಯಿತು. ನಂತರದಲ್ಲಿ ಹಲವು ಕೋನಗಳಲ್ಲಿ ತನಿಖೆ ನಡೆಸಿದ್ದು, ಹಂತಕ ಎಲ್ಲಿಯೂ ಸುಳಿವು ಬಿಟ್ಟುಕೊಟ್ಟಿಲ್ಲ.
ಆದ್ದರಿಂದ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸುತ್ತೇವೆ ಎಂದು ವರದಿಯಲ್ಲಿ ಸಿಐಡಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆಂದು ಗೊತ್ತಾಗಿದೆ. ಈ ಮಧ್ಯೆ ಸೆ. 14ರಂದು ಸಿಐಡಿ ಐಜಿಪಿ ಶರತ್‍ಚಂದ್ರ ಅವರು ಧಾರವಾಡಕ್ಕೆ ಆಗಮಿಸುತ್ತಿದ್ದು, ತನಿಖೆಯ ಪ್ರಗತಿ ಪರಿಶೀಲಿಸಲಿದ್ದಾರೆ ಎನ್ನಲಾಗಿದೆ.
ಮಠಕ್ಕೆ ಮರಳಿದ ಪ್ರಣವಾನಂದ: ಈ ಪ್ರಕರಣದಲ್ಲಿ ಸಿಐಡಿ ಪೊಲೀಸರಿಂದ ವಿಚಾರಣೆಗೊಳಗಾದ ಬಳಿಕ ಶನಿವಾರ ರಾಣೆಬೆನ್ನೂರು ತಾಲೂಕು ಅರೆಮಲ್ಲಾಪುರ ಶರಣಬಸವೇಶ್ವರ ಮಠಕ್ಕೆ ಬೀಗ ಹಾಕಿ, ಕ್ಯಾಮರಾದ ಮೆಮೋರಿ ಕಾರ್ಡ್‍ನೊಂದಿಗೆ ಹೊರ ಹೋಗಿದ್ದ ಪ್ರಣವಾನಂದರು ಮತ್ತು ಹಾವೇರಿ ಜಿಲ್ಲಾ ಶ್ರೀರಾಮ ಸೇನೆ ಸಂಚಾಲಕ ವೀರೇಶ ಹಡಪದ ಭಾನುವಾರ ಮಠಕ್ಕೆ ವಾಪಸ್ಸಾಗಿದ್ದಾರೆ.
``ಸಿಐಡಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ. ಪ್ರಣವಾನಂದ ಸ್ವಾಮೀಜಿಯವರೊಂದಿಗೆ ಎಷ್ಟು ದಿನಗಳಿಂದ ಪರಿಚಯವಿದೆ, ಇಲ್ಲಿಗೆ ಬಂದಿರುವುದು ಏಕೆ ಎಂದು ಪ್ರಶ್ನಿಸಿದ್ದರು. ಸ್ವಾಮೀಜಿಗಳೂ ಹಿಂದೂ ಸಂಘಟನೆಯಲ್ಲಿರುವುದರಿಂದ ಪರಿಚಯವಾಗಿದೆ. ಮಠದಲ್ಲಿ ದಾಸೋಹ ಇರುವುದರಿಂದ ಅಲ್ಲಿ ಉಳಿದುಕೊಂಡಿದ್ದೇನೆ.
ಮಠದಲ್ಲಿದ್ದುಕೊಂಡು ಜಿಲ್ಲೆಯಲ್ಲಿ ಶ್ರೀರಾಮ ಸೇನೆ ಸಂಘಟನೆಯಲ್ಲಿ ತೊಡಗಿಕೊಂಡಿದ್ದೇನೆ ಎಂಬುದನ್ನು ಸಿಐಡಿ ಅಧಿಕಾರಿಗಳಿಂದ ತಿಳಿಸಿದ್ದೇನೆ. ಆದರೆ ಪತ್ರಿಕೆಯಲ್ಲಿ ನಾನು ನಾಪತ್ತೆಯಾಗಿದ್ದಾಗಿ ಪ್ರಕಟಿಸಲಾಗಿದೆ. ಆದರೆ ಹಾಗೇನೂ ಇಲ್ಲ , ಇಲ್ಲೇ ಇದ್ದೇನೆ'' ಎಂದು ವೀರೇಶ ಹಡಪದ ಸ್ಪಷ್ಟಪಡಿಸಿದ್ದಾರೆ.
ಪ್ರಣವಾನಂದ ಸ್ವಾಮಿಗಳು ಕೂಡ, ``ಬೇರೆ ಕಾರ್ಯನಿಮಿತ್ತ ಹೊರಗೆ ಹೋಗಿದ್ದೆವು, ಈಗ ಮಠದಲ್ಲಿಯೇ ಇದ್ದೇವೆ. ಡಾ.ಕಲಬುರ್ಗಿ ಹತ್ಯೆ ಪ್ರಕರಣ ವಿಚಾರವಾಗಿ ಸಿಐಡಿ ಕೇಳಿದ ಪ್ರಶ್ನೆಗಳಿಗೆ ವಿವರವಾದ ಉತ್ತರ ನೀಡಿದ್ದೇವೆ. ಮತ್ತೆ ಕರೆದಾಗ ವಿಚಾರಣೆಗೆ ಬರುವುದಾಗಿ ಸಿಐಡಿ ಅಧಿಕಾರಿಗಳಿಗೆ ತಿಳಿಸಿದ್ದೇವೆ'' ಎಂದು ಹೇಳಿದರು.
ವೀರೇಶ ಪರಾರಿಯಾಗಿಲ್ಲ: ಮುತಾಲಿಕ್ ಮಂಗಳೂರು: ವೀರೇಶ ಶ್ರೀರಾಮಸೇನೆ ಕಾರ್ಯಕರ್ತ, ಆತನನ್ನು ಹಿಂದೂ ಮಹಾಸಭಾದ ಶತಮಾನೋತ್ಸವ ಸಿದ್ಧತೆಗೆ ಪ್ರಣವಾನಂದ ಸ್ವಾಮೀಜಿ ಬಳಿಗೆ 2 ತಿಂಗಳ ಮಟ್ಟಿಗೆ ಕಳುಹಿಸಿದ್ದೇನೆ. ಆತನಿಗೆ ಡ್ರೈವಿಂಗ್ ಬರೋಲ್ಲ, ನಮ್ಮ ತರಬೇತಿ ಶಿಬಿರಗಳಿಗೆ ಹಾಜರಾಗಿಲ್ಲ, ಆತನಿಗೆ ಬಂದೂಕು ಹಿಡಿದೂ ಗೊತ್ತಿಲ್ಲ. ಈ ಬಗ್ಗೆ ಪತ್ರಿಕೆಯೊಂದರಲ್ಲಿ ಬಂದ ವರದಿ ಸುಳ್ಳು ಎಂದು ಪ್ರಮೋದ್ ಮುತಾಲಿಕ್ ಸ್ಪಷ್ಟನೆ ನೀಡಿದ್ದಾರೆ.
ಸಾಹಿತಿ ಕಲಬುರ್ಗಿ ಹತ್ಯೆಯಲ್ಲಿ ನಮ್ಮ ಕೈವಾಡ ಇಲ್ಲ ಎಂದ ಮುತಾಲಿಕ್, ಎಲ್ಲದಕ್ಕೂ ಹಿಂದೂ ಸಂಘಟನೆಗಳ ಮೇಲೆ ಗೂಬೆ ಕೂರಿಸುತ್ತಾರೆ. ನಾವು ಎಲ್ಲ ರೀತಿಯ ತನಿಖೆಗೆ ಸಹಕರಿಸುತ್ತೇವೆ. ವೀರೇಶ ಹಾವೇರಿ ಜಿಲ್ಲೆಯ ಸಂಘಟನೆ ಸಂಚಾಲಕ. ಆತ ಹೊಸದಾಗಿ ಸೇರ್ಪಡೆಯಾಗಿದ್ದಾನೆ ಎಂದು ಹೇಳಿದರು.
ಶ್ರೀರಾಮಸೇನೆ ವೈಚಾರಿಕ ಸಂಘರ್ಷ ನಡೆಸುತ್ತದೆಯೇ ವಿನಃ ಕೊಲೆ ಮಾಡುವವರೆಗೆ ಹೋಗುವುದಿಲ್ಲ. ಸಿಐಡಿ ತನಿಖೆ ಪೂರ್ಣಗೊಂಡ ಬಳಿಕ ಕೊಲೆಯ ಹಿಂದಿನ ಸತ್ಯ ಹೊರಬೀಳಲಿದೆ. ಕಲಬುರ್ಗಿ ಯವರು ಲಿಂಗಾಯತರ, ಪಂಚಪೀಠಗಳ ವಿರುದ್ಧ ಮಾತನಾಡಿ ದ್ದಾರೆ. ಅವರ ಆಸ್ತಿ ವಿವಾದ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


