ಪ್ರಧಾನ ಸುದ್ದಿ

ಐಐಟಿ ಫೈಟ್ ಹೊಸ ಪರ್ವ!

ಮೂರು ಜಿಲ್ಲೆಗಳ ತಿಕ್ಕಾಟದ ಮಧ್ಯೆ ಕೊನೆಗೂ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಸಂಸ್ಥೆ ಧಾರವಾಡಕ್ಕೆ ಒಲಿದಿದೆ...

ಐಐಟಿ ಫೈಟ್ ಹೊಸ ಪರ್ವ!
ರಾಯಚೂರಿನಲ್ಲಿ ಪ್ರತಿಭಟನೆ
Published On :

ಬೆಂಗಳೂರು: ಮೂರು ಜಿಲ್ಲೆಗಳ ತಿಕ್ಕಾಟದ ಮಧ್ಯೆ ಕೊನೆಗೂ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ  (ಐಐಟಿ) ಸಂಸ್ಥೆ ಧಾರವಾಡಕ್ಕೆ ಒಲಿದಿದೆ.

ಈ ಬಗ್ಗೆ ಸಹಜವಾಗಿ ಧಾರವಾಡ ಸಂತಸದಲ್ಲಿದ್ದರೆ, ರಾಯಚೂರು ವ್ಯಗ್ರಗೊಂಡಿದೆ. ಇನ್ನು ಮೈಸೂರು ಜನತೆ ತಟಸ್ಥವಾಗಿದ್ದಾರೆ. ಆದರೆ, ಇದನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಆಯಾ ಕ್ಷೇತ್ರದ ರಾಜಕೀಯ ಮುಖಂಡರು ಪರಸ್ಪರ ಆರೋಪಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಹೀಗಾಗಿ ಮುಗಿಯಿತು ಎಂದು ತಿಳಿದಿದ್ದ `ಐಐಟಿ' ಮತ್ತೆ ಹವಾ ಎಬ್ಬಿಸಿದೆ. ಐಐಟಿ ತಮ್ಮ ಜಿಲ್ಲೆಗೇ  ಒಲಿಯುತ್ತದೆ ಎಂಬ ತೀವ್ರ ನಿರೀಕ್ಷೆಯಲ್ಲಿದ್ದ ರಾಯಚೂರು ಜನತೆಗೆ ಕೇಂದ್ರ ಸರ್ಕಾರದ ಈ ತೀರ್ಮಾನ ತೀವ್ರ ಆಘಾತ ನೀಡಿದೆ.

ಇದೇ ಕಾರಣಕ್ಕೆ ಅಲ್ಲೀಗ ಪ್ರತಿಭಟನೆಗಳು ಆರಂಭವಾಗಿವೆ. ``ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಮೊಂಡುತನ, ರಾಜ್ಯ ಬಿಜೆಪಿ ನಾಯಕರ ಸ್ವಾರ್ಥ ಸಾಧನೆಗೆ ಹೈದರಾಬಾದ್ ಕರ್ನಾಟಕದ ಜನರು ಬಲಿಯಾಗಿದ್ದಾರೆ. ಈ ಭಾಗಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ದ್ರೋಹ ಮಾಡಿವೆ'' ಎಂದಿರುವ ಐಐಟಿ ಮಂಜೂರಾತಿ ಹೋರಾಟ ಸಮಿತಿಯು, ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ  ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದೆ. ಈಗಾಗಲೇ ಕೆಲವೆಡೆ ಪ್ರತಿಭಟನೆ ಆರಂಭವಾಗಿದ್ದು, ರಾಯಚೂರಿನಲ್ಲಿ ಟೈರ್‍ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗಿದೆ.

``ಧಾರವಾಡ ಕೇಂದ್ರಿತ ಬಿಜೆಪಿ ನಾಯಕರು ಒಟ್ಟು ರಾಜ್ಯದ ಹಿತ ಕಡೆಗಣಿಸಿದ್ದಾರೆ. ಸ್ವಾರ್ಥ ಸಾಧನೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಅವರೆಂದೂ ರಾಜ್ಯ ನಾಯಕರಾಗಿರಲು ಅರ್ಹರಲ್ಲ. ಬಿಜೆಪಿ  ಸರ್ಕಾರವೇ ಈ ಹಿಂದೆ ಕೈಗೊಂಡಿದ್ದ ಸಂಪುಟ ಸಭೆಯ ನಿರ್ಧಾರಕ್ಕೆ ವಿರುದ್ಧವಾಗಿ ಹೈ.ಕ. ವಿರೋಧಿ ನೀತಿ ತಳೆದಿರುವುದು ಖಂಡನೀಯ. ಹೋರಾಟ ಮುಂದುವರೆಯಲಿದೆ ಎಂದು ಸಮಿತಿ  ಅಧ್ಯಕ್ಷ ಬಸವ ರಾಜ ಕಳಸ ಎಚ್ಚರಿಸಿದ್ದಾರೆ.

ಸಚಿವರಿಗೆ ಮುತ್ತಿಗೆ: ಈ ಬೆಳವಣಿಗೆ ಬಗ್ಗೆ ತೀವ್ರ ಕುಪಿತಗೊಂಡಿರುವ ಕನ್ನಡಪರ ಸಂಘಟನೆ ಕಾರ್ಯಕರ್ತರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲರಿಗೆ ಲಿಂಗಸ್ಗೂರಿನಲ್ಲಿ   ಮುತ್ತಿಗೆ ಹಾಕಿದರು. ರಾಜ್ಯ ಸರ್ಕಾರ ಹಾಗೂ ಸಚಿವ ನಿರ್ಲಕ್ಷ್ಯಕ್ಕೆ ಸಮರ್ಪಕ ಉತ್ತರ ನೀಡುವಂತೆ ಪಟ್ಟು ಹಿಡಿದರು. ಕೂಡಲೇ ಪಾಟೀಲರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ಅಲ್ಲದೆ  ಐಐಟಿ ಕೈತಪ್ಪಲು ಕಾರಣವೇನು ಎಂಬುದಕ್ಕೆ ಉತ್ತರಿಸಿ ಎಂದು ಪಟ್ಟು ಹಿಡಿದರು. ಆದರೆ, ಸಭೆಗಾಗಿ ಬಂದಿದ್ದ ಸಚಿವರು ಉತ್ತರ ನೀಡದೆ, ಬಾಗಿಲುಹಾಕಿ ಸಭೆ ನಡೆಸಿದರು. ಈ ಸಂದರ್ಭದಲ್ಲಿ  ಕಾರ್ಯಕರ್ತರ ಬಂಧನ, ಬಿಡುಗಡೆ ಪ್ರಹಸನ ನಡೆಯಿತು.

ರಾಯಚೂರು ಬಂದ್ ಇಂದು
ಸಚಿವೆ ಸ್ಮೃತಿ ಇರಾನಿ ಅವರು ಧಾರವಾಡದತ್ತ ಒಲವು ತೋರಿದ್ದರಿಂದ ಐಐಟಿ ಮಂಜೂರಾತಿ ಹೋರಾಟ ಸಮಿತಿ ಅಸಮಾಧಾನಗೊಂಡಿದೆ. ಸೆ.10ರಂದು ರಾಯಚೂರು ಜಿಲ್ಲಾದ್ಯಂತ ಬಂದ್‍ಗೆ ನಿರ್ಧರಿಸಲಾಗಿದೆ.

ಪ್ರತಾಪ್ ವಾಗ್ದಾಳಿ
ಸಂಸದ ಪ್ರತಾಪ್ ಸಿಂಹ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ``ಸೌಕರ್ಯಗಳು ಹೆಚ್ಚಿರುವ ಮೈಸೂರು ಜಿಲ್ಲೆಗೆ ಐಐಟಿ ಬರಬೇಕಿತ್ತು. ಮೈಸೂರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಕ್ಷೇತ್ರ. ಹೀಗಿದ್ದರೂ ನಮ್ಮ ಜಿಲ್ಲೆಗೆ ತಪ್ಪಿರುವುದು ಅಸಮಾಧಾನ ತಂದಿದೆ. ಮುಖ್ಯಮಂತ್ರಿಗಳು ಈ ಬಗ್ಗೆ ಹೆಚ್ಚಿನ ಆಸಕ್ತಿ ತೋರದಿರುವುದೂ ಜಿಲ್ಲೆಗೆ ಕೈತಪ್ಪಲು ಒಂದು ಕಾರಣ'' ಎಂದು ಸುವರ್ಣ   ನ್ಯೂಸ್‍ನಲ್ಲಿ ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿ ಕಾರಣರಲ್ಲ

ಸಚಿವ ``ಐಐಟಿ ಮೈಸೂರಿಗೆ ಕೈತಪ್ಪಿರುವುದು ನಿರಾಶೆಯಾಗಿದೆ'' ಎಂದು ಪ್ರತಿಕ್ರಿಯಿಸಿರುವ ಕಂದಾಯ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್, ``ಐಐಟಿ  ಧಾರವಾಡಕ್ಕೆ ಹೋಗಿದೆ. ಅದು ಅಸ್ಸಾಂಗೇನೂ ಹೋಗಿಲ್ಲ. ಐಐಟಿ ಮೈಸೂರಿಗೆ ತಪ್ಪಲು ಮುಖ್ಯಮಂತ್ರಿಯವರು ಕಾರಣವೆಂದು ಬಾಲಿಶ ಹೇಳಿಕೆ ನೀಡಬಾರದು. ಇಂತಹ ಹೇಳಿಕೆ ನೀಡುವವರಿಗೆ   ಅನುಭವದ ಕೊರತೆ ಯಿದೆ'' ಎಂದು ಅವರು ತಿರುಗೇಟು ನೀಡಿದ್ದಾರೆ.

ಧಾರವಾಡದಲ್ಲಿ ಸಂತಸ
ಧಾರವಾಡ ಜಿಲ್ಲೆಯಲ್ಲೀಗ ಸಂಭ್ರಮದ ಕಾಲ. ಬುಧವಾರ ನಾಗರಿಕರು ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಕಳಸಾಬಂಡೂರಿ ಯೋಜನೆ ಅನುಷ್ಠಾನ ವಿಷಯದಲ್ಲಿ ಪರಸ್ಪರ ಕೆಸರೆರಚಾಟದಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು, ಈ ವಿಷಯದಲ್ಲಿ ಪಕ್ಷಭೇದ ಮರೆತು ಸಂಭ್ರಮಿಸಿದ್ದಾರೆ. ಕೆಲವರು ಪಟಾಕಿಯನ್ನೂ ಸಿಡಿಸಿದ್ದಾರೆ.

ಸಿಗದ ಐಐಟಿ: ಹೈಕಗೆ ವಿರುದ್ಧವಾದ ನಿಲುವು
ಬೆಂಗಳೂರು:
ರಾಯಚೂರಿನಲ್ಲಿ ಐಐಟಿ ಸೌಲಭ್ಯ ತಪ್ಪಿಸುವ ಮೂಲಕ ಕೇಂದ್ರ ಸರ್ಕಾರ ನಂಜುಂಡಪ್ಪ ವರದಿಗೆ ಮತ್ತು ಹೈದ್ರಾಬಾದ್ ಕರ್ನಾಟಕಕ್ಕೆ ವಿರುದ್ಧವಾದ ನಿಲುವು ತಾಳಿದೆ ಎಂದು  ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ಎಸ್.ಬೋಸ್‍ರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಂಜುಡಪ್ಪ ವರದಿ ಪ್ರಕಾರ ಹಿಂದುಳಿದ ಪ್ರದೇಶಕ್ಕೆ ಸೇರಿದ ರಾಯಚೂರಿನಲ್ಲಿ  ಐಐಟಿ ಸ್ಥಾಪನೆ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಈ ಸಂಬಂಧ ಈ ಭಾಗದ ಎಲ್ಲ ಸಂಸದರು, ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವೆ ಸ್ಮೃತಿ ಇರಾನಿ ಅವರನ್ನುಭೇಟಿ  ಮಾಡಿ ಮನವಿ ಸಲ್ಲಿಸಿದ್ದೆವು. ಆದರೆ ಕೇಂದ್ರ ಸರ್ಕಾರ ಇದಾವುದಕ್ಕೂ ಸ್ಪಂದನೆ ನೀಡದೇ ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ ಅನ್ಯಾಯ ಮಾಡಿದೆ ಎಂದು ಆಪಾದಿಸಿದ್ದಾರೆ.

ಧಾರವಾಡದಲ್ಲಿ ಐಐಟಿ ಸ್ಥಾಪಿಸಬೇಕೆಂಬ ಕೂಗು 1998ರಿಂದಲೂ ಇತ್ತು. ಸದ್ಯ ಕೇಂದ್ರ ಸರ್ಕಾರ ಧಾರವಾಡಿಗರ ಕೂಗಿಗೆ ಸ್ಪಂದಿಸಿದೆ. ಧಾರವಾಡದ ಪರಿಸರ ಎಲ್ಲ ಭಾಗದ ಜನರು ವಾಸಿಸಲು ಯೋಗ್ಯವಾಗಿದೆ. ಎಲ್ಲ ಪ್ರದೇಶಗಳ ಜನರು ಆಗಮಿಸಲು ಅನುಕೂಲಕರ ಸಾರಿಗೆ ವ್ಯವಸ್ಥೆ, ಹೆದ್ದಾರಿಯನ್ನು ಹೊಂದಿದೆ.
-ಅರವಿಂದ ಬೆಲ್ಲದ ಶಾಸಕ

ಮುಂದಿನ ಶೈಕ್ಷಣಿಕ ವರ್ಷದಿಂದ ಐಐಟಿ ಆರಂಭಿಸುವುದಾಗಿ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾಣಿ ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸರ್ಕಾರದಲ್ಲಿನ ಎಲ್ಲ ಪ್ರಮುಖರು, ಅಧಿಕಾರಿಗಳು ಉತ್ತಮ ಸಹಕಾರ ನೀಡಿದ್ದಾರೆ.
-ಪ್ರಹ್ಲಾದ್ ಜೋಶಿ ಬಿಜೆಪಿ ರಾಜ್ಯಾಧ್ಯಕ್ಷ

ರಾಯಚೂರಿಗೆ ಐಐಟಿ ಸಂಸ್ಥೆ ಕೈ ತಪ್ಪಲು ಬಿಜೆಪಿಯ ರಾಜಕೀಯ ಕಾರಣವಾಗಿದ್ದು, ಹೈದರಾಬಾದ್ ಕರ್ನಾಟಕಕ್ಕೆ ಅನ್ಯಾಯ ಮಾಡಲಾಗಿದೆ. ಜಗದೀಶ್ ಶೆಟ್ಟರ್ ಸಿಎಂ ಅವಧಿಯಲ್ಲಿ ಕಲಬುರ್ಗಿಯಲ್ಲಿ ಸಂಪುಟ ಸಭೆ ನಡೆಸಿ, ರಾಯಚೂರಿನಲ್ಲಿಯೇ ಐಐಟಿ ಸ್ಥಾಪಿಸುವ ನಿರ್ಣಯ ಕೈಗೊಳ್ಳಲಾಗಿತ್ತು.
-ಎನ್ ಎಸ್ ಬೋಸರಾಜು, ವಿಧಾನಪರಿಷತ್ ಸದಸ್ಯ, ಕಾಂಗ್ರೆಸ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.