ಪ್ರಧಾನ ಸುದ್ದಿ

ಯುಪಿಎ ಸರ್ಕಾರ ಅಲ್ಲ, ಸೋನಿಯಾ ಸರ್ಕಾರ: ಪ್ರಧಾನಿ ಮೋದಿ

ಯುಪಿಎ ಅವಧಿಯಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು "ಅಸಂವಿಧಾನಿಕ ಆಡಳಿತ ವ್ಯವಸ್ಥೆ" ಹೊಂದಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಯುಪಿಎ ಸರ್ಕಾರ ಅಲ್ಲ, ಸೋನಿಯಾ ಸರ್ಕಾರ: ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
Published On :

ನವದೆಹಲಿ: ಯುಪಿಎ ಅವಧಿಯಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು "ಅಸಂವಿಧಾನಿಕ ಆಡಳಿತ ವ್ಯವಸ್ಥೆ" ಹೊಂದಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ನವದೆಹಲಿಯಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಎಂದಿನಂತೆ ಕಾಂಗ್ರೆಸ್ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರೆಸಿದರು. ಪ್ರಮುಖವಾಗಿ ಸೋನಿಯಾ ಮತ್ತು ಅವರ ಕುಟುಂಬವನ್ನು ಗುರಿಯಾಗಿಸಿಕೊಂಡ ನರೇಂದ್ರ ಮೋದಿ ಅವರು, ಯುಪಿಎ ಅವಧಿಯಲ್ಲಿ ಸೋನಿಯಾ ಗಾಂಧಿ ಅವರು ಅಸಂವಿಧಾನಿಕ ಆಡಳಿತ ವ್ಯವಸ್ಥೆ ಹೊಂದಿದ್ದರು ಎಂದು ಟೀಕಾ ಪ್ರಹಾರ ನಡೆಸಿದರು.

"ಕೇಂದ್ರದಲ್ಲಿ ಕಳೆದ 10 ವರ್ಷಗಳ ಕಾಲ ಆಡಳಿತ ನಡೆಸಿದ ಯುಪಿಎ ಸರ್ಕಾರ ನಾಮ್ ಕಾ ವಸ್ಥೆ ಆಡಳಿತ ನಡೆಸಿದ್ದು, ಸರ್ಕಾರದ ನಿಜವಾದ ಅಡಳಿತದ ಅಧಿಕಾರ ಇದ್ದದ್ದು ಮಾತ್ರ ಸೋನಿಯಾ ಗಾಂಧಿ ಅವರ ಕೈಯಲ್ಲಿ. ಪ್ರಧಾನಿ ಮನಮೋಹನ್ ಸಿಂಗ್ ಅವರು ಹೆಸರಿಗಷ್ಟೇ ಪ್ರಧಾನಿಯಾಗಿದ್ದರು. ಆದರೆ ಸರ್ಕಾರದ ನೀತಿ-ನಿರ್ಣಯಗಳು, ಸೂಚನೆಗಳು ಮತ್ತು ನಿರ್ದೇಶನಗಳು ದೆಹಲಿಯ 10 ಜನಪಥ ನಿವಾಸದಿಂದ ಬರುತ್ತಿತ್ತು. ಯುಪಿಎ ಅವಧಿಯಲ್ಲಿ ಪಿಎಂ ಕಚೇರಿಯ ರಿಯಲ್ ಪವರ್ ಇದ್ದದ್ದು, ಸೋನಿಯಾ ಗಾಂಧಿ ಅವರಿಗೇ" ಎಂದು ಪ್ರಧಾನಿ ನರೇಂದ್ರ ಮೋದಿ ತೀವ್ರ ಟೀಕೆ ಮಾಡಿದರು.

ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ಮಾಡಿರುವ "ಸೊಕ್ಕಿನ ಹಠದ ಸರ್ಕಾರ" ಎಂಬ ಆರೋಪವನ್ನು ತಳ್ಳಿಹಾಕಿದ ನರೇಂದ್ರ ಮೋದಿ ಅವರು, ಯುಪಿಎ ಅವಧಿಯಲ್ಲಿ ಅಧಿಕಾರ ಎಂಬುದು ಏಕವ್ಯಕ್ತಿ ಸ್ವಾಮ್ಯವಾಗಿತ್ತು. ಆದರೆ ಇದೀಗ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಸಂವಿಧಾನ ಪ್ರಕಾರ ಅಧಿಕಾರ ಹಂಚಿಕೆಯಾಗಿದೆ. ನಾವು ಈಗ ಸಾಂಸ್ಥಿಕ ವ್ಯವಸ್ಥೆಯಂತೆ ಒಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಯಾವುದೇ ಅಸಂವಿಧಾನಿಕ ವ್ಯಕ್ತಿ ಅಥವಾ ವ್ಯವಸ್ಥೆಯ ಮಾತು ಕೇಳುವುದಿಲ್ಲ ಎಂದು ನರೇಂದ್ರ ಮೋದಿ ಅವರು ಕಾಂಗ್ರೆಸ್ ಗೆ ತಿರುಗೇಟು ನೀಡಿದರು.

ಪಿಟಿಐ ಸುದ್ದಿ ಸಂಸ್ಥೆಗೆ ನೀಡಿರುವ ಈ ಸಂದರ್ಶನದಲ್ಲಿ ಪ್ರಧಾನಿ ಮೋದಿ, ಸೋನಿಯಾ ಹಾಗೂ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಪ್ರಧಾನ ಮಂತ್ರಿ ಕಚೇರಿ, ಅಲ್ಪಸಂಖ್ಯಾತರು, ಎನ್ ಜಿಓ, ಭೂಸ್ವಾಧೀನ ಕಾಯ್ದೆ ಹಾಗೂ ಜಿಎಸ್ ಟಿ ಮಸೂದೆ ಸೇರಿದಂತೆ ಹಲವು ಪ್ರಶ್ನೆಗಳಿಗೆ ಮೋದಿ ಉತ್ತರಿಸಿದ್ದಾರೆ ಎಂದು ತಿಳಿದುಬಂದಿದೆ. ಇದೇ ವೇಳೆ "ಸೂಟ್ ಬೂಟ್ ಕಿ ಸರ್ಕಾರ್" ಎಂಬ ರಾಹುಲ್ ಗಾಂಧಿ ಅವರ ಟೀಕೆಗೆ ಪ್ರತಿಕ್ರಿಯೆ ನೀಡಿರುವ ಮೋದಿ, "2014ರ ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲನ್ನು ಕಾಂಗ್ರೆಸ್ ಪಕ್ಷಕ್ಕೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಮ್ಮ ಸರ್ಕಾರದ ಮೇಲೆ ಸುಖಾಸುಮ್ಮನೆ ಸುಳ್ಳು ಆರೋಪಗಳನ್ನು ಮಾಡುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ".

"ಕಾಂಗ್ರೆಸ್ ಮಾಡಿದ ಪಾಪಕೃತ್ಯಗಳಿಗಾಗಿ ಜನರು ತಕ್ಕ ಪಾಠ ಕಲಿಸಿದ್ದಾರೆ. ಇದರಿಂದಾಗಿ ಅವರು ಪಾಠ ಕಲಿಯುತ್ತಾರೆ ಎಂಬುದು ನಮ್ಮ ನಿರೀಕ್ಷೆಯಾಗಿದೆ. ಆದರೆ ಈಗ ಅವರು ಅಭಿವೃದ್ಧಿಯನ್ನು ವಿರೋಧಿಸುವ ಮೂಲಕ ಹಳೆ ಚಾಳಿಗೆ ಮರಳಿದ್ದಾರೆ" ಎಂದು ಮೋದಿ ಆರೋಪಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.