ಸರ್ಕಾರದ ಸುವರ್ಣ ಗ್ರಾಮ ಯೋಜನೆ ವಿಫಲವಾಗಿದೆ: ಸಿಎಜಿ ವರದಿಯಲ್ಲಿ ಬಹಿರಂಗ
ಸುವರ್ಣ ಗ್ರಾಮೋದಯ ಯೋಜನೆಯಲ್ಲಿ ಆಯ್ಕೆ ಮಾಡಿರುವ ಗ್ರಾಮಗಳ ಸಮಗ್ರ ಅಭಿವೃದ್ಧಿ ಸಾಧ್ಯವಾಗದೆ ಇರುವುದರಿಂದ ಯೋಜನೆ ವಿಫಲವಾಗಿದೆ ಎಂದು ಮಹಾಲೆಕ್ಕ ಪರಿಶೋಧಕರ ವರದಿ ಬಹಿರಂಗ ಪಡಿಸಿದೆ...

ವಿಧಾನಸೌಧ: ಸುವರ್ಣ ಗ್ರಾಮೋದಯ ಯೋಜನೆಯಲ್ಲಿ ಆಯ್ಕೆ ಮಾಡಿರುವ ಗ್ರಾಮಗಳ ಸಮಗ್ರ ಅಭಿವೃದ್ಧಿ ಸಾಧ್ಯವಾಗದೆ ಇರುವುದರಿಂದ ಯೋಜನೆ ವಿಫಲವಾಗಿದೆ ಎಂದು ಮಹಾಲೆಕ್ಕ ಪರಿಶೋಧಕರ ವರದಿ ಬಹಿರಂಗ ಪಡಿಸಿದೆ.
ಸೋಮವಾರ ವಿಧಾನಸಭೆಯಲ್ಲಿ ಸ್ಥಳೀಯ ಸಂಸ್ಥೆಗಳ ಮೇಲಿನ ಭಾರತದ ಲೆಕ್ಕ ನಿಯಂತ್ರಕರು ಹಾಗೂ ಮಹಾ ಲೆಕ್ಕಪರಿಶೋಧಕರ ವರದಿ ಮಂಡಿಸಲಾಯಿತು. ಈ ಯೋಜನೆಯಲ್ಲಿ ಗ್ರಾಮವೊಂದನ್ನು ಅಭಿವೃದ್ಧಿ ಹೊಂದಿದ ಗ್ರಾಮ ಎಂದು ಯಾವಾಗ ಪರಿಗಣಿಸುವುದು ಎನ್ನುವುದಕ್ಕೆ ಯಾವುದೇ ಮಾನ ದಂಡ ಇಲ್ಲ. ಘನ ತ್ಯಾಜ್ಯ ನಿರ್ವಹಣೆ, ವಿದ್ಯುದ್ದೀಕರಣ, ಮಾಹಿತಿ ಶಿಕ್ಷಣ ಮತ್ತು ಸಂವಹನ, ಸ್ಮಶಾನ ಅಭಿವೃದ್ಧಿ, ಕಂಪ್ಯೂಟರ್ ಕೇಂದ್ರ ಹಾಗೂ ಸೌರ ವಿದ್ಯುದ್ದೀಪಗಳಿಗೆ ಸಂಬಂಧಿಸಿದಂತೆ ಸಾಧನೆ ಶೂನ್ಯವಾಗಿದೆ. ಆಯ್ದ ಗ್ರಾಮಗಳ ಭೌತಿಕ ಪರಿಸರದ ಸಮಗ್ರ ಅಭಿವೃದ್ಧಿಯ ಗುರಿ ಸಾಧಿಸಲು ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸುವಲ್ಲಿ ಯೋಜನೆ ಸಮರ್ಪಕವಾಗಿರಲಿಲ್ಲ ಎನ್ನುವುದನ್ನು ವರದಿಯಲ್ಲಿ ಎತ್ತಿ ತೋರಿಸಲಾಗಿದೆ.
ಯೋಜನೆ ತರಬೇತಿ ಕಾರ್ಯಚಟುವಟಿಕೆಗಳಲ್ಲಿ ಹಾಗೂ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತಕ್ಕೆ ಮಾಡಲಾಗಿದ್ದ ಪಾವತಿಗಳು ನಿಯಮ ಬಾಹಿರವಾಗಿವೆ. ಉನ್ನತ ಮಟ್ಟದ ಸಮಿತಿ ಸಭೆ ನಡೆಯದೆ ಇದ್ದುದರಿಂದ ಮೇಲ್ವಿಚಾರಣೆಯಲ್ಲೂ ನ್ಯೂನತೆ ಇತ್ತು ಎನ್ನುವುದನ್ನು ವರದಿಯಲ್ಲಿ ಹೇಳಲಾಗಿದೆ. ರಾಜ್ಯ ಸರ್ಕಾರ ಗ್ರಾಮೀಣಾಭಿವದ್ಧಿಗಾಗಿ ಸುವರ್ಣ ಗ್ರಾಮೋದಯ ಯೋಜನೆಯನ್ನು ಫೆ. 2007ರಲ್ಲಿ ಆರಂಭಿಸಿತು.
ಸರ್ಕಾರ, ಸರ್ಕಾರೇತರ ಸಂಸ್ಥೆಗಳು, ಖಾಸಗಿ ವಲಯದ ಸಹಭಾಗಿಗಳು ಹಾಗೂ ಗ್ರಾಮೀಣ ಸಮುದಾಯಗಳ ಸಂಘಟಿತ ಪ್ರಯತ್ನದ ಮೂಲಕ ಪ್ರತಿ ವರ್ಷ 1000 ಗ್ರಾಮಗಳನ್ನು ಅಭಿವೃದ್ಧಿಪಡಿಸುವುದು ಯೋಜನೆಯ ಉದ್ದೇಶವಾಗಿತ್ತು. ನಿರ್ಮಲ ಭಾರತ ಅಭಿಯಾನದಲ್ಲೂ ದೋಷ: ನಿರ್ಮಲ ಭಾರತದ ಕಲ್ಪನೆಯನ್ನು ಸಾಕಾರಗೊಳಿಸಲು ಕೇಂದ್ರ ಸರ್ಕಾರ ಜಾರಿಗೆ ತಂದ ಸಂಪೂರ್ಣ ನೈರ್ಮಲ್ಯ ಆಂದೋಲನ (ನಿರ್ಮಲ ಭಾರತ ಅಭಿಯಾನ)ದಲ್ಲೂ ಹಲವು ದೋಷಗಳನ್ನು ಮಹಾ ಲೆಕ್ಕಪರಿಶೋಧಕರ ವರದಿ ಪಟ್ಟಿ ಮಾಡಿದೆ.
ಈ ಯೋಜನೆ ತಯಾರಿಸುವಾಗ ಗ್ರಾಪಂಗಳಿಂದ ಮಾಹಿತಿ ಪಡೆದುಕೊಳ್ಳದೇ ಇದ್ದುದರಿಂದ ಯೋಜನೆ ಅನುಷ್ಠಾನದಲ್ಲಿ ಲೋಪ ಉಂಟಾಯಿತು. ಗ್ರಾಮಗಳನ್ನು ಹಂತಹಂತವಾಗಿ ಅಭಿವೃದ್ಧಿ ಪಡಿಸುವುದನ್ನು ಬಿಟ್ಟು ರಾಜ್ಯದ ಎಲ್ಲ ಗ್ರಾಪಂಗಳಲ್ಲೂ ಯೋಜನೆಯನ್ನು ಅನುಷ್ಠಾನಗೊಳಿಸಲಾಯಿತು. ಇದು ಇನ್ನಷ್ಟು ಸಮಸ್ಯೆಗಳಿಗೆ ಕಾರಣವಾಯಿತು ಎಂದು ವರದಿಯಲ್ಲಿ ಹೇಳಲಾಗಿದೆ.
ಪಂಚತಂತ್ರದಲ್ಲೂ ಕೊರತೆ
ಜನಸಾಮಾನ್ಯರಿಗೆ ಗ್ರಾಪಂನ ವಿವಿಧ ಮಾಹಿತಿಗಳನ್ನು ವೀಕ್ಷಿಸಲು ಸಾಧ್ಯವಾಗುವಂತೆ ರೂಪಿಸಲಾದ ಪಂಚತಂತ್ರ ತಂತ್ರಾಂಶವೂ ಲೋಪದಿಂದ ಹೊರತಾಗಿಲ್ಲ. ಈ ತಂತ್ರಾಂಶದ ವಿನ್ಯಾಸದಲ್ಲೇ ದೋಷ ಇದೆ. ಇನ್ನು ಗ್ರಾಮ ಪಂಚಾಯಿತಿಗಳ ಆಸ್ತಿ ತೆರಿಗೆ ಸಂಗ್ರಹಣೆ ಕೂಡ ಸಮರ್ಪಕವಾಗಿಲ್ಲ. ರಾಜ್ಯದಲ್ಲಿ ರು.15.45 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಲಾಗಿಲ್ಲ ಎಂದೂ ವರದಿ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


