15 ದಿನ ಮ್ಯಾಗಿ ನೂಡಲ್ಸ್ ಮಾರಾಟ ನಿಷೇಧಿಸಿದ ದೆಹಲಿ ಸರ್ಕಾರ
ಒಂದು ಕಾಲದ ಮಕ್ಕಳ ಇಷ್ಟದ ತಿನಿಸಾಗಿದ್ದ ನೆಸ್ಲೆ ಸಂಸ್ಥೆಯ ಮ್ಯಾಗಿ ನೂಡಲ್ಸ್ ಇದೀಗ ತೀವ್ರ ವಿವಾದಕ್ಕೀಡಾಗಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಮ್ಯಾಗಿ ನೂಡಲ್ಸ್ ಮಾರಾಟವನ್ನು 15 ದಿನಗಳ ಮಟ್ಟಿಗೆ ನಿಷೇಧ ಹೇರಲಾಗಿದೆ.

ನವದೆಹಲಿ: ಒಂದು ಕಾಲದ ಮಕ್ಕಳ ಇಷ್ಟದ ತಿನಿಸಾಗಿದ್ದ ನೆಸ್ಲೆ ಸಂಸ್ಥೆಯ ಮ್ಯಾಗಿ ನೂಡಲ್ಸ್ ಇದೀಗ ತೀವ್ರ ವಿವಾದಕ್ಕೀಡಾಗಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಮ್ಯಾಗಿ ನೂಡಲ್ಸ್ ಮಾರಾಟವನ್ನು 15 ದಿನಗಳ ಮಟ್ಟಿಗೆ ನಿಷೇಧ ಹೇರಲಾಗಿದೆ.
ಮ್ಯಾಗಿ ನೂಡಲ್ಸ್ನಲ್ಲಿ ಅಪಾಯಕಾರಿ ಮೋನೊಸೋಡಿಯಂ ಗ್ಲುಟಮೇಟ್ ಮತ್ತು ಸೀಸದ ಅಂಶ ಪತ್ತೆಯಾಗಿದೆ ಎಂಬ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ದೆಹಲಿ ಸರ್ಕಾರ ಈ ನಿಷೇಧ ಆದೇಶ ಹೊರಡಿಸಿದೆ. ‘ಹೊಸದಾಗಿ ಬಂದಿರುವ ಮ್ಯಾಗಿ ನೂಡಲ್ಸ್ ಮಾದರಿಯನ್ನು ಪರೀಕ್ಷೆಗಾಗಿ ಪ್ರಯೋಗಾಲಯಗಳಿಗೆ ಕಳುಹಿಸಲಾಗುವುದು. ಪ್ರಯೋಗಾಲಯದ ವರದಿಯನ್ನು ಆಧರಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ತಿಳಿಸಿದ್ದಾರೆ.
ದೆಹಲಿ ಸರ್ಕಾರ ನಡೆಸಿದ್ದ ಮ್ಯಾಗಿ ಸ್ಯಾಂಪಲ್ ಪರೀಕ್ಷೆಯಲ್ಲಿ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸೀಸದ ಅಂಶ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಒಟ್ಟು 13 ಪ್ಯಾಕೆಟ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಬಹುತೇಕ ಪ್ಯಾಕೆಟ್ ಗಳಲ್ಲಿ ಆರೋಗ್ಯಕ್ಕೆ ಹಾನಿಕರವಾದ ಅಂಶ ಹೆಚ್ಚಿನ ಪ್ರಮಾಣದಲ್ಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಅಧಿಕಾರಿಗಳು ನೀಡಿದ ವರದಿಯ ಹಿನ್ನಲೆಯಲ್ಲಿ ದೆಹಲಿ ಸರ್ಕಾರ ಮ್ಯಾಗಿ ನೂಡಲ್ಸ್ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಘೋಷಣೆ ಮಾಡಿದೆ. ಹೀಗಾಗಿ ದೆಹಲಿಯಾದ್ಯಂತ ಮ್ಯಾಗಿ ನೂಡಲ್ಸ್ ತಿನಿಸಿಗೆ ನಿಷೇಧ ಹೇರಲಾಗಿದೆ. ಇನ್ನು ಪಶ್ಟಿಮ ಬಂಗಾಳವೂ ಮ್ಯಾಗಿ ವಿಚಾರದಲ್ಲಿ ಎಚ್ಚೆತ್ತುಕೊಂಡಿದ್ದು, ಆರೋಗ್ಯ ಇಲಾಖೆ ಬುಧವಾರ ಉನ್ನತಮಟ್ಟದ ಅಧಿಕಾರಿಗಳ ಸಭೆ ಕರೆದಿದೆ. ಈ ಸಭೆಯಲ್ಲಿ ಸಮಾಲೋಚನೆ ನಡೆಸಿದ ಬಳಿಕ ಮ್ಯಾಗಿ ಭವಿಷ್ಯ ನಿರ್ಧರಿಸುವ ಸುಳಿವನ್ನು ಆಹಾರ ಪೂರೈಕೆಗಳ ಸಚಿವ ಜ್ಯೋತಿರ್ಮಯಿ ಮುಲ್ಲಿಕ್ ನೀಡಿದ್ದಾರೆ.
80ರದಶಕದಿಂದಲೂ ಭಾರತೀಯ ಮಾರುಕಟ್ಟೆಯಲ್ಲಿ ಅಷ್ಟೇನೂ ಪ್ರಸಿದ್ಧಿ ಗಳಿಸದ ಮ್ಯಾಗಿ ನೂಡಲ್ಸ್ 1987ರ ಲ್ಲಿ 2 ನಿಮಿಷದಲ್ಲಿ ಮಾಡಬಹುದಾದ ತಿನಿಸು ಎಂಬ ಪ್ರಚಾರದೊಂದಿಗೆ ಮಾರುಕಟ್ಟೆಯಲ್ಲಿ ಜನಪ್ರಿಯವಾಯಿತು. ದಿನಕಳೆದಂತೆ ಮ್ಯಾಗಿ ನೂಡಲ್ಸ್ ಮಾರುಕಟ್ಟೆಯ ಉತ್ತುಂಗಕ್ಕೆ ತಲುಪಿ ಶೇ.60 ಮಾರುಕಟ್ಟೆಯನ್ನು ತನ್ನದಾಗಿಸಿಕೊಂಡಿತ್ತು. ನೂಡಲ್ಸ್ ತಿನಿಸು ವಿಭಾಗದಲ್ಲಿ ತಾನೇ ಸಾಮ್ರಾಟನಾಗಿದ್ದ ನೆಸ್ಲೆ ಸಂಸ್ಥೆಯ ಮ್ಯಾಗಿ ನೂಡಲ್ಸ್ ನಲ್ಲಿ ವಿಷಕಾರಿ ಅಂಶ ಪತ್ತೆಯಾಗುವುದರೊಂದಿಗೆ ತೀವ್ರ ವಿವಾದಕ್ಕೀಡಾಗಿದೆ.
ಈಗಾಗಲೇ ಉತ್ತರಪ್ರದೇಶದಲ್ಲಿ ಈ ತಿನಿಸನ್ನು ನಿಷೇಧಿಸಲಾಗಿದ್ದು, ಇದರ ಬೆನ್ನಲ್ಲೇ ಬಿಹಾರ ಮತ್ತು ದೆಹಲಿ ಸರ್ಕಾರ ಈ ತಿನಿಸು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳಿದ್ದವು. ಇನ್ನು ಕೇರಳ, ಕರ್ನಾಟಕ, ಹರ್ಯಾಣ, ಉತ್ತರ ಖಂಡದಲ್ಲೂ ಮ್ಯಾಗಿ ಗುಣಮಟ್ಟ ಪರೀಕ್ಷೆ ಎದುರಿಸುತ್ತಿದೆ. ಕೇರಳ ಸರ್ಕಾರವಂತೂ ಪರೀಕ್ಷೆ ವರದಿ ಮುಗಿಯುವವರೆಗೆ ಸರ್ಕಾರಿ ಅಂಗಡಿಗಳಲ್ಲಿ ಮ್ಯಾಗಿ ವಿತರಣೆ-ವ್ಯಾಪಾರಕ್ಕೆ ತಾತ್ಕಾಲಿಕ ನಿಷೇಧ ಹೇರಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


