ಜನಸಂಖ್ಯೆ: ಚೀನಾ ಹಿಂದಿಕ್ಕಲಿದೆ ಭಾರತ
ಭಾರತ 2022ರ ವೇಳೆಗೆ ಚೀನಾವನ್ನು ಹಿಂದಿಕ್ಕಿ ಅತಿ ಹೆಚ್ಚು ಜನಸಂಖ್ಯೆ ದೇಶವಾಗಲಿದೆ. ಭಾರತ 2028ಕ್ಕೆ ಚೀನಾವನ್ನು ಹಿಂದಿಕ್ಕಲಿದೆ ಎಂದು ಅಂದಾಜಿಸಲಾಗಿತ್ತು...

ವಿಶ್ವಸಂಸ್ಥೆ: ಭಾರತ 2022ರ ವೇಳೆಗೆ ಚೀನಾವನ್ನು ಹಿಂದಿಕ್ಕಿ ಅತಿ ಹೆಚ್ಚು ಜನಸಂಖ್ಯೆ ದೇಶವಾಗಲಿದೆ. ಭಾರತ 2028ಕ್ಕೆ ಚೀನಾವನ್ನು ಹಿಂದಿಕ್ಕಲಿದೆ ಎಂದು ಅಂದಾಜಿಸಲಾಗಿತ್ತು.
ಆದರೆ ಹೊಸ ವರದಿಗಳ ಅನುಸಾರ ಆರು ವರ್ಷ ಮೊದಲೇ ಈ ಎತ್ತರ ತಲುಪಲಿದೆ. ನಂತರ 2100ರವರೆಗೂ ಭಾರತ ಅಗ್ರಸ್ಥಾನದಲ್ಲಿ ಮುಂದುವರೆಯಲಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ವಿಶ್ವಸಂಸ್ಥೆ ಮಂಗಳವಾರ ಬಿಡುಗಡೆ ಮಾಡಿದ `ದಿ ವಲ್ರ್ಡ್ ಪಾಪುಲೇಷನ್ ಪ್ರಾಸ್ಪೆಕ್ಟ್: ದಿ 2015 ರಿವಿಷನ್'ನಲ್ಲಿ ವಿವರಿಸಿದ್ದು ಇನ್ನು ಏಳು ವರ್ಷಗಳಲ್ಲಿ ಚೀನಾವನ್ನು ಭಾರತ ಹಿಂದಿಕ್ಕಲಿದೆ ಎಂದಿದೆ. ಸದ್ಯ ಚೀನಾದ ಜನಸಂಖ್ಯೆ 138 ಕೋಟಿ ಇದ್ದರೆ ಭಾರತದ ಜನಸಂಖ್ಯೆ 131 ಕೋಟಿಯಾಗಿದೆ.
2050ಕ್ಕೆ 150 ಕೋಟಿ ತಲುಪಲಿರುವ ಭಾರತದ ಜನಸಂಖ್ಯೆ 2050ರ ವೇಳೆಗೆ 170 ಕೋಟಿ ತಲುಪಲಿದೆ. ಇದೇ ಸಂದರ್ಭದಲ್ಲಿ ಚೀನಾದ ಜನಸಂಖ್ಯೆ ಏರಿಕೆ 2030ರವರೆಗೂ ಒಂದೇ ಪ್ರಮಾಣದಲ್ಲಿರಲಿದೆ. ಅದರ ನಂತರ ಚೀನಾ ಜನಸಂಖ್ಯೆ ಇಳಿಮುಖ ಕಾಣಲಿದೆ ಎಂತಲೂ ಎಂದು ವರದಿ ಹೇಳಿದೆ. ಈ ಹಿಂದೆ 2013ರಲ್ಲಿ ಬಿಡುಗಡೆ ಮಾಡಿದ ವರದಿ ಪ್ರಕಾರ ಭಾರತ 2028ರ ವೇಳೆಗೆ ಚೀನಾವನ್ನು ಹಿಂದಿಕ್ಕಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಈಗಿನ ಅಂಕಿಅಂಶಗಳ ಅನುಸಾರ ಆರು ವರ್ಷಗಳ ಮೊದಲೇ ಈ ಸಾಧನೆ ಮಾಡಲಿದೆ. ಮುಂದುವರೆದಂತೆಲ್ಲ ಭಾರತ ಯುವಕರ ದೇಶವಾಗಿರಲಿದೆ ಎಂತಲೂ ವರದಿ ಹೇಳಿದೆ. ಸದ್ಯ ವಿಶ್ವದ ಜನಸಂಖ್ಯೆ 730 ಕೋಟಿ ಇದ್ದು 2030ರ ವೇಳೆಗೆ 850 ಕೋಟಿ ತಲುಪಲಿದೆ. 2050ರ ವೇಳೆಗೆ 970 ಮತ್ತು 2100ರ ವೇಳೆಗೆ 1,120 ಕೋಟಿ ತಲುಪಲಿದೆ. 2015-50ರ ಅವಧಿಯಲ್ಲಿ ವಿಶ್ವದ ಜನಸಂಖ್ಯೆ ಪ್ರಮುಖವಾಗಿ 9 ದೇಶಗಳಲ್ಲಿ ಏರಿಕೆ ಕಾಣಲಿದೆ. ಭಾರತ, ನೈಜೀರಿಯಾ, ಪಾಕಿಸ್ತಾನ, ಕಾಂಗೊ, ಇಥಿಯೋಪಿಯಾ, ತಾಂಜಾನಿಯಾ, ಅಮೆರಿಕ, ಇಂಡೋನೇಷ್ಯಾ ಮತ್ತು ಉಗಾಂಡ ಈ ದೇಶಗಳಾಗಿವೆ.
2015ರಲ್ಲಿ ಯುವ ಭಾರತದ ವಯಸ್ಸು 26.6 ವರ್ಷಗಳಾಗಿವೆ. 2030ಕ್ಕೆ ಈ ವಯಸ್ಸು 31.2, 2050ಕ್ಕೆ 37.3 ಮತ್ತು 2100ಕ್ಕೆ 47 ವರ್ಷಗಳಾಗಿರಲಿದೆ ಎಂದು ಅಂದಾಜಿಸಲಾಗಿದೆ. ಇದಕ್ಕೆ ಹೋಲಿಸಿದರೆ 2030ರ ವೇಳೆಗೆ ಚೀನಾದಲ್ಲಿ ಯುವಕರೆಂದರೆ ಅವರ ವಯಸ್ಸು 43.2 ವರ್ಷಗಳಾಗಿರಲಿದೆ. 2050ರ ವೇಳೆಗೆ 49.6 ಮತ್ತು 2100 ವೇಳೆಗೆ 51.1 ವರ್ಷಗಳಾಗಿರಲಿದೆ. ಇದೇ ರೀತಿಯ 2030ರ ವೇಳೆಗೆ ಅಮೆರಿಕದ್ದು 40 ವರ್ಷ, 2050ಕ್ಕೆ 41.7 ಮತ್ತು 2100ಕ್ಕೆ 44.7 ವರ್ಷಗಳಾಗಿರಲಿದೆ. ಮುಂದಿನ ದಶಕಗಳಲ್ಲಿ ಭಾರತೀಯರ ಜೀವಿತಾವಧಿಯೂ ಹೆಚ್ಚಲಿದೆ. 2025-30ರ ನಡುವೆ ಜೀವಿತಾವಧಿ 71.7 ವರ್ಷಗಳಾಗಿದ್ದರೆ 2045-50ಕ್ಕೆ 75.9 ವರ್ಷಗಳಾಗಿರಲಿದೆ. 2095-2100ರ ವೇಳೆಗೆ 84.6 ವರ್ಷಗಳಾಗಿರಲಿದೆ ಎಂದು ವರದಿ ವಿವರಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


