ಪ್ರಧಾನ ಸುದ್ದಿ

ರೈತರು ಮಾಡಿಕೊಂಡ ಆತ್ಮಹತ್ಯೆಗಳಿಗೆ ಸಾಲವೊಂದೇ ಕಾರಣವಲ್ಲ!

ಕಳೆದ ಒಂದು ತಿಂಗಳಿನಿಂದ ರಾಜ್ಯದ ಸರಣಿ ರೈತ ಆತ್ಮಹತ್ಯೆಗಳು ರಾಷ್ಟ್ರಮಟ್ಟದಲ್ಲಿ ಸಂಚಲನ ಮೂಡಿಸಿವೆ. ಸಾಲದ ಹೊರೆ ಮತ್ತು ಆರ್ಥಿಕ ಮುಗ್ಗಟ್ಟಿನಿಂದಲೇ...

ರೈತರು ಮಾಡಿಕೊಂಡ ಆತ್ಮಹತ್ಯೆಗಳಿಗೆ ಸಾಲವೊಂದೇ ಕಾರಣವಲ್ಲ!
ರೈತರ ಆತ್ಮಹತ್ಯೆ
Published On :

ನವದೆಹಲಿ: ಕಳೆದ ಒಂದು ತಿಂಗಳಿನಿಂದ ರಾಜ್ಯದ ಸರಣಿ ರೈತ ಆತ್ಮಹತ್ಯೆಗಳು ರಾಷ್ಟ್ರಮಟ್ಟದಲ್ಲಿ ಸಂಚಲನ ಮೂಡಿಸಿವೆ. ಸಾಲದ ಹೊರೆ ಮತ್ತು ಆರ್ಥಿಕ ಮುಗ್ಗಟ್ಟಿನಿಂದಲೇ ರೈತರು ಧೃತಿಗೆಟ್ಟು ಜೀವ ಕಳೆದುಕೊಳ್ಳತೊಡಗಿದ್ದಾರೆ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ.

ಆದರೆ, ಇದೇ ಮೊದಲ ಬಾರಿಗೆ ರೈತ ಆತ್ಮಹತ್ಯೆ ಕುರಿತು ಮಾಹಿತಿ ಕಲೆಹಾಕಿದ ನ್ಯಾಷನಲ್ ಕ್ರೈಮ್ ರೆಕಾಡ್ರ್ಸ್ ಬ್ಯೂರೋ (ಎನ್‍ಸಿಆರ್‍ಬಿ) ಅಂಕಿ - ಅಂಶಗಳು ಸರಣಿ ಆತ್ಮಹತ್ಯೆಗಳಿಗೆ ಸಾಲದ ಹೊರೆಯಷ್ಟೇ ಕಾರಣವಲ್ಲ ಎಂಬ ಮಹತ್ವದ ಸಂಗತಿ ಯನ್ನು ಹೊರಹಾಕಿದೆ. ಹೌದು, ದೇಶದ ರೈತರ ಆತ್ಮಹತ್ಯೆಗಳ ಬಗ್ಗೆ ಸಮೀಕ್ಷೆ ನಡೆಸಿರುವ ಎನ್‍ಸಿಆರ್‍ಬಿ, ಅನ್ನದಾತರ ಆತ್ಮಹತ್ಯೆಗೆ ಇರಬಹುದಾದ ಹಣಕಾಸೇತರ ಕಾರಣಗಳ ಮೇಲೆ ಮೊದಲ ಬಾರಿಗೆ ಬೆಳಕು ಚೆಲ್ಲಿದೆ.

ಕಳೆದ ವರ್ಷ 2014ರಲ್ಲಿ , ದೇಶದಲ್ಲಿ ಸಂಭವಿಸಿರುವ ಒಟ್ಟು 5,650 ರೈತ ಆತ್ಮಹತ್ಯೆಗಳಲ್ಲಿ ಶೇ.20.6ರಷ್ಟು ಸಾಲ ಮತ್ತು ದಿವಾಳಿ ಕಾರಣದಿಂದ ನಡೆದಿದ್ದರೆ, ಸರಿಸುಮಾರು ಅಷ್ಟೇ (ಶೇ.20.1) ಪ್ರಮಾಣದ ಆತ್ಮಹತ್ಯೆಗಳು ಕೌಟುಂಬಿಕ ಕಾರಣಕ್ಕಾಗಿ ನಡೆದಿವೆ. ರೈತ ಆತ್ಮಹತ್ಯೆಯ ಇತರ ಕಾರಣಗಳಲ್ಲಿ ಪ್ರಮುಖವಾದವು ಬೆಳೆ ವೈಫಲ್ಯ(ಶೇ.16.8), ಅನಾರೋಗ್ಯ(ಶೇ.13.2) ಹಾಗೂ ಕುಡಿತ ಮತ್ತು ವ್ಯಸನ(ಶೇ.4.9). ಪುರುಷ ರೈತ ಆತ್ಮಹತ್ಯೆಯ ಒಟ್ಟು 5,178 ಪ್ರಕರಣಗಳಲ್ಲಿ ಶೇ.21.5ರಷ್ಟು ರೈತರು ಸಾಲ ಮತ್ತು ದಿವಾಳಿತನದಿಂದಾಗಿ ಸಾವಿಗೆ ಶರಣಾಗಿದ್ದರೆ, ಜೀವ ಕಳೆದುಕೊಂಡ ಒಟ್ಟು 472 ರೈತ ಮಹಿಳೆಯರ ಪೈಕಿ ಶೇ.10.8ರಷ್ಟು ಮಂದಿ ಮಾತ್ರ ಆರ್ಥಿಕ ಸಂಕಷ್ಟದ ಕಾರಣಕ್ಕೆ ಬದುಕಿಗೆ ವಿದಾಯ ಹೇಳಿದ್ದಾರೆ. ಉಳಿದಂತೆ ಕೃಷಿ ಸಂಬಂಧಿತ ವಿಷಯಗಳು ಮತ್ತು ಕೌಟುಂಬಿಕ ಬಿಕ್ಕಟ್ಟು ರೈತ ಮಹಿಳೆಯ ಆತ್ಮಹತ್ಯೆಯ ಪ್ರಮುಖ ಕಾರಣಗಳಾಗಿವೆ.

ಭೂಮಿ ಬಿಕ್ಕಟ್ಟು: ಆತ್ಮಹತ್ಯೆಗೆ ಶರಣಾದ ರೈತರ ಸಾಗುವಳಿ ಭೂಮಿಯ ಪ್ರಮಾಣ ಕೂಡ ಗಮನಾರ್ಹ ಅಂಶವೆಂದು ಪರಿಗಣಿಸಿರುವ ಎನ್‍ಸಿಆರ್‍ಬಿ, ಒಟ್ಟು ನತದೃಷ್ಟ ರೈತರ ಪೈಕಿ ಶೇ.72.4ರಷ್ಟು ಮಂದಿ ಸಣ್ಣ (ಶೇ.44.5) ಮತ್ತು ಅತಿಸಣ್ಣ (ಶೇ.27.9)ಹಿಡುವಳಿದಾರರು. ಆತ್ಮಹತ್ಯೆಗೆ ಶರಣಾದ ಒಟ್ಟು 5,650 ರೈತರ ಪೈಕಿ 4,095 ಮಂದಿ ಸಣ್ಣ ಮತ್ತು ಅತಿಸಣ್ಣ ರೈತರಾಗಿದ್ದು, ಎರಡು  ಹೆಕ್ಟೇರ್‍ಗಿಂತ ಕಡಿಮೆ ಪ್ರಮಾಣದ ಭೂಮಿ ಹೊಂದಿದವರಾಗಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ರೈತರ ವಯೋಮಾನ ಕೂಡ ಹಲವು ಕುತೂಹಲಕಾರಿ ಅಂಶಗಳತ್ತ ಬೆಳಕು ಚೆಲ್ಲುತ್ತಿದ್ದು, ಶೇ.65.7ರಷ್ಟು ರೈತರು ಬದುಕಿನ ಅತ್ಯಂತ ಸದೃಢ ವಯಸ್ಸಿನಲ್ಲೇ (30ರಿಂದ 60ರ ಹರೆಯದಲ್ಲಿ) ಜೀವ ಕಳೆದುಕೊಂಡಿದ್ದಾರೆ. ದಖ್ಖನ್ ನೆಲದಲ್ಲಿ ಸಾವಿನ ತಾಂಡವ: ದೇಶದ ಅತ್ಯಂತ ಫಲವತ್ತಾದ ಪ್ರದೇಶವೆಂದೇ ಹೆಸರಾದ ಮಧ್ಯ ಭಾರತದ ದಖ್ಖನ್ ಪ್ರಸ್ಥಭೂಮಿ ವ್ಯಾಪ್ತಿಯ ಮಹಾರಾಷ್ಟ್ರ, ಮಧ್ಯಪ್ರದೇಶ, ತೆಲಂಗಾಣ, ಛತ್ತೀಸಗಢ, ಕರ್ನಾಟಕದಲ್ಲೇ(ಶೇ.89.5ರಷ್ಟು) ರೈತ ಆತ್ಮಹತ್ಯೆಯ ತಾಂಡವ ಮುಂದುವರಿದಿದ್ದು, ಮಹಾರಾಷ್ಟ್ರ 2,568 (ಶೇ.45.5) ಪ್ರಕರಣಗಳೊಂದಿಗೆ ಮುಂಚೂಣಿಯಲ್ಲಿದೆ. ಉಳಿದಂತೆ ತೆಲಂಗಾಣದಲ್ಲಿ 898(ಶೇ.15.9), ಮಧ್ಯಪ್ರದೇಶದಲ್ಲಿ 826(14.6), ಛತ್ತೀಸಗಡದಲ್ಲಿ 443(ಶೇ.7.8) ಮಂದಿ ರೈತರು ಸಾವಿಗೆ ಶರಣಾಗಿದ್ದಾರೆ. 321(ಶೇ.5.7 ) ರೈತ ಆತ್ಮಹತ್ಯೆಯೊಂದಿಗೆ ದೇಶದಲ್ಲಿ ಕರ್ನಾಟಕ ಐದನೇ ಸ್ಥಾನದಲ್ಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.