ಸಾಂತ್ವನ ಸರದಿ
ಮಂಡ್ಯ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ಪಕ್ಷದ ಹಿರಿಯ ಧುರೀಣ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನೀಡಿದ ಭೇಟಿ...

ಬೆಂಗಳೂರು: ಮಂಡ್ಯ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ಪಕ್ಷದ ಹಿರಿಯ ಧುರೀಣ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನೀಡಿದ ಭೇಟಿ ಕಾಂಗ್ರೆಸ್‍ನಲ್ಲಿ ಆಂತರಿಕ ಸಂಚಲನ ಮತ್ತು ಬಿಗುವಿನ ವಾತಾವರಣ ಸೃಷ್ಟಿಸಿದೆ. ರಾಜ್ಯದಲ್ಲಿ 50ಕ್ಕೂ ಹೆಚ್ಚು ರೈತರು ಸಾವಿಗೆ ಶರಣಾಗಿದ್ದರೂ ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಚಿವ ಸಂಪುಟದ ಸದಸ್ಯರು ಸಂತ್ರಸ್ತರ ಕುಟುಂಬಕ್ಕೆ ಸಾಂತ್ವನ ಹೇಳುವುದಕ್ಕೆ ಮೀನಮೇಷ ಎಣಿಸುತ್ತಿದ್ದರು. ಆದರೆ ವಿಂಬಲ್ಡನ್ ಟೆನಿಸ್ ಟೂರ್ನಿಯ ಪ್ರವಾಸ ಮುಗಿಸಿ ಬೆಂಗಳೂರಿಗೆ ವಾಪಸ್ ಆದ ಬೆನ್ನಲ್ಲೇ ಕೃಷ್ಣ ತಮ್ಮ ತವರು ಜಿಲ್ಲೆಯಲ್ಲಿ ನಡೆಯುತ್ತಿರುವ ಸರಣಿ ಆತ್ಮಹತ್ಯೆಗೆ ಮಿಡಿಯುವ ಪ್ರಯತ್ನ ನಡೆಸಿದ್ದಾರೆ. ರಾಜಕೀಯವಾಗಿ ತಮ್ಮನ್ನು ನಿರ್ಲಕ್ಷಿಸಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ಮಂಡ್ಯ ಭೇಟಿ ಮತ್ತು ಅಲ್ಲಿ ಆಡಿದ ಮಾರ್ಮಿಕ ಮಾತುಗಳ ಮೂಲಕ ಕೃಷ್ಣ ಬಲವಾದ ಏಟು ನೀಡಿದ್ದಾರೆ ಎಂಬ ವಿಶ್ಲೇಷಣೆ ಈಗ ಆರಂಭವಾಗಿದೆ. ಮಂಡ್ಯಕ್ಕೆ ಕೃಷ್ಣಾಗಮನದ ಬೆನ್ನಲ್ಲೇ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಎಚ್ಚೆತ್ತುಕೊಂಡಿದ್ದು, ಭಾನುವಾರ ಮಂಡ್ಯ ಮತ್ತು ಮೈಸೂರಿನ ತಲಾ ಎರಡು ಗ್ರಾಮಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ತೆರಳಿ ಸಾಂತ್ವನ ಹೇಳಲು ನಿರ್ಧರಿ ಸಿದ್ದಾರೆ. ಪ್ರತಿಪಕ್ಷಗಳ ಎಚ್ಚರಿಕೆ ಮತ್ತು ಮಾಧ್ಯ ಮಗಳು ವ್ಯಕ್ತಪಡಿಸಿದ ಆತಂಕದ ಮಧ್ಯೆಯೂ ಅವರು ಹೋಗಿರಲಿಲ್ಲ.
ಆದರೆ ಮಂಡ್ಯ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ 16 ರೈತರ ಮನೆಗೆ ತೆರಳಿ ತಲಾ ರು. 50 ಸಾವಿರ ಪರಿಹಾರವನ್ನು ಎಸ್.ಎಂ.ಕೃಷ್ಣ ನೀಡಿರುವುದು ಸರ್ಕಾರ ಮತ್ತು ಪಕ್ಷದಲ್ಲಿ ಚಟುವಟಿಕೆ ಮೂಡಿಸುವುದಕ್ಕೆ ಕಾರಣವಾಗಿದೆ.
ಪತ್ರ ಸೂಚನೆ : ಇದರ ಬೆನ್ನಲ್ಲೇ ಕಾಂಗ್ರೆಸ್‍ನಲ್ಲಿ ಸಾಂತ್ವನ ಯಾತ್ರೆಗೆ ಶಾಸಕರು ಮತ್ತು ಸಚಿವರನ್ನು ಕಳುಹಿಸುವ ಪ್ರಯತ್ನವೂ ಬಿರುಸುಗೊಂಡಿದೆ. ಒಂದೆಡೆ ತಮ್ಮ ಸಂಪುಟದ ಎಲ್ಲ ಸಚಿವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದು, ಇನ್ನೊಂದೆಡೆ ಕೆಪಿಸಿಸಿ ಧ್ಯಕ್ಷ ಡಾ.ಜಿ.ಪರಮೇಶ್ವರ ಅವರೂ ಪಕ್ಷದ ಎಲ್ಲ ಶಾಸಕರಿಗೆ ಪತ್ರ ಬರೆದು ರೈತರ ಆತ್ಮಹತ್ಯೆಗೆ ಸ್ಪಂದಿಸುವಂತೆ ಸೂಚನೆ ನೀಡಿದ್ದಾರೆ. ಹೀಗಾಗಿ ಕೊನೆಗೂ ಕೈಪಡೆ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆ ಬಾಗಿಲಿಗೆ ಕಾಲಿಡಲು ಮುಂದಾಗಿದೆ. ಮಂಡ್ಯ ಜಿಲ್ಲೆ ಕೃಷ್ಣ ಅವರ ತವರು ಜಿಲ್ಲೆಯಾಗಿದ್ದು ಅವರು ನೊಂದ ಕುಟುಂಬಗಳಿಗೆ ಸಾಂತ್ವನ ಹೇಳಲು ಹೋಗಿದ್ದಾರೆ, ಇದರಲ್ಲಿ ಯಾವುದೇ ರಾಜಕೀಯ ಮಹತ್ವವಿಲ್ಲವೆಂದು ಮುಖ್ಯಮಂತ್ರಿ ಬಳಗ ತಣ್ಣಗೆಪ್ರತಿಕ್ರಿಯೆ ನೀಡಿದೆ. ಕಳೆದ ಎರಡು ತಿಂಗಳಿಂದ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಇವುಗಳನ್ನು ತಡೆಗಟ್ಟುವುದಕ್ಕೆ ಸರ್ಕಾರ ಹಲವಾರು ಕ್ರಮಗಳನ್ನು ಜಾರಿಗೆ ತಂದಿದೆ. ಇದರ ಜತೆಗೆ ಬಾಧಿತ ಕುಟುಂಬಗಳಿಗೆ ಸಾಂತ್ವನ ಹೇಳಲು ಸಚಿವರು ಖುದ್ದು ಭೇಟಿ ನೀಡುವುದು ಅವಶ್ಯವಾಗಿದೆ. ಈ ವಾರದ ಕೊನೆಯಲ್ಲಿ ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರು ಅವರವರ ಜಿಲ್ಲೆಗಳಿಗೆ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗಳಿಗೆ ತೆರಳಿ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಬೇಕು. ಮಾತ್ರವಲ್ಲ ಜಿಲ್ಲಾಧಿಕಾರಿಗಳಿಂದ ಪರಿಹಾರ ಕೊಡಿಸುವ ವಿಚಾರದಲ್ಲಿ ಆದ ಪ್ರಗತಿ ಬಗ್ಗೆ ಸರ್ಕಾರಕ್ಕೆ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.
ಆತ್ಮಹತ್ಯೆಗೆ ಶರಣಾದ ರೈತರ ವಿವರ
ಮೈಸೂರು 8
ದಾವಣಗೆರೆ 6
ಗದಗ 3
ಕಲಬುರಗಿ 4
ಬೀದರ್ 3
ರಾಯಚೂರು 5
ಕೊಪ್ಪಳ 2
ರಾಮನಗರ 3
ಕೋಲಾರ 1
ಯÁದಗಿರಿ 3
ಚಿಕ್ಕಮಗಳೂರು 5
ದಕ್ಷಿಣ ಕನ್ನಡ 2
ಹಾವೇರಿ 8
ಬೆಳಗಾವಿ 2
ಚಿತ್ರದುರ್ಗ 3
ಚಾಮರಾಜನಗರ 1
ಮಂಡ್ಯ 16
ಹಾಸನ 4
ಚಿಕ್ಕಬಳ್ಳಾಪುರ 1
ತುಮಕೂರು 2
ಬಳ್ಳಾರಿ 1
ವಿಜಯಪುರ 1
ಧಾರವಾಡ 1
ಬೆಂ.ಗ್ರಾಮಾಂತರ 1
ಬಾಗಲಕೋಟೆ 2
ಕೃಷಿಕರ ಸಂಕಷ್ಟ ನೀಗಲು ಸುರಕ್ಷತಾ ಕವಚ (ಸೇಫ್ಟಿ ನೆಟ್) ಯೋಜನೆ ಅನುಷ್ಠಾನಕ್ಕೆ ತರುವುದು ಅತ್ಯಗತ್ಯವಾಗಿದೆ. ಈ ಕುರಿತು ಒಂದೆರಡು ದಿನಗಳಲ್ಲಿ ಪ್ರಧಾನಿಮೋದಿ ಅವರಿಗೆ ಪತ್ರ ಬರೆಯುವೆ. ಕರ್ನಾಟಕ ದಂತೆಯೇ ಎಲ್ಲಾ ರಾಜ್ಯಗಳಲ್ಲಿಯೂ ರೈತರ ಆತ್ಮಹತ್ಯೆ ನಡೆಯುತ್ತಿದೆ. ಅದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಪತ್ರದಲ್ಲಿ ಕೆಲವು
ಸಲಹೆ ಸೂಚನೆಗಳನ್ನೂ ನೀಡುತ್ತೇನೆ.
- ಎಸ್.ಎಂ.ಕೃಷ್ಣ, ಕಾಂಗ್ರೆಸ್ ಮುಖಂಡ
ಎಐಸಿಸಿಗೆ ವರದಿ ?
ರೈತರ ಆತ್ಮಹತ್ಯೆ ಪ್ರಕರಣದ ಬಗ್ಗೆ ಕೆಪಿಸಿಸಿಯಿಂದ ಎಐಸಿಸಿಗೆ ವರದಿ ನೀಡುವುದಕ್ಕೆ ಸಿದ್ಧತೆ ನಡೆದಿದೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಶಾಸಕರಿಗೆಪ್ರತ್ಯೇಕ ಪತ್ರ ಬರೆದಿದ್ದು,ಅಧಿವೇಶನದ ಜವಾಬ್ದಾರಿಯ ಮಧ್ಯೆಯೂ ಶಾಸಕರು ವಾರಾಂತ್ಯದಲ್ಲಿ ಬಿಡುವು ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗಳಿಗೆ ಭೇಟಿ ಸಾಂತ್ವನ ಹೇಳಿ ಧೈರ್ಯ ತುಂಬಬೇಕು. ನಾನು ಈ ಬಗ್ಗೆ ಎಐಸಿಸಿಗೆ ವರದಿ ನೀಡಬೇಕಿರುವುದರಿಂದ ತಮ್ಮ ಭೇಟಿಯ ವಿವರವನ್ನು ಆದಷ್ಟು ಬೇಗ ಕೆಪಿಸಿಸಿಗೆ ಕಳುಹಿಸಿಕೊಡುವಂತೆ ಸೂಚನೆ ನೀಡಿದ್ದಾರೆ.
ಸಿಎಂ ಭೇಟಿ ಎಲ್ಲೆಲ್ಲಿಗೆ ?
ಸಿಎಂ ಸಿದ್ದರಾಮಯ್ಯ ಅವರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರ ಜತೆಗೆ ಭಾನುವಾರ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ಖುದ್ದು ಭೇಟಿ ನೀಡಿ ಸಾಂತ್ವನ ಹೇಳಲು ಮುಂದಾಗಿದ್ದಾರೆ. ಮಂಡ್ಯ ಜಿಲ್ಲೆಯ ಹೊನ್ನನಾಯಕನಹಳ್ಳಿ, ಚಿನ್ನೇನಹಳ್ಳಿ, ಮೈಸೂರಿನ ನಂಜನಗೂಡಿನ ಹುರ ಹಾಗೂ ಸಿದ್ದೇಗೌಡನ ಹುಂಡಿಗೆ ಅವರು ಭೇಟಿ ನೀಡಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


