ಪ್ರಧಾನ ಸುದ್ದಿ

ದಕ್ಷಿಣ ವಶಕ್ಕೆ ಅಮಿತ್ ಶಾ ತಂತ್ರ

ಬೆಂಗಳೂರನ್ನು ಕೇಂದ್ರವಾಗಿಟ್ಟುಕೊಂಡು ದೇಶದ ದಕ್ಷಿಣದಲ್ಲಿ ತನ್ನ ನೆಲೆಯನ್ನು ವಿಸ್ತರಿಸಲು ಕಾರ್ಯತಂತ್ರ ರೂಪಿಸುತ್ತಿರುವ ಬಿಜೆಪಿಯು ರಾಷ್ಟ್ರೀಯ...

ದಕ್ಷಿಣ ವಶಕ್ಕೆ ಅಮಿತ್ ಶಾ ತಂತ್ರ
ಅಮಿತ್ ಶಾ
Published On :

ಬೆಂಗಳೂರು: ಬೆಂಗಳೂರನ್ನು ಕೇಂದ್ರವಾಗಿಟ್ಟುಕೊಂಡು ದೇಶದ ದಕ್ಷಿಣದಲ್ಲಿ ತನ್ನ ನೆಲೆಯನ್ನು ವಿಸ್ತರಿಸಲು ಕಾರ್ಯತಂತ್ರ ರೂಪಿಸುತ್ತಿರುವ ಬಿಜೆಪಿಯು ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ನಂತರ ಈಗ ಮಹಾಸಂಪರ್ಕದ ಅಭಿಯಾನದ ನೆಪದಲ್ಲಿ ಮಹತ್ವದ ಸಭೆಯೊಂದನ್ನು ಭಾನುವಾರ ಬೆಂಗಳೂರಿನಲ್ಲಿ ಹಮ್ಮಿಕೊಂಡಿದೆ.

ಇಲ್ಲಿನ ಅರಮನೆ ಮೈದಾನದಲ್ಲಿ ನಡೆಯುವ ಸಭೆಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮುನ್ನಡೆಸಲಿದ್ದು, ಎಂಟು ರಾಜ್ಯಘಟಕಗಳ ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು, ಮಹಾಸಂಪರ್ಕ ಅಭಿಯಾನ ಪ್ರಮುಖರು ಪಾಲ್ಗೊಳ್ಳುತ್ತಿದ್ದಾರೆ. ಕನಿಷ್ಟ ಒಂದು ಸಾವಿರ ಮಂದಿಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ, ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣ ರಾಜ್ಯದ ಬಿಜೆಪಿ ನಾಯಕರೊಂದಿಗೆ ಅಮಿತ್ ಶಾ ಪ್ರತ್ಯೇಕವಾಗಿ ಮಾತನಾಡಲಿದ್ದು, ಆಯಾ ರಾಜ್ಯಗಳಲ್ಲಿ ಪಕ್ಷದ ಸಂಘಟನೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಮಾರ್ಗದರ್ಶನ ಮಾಡಲಿದ್ದಾರೆ.

ಶನಿವಾರ ಸಭೆಯ ಪೂರ್ವಭಾವಿ ತಯಾರಿ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯ ಪ್ರಭಾರಿ ಮುರಳೀಧರ್ ರಾವ್ ಮತ್ತು ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ, ಮೂರು ಗುಂಪು ಸಭೆಗಳು ನಡೆಯಲಿದ್ದು ಪಕ್ಷ ಬಲವರ್ಧನೆ, ಸದಸ್ಯತ್ವ ಅಭಿಯಾನ, ರಾಜ್ಯಗಳಲ್ಲಿ ಪಕ್ಷದ ಶಕ್ತಿ ಮುಂತಾದ ವಿಚಾರಗಳು ಈ ವೇಳೆ ಚರ್ಚೆಗೆ ಬರಲಿವೆ ಎಂದು ವಿವರಿಸಿದರು. ಇಡೀ ದೇಶದಲ್ಲಿ ಸದಸ್ಯತ್ವ ಅಭಿಯಾನ ಯಶಸ್ವಿಯಾದ ನಂತರ ಇದೀಗ ಎರಡನೇ ಹಂತದ ಕಾರ್ಯಕ್ರಮವಾಗಿ ಮಹಾ ಸಂಪರ್ಕ ಅಭಿಯಾನ ನಡೆಯುತ್ತಿದೆ.

ಪಕ್ಷದ ಕಾರ್ಯಚಟುವಟಿಕೆ, ಕೇಂದ್ರ ಸರ್ಕಾರದ ಸಾಧನೆ ಯನ್ನು ತಿಳಿಸಿಕೊಡುವ ಜೊತೆಗೆ ಸದಸ್ಯರಾದವರು ಸಾಮಾಜಿಕ ಚಟುವಟಿಕೆಯ ಆಸಕ್ತಿ ಮತ್ತು ಪಕ್ಷದ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಕುರಿತು ಚರ್ಚಿಸಲಿದ್ದಾರೆ. ಮುಂದಿನ ಹಂತವಾಗಿ ಮಂಡಲ, ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ತರಬೇತಿ ಕಾರ್ಯಕ್ರಮ ನಡೆಯಲಿದೆ. ಈ ಮೂಲಕ ಪಕ್ಷದ ಸಂಘಟನೆಯನ್ನು ಬೇರುಮಟ್ಟದಿಂದ ಬಲಗೊಳಿಸುವ ಗುರಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರದ್ದಾಗಿದೆ. ಅದರಂತೆಯೇ ಪ್ರಾಂತೀಯ ಮಟ್ಟದ ಸಭೆಗಳು ನಡೆಯುತ್ತಿದೆ ಎಂದು ಹೇಳಿದರು.

ಭಾನುವಾರ ಬೆಳಿಗ್ಗೆ 11 ಗಂಟೆಗೆ ಸಭೆ ಆರಂಭವಾಗಲಿದ್ದು, ಅಮಿತ್ ಶಾ ಉದ್ಘಾಟಿಸಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ನಂತರ ಪ್ರತ್ಯೇಕ ಸಭೆಗಳು ನಡೆಯಲಿವೆ. ಎಂಟು ರಾಜ್ಯಗಳ ಸಂಸದರು, ಶಾಸಕರ ಸಭೆ ಒಂದು ಕಡೆ ನಡೆದರೆ, ಎಂಟು ರಾಜ್ಯಗಳ ಪದಾಧಿಕಾರಿಗಳ ಸಭೆ ಇನ್ನೊಂದು ಕಡೆ ನಡೆಯುವುದು. ಮತ್ತೊಂದು ಕಡೆ ಮಹಾ ಸಂಪರ್ಕ ಅಭಿಯಾನದ ಪ್ರಮುಖರ ಸಭೆ ನಡೆಯಲಿದೆ. ಬಿಜೆಪಿಯನ್ನು ದಕ್ಷಿಣದಲ್ಲಿ ವಿಸ್ತರಿಸುವ ನಿಟ್ಟಿನಲ್ಲಿ ಈ ಸಭೆ ಪ್ರಮುಖವಾಗಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ರಾಜ್ಯದ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸುವ ಮೂಲಕ ಸಭೆಯ ಅವಕಾಶ ಬಳಸಿಕೊಳ್ಳಲಿದ್ದಾರೆ ಎಂದು ಮುರಳೀಧರ್ ರಾವ್ ವಿವರಿಸಿದರು.

ನ್ಯಾಯಾಲಯದ ತೀರ್ಪಿನಿಂದಾಗಿ ಎರಡು ತಿಂಗಳ ಜೀವದಾನ ಪಡೆದುಕೊಂಡಿದ್ದು, ಜನರ ಅಪೇಕ್ಷೆಯಂತೆ ನ್ಯಾಯಬದ್ಧವಾಗಿ ಚುನಾವಣೆ ನಡೆಸಲು ಕಾಂಗ್ರೆಸ್ ಸರ್ಕಾರ ಸಹಕರಿಸಬೇಕೆಂಬುದು ನಮ್ಮ ಸಲಹೆ. ರಾಜ್ಯ ಸರ್ಕಾರ ಲೋಕಾಯುಕ್ತರನ್ನು ಉಳಿಸಿಕೊಂಡು ಮ್ಯಾಚ್ ಫಿಕ್ಸ್ ಮಾಡಲು ಪ್ರಯತ್ನಿಸುತ್ತಿದೆ. ಲೋಕಾಯುಕ್ತ ಭಾಸ್ಕರ ರಾವ್ ವಿರುದ್ಧ ಬಿಜೆಪಿ-ಜೆಡಿಎಸ್ ನೀಡಿರುವ ಮಹಾಭಿಯೋಗದ ಪ್ರಸ್ತಾವನೆಗೆ ನಿಮ್ಮ ಆತ್ಮಸಾಕ್ಷಿಯಂತೆ ಮತ ನೀಡಿ ಎಂದು ಕಾಂಗ್ರೆಸ್ ಶಾಸಕರಿಗೆ ಮನವಿ ಮಾಡುವುದಾಗಿ ಹೇಳಿದರು ಜೋಶಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.