ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ, ಹಿಂಸೆಗೆ ತಿರುಗಿದ ಪೋಷಕರ ಪ್ರತಿಭಟನೆ
ಉದ್ರಿಕ್ತಗೊಂಡ ಪೋಷಕರು ಶಾಲಾ ಕಿಟಕಿ ಗಾಜುಗಳನ್ನು ಪುಡಿಪುಡಿ ಮಾಡಿದ್ದಾರೆ...

ಬ್ಯಾಟರಾಯನಪುರ: 2ನೇ ತರಗತಿ ವ್ಯಾಸಾಂಗ ಮಾಡುತ್ತಿದ್ದ 7 ವರ್ಷದ ಶಾಲಾ ವಿದ್ಯಾರ್ಥಿನಿಗೆ, ಶಾಲೆಯ ದೈಹಿಕ ಶಿಕ್ಷಕ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪೋಷಕರು ಶಾಲೆಯ ಮುಂದೆ ಉಗ್ರ ಪ್ರತಿಭಟನೆ ನಡೆಸಿದ ಘಟನೆ ಮೈಸೂರು ರಸ್ತೆಯಲ್ಲಿನ ಬ್ಯಾಟರಾಯನಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸುಮಾರು 500ಕ್ಕೂ ಹೆಚ್ಚು ಪೋಷಕರು ಶಾಲೆಯ ಮುಂದೆ ಜಮಾಯಿಸಿ, ದೈಹಿಕ ಶಿಕ್ಷಕನ ವರ್ತನೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಉದ್ರಿಕ್ತ ಪೋಷಕರನ್ನು ತಡೆಯಲು ಪ್ರಯತ್ನಿಸಿದರು. ಪ್ರತಿಭಟನಿರತ ಪೋಷಕರನ್ನು ನಿಯಂತ್ರಿಸಲು ಸುಮಾರು 200ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.
ದೈಹಿಕ ಶಿಕ್ಷಕನನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಂತೆ ಆಕ್ರೋಶಗೊಂಡ ಪೋಷಕರು ಆತನ ಬಟ್ಟೆ ಹಿಡಿದು ಎಳೆದಾಡತೊಡಗಿದರು. ಪೋಷಕರನ್ನು ತಡೆಯಲು ಪೊಲೀಸರು ಮುಂದಾದರು. ಈ ವೇಳೆ ಆಕ್ರೋಶಗೊಂಡ ಪೋಷಕರು ಪೊಲೀಸರ ವಿರುದ್ದ ಕಲ್ಲುತೂರಾಟ ನಡೆಸಿದರು.
ಶಾಲಾ ಆವರಣದಲ್ಲಿ ಜಮಾಯಿಸಿದ್ದ ನೂರಾರು ಪೋಷಕರು ಶಾಲಾ ಕಿಟಕಿ ಗಾಜುಗಳನ್ನು ಪುಡಿಪುಡಿ ಮಾಡಿದರು. ತರಗತಿಗಳಲ್ಲಿನ ಪೀಠೋಪಕರಣಗಳನ್ನು ಧ್ವಂಸಗೊಳಿಸಿದರಲ್ಲದೆ, ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ಬದಿಯಲ್ಲಿ ನಿಂತಿದ್ದ ಪೊಲೀಸ್ಕಾರು, ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿ ಪೋಷಕರು ಖಂಡನೆ ವಕ್ತಪಡಿಸಿದರು.
ಈ ಮಧ್ಯೆ ಪೋಷಕರನ್ನು ಸಮಾಧಾನಗೊಳಿಸಲು ಪೊಲೀಸರು ಪ್ರಯತ್ನಿಸಿದರು. ಪೊಲೀಸರು ಹಾಗೂ ಪೋಷಕರ ಮಧ್ಯೆ ಮಾತಿನ ಚಕಮಕಿ ಮುಂದುವರೆಯಿತು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ, ಪೊಲೀಸರು ಅಶ್ರುವಾಯು ಪ್ರಯೋಗ ಮಾಡಿದರು. ಈ ವೇಳೆ ಲಘು ಲಾಠಿ ಪ್ರಯೋಗ ಸಹ ನಡೆಯಿತು.
ಘಟನೆಯಲ್ಲಿ ಪೊಲೀಸರು ಹಾಗೂ ಪೋಷಕರ ನಡುವೆ ಕಲ್ಲು ತೂರಾಟವೂ ನಡೆಯಿತು. ಈ ವೇಳೆ ಕೆಲ ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿವೆ. ಗಾಯಗೊಂಡ ಪೊಲೀಸರನ್ನು ಸ್ಥಳೀಯ ಆಸ್ಪತ್ರೆಗ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಜೆಡಿಎಸ್ ಶಾಸಕ ಜಮೀರ್ ಅಹಮ್ಮದ್ ಘಟನಾಸ್ಥಳಕ್ಕೆ ಆಗಮಿಸಿದ್ದು, ಪರಿಸ್ಥಿತಿ ಬಗ್ಗೆ ಅವಲೋಕಿಸಿದರು. ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರ ಮೇಲೆ ಕಲ್ಲುತೂರಾಟ ನಡೆಸದೆ, ಶಾಂತಿ ಕಾಪಾಡುವಂತೆ ಪೋಷಕರಲ್ಲಿ ಮನವಿ ಮಾಡಿದ್ದಾರೆ.
ಗಲಭೆಗೆ ಪ್ರಚೋದಿಸಿದ ಆರೋಪದ ಮೇಲೆ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


