ಸಬ್ಸಿಡಿಗೆ ಹಂತ ಹಂತ ಕತ್ತರಿ ಖಾತ್ರಿ!
ಚಾಲ್ತಿ ಖಾತೆ ಕೊರತೆ ತುಂಬಿಕೊಳ್ಳಲು ಮತ್ತು ವಿತ್ತೀಯ ಕೊರತೆ ತಗ್ಗಿಸಲು ಇರುವ ಸರಳ ಮಾರ್ಗ ಎಂದರೆ ಸಬ್ಸಿಡಿ ಕಡಿತ..

ನವದೆಹಲಿ: ಚಾಲ್ತಿ ಖಾತೆ ಕೊರತೆ ತುಂಬಿಕೊಳ್ಳಲು ಮತ್ತು ವಿತ್ತೀಯ ಕೊರತೆ ತಗ್ಗಿಸಲು ಇರುವ ಸರಳ ಮಾರ್ಗ ಎಂದರೆ ಸಬ್ಸಿಡಿ ಕಡಿತ. ಈಗಾಗಲೇ ಡೀಸೆಲ್ ಮೇಲಿನ ಸಬ್ಸಿಡಿ ಕಡಿತ ಮಾಡಲಾಗಿದೆ. ರಾಸಾಯನಿಕ ಗೊಬ್ಬರಗಳ ಮೇಲಿನ ಸಬ್ಸಿಡಿ ತಗ್ಗಿಸಲಾಗಿದೆ.
ಈಗ ವಿತ್ತ ಸಚಿವರ ಕಣ್ಣು ಈಗ ಅಡುಗೆ ಅನಿಲದ ಮೇಲಿನ (ಎಲ್‍ಪಿಜಿ) ಸಬ್ಸಿಡಿ ಮೇಲೆ ಬಿದ್ದಿದೆ. ಎಲ್‍ಪಿಜಿ ಸಬ್ಸಿಡಿಯೇ ವಾರ್ಷಿಕ ರು46,500 ಕೋಟಿ ರುಪಾಯಿಗಳಷ್ಟಿದೆ. ಇಷ್ಟೆಲ್ಲಾ ಸಬ್ಸಿಡಿಯಲ್ಲಿ ಏಕಾಏಕಿ ತೆಗೆಯುವ ಇರಾದೆ ವಿತ್ತ ಸಚಿವರಿಗೆ ಇಲ್ಲ. ಆದರೆ, ಉಳ್ಳವರಿಗೆ ಸಬ್ಸಿಡಿ ಏಕೆ ಎಂಬ ನೈತಿಕ ಪ್ರಶ್ನೆಯನ್ನು ಈಗಾಗಲೇ ಎತ್ತಿರುವ ವಿತ್ತ ಸಚಿವರು ಬರುವ ದಿನಗಳಲ್ಲಿ ಎಲ್‍ಪಿಜಿ ಸಬ್ಸಿಡಿ ಕಡಿತ ಮಾಡುವುದು ಖಚಿತ. ಈಗ ರಾಜ್ಯದ ಮುಖ್ಯಮಂತ್ರಿ ಮನೆಗೂ ಎಲ್ ಪಿಜಿ ಸಬ್ಸಿಡಿ ದೊರೆಯುತ್ತದೆ.
ಮುಖೇಶ್ ಅಂಬಾನಿ ಮನೆಗೂ ಎಲ್‍ಪಿಜಿ ಸಬ್ಸಿಡಿ ದೊರೆಯುತ್ತಿದೆ. ಅದಕ್ಕೆ ಆದಾಯ ಮಿತಿ ಏನೂ ಇಲ್ಲ. ಸಬ್ಸಿಡಿಯನ್ನು ಬ್ಯಾಂಕ್ ಖಾತೆ ಮೂಲಕ ವರ್ಗಾಯಿಸುವ ಪ್ರಕ್ರಿಯೇ ಆರಂಭವಾಗಿದೆ. ನಿಧಾನವಾಗಿ ವಾರ್ಷಿಕ ಆದಾಯಮಿತಿ ವಿಧಿಸಿ ಸಬ್ಸಿಡಿ ರದ್ದು ಮಾಡುವ ದೂರಾಲೋಚನೆ ಇದೆ. ಉದಾರಣೆಗೆ ವಾರ್ಷಿಕ ರು10 ಲಕ್ಷ ಮತ್ತು ಅದಕ್ಕಿಂತ ಹೆಚ್ಚು ಆದಾಯ ಪಡೆಯುವ ಕುಟುಂಬಗಳಿಗೆ ಎಲ್‍ಪಿಜಿ ಸಬ್ಸಿಡಿ ರದ್ದು ಮಾಡಬಹುದು.
ನಂತರ ವಾರ್ಷಿಕ ರು6 ಲಕ್ಷ ಆದಾಯ ಇರುವ ಕುಟುಂಬಗಳಿಗೂ ಎಲ್‍ಪಿಜಿ ಸಬ್ಸಿಡಿ ರದ್ದು ಮಾಡಬಹುದು. ಶೇ.25ರಷ್ಟು ಕುಟುಂಬಗಳಿಗೆ ನೀಡುತ್ತಿರುವ ಸಬ್ಸಿಡಿ ರದ್ದು ಮಾಡಿದರೂ ಬೊಕ್ಕಸಕ್ಕೆ ವಾರ್ಷಿಕ ಹೆಚ್ಚುಕಮ್ಮಿ ರು11,500 ಕೋಟಿ ಉಳಿಯುತ್ತದೆ. ಇದೇನು ಸಣ್ಣ ಮೊತ್ತವಲ್ಲ. ಈ ಬಜೆಟ್‍ನಲ್ಲೇ ಸಬ್ಸಡಿ ಕಡಿತ ಘೋಷಣೆ ಮಾಡಿದರೂ ಅಚ್ಚರಿ ಪಡಬೇಕಿಲ್ಲ.
ಬಂಡವಾಳ ಹಿಂತೆಗೆತ
ವಿತ್ತೀಯ ಕೊರತೆ ತಗ್ಗಿಸಲು ಮತ್ತೊಂದು ದಾರಿ ಬಂಡವಾಳ ಹಿಂತೆಗೆತ. ಕೇಂದ್ರ ಸರ್ಕಾರದ ಒಡೆತದಲ್ಲಿರುವ ಉದ್ಯಮಗಳಲ್ಲಿನ ಬಂಡವಾಳವನ್ನು ಹಿಂಪಡೆಯುವ ಮೂಲಕ ಕೇಂದ್ರ ಬೊಕ್ಕಸ ತುಂಬಿಕೊಳ್ಳಬಹುದು. ಅಂದರೆ, ತನ್ನ ಒಡೆತನದ ಕಂಪನಿಗಳ ಷೇರುಗಳನ್ನು ಬಂಡವಾಳ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ತನ್ನ ಪಾಲುದಾರಿಕೆ ತಗ್ಗಿಸಿಕೊಳ್ಳಬಹುದು. ಇದರಿಂದ ಸಾರ್ವಜನಿಕರಿಂದ ಹೂಡಿಕೆಯೂ ಆಗುತ್ತದೆ. ಬೊಕ್ಕಸಕ್ಕೆ ಹಣವೂ ಬರುತ್ತದೆ. 2014-15ನೇ ವಿತ್ತೀಯ ವರ್ಷದಲ್ಲಿ ಬಂಡವಾಳ ಹಿಂತೆಗೆತದಿಂದ ರು60,000 ಕೋಟಿ ಸಂಗ್ರಹಿಸುವ ಗುರಿ ಕೇಂದ್ರದ್ದು. ಅದಕ್ಕೆ ಪೂರಕವಾಗಿ ಸೆಬಿ ಸರ್ಕಾರಿ ಸ್ವಾಮ್ಯದ ಕಂಪನಿಗಳಲ್ಲಿ ಸರ್ಕಾರದ ಪಾಲು ಶೇ.75ಕ್ಕಿಂತ ಹೆಚ್ಚಿರಬಾರದು ಎಂಬ ಮಿತಿ ವಿಧಿಸಿದೆ. ಹೀಗಾಗಿ ಬಂಡವಾಳ ಹಿಂತೆಗೆತ ಪ್ರಕ್ರಿಯೇ ಆಯಾಚಿತವಾಗಿ ನಡೆದಿದೆ. ಕೋಲ್ ಇಂಡಿಯಾ, ಎನ್‍ಟಿಪಿಸಿ ಸೇರಿದಂತೆ ನವರತ್ನಗಳಿಂದ ಮತ್ತಷ್ಟು ಷೇರು ಮಾಡಬಹುದು.
ತೈಲ ಸುಂಕ
ತೈಲದ ಮೇಲಿನ ಸುಂಕ ಏರಿಸಿ ಚಾಲ್ತಿ ಖಾತೆ ಕೊರತೆ ತಗ್ಗಿಸುವ ಮಾರ್ಗವನ್ನು ಸರ್ಕಾರ ಕಂಡುಕೊಂಡಿದೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ದರ ಪ್ರತಿ ಬ್ಯಾರೆಲ್ ಗೆ 110 ಡಾಲರ್‍ನಿಂದ 45 ಡಾಲರ್‍ಗೆ ಇಳಿದಿದ್ದಗ ಆ ಪ್ರಮಾಣಕ್ಕೆ ಅನುಗುಣವಾಗಿ ಪೆಟ್ರೊಲ್, ಡೀಸೆಲ್ ಬೆಲೆ ಇಳಿಯಲಿಲ್ಲ. ಅದಕ್ಕೆ ಮುಖ್ಯ ಕಾರಣ ಕೇಂದ್ರ ಸರ್ಕಾರ ತೈಲದ ಮೇಲಿನ ಸುಂಕವನ್ನು ಏರಿಸಿ, ಬೊಕ್ಕಸ ತುಂಬಿಕೊಂಡಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ದರ ಇಳಿಕೆಯಿಂದ ಗ್ರಾಹಕರಿಗಿಂತ ಹೆಚ್ಚಾಗಿ ಕೇಂದ್ರ ಸರ್ಕಾರಕ್ಕೆ ಲಾಭ ಆಯಿತು.
ಈಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ನಿಧಾನ ಗತಿಯಲ್ಲಿ ಏರುತ್ತಿದೆ. ಈಗಾಗಲೇ ಒಂದು ಸುತ್ತು ಪೆಟ್ರೊಲ್, ಡೀಸೆಲ್ ದರ ಏರಿದೆ. ಬರುವ ದಿನಗಳಲ್ಲಿ ಇಳಿದ ಪ್ರಮಾಣಕ್ಕಿಂತ ದರ ಏರಲಿದೆ. ಒಂದು ವೇಳೆ ಕೇಂದ್ರ ಏರಿಸಿದ ಸುಂಕವನ್ನು ಕಡಿತ ಮಾಡಿದರೆ ಮಾತ್ರ ಗ್ರಾಹಕರಿಗೆ ಅನುಕೂಲ. ಕೇಂದ್ರ ಸರ್ಕಾರ ಸುಂಕ ಇಳಿಸಿದರೆ, ಬೊಕ್ಕಸದ ಮೇಲೆ ಭಾರ ಹೆಚ್ಚಾಗಿ ಚಾಲ್ತಿ ಖಾತೆ ಕೊರತೆ ಹಿಗ್ಗುತ್ತದೆ. ಈ ಕಾರಣದಿಂದಾಗಿ ಬರುವ ದಿನಗಳಲ್ಲಿ ತೈಲ ಬೆಲೆ ಏರಿಕೆ ನಿರೀಕ್ಷಿತ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


