ಡಿಡಿಸಿಎ ಹಗರಣ: ಜೇಟ್ಲಿ ವಿರುದ್ಧ ಆಂತರಿಕ ತನಿಖೆಗೆ ಬಿಜೆಪಿ ಹಿರಿಯ ನಾಯಕರ ಒತ್ತಾಯ ಸಾಧ್ಯತೆ
ಬಿಹಾರ ವಿಧಾನಸಭೆ ಚುನಾವಣೆ ಸೋಲಿನ ಬಗ್ಗೆ ಪಕ್ಷದ ನಾಯಕತ್ವದ ವಿರುದ್ಧ ಧ್ವನಿ ಎತ್ತಿದ್ದ ಬಿಜೆಪಿಯ ಹಿರಿಯ ನಾಯಕರು ಇದೀಗ ಕೇಂದ್ರ ವಿತ್ತ ಸಚಿವ...

Published On :
ನವದೆಹಲಿ: ಬಿಹಾರ ವಿಧಾನಸಭೆ ಚುನಾವಣೆ ಸೋಲಿನ ಬಗ್ಗೆ ಪಕ್ಷದ ನಾಯಕತ್ವದ ವಿರುದ್ಧ ಧ್ವನಿ ಎತ್ತಿದ್ದ ಬಿಜೆಪಿಯ ಹಿರಿಯ ನಾಯಕರು ಇದೀಗ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರ ಆರೋಪದ ಬಗ್ಗೆ ಆಂತರಿಕ ತನಿಖೆ ನಡೆಸುವಂತೆ ಒತ್ತಾಯಿಸುವ ಸಾಧ್ಯತೆ ಇದೆ.
ಈ ಸಂಬಂಧ ಇಂದು ಬಿಜೆಪಿ ಹಿರಿಯ ನಾಯಕರಾದ ಎಲ್.ಕೆ.ಆಡ್ವಾಣಿ, ಮುರಳಿ ಮನೋಹರ್ ಜೋಶಿ, ಶಾಂತ ಕುಮಾರ್ ಹಾಗೂ ಯಶವಂತ್ ಸಿನ್ಹಾ ಅವರು ಸಭೆ ಸೇರಿ, ಜೇಟ್ಲಿ ವಿರುದ್ಧ ಆರೋಪ ಹಾಗೂ ಬಿಜೆಪಿ ಸಂಸದ ಕೀರ್ತಿ ಆಜಾದ್ ಅಮಾನತು ಕುರಿತು ಚರ್ಚಿಸಿದ್ದಾರೆ. ಅಲ್ಲದೆ ಈ ಎರಡೂ ವಿಷಯಗಳನ್ನು ಪಕ್ಷದ ವೇದಿಕೆಯಲ್ಲಿ ಪ್ರಸ್ತಾಪಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಇನ್ನು ಬಿಜೆಪಿ ಹಿರಿಯ ನಾಯಕರ ಸಭೆ ನಂತರ ಬಿಜೆಪಿ ಹಿರಿಯ ನಾಯಕ ಹಾಗೂ 'ಮಾರ್ಗದರ್ಶಕ ಮಂಡಳಿ' ಸದಸ್ಯ ಮುರಳಿ ಮನೋಹರ್ ಜೋಶಿ ಅವರನ್ನು ಭೇಟಿ ಮಾಡಿದ ಕೀರ್ತಿ ಆಜಾದ್ ಅವರು, ತಮ್ಮ ಅಮಾನತು ವಿಚಾರ ಹಾಗೂ ಜೇಟ್ಲಿ ಡಿಡಿಸಿಎ ಹಗರಣದಲ್ಲಿ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದರು.
ಆಡ್ವಾಣಿ, ಜೋಶಿ, ಅಟಲ್ ಬಿಹಾರಿ ವಾಜಪೇಯಿ, ಪ್ರಧಾನಿ ನರೇಂದ್ರ ಮೋದಿ, ಹಾಗೂ ಗೃಹ ಸಚಿವ ರಾಜನಾಥ್ ಸಿಂಗ್ ಅವರು 'ಮಾರ್ಗದರ್ಶಕ ಮಂಡಳಿ'ಯ ಸದಸ್ಯರಾಗಿದ್ದಾರೆ.
ಜೋಶಿ ಅವರ ನಿವಾಸದಲ್ಲಿ ಆಡ್ವಾಣಿ ಸೇರಿದಂತೆ ಬಿಜೆಪಿ ಹಿರಿಯ ನಾಯಕರು ಸುಮಾರು ಒಂದು ಗಂಟೆಗಳ ಕಾಲ ಸಭೆ ನಡೆಸಿದರು. ಈ ವೇಳೆ, ಬಿಹಾರ ಚುನಾವಣೆ ಸೋಲಿನ ನಂತರವೂ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪಾಠ ಕಲಿತಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು ಎನ್ನಲಾಗಿದೆ. ಅಲ್ಲದೆ ಆಜಾದ್ ಅಮಾನತು ಬಗ್ಗೆಯೂ ಬಿಜೆಪಿ ಹಿರಿಯ ನಾಯಕರು ಚರ್ಚಿಸಿದರು ಎಂದು ಮೂಲಗಳು ತಿಳಿಸಿವೆ.
ಡಿಡಿಸಿಎ ಹಗರಣ ಸಂಬಂಧ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ವಿರುದ್ಧ ಬಹಿರಂಗ ಆರೋಪ ಮಾಡಿದ್ದ ಕೀರ್ತಿ ಆಜಾದ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಅವರನ್ನು ನಿನ್ನೆ ಪಕ್ಷದಿಂದ ಅಮಾನತುಗೊಳಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


