ಡಿನೋಟಿಫಿಕೇಷನ್ ಪ್ರಕರಣ: ಬಿಎಸ್‍ವೈ, ಡಿಕೆಶಿಗೆ ನಿರಾಳ
ಅಕ್ರಮ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಭೀತಿಯಲ್ಲಿದ್ದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಶುಕ್ರವಾರ ಬಿಗ್ ರಿಲೀಫ್ ದೊರೆತಿದ್ದು...

ಬೆಂಗಳೂರು: ಅಕ್ರಮ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಭೀತಿಯಲ್ಲಿದ್ದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಬಿಗ್ ರಿಲೀಫ್ ದೊರೆತಿದ್ದು, ಪ್ರಕರಣ ರದ್ದು ಮಾಡುವಂತೆ ಹೈಕೋರ್ಟ್ ಶುಕ್ರವಾರ ಆದೇಶ ಹೊರಡಿಸಿದೆ.
ಅಕ್ರಮ ಡಿ-ನೋಟಿಫಿಕೇಷನ್ ಪ್ರಕರಣಗಳ ಸಂಬಂಧ ಮಹಾ ಲೇಖಪಾಲ (ಸಿಎಜಿ) ವರದಿ ಆಧರಿಸಿ ಲೋಕಾಯುಕ್ತ ಪೊಲೀಸರು ತಮ್ಮ ವಿರುದ್ಧ ದಾಖಲಿಸಿದ್ದ ಪ್ರಥಮ ತನಿಖಾ ವರದಿಗಳನ್ನು (ಎಫ್ಐಆರ್) ರದ್ದುಪಡಿಸುವಂತೆ ಕೋರಿ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆಯನ್ನು ಪೂರ್ಣಗೊಳಿಸಿದ ಹೈಕೋರ್ಟ್ ಏಕ ಸದಸ್ಯಪೀಠ ಇಂದು ತೀರ್ಪು ಪ್ರಕಟಿಸಿದ್ದು, ಡಿನೋಟಿಫಿಕೇಷನ್ ಪ್ರಕರಣವನ್ನು ರದ್ದು ಮಾಡುವಂತೆ ಆದೇಶ ನೀಡಿದೆ.
ಬೆಂಗಳೂರು ಪೂರ್ವ ತಾಲೂಕು ಕೆ.ಆರ್.ಪುರ ಹೋಬಳಿಯ ಬೆನ್ನಿಗಾನಹಳ್ಳಿಯಲ್ಲಿನ ಸರ್ವೆ ನಂ.50/2ರಲ್ಲಿನ 4 ಎಕರೆ 20 ಗುಂಟೆ ಜಮೀನನ್ನು ಡಿ.ಕೆ. ಶಿವಕುಮಾರ್ ನಗರಾಭಿವೃದ್ಧಿ ಸಚಿವರಾಗಿದ್ದಾಗ ಖರೀದಿಸಿದ್ದರು. ನಂತರ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ಎಲ್ಲ ದಾಖಲೆಗಳನ್ನು ಕಂದಾಯ ಇಲಾಖೆಯ ಅಧಿಕಾರಿಗಳಿಂದ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದರು.
ಬಳಿಕ ಯಡಿಯೂರಪ್ಪ ತಮ್ಮ ಅಧಿಕಾರಾವಧಿಯಲ್ಲಿ ಡಿ.ಕೆ.ಶಿವಕುಮಾರ್ ಅವರ ಮನವಿ ಮೇರೆಗೆ ಈ ಜಾಗವನ್ನು ಅಕ್ರಮವಾಗಿ ಡಿ-ನೋಟಿಫಿಕೇಷನ್ ಮಾಡಿಸಿದ್ದಾರೆ ಎಂದು ಆರೋಪಿಸಿ ಟಿ.ಜೆ. ಅಬ್ರಾಹಾಂ ಮತ್ತು ಕಬ್ಬಾಳೆಗೌಡ ಎಂಬುವರು ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಸಿಎಜಿ ವರದಿ ಆಧರಿಸಿ ಲೋಕಾಯುಕ್ತ ಪೊಲೀಸರು ಯಡಿಯೂರಪ್ಪ ವಿರುದ್ಧ 15 ಎಫ್ಐಆರ್ ದಾಖಲಿಸಿದ್ದರು. ಈ ಹಿಂದೆ ಮೂರು ಎಫ್ಐಆರ್‍ಗಳ ರದ್ದು ಕೋರಿ ಯಡಿಯೂರಪ್ಪ ಸಲ್ಲಿಸಿದ್ದರು. ಹೈಕೋರ್ಟ್ ಆ ಮೂರು ಎಫ್ಐಆರ್‍ಗಳಿಗೆ ಮಧ್ಯಂತರ ತಡೆ ನೀಡಿತ್ತು. ನಂತರ 12 ಎಫ್ಐಆರ್ ರದ್ದು ಕೋರಿ ಹೊಸದಾಗಿ ಅರ್ಜಿ ಸಲ್ಲಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


