ಕರ್ನಾಟಕಕ್ಕೆ 1,258 ಕೋಟಿ ಅಮೃತ
ಕರ್ನಾಟಕದ 27ನಗರಗಳು ಸೇರಿದಂತೆ ದೇಶದ 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 474 ನಗರಗಳಲ್ಲಿ ರು.19,170 ಕೋಟಿ ವೆಚ್ಚದ ಅಮೃತ್ ಯೋಜನೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ...

ನವದೆಹಲಿ: ಕರ್ನಾಟಕದ 27ನಗರಗಳು ಸೇರಿದಂತೆ ದೇಶದ 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 474 ನಗರಗಳಲ್ಲಿ ರು.19,170 ಕೋಟಿ ವೆಚ್ಚದ ಅಮೃತ್ ಯೋಜನೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ.
ನಗರಾಭಿವೃದ್ಧಿ ಕಾರ್ಯದರ್ಶಿ ಮಧುಸೂದನ್ ಪ್ರಸಾದ್ ನೇತೃತ್ವದಲ್ಲಿ ನಡೆದ ಅಂತರ್ಸಚಿವರ ಉನ್ನತ ಸಮಿತಿ ಮಂಗಳವಾರ ಕರ್ನಾಟಕ ಮತ್ತು ಉತ್ತರ ಪ್ರದೇಶದ ಅಮೃತ್ ವಾರ್ಷಿಕ ಕ್ರಿಯಾಯೋಜನೆಗೆ ಒಪ್ಪಿಗೆ ನೀಡಿದೆ. ಕರ್ನಾಟಕದಲ್ಲಿ 27 ಮತ್ತು ಉತ್ತರಪ್ರದೇಶದಲ್ಲಿ 61 ನಗರಗಳು ಅಟಲ್ ಮಿಷನ್ ವ್ಯಾಪ್ತಿಗೆ ಬರುತ್ತವೆ. 201516ರ ಅವಧಿಗೆ ಅಮೃತ್ ಯೋಜನೆಯಡಿ ಕರ್ನಾಟಕದ ನಗರಗಳ ಅಭಿವೃದ್ಧಿಗೆ ರು.1,258 ಕೋಟಿ ಬಿಡುಗಡೆಗೆ ಸಮಿತಿ ಒಪ್ಪಿಗೆ ನೀಡಿದೆ. ಈ ಪೈಕಿ ರು.552 ಕೋಟಿಯನ್ನು ನೀರು ಪೂರೈಕೆಗೆ ರು.613 ಕೋಟಿಯನ್ನು ಚರಂಡಿ ಯೋಜನೆಗೆ, ಹಸಿರು ಪ್ರದೇಶಗಳು ಮತ್ತು ಉದ್ಯಾನಗಳಿಗೆ ರು.28 ಕೋಟಿ, ನಗರ ಸಾರಿಗೆಗೆ ರು.18 ಕೋಟಿ ಮೀಸಲಿಡಲಾಗಿದೆ. ಕರ್ನಾಟಕದಲ್ಲಿ 27ನಗರಗಳಲ್ಲಿ ಅಮೃತ್ ಜಾರಿಗೆ ಬರಲಿದ್ದು, ಯೋಜನಾ ವೆಚ್ಚದ ಪೈಕಿ ಶೇ.30ರಿಂದ 47ರಷ್ಟನ್ನು ರಾಜ್ಯವೇ ಭರಿಸಬೇಕು ಎಂದಿದೆ.
ಜತೆಗೆ, ರಾಜ್ಯವು ವೆಚ್ಚದಲ್ಲಿ ತನ್ನ ಪಾಲನ್ನು ಹೆಚ್ಚಿಸುವ ಮೂಲಕ ಮುನ್ಸಿಪಲ್‍ಗಳ ಹೊರೆ ಕಡಿಮೆ ಮಾಡುವಂತೆಯೂ ಸಮಿತಿ ಸೂಚಿಸಿದೆ. ಅಟಲ್ ಮಿಷನ್ ಯೋಜನೆಯಡಿ ಉತ್ತರಪ್ರದೇಶಕ್ಕೆ 201516ರ ಅವಧಿಗೆ ರು.4,646 ಕೋಟಿ ಬಿಡುಗಡೆ ಸಮಿತಿ ಒಪ್ಪಿಗೆ ನೀಡಿದೆ. ಅಮೃತ್ ಯೋಜನೆಯ ಪ್ರಕಾರ, 10 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯಿರುವ ನಗರಗಳಿಗೆ ಒಟ್ಟು ಯೋಜನಾ ವೆಚ್ಚದ ಶೇ.50 ಅನ್ನು ಕೇಂದ್ರ ಸರ್ಕಾರವೇ ಭರಿಸಲಿದೆ. ಜನಸಂಖ್ಯೆಯು 10 ಲಕ್ಷ ಮೀರಿದ್ದರೆ, ಅಂತಹ ನಗರಗಳಿಗೆ ಯೋಜನಾ ವೆಚ್ಚದ ಮೂರನೇ ಒಂದರಷ್ಟನ್ನು ಕೇಂದ್ರ ನೀಡಲಿದೆ.
ರಾಜ್ಯದಲ್ಲಿ ಯಾವ್ಯಾವ ನಗರಗಳು?
ಬೆಂಗಳೂರು (ರು.173 ಕೋಟಿ), ರಾಯಚೂರು (ರು.77 ಕೋಟಿ), ಹುಬ್ಬಳ್ಳಿ-ಧಾರವಾಡ(ರು.75 ಕೋಟಿ), ಬಳ್ಳಾರಿ (ರು.72 ಕೋಟಿ), ಗುಲ್ಬರ್ಗ (ರು.66 ಕೋಟಿ), ಬೆಳಗಾವಿ (ರು.60 ಕೋಟಿ), ಬಿಜಾಪುರ (ರು.60 ಕೋಟಿ), ತುಮಕೂರು (ರು.53 ಕೋಟಿ), ಭದ್ರಾವತಿ (ರು.51ಕೋಟಿ), ಮೈಸೂರು (ರು.50 ಕೋಟಿ), ದಾವಣಗೆರೆ ( ರು.50 ಕೋಟಿ), ಶಿವಮೊಗ್ಗ (ರು.48 ಕೋಟಿ), ಗದಗ-ಬೆಟಗೇರಿ(ರು.45 ಕೋಟಿ), ಬೀದರ್ (ರು.42 ಕೋಟಿ), ಹೊಸಪೇಟೆ (ರು.38 ಕೋಟಿ), ಚಿತ್ರದುರ್ಗ (ರು.34 ಕೋಟಿ), ಹಾಸನ (ರು.32 ಕೋಟಿ), ಬಾಗಲಕೋಟೆ (ರು.31 ಕೋಟಿ), ರಾಣೆಬೆನ್ನೂರು (ರು.25 ಕೋಟಿ), ಚಿಕ್ಕಮಗಳೂರು (ರು.24 ಕೋಟಿ), ಕೋಲಾರ (ರು.18 ಕೋಟಿ), ಗಂಗಾವತಿ (ರು.16 ಕೋಟಿ), ರಾಬರ್ಟ್‍ಸನ್‍ಪೇಟೆ(ರು.14 ಕೋಟಿ), ಬದಾಮಿ (ರು.12 ಕೋಟಿ), ಮಂಗಳೂರು (ರು.3.25 ಕೋಟಿ).
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


