ಐಶಾರಾಮಿ ಕಾರು ನೋಂದಣಿ ರದ್ದು
ದೆಹಲಿಯಲ್ಲಿ 2000 ಸಿಸಿಗಿಂತ ಮೇಲಿನ ಡೀಸೆಲ್ ಎಸ್‍ಯುವಿಗಳು ಮತ್ತು ಕಾರುಗಳ ನೋಂದಣಿ ರದ್ದು ಮಾಡುವ ಮಹತ್ವದ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ಒಪ್ಪಿಗೆ ಸೂಚಿಸಿದೆ...

ನವದೆಹಲಿ: ದೆಹಲಿಯಲ್ಲಿ 2000 ಸಿಸಿಗಿಂತ ಮೇಲಿನ ಡೀಸೆಲ್ ಎಸ್‍ಯುವಿಗಳು ಮತ್ತು ಕಾರುಗಳ ನೋಂದಣಿ ರದ್ದು ಮಾಡುವ ಮಹತ್ವದ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ಒಪ್ಪಿಗೆ ಸೂಚಿಸಿದೆ.
ಅಷ್ಟೇ ಅಲ್ಲ, ``ಶ್ರೀಮಂತರು ವಾತಾವರಣವನ್ನು ಮಲಿನಗೊಳಿಸುತ್ತಾ ಎಸ್‍ಯುವಿಗಳಲ್ಲಿ ಸಂಚರಿಸುವ ಅಗತ್ಯವಿಲ್ಲ'' ಎಂದೂ ಹೇಳಿದೆ. ಡೀಸೆಲ್ ಕಾರುಗಳನ್ನು ನಿಷೇಧಿಸಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಹೊರಡಿಸಿದ ಆದೇಶದ ವಿರುದ್ಧ ಕಾರು ಡೀಲರ್ಗಳು ಸಲ್ಲಿಸಿದ್ಧ ಅರ್ಜಿಗಳ ವಿಚಾರಣೆ ವೇಳೆ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಬುಧವಾರ ಈ ಬಗೆಗಿನ ವಿಸ್ತøತ ಆದೇಶ ಹೊರಬೀಳಲಿದೆ. ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಟಿ ಎಸ್ ಠಾಕೂರ್, ``ವಾಯುಮಾಲಿನ್ಯದಿಂದ ಜನರ ಬದುಕೇ ದುಸ್ತರವಾಗಿದೆ. ಆದರೆ, ನೀವು ಕಾರುಗಳ ಮಾರಾಟದಲ್ಲೇ ಆಸಕ್ತಿ ವಹಿಸುತ್ತಿದ್ದೀರಿ'' ಎಂದು ಡೀಲರ್‍ಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಟ್ರಕ್‍ಗಳಿಗೂ ನಿಷೇಧ: 2005ಕ್ಕಿಂತ ಹಿಂದೆ ನೋಂದಣಿಯಾದ ಟ್ರಕ್ಗಳ ದೆಹಲಿ ಪ್ರವೇಶ ನಿಷೇಧಕ್ಕೂ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ರಾಷ್ಟ್ರ ರಾಜಧಾನಿ ಪ್ರವೇಶಿಸುವ ಟ್ರಕ್ಗಳ ಹಸಿರು ತೆರಿಗೆ ಹೆಚ್ಚಳ ಮಾಡುವ ಪ್ರಸ್ತಾಪಕ್ಕೂ ಒಪ್ಪಿಗೆ ಸೂಚಿಸಿದೆ. ಅದರಂತೆ, ಲಘು ವಾಣಿಜ್ಯ ವಾಹನಗಳ ಪರಿಸರ ಪರಿಹಾರ ಸೆಸ್ ಅನ್ನು ರು.700 ರಿಂದ ರು.1400ಕ್ಕೆ, ಭಾರಿ ವಾಣಿಜ್ಯ ವಾಹನಗಳ ಸೆಸ್ ಅನ್ನು ರು.1300ರಿಂದ ರು.2600ಕ್ಕೆ ಏರಿಕೆ ಮಾಡಲಾಗಿದೆ. ಕೇವಲ ಸಿಎನ್‍ಜಿ ಆಧರಿತ ಟ್ಯಾಕ್ಸಿಗಳಷ್ಟೇ ದೆಹಲಿಯಲ್ಲಿ ಸಂಚರಿಸುವಂತೆ ಕ್ರಮ ಕೈಗೊಳ್ಳಿ. ದೆಹಲಿ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಯೂರೋ 4 ವಾಹನಗಳಿಗೆ ಹೆಚ್ಚಿನ ಉತ್ತೇಜನ ನೀಡಿ. ನಿರ್ಮಾಣ ಕಾಮಗಾರಿ ನಡೆಯುವ ಪ್ರದೇಶಗಳಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ ಎಂದೂ ಸುಪ್ರೀಂ ಸೂಚಿಸಿದೆ.
ಇದೇ ವೇಳೆ, ದೆಹಲಿ ಸರ್ಕಾರದ ಸಮಬೆಸ ಸಂಖ್ಯೆಯ ಯೋಜನೆಗೆ ಬೆಂಬಲ ವ್ಯಕ್ತಪಡಿಸಿರುವ ನ್ಯಾಯಾಲಯ, ``ಈ ನಿಯಮದಿಂದ ಸಹಾಯವಾಗುವುದಾದರೆ ನಿಶ್ಚಿಂತೆಯಿಂದ ಜಾರಿ ಮಾಡಿ. ಆದರೆ, ಮೊದಲು ಪ್ರಾಯೋಗಿಕವಾಗಿ ಅನುಷ್ಠಾನ ಮಾಡಿ, ನಂತರ ಭವಿಷ್ಯದ ಕಾರ್ಯಯೋಜನೆ ಬಗ್ಗೆ ನಿರ್ಧರಿಸಿ'' ಎಂದಿದೆ. ನೀವೇ ನಿಯಮಾವಳಿಗಳನ್ನು ರಚಿಸುತ್ತೀರಿ. ನೀವೇ ಆಡಳಿತ ನಡೆಸುತ್ತೀರಿ. ಹೀಗಿರುವಾಗ ದೆಹಲಿಯ ಮಾಲಿನ್ಯವನ್ನು ನಿಯಂತ್ರಿಸಿ, ನೀವೇ ಅದರ ಕ್ರೆಡಿಟ್ ತೆಗೆದುಕೊಳ್ಳಬಾರದೇಕೆ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಪ್ರಶ್ನಿಸಿದೆ.
ನಿಲುವು ಸ್ಪಷ್ಟಪಡಿಸಿ
ಈ ನಡುವೆ, ಡೀಸೆಲ್ ಕಾರುಗಳ ನಿಷೇಧ ಕುರಿತು ಬುಧವಾರ ನಿಲುವು ಸ್ಪಷ್ಟಪಡಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಮಂಗಳವಾರ ಸೂಚಿಸಿದೆ. ಕಳೆದ ವಾರವಷ್ಟೇ ಹಸಿರು ನ್ಯಾಯಾಧಿಕರಣವು ದೆಹಲಿಯಲ್ಲಿ ಹೊಸ ಡೀಸೆಲ್ ವಾಹನಗಳಿಗೆ ನೋಂದಣಿ ಮಾಡುವಂತಿಲ್ಲ ಎಂದು ಆದೇಶಿಸಿತ್ತು. ಜತೆಗೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೂ ದೆಹಲಿಯಲ್ಲಿ ಡೀಸೆಲ್ ಕಾರುಗಳನ್ನು ಕೊಳ್ಳಬಾರದು. ಜ.6ರ ವಿಚಾರಣೆವರೆಗೆ ಈ ಆದೇಶ ಜಾರಿಯಲ್ಲಿರುತ್ತದೆ ಎಂದೂ ಹೇಳಿತ್ತು. ದೆಹಲಿಯಲ್ಲಿ ನೋಂದಣಿಯಾಗುವ ಕಾರುಗಳ ಪೈಕಿ ಸುಮಾರು ಶೇ23ರಷ್ಟು ಡೀಸೆಲ್ ಕಾರುಗಳೇ ಆಗಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


