ಪ್ರಧಾನ ಸುದ್ದಿ

ಸಿನಿಮಾ ಕತೆಯಲ್ಲ, ಜೀವನ: ಪಾಕ್ ನಲ್ಲೊಂದು 'ಭಾಯಿಜಾನ್' ನೈಜ ಕತೆ

ಪಾಕಿಸ್ತಾನದಲ್ಲಿ ಸಿಲುಕಿರುವ ಭಾರತ ಮೂಲದ 22ರ ಹರೆಯದ ಯುವತಿಗೆ ಮಾತು ಬರುವುದಿಲ್ಲ. ಆಕೆಯ ಕುಟುಂಬ ಎಲ್ಲಿದೆ ಎಂಬುದೂ ಆಕೆಗೆ ಗೊತ್ತಿಲ್ಲ....

ಸಿನಿಮಾ ಕತೆಯಲ್ಲ, ಜೀವನ: ಪಾಕ್ ನಲ್ಲೊಂದು 'ಭಾಯಿಜಾನ್' ನೈಜ ಕತೆ
ಅನ್ಸಾರ್ ಬರ್ನೀ ಜತೆ ಗೀತಾ (ಕೃಪೆ: ಬರ್ನೀ ಅವರ ಫೇಸ್ ಬುಕ್ ಖಾತೆಯಿಂದ)
Published On :

ನವದೆಹಲಿ: ಬಜರಂಗೀ ಭಾಯಿಜಾನ್ ಸಿನಿಮಾದಲ್ಲಿ ಭಾರತದಲ್ಲಿ ಕಳೆದುಹೋಗುವ ಪಾಕಿಸ್ತಾನ ಮೂಕ ಬಾಲಕಿಯನ್ನು ನಾಯಕ ಅವಳ ಕುಟುಂಬದೊಂದಿಗೆ ಒಂದಾಗುವಂತೆ ಮಾಡಲು ಹರಸಾಹಸ ಪಡುವುದನ್ನು ನೋಡಿದ್ದೇನೆ. ಪಾಕಿಸ್ತಾನಕ್ಕೆ ಹೋಗಲು ಪಾಸ್ ಪೋರ್ಟ್ ಇಲ್ಲ, ಇತ್ತ ಬಾಲಕಿಗೆ ಮಾತು ಬರುವುದಿಲ್ಲ. ಹನುಮಾನ್ ಭಕ್ತನಾದ ನಾಯಕನಿಗೆ ಹೇಗಾದರೂ ಮಾಡಿ ಆ ಬಾಲಕಿಯನ್ನು ಅವಳ ಕುಟುಂಬಕ್ಕೆ ಒಪ್ಪಿಸಿಬೇಕೆಂಬ ಜವಾಬ್ದಾರಿ. ಆ ಜವಾಬ್ದಾರಿಯನ್ನು ಆತ ಹೇಗೆ ಸಮರ್ಥವಾಗಿ ನಿಭಾಯಿಸಿದ ಎಂಬುದು ಸಿನಿಮಾದ ಕಥೆ. ಪ್ರಸ್ತುತ ಸಿನಿಮಾ ವಿಶ್ವದಾದ್ಯಂತ ಸದ್ದು ಮಾಡಿದ್ದು, ಬಾಕ್ಸ್ ಆಫೀಸಿನಲ್ಲಿ ಭಾರೀ ಗಳಿಕೆ ಮಾಡಿದೆ.ಇದಕ್ಕೆ ವ್ಯತಿರಿಕ್ತ ಎಂಬಂತೆ, ಪಾಕಿಸ್ತಾನದಲ್ಲಿ ಇಂಥದ್ದೇ ಒಂದು ನೈಜ ಕತೆಯ ಬಗ್ಗೆ ವರದಿಯಾಗಿದೆ. ಪಾಕಿಸ್ತಾನದಲ್ಲಿ ಸಿಲುಕಿರುವ ಭಾರತ ಮೂಲದ 22ರ ಹರೆಯದ ಯುವತಿಗೆ ಮಾತು ಬರುವುದಿಲ್ಲ. ಆಕೆಯ ಕುಟುಂಬ ಎಲ್ಲಿದೆ ಎಂಬುದೂ ಆಕೆಗೆ ಗೊತ್ತಿಲ್ಲ. ಹೀಗಿರುವಾಗ ಆಕೆಯನ್ನು ಭಾರತಕ್ಕೆ ಕರೆ ತಂದು ಕುಟುಂಬದವರನ್ನು ಭೇಟಿ ಮಾಡಿಸುವರ್ಯಾರು? ಆಕೆ ಆ ಭಾಯಿಜಾನ್ ಗಾಗಿ ಕಾಯುತ್ತಿದ್ದಾಳೆ!
 

ಆ ಯುವತಿ ಇದೀಗ ಪಾಕ್‌ನ ಸೇವಾ ಸಂಸ್ಥೆಯೊಂದರಲ್ಲಿದ್ದಾಳೆ. ಈಕೆಯ ಪಾಲನೆ ಪೋಷಣೆಯ ಜವಾಬ್ದಾರಿ ವಹಿಸಿಕೊಂಡಿರುವ ಕರಾಚಿಯ 'ಈದಿ ಚಾರಿಟಿ'ಯ ಫೈಸಲ್ ಈದಿ ಹೇಳುವಂತೆ, ಪಂಜಾಬ್ ನ ರೇಂಜರ್ಗಳು 14 ವರ್ಷದ ಹಿಂದೆ ಆಕೆಯನ್ನು ಲಾಹೋರ್ ನ ಈದಿ ಸೇವಾಸಂಸ್ಥೆಯ ಸುಪರ್ದಿಗೊಪ್ಪಿಸಿದ್ದರು. ಈದಿ ಸೆಂಟರ್ ನಲ್ಲಿ ಕೆಲವು ದಿನ ಕಳೆದ ನಂತರ ಆಕೆಯನ್ನು ಲಾಹೋರ್ ನಿಂದ ಕರಾಚಿಗೆ ಕರೆತರಲಾಯಿತು. ಅಲ್ಲಿ ಸಾಮಾಜಿಕ ಕಾರ್ಯಕರ್ತೆ ಬಿಲ್ಕೀಸ್  ಈದಿ ಈಕೆಗೆ ಪ್ರೀತಿಯಿಂದ 'ಗೀತಾ'ಎಂದು ಹೆಸರಿಟ್ಟಿದ್ದಾರೆ. ಕಳೆದ ಹದಿನೈದು ವರ್ಷಗಳಿಂದ ಪಾಕ್‌ನಲ್ಲೇ ಇರುವ  ಗೀತಾಳಿಗೆ ಮಾತು ಬಾರದ ಕಾರಣ ತನ್ನ ಹೆಸರನ್ನಾಗಲೀ, ವಿಳಾಸವನ್ನಾಗಲೀ ತಿಳಿಸಲು ಸಾಧ್ಯವಾಗಿಲ್ಲ. ವಿಶೇಷವೆಂದರೆ 2012ರಲ್ಲಿ ಈಕೆಯನ್ನು ಭಾರತಕ್ಕೆ ತಲುಪಿಸುವ ಸಲುವಾಗಿ ಫೈಸಲ್  ಅವರು ಭಾರತಕ್ಕೆ ಬಂದಿದ್ದರು. ಈಕೆಯ ಫೋಟೊ ಹಾಗೂ ಸಿಕ್ಕಿದ ಸ್ಥಳವನ್ನು ಪೊಲೀಸರಿಗೆ ತಿಳಿಸಿ ಗೀತಾಳನ್ನು ತವರಿಗೆ ತಲುಪಿಸುವ ಪ್ರಯತ್ನ ವನ್ನೂ ಮಾಡಿದರು. ಆದರೆ,  ಅವರು ಅಂದುಕೊಂಡ ಕೆಲಸ ಇದುವರೆಗೂ ಸಾಧ್ಯವಾಗಿಲ್ಲ.

''ಹದಿನೈದು ವರ್ಷಗಳ ಹಿಂದೆ ರೈಲಿನ ಮೂಲಕ ಲಾಹೋರ್ ತಲುಪಿದ್ದ ಗೀತಾಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಮಾತು ಬಾರದ ಕಾರಣ ಈಕೆಯನ್ನು ಬಾಲ ಮಂದಿರವೊಂದರಲ್ಲಿ ಇರಿಸಲಾಗಿತ್ತು. ಆದರೆ, ಆಕೆ ಅಲ್ಲಿಂದ ತಪ್ಪಿಸಿಕೊಂಡು ಹೋಗಲು ಬಹಳ ಸಾರಿ ಪ್ರಯತ್ನ ಮಾಡಿದ್ದಳು. ಇದರಿಂದ ಬೇಸತ್ತಿದ್ದ ಅಲ್ಲಿನ ಸಿಬ್ಬಂದಿ ಗೀತಾಳನ್ನು ನಮ್ಮ ಸಂಸ್ಥೆಗೆ ಒಪ್ಪಿಸಿದರು. ಸಂಸ್ಥೆಯ ವಾತಾವರಣಕ್ಕೆ ಅವಳು ಒಗ್ಗದ ಕಾರಣ ನಮ್ಮ ಮನೆಯಲ್ಲಿ ಸಾಕುತ್ತಿದ್ದೇವೆ,'' ಎಂದು ಬಿಲ್ಕೀಸ್  ತಿಳಿಸಿದ್ದಾರೆ.
 
ಪ್ರಾರ್ಥಿಸುವಾಗ ಅಳುತ್ತಾಳೆ : ''ಈಕೆ ಹಿಂದಿಯಲ್ಲಿ ಏನೇನೋ ಬರೆದು ತೋರಿಸುತ್ತಾಳೆ. ಅದು ಇಲ್ಲಿ ಯಾರಿಗೂ ಅರ್ಥವಾಗುವುದಿಲ್ಲ. ಅದೂ ಅಲ್ಲದೆ ಕೈ ಸನ್ನೆ ಮೂಲಕ ತಾನು ತನ್ನ ಮನೆಗೆ ಹೋಗಬೇಕೆಂದು ಹೇಳುತ್ತಾಳೆ. ಒಮ್ಮೊಮ್ಮೆ ದೇವರನ್ನು ಪ್ರಾರ್ಥಿಸುವಾಗ ಅತ್ತುಬಿಡುತ್ತಾಳೆ. ಆಕೆ ತನ್ನ ದುಪಟ್ಟಾದಿಂದ ತಲೆ ಮುಚ್ಚಿಕೊಳ್ಳುವುದನ್ನು ನೋಡಿದರೆ ಪಂಜಾಬ್‌ನ ಯಾವುದೋ ಹಳ್ಳಿಯ ಸಂಪ್ರದಾಯಸ್ಥ  ಕುಟುಂಬದ ಹುಡುಗಿ ಇರಬಹುದು,'' ಎಂದು ಬಲ್ಕೀಸ್ ಅಭಿಪ್ರಾಯಪಡುತ್ತಾರೆ. ಕರಾಚಿಯಲ್ಲಿರುವ ಗೀತಾ ಇತ್ತೀಚೆಗೆ ರಂಜಾನ್ ಆಚರಿಸಿದ್ದಳು. ಹಿಂದೂ ದೇವರುಗಳ ಜತೆಯಲ್ಲಿ ಆಕೆ ಅಲ್ಲಾನನ್ನೂ ಪ್ರಾರ್ಥಿಸಲು ಶುರು ಮಾಡಿದ್ದಾಳೆ. ತಾನು ತನ್ನ ಮನೆಯವರನ್ನು ಮತ್ತೆ ಸೇರಬೇಕೆಂಬುದೇ ಆಕೆಯ ಕೋರಿಕೆಯಾಗಿದೆ.

ಸಾಮಾಜಿಕ ತಾಣದಲ್ಲಿ ಮೊರೆ: ಕಳೆದ ವರ್ಷ ಭಾರತದ ರಾಯಭಾರಿ ಕಚೇರಿಯಿಂದ ಅಧಿಕಾರಿಗಳು ಬಂದು ಆಕೆಯ ಫೋಟೋ ತೆಗೆದುಕೊಂಡು ಹೋಗಿದ್ದರು. ಮತ್ತೆ ಅವರು ವಾಪಸ್ ಬರಲೇ ಇಲ್ಲ. ಭಾರತದಿಂದ ಬಂದ ಪತ್ರಕರ್ತರೊಬ್ಬರು ಸಂದರ್ಶನ ನಡೆಸಿದ್ದರೂ, ಅವರಿಗೆ ಅವಳ ಕುಟುಂಬದವರನ್ನು ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ.
ಈಗ ಪಾಕ್ನ ಮಾನವ ಹಕ್ಕುಗಳ ರಕ್ಷಣಾ ಕಾರ್ಯಕರ್ತ ಹಾಗೂ ಮಾಜಿ ಸಚಿವ ಅನ್ಸಾರ್ ಬರ್ನೀ ಗೀತಾಳ ಸಹಾಯಕ್ಕಾಗಿ ಫೇಸ್ ಬುಕ್ನ ಮೊರೆ ಹೋಗಿದ್ದಾರೆ.
ಮೂರು ವರ್ಷಗಳ ಹಿಂದೆ  ಬರ್ನೀ ಅವರು ಭಾರತಕ್ಕೆ ಬಂದಾಗ ಈ ವಿಷಯವನ್ನು ಪ್ರಸ್ತಾಪಿಸಿದ್ದರು.


ಏತನ್ಮಧ್ಯೆ, ಸೇವಾ ಸಂಸ್ಥೆಯಲ್ಲಿರುವವರು ಗೀತಾಳನ್ನು ಅಲ್ಲಿಯೇ ಇರುವ ಹಿಂದೂ ಹುಡುಗನಿಗೆ ಮದುವೆ ಮಾಡಿಕೊಡಲೂ ಯೋಚಿಸಿದ್ದಾರೆ. ಆದರೆ ತಾನು ಊರಿಗೆ ಮರಳಿದ ನಂತರವೇ ಮದುವೆಯಾಗುವುದಾಗಿ ಗೀತಾ ಹೇಳಿದ್ದಾಳೆ. ಗೀತಾ ಏನಾದರೂ ಗೀಚುವಾಗ ಅದರಲ್ಲಿ ಪದೇ ಪದೇ 193 ಸಂಖ್ಯೆಯನ್ನು ಉಲ್ಲೇಖಿಸುತ್ತಾಳೆ. ಇದರ ಹಿಂದಿನ ಮರ್ಮ ಏನೆಂಬುದು ಗೊತ್ತಾಗಿಲ್ಲ

ಸಹಾಯ ಹಸ್ತ ಚಾಚಿದ ಭಾರತ ಸರ್ಕಾರ


ಗೀತಾಳ ಬಗ್ಗೆ ಈಗ ಸಾಮಾಜಿಕ ತಾಣಗಳಲ್ಲಿ ಸಾಕಷ್ಟು ಸುದ್ದಿಯಾಗುತ್ತಿದೆ. ಗೀತಾಳ ಕತೆಯನ್ನು ಓದಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಭಾರತದ ಹೈ ಕಮಿಷನ್ ನ್ನು ಪಾಕಿಸ್ತಾನಕ್ಕೆ ಕಳುಹಿಸಲಾಗುತ್ತಿದ್ದು, ಗೀತಾಳಿಗೆ ಎಲ್ಲ ರೀತಿಯ ಸಹಾಯ ಮಾಡುವುದಾಗಿ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.