17 ಮಂದಿ ಶಂಕಿತ ಸಿಮಿ ಉಗ್ರರ ಖುಲಾಸೆ
ಆರೋಪ ಸಾಬೀತಾಗದ ಹಿನ್ನಲೆಯಲ್ಲಿ 2008ರಲ್ಲಿ ಬಂಧಿತರಾಗಿದ್ದ 17 ಮಂದಿ ಶಂಕಿತ ಸಿಮಿ ಉಗ್ರರನ್ನು ಹುಬ್ಬಳ್ಳಿ ನ್ಯಾಯಾಲಯ ಖುಲಾಸೆಗೊಳಿಸಿದೆ.

ಹುಬ್ಬಳ್ಳಿ: ಆರೋಪ ಸಾಬೀತಾಗದ ಹಿನ್ನಲೆಯಲ್ಲಿ 17 ಶಂಕಿತ ಸಿಮಿ ಉಗ್ರರನ್ನು ಹುಬ್ಬಳ್ಳಿ ನ್ಯಾಯಾಲಯ ಖುಲಾಸೆಗೊಳಿಸಿದೆ.
2008ರ ಸಿಮಿ ಉಗ್ರರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಾಲಯ 17 ಶಂಕಿತ ಸಿಮಿ ಉಗ್ರರನ್ನು ಖುಲಾಸೆಗೊಳಿಸಿದೆ. ಸತತ 7 ವರ್ಷಗಳ ವಿಚಾರಣೆ ಹೊರತಾಗಿಯೂ ಆರೋಪಿಗಳ ಆರೋಪ ಸಾಬೀತು ಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾದ ಹಿನ್ನಲೆಯಲ್ಲಿ ಹುಬ್ಬಳ್ಳಿಯ 1ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಮೂರ್ತಿ ಗೋಪಾಲಕೃಷ್ಣ ಕೊಳ್ಳಿ ಅವರು 17 ಮಂದಿ ಶಂಕಿತ ಸಿಮಿ ಉಗ್ರರನ್ನು ಖುಲಾಸೆಗೊಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದ ಸಿಐಡಿ ಅಧಿಕಾರಿಗಳು ಸುಮಾರು 1624 ಪುಟಗಳ 3 ಚಾರ್ಜ್ ಶೀಟ್ ಅನ್ನು ದಾಖಲಿಸಿದ್ದರು. ಅಲ್ಲದೆ ಪ್ರಕರಣದಲ್ಲಿ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಗಳಾದ ಯಾಸಿನ್ ಭಟ್ಕಳ್, ಇಕ್ಬಾಲ್ ಭಟ್ಕಳ್, ರಿಯಾಜ್ ಭಟ್ಕಳ್ ಸೇರಿದಂತೆ ಒಟ್ಟು 20 ಮಂದಿ ಶಂಕಿತ ಉಗ್ರರ ವಿರುದ್ಧ ಆರೋಪ ಪಟ್ಟಿ ದಾಖಲಾಗಿತ್ತು. ನ್ಯಾಯಾಲಯ ಒಟ್ಟು 278 ಸಾಕ್ಷಿಗಳ ವಿಚಾರಣೆ ಕೂಡ ನಡೆಸಿತ್ತು. ಸತತ 7 ವರ್ಷಗಳ ಸುದೀರ್ಘ ವಿಚಾರಣೆಯ ನಂತರ ಹುಬ್ಬಳ್ಳಿ ಸೆಷನ್ಸ್ ನ್ಯಾಯಾಲಯ 17 ಮಂದಿ ಶಂಕಿತ ಉಗ್ರರನ್ನು ಖುಲಾಸೆಗೊಳಿಸಿದೆ.
ಬಾಕಿ ಉಳಿದಿರುವ ಯಾಸಿನ್ ಭಟ್ಕಳ್, ರಿಯಾಜ್ ಭಟ್ಕಳ್ ಮತ್ತು ಇಕ್ಬಾಲ್ ಭಟ್ಕಳ್ ವಿಚಾರಣೆ ಮಾತ್ರ ಬಾಕಿ ಉಳಿದಿದೆ. ಬೆಂಗಳೂರು ಮೂಲದ ಓರ್ವ ಟೆಕ್ಕಿ, ಕಿಮ್ಸ್ ನ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 17 ಮಂದಿ ಶಂಕಿತ ಉಗ್ರರನ್ನು ಪೊಲೀಸರು ಬಂಧಿಸಿದ್ದರು. ಅಲ್ಲದೆ ಬಂಧಿತರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಬಾಂಬ್ ಗಳು ಮತ್ತು ಡಿಟೋನೇಟರ್ ಗಳು ಪತ್ತೆಯಾಗಿದ್ದವು.
ಇದೀಗ ಸುದೀರ್ಘ ವಿಚಾರಣೆಯ ಬಳಿಕ ಆರೋಪ ಸಾಬೀತು ಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾದ ಹಿನ್ನಲೆಯಲ್ಲಿ ಹುಬ್ಬಳ್ಳಿಯ 1ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ 17 ಆರೋಪಿಗಳನ್ನು ಖುಲಾಸೆಗೊಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


