ಗೌರವಯುತವಾಗಿ ಸ್ಥಾನ ತ್ಯಜಿಸಿ: ಕೆಪಿಎಸ್‍ಸಿ ಕಳಂಕಿತ ಸದಸ್ಯರಿಗೆ ಹೈಕೋರ್ಟ್ ಸೂಚನೆ
ಕರ್ನಾಟಕ ಲೋಕಸೇವಾ ಆಯೋಗದಲ್ಲಿರುವ ಕಳಂಕಿತರು ತಾವಾಗಿಯೇ ಗೌರವಯುತವಾಗಿ ತಮ್ಮ ಸ್ಥಾನ ತೆರೆವು ಮಾಡಬೇಕು ಎಂದು ಹೈಕೋರ್ಟ್ ಶುಕ್ರವಾರ ಎಚ್ಚರಿಕೆ ನೀಡಿದೆ.

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಲ್ಲಿರುವ ಕಳಂಕಿತರು ತಾವಾಗಿಯೇ ಗೌರವಯುತವಾಗಿ ತಮ್ಮ ಸ್ಥಾನ ತೆರೆವು ಮಾಡಬೇಕು ಎಂದು ಹೈಕೋರ್ಟ್ ಶುಕ್ರವಾರ ಎಚ್ಚರಿಕೆ ನೀಡಿದೆ.
ಕೆಪಿಎಸ್ಸಿಯಲ್ಲಿ ಕಳಂಕಿತ ಹಳೆಯ ಸದಸ್ಯರೇ ಇನ್ನೂ ಮುಂದುವರಿದಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಹೊಸ ಆಯ್ಕೆಗೆ ಮುಂದಾಗಿರುವ ಸರ್ಕಾರದ ಕ್ರಮ ಸರಿಯಲ್ಲ ಎಂದು ಆರೋಪಿಸಿ ಹೈಕೋರ್ಟ್ ನಲ್ಲಿ ಅರ್ಜಿ ದಾಖಲಾಗಿತ್ತು. ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ಹಾಗೂ ನ್ಯಾ.ರಾಮಮೋಹನ ರೆಡ್ಡಿ ವಿಭಾಗೀಯ ಪೀಠ, ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರು, ಸದಸ್ಯರು ಎಷ್ಟರ ಮಟ್ಟಿಗೆ ಯೋಗ್ಯರಿದ್ದಾರೆ ಎಂಬುದು ಮತ್ತೊಬ್ಬರು ಹೇಳಿದ ಮೇಲೆಯೇ ನಿಮಗೆ ತಿಳಿಯುತ್ತದೆಯೇ? ಎಂದು ಪ್ರಶ್ನಿಸಿದರು.
10 ವರ್ಷದಲ್ಲಿ ಕೆಪಿಎಸ್ಸಿಯಲ್ಲಿ ಏನೆಲ್ಲಾ ನಡೆದಿದೆ ಎಂಬುದು ಇಡೀ ರಾಜ್ಯದ ಜನರಿಗೆ ತಿಳಿದಿದೆ. ಅಂತೆಯೇ ಇದರಲ್ಲಿ ಯಾರೂ ಶುದ್ಧಹಸ್ತರಿಲ್ಲ ಎಂಬುದೂ ಅಷ್ಟೇ ಸತ್ಯ ಎಂದು ಕೋರ್ಟ್ ಕಿಡಿಕಾರಿದೆ. ಅಲ್ಲದೆ ಅರ್ಜಿಗೆ ಸಂಬಂಧಿಸಿದಂತೆ ಮುಂದಿನ ವಿಚಾರಣೆ ವೇಳೆಗೆ ಸೂಕ್ತ ಹೇಳಿಕೆ ಸಲ್ಲಿಸಿ ಎಂದು ವಿಭಾಗೀಯ ಪೀಠ ಸರ್ಕಾರಕ್ಕೆ ಸೂಚಿಸಿ ವಿಚಾರಣೆ ಮುಂದೂಡಿದೆ.
ವಿವಾದವೇನು?: ರಾಜ್ಯದಲ್ಲಿ ಖಾಲಿಯಾಗಿರುವ ಗೆಜೆಟೆಡ್ ಪ್ರೊಬೆಷನರಿ ಎ ಮತ್ತು ಬಿ ವೃಂದಗಳ 440 ಹುದ್ದೆಗಳ ನೇಮಕ ಪ್ರಕ್ರಿಯೆಗೆ ಸಂಬಂಧಿಸಿದಂತೆ ಏಪ್ರಿಲ್ 19 ರಿಂದ ಪ್ರಾಥಮಿಕ ಹಂತದ ಪರೀಕ್ಷೆಗಳು ನಡೆಯಲಿದೆ. ಆದರೆ, ಅಭ್ಯರ್ಥಿಗಳ ಆಯ್ಕೆ ಸಮಿತಿಯಲ್ಲಿ ಕಳಂಕಿತ ಸದಸ್ಯರಿದ್ದಾರೆ. ಹೀಗಾಗಿ ಕಳಂಕಿತ ಆಯ್ಕೆ ಸಮಿತಿ ಸದಸ್ಯರನ್ನು ಬದಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಕೋರಿ ಅರ್ಜಿ ದಾಖಲಿಸಿದ್ದರು. ಅಲ್ಲದೆ, ಕೆಪಿಎಸ್ಸಿ ನೇಮಕಾತಿ ಸಮಿತಿಯಲ್ಲಿ ಏಕೆ ಕಳಂಕಿತರನ್ನು ಮುಂದುವರಿಸುತ್ತೀರಾ? ಕಳಂಕಿತರು ಇದ್ದಾರೆ ಎಂದು ಯಾರೋ ಒಬ್ಬರು ಬಂದು ಹೇಳಿದರೆ ಮಾತ್ರ ನಿಮಗೆ ಆ ಬಗ್ಗೆ ಜ್ಞಾನೋದಯವಾಗುತ್ತದೆ? ಅದಕ್ಕೂ ಮುನ್ನ ಸರ್ಕಾರವೇ ಎಚ್ಚೆತ್ತು ಕಳಂಕಿತರನ್ನು ಹೊರಹಾಕಿ, ಅದಕ್ಕೆ ಕ್ಲೀನ್ ಇಮೇಜ್ ಹೊಂದಿದವರನ್ನು ಏಕೆ ನೇಮಕ ಮಾಡುವುದಿಲ್ಲ? ರಾಜ್ಯ ಸರ್ಕಾರ ಮೊದಲು ಕೆಪಿಎಸ್ಸಿಯ ಘನತೆಯನ್ನು ಬದಲಾಯಿಸಬೇಕಿದೆ ಎಂದು ಪೀಠ ಕೆಪಿಎಸ್ಸಿ ಕಾರ್ಯವೈಖರಿಗೆ ಸಮಾಧಾನ ವ್ಯಕ್ತಪಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


