ಕೇಂಬ್ರಿಡ್ಜ್ ಶಾಲೆಯಲ್ಲಿ ಲೈಂಗಿಕ ದೌರ್ಜನ್ಯ: ಪೋಷಕರಿಂದ ಪ್ರತಿಭಟನೆ
ಆರ್ಕಿಡ್ಸ್ ಶಾಲೆಯಲ್ಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಕಹಿ ನೆನಪು ಮಾಸುವ ಮುನ್ನವೇ, ಕೇಂಬ್ರಿಡ್ಜ್ ಶಾಲೆಯಲ್ಲಿ ಬಾಲಕಿ ಮೇಲೆ..

ಬೆಂಗಳೂರು: ಆರ್ಕಿಡ್ಸ್ ಶಾಲೆಯಲ್ಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಕಹಿ ನೆನಪು ಮಾಸುವ ಮುನ್ನವೇ, ಕೇಂಬ್ರಿಡ್ಜ್ ಶಾಲೆಯಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ವರದಿಯಾಗಿದ್ದು, ಬಾಲಕಿ ಮೇಲಿನ ಲೈಂಗಿಕ ದೌರ್ಜನ್ನವನ್ನು ಖಂಡಿಸಿ ಪೋಷಕರು ಹಾಗೂ ಬಿಜೆಪಿ ಕಾರ್ಯಕರ್ತರು ಶಾಲೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.
ಸಿವಿ ರಾಮನಗರ ಬಿಜೆಪಿ ಶಾಸಕ ಎಸ್.ರಘು ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು, ಕೂಡಲೇ ಶಾಲಾ ಆಡಳಿತ ಮಂಡಳಿ ಸದಸ್ಯರು ಸ್ಥಳಕ್ಕೆ ಆಗಮಿಸುವಂತೆ ಒತ್ತಾಯಿಸಿದ್ದಾರೆ.
ಇಂದಿರಾನಗರದಲ್ಲಿರುವ ಕೇಂಬ್ರಿಡ್ಜ್ ಶಾಲೆಯಲ್ಲಿ 1ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ 6 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಈ ಸಂಬಂಧ ಬಾಲಕಿ ತಾಯಿ ಜೀವನ್ ಭೀಮಾನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಐಪಿಸಿ ಕಲಂ 376(ಅತ್ಯಾಚಾರ) ಹಾಗೂ ಪೋಕ್ಸೋ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಾಲಕಿ ನೀಡಿದ ಸುಳಿವಿನ ಮೇಲೆ ಶಾಲೆಯ ದೈಹಿಕ ಶಿಕ್ಷಕ ಜೈಶಂಕರ್(38) ನನ್ನು ಬಂಧಿಸಿದ್ದಾರೆ. ಅಲ್ಲದೆ ಇಂದು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಅಲೋಕ್ ಕುಮಾರ್ ಪ್ರತಿಭಟನಾ ನಿರತ ಪೋಷಕರನ್ನು ಸಮಾಧಾನ ಪಡಿಸುವ ಯತ್ನಕ್ಕೆ ಮುಂದಾದರು. ಆದರೆ ಕುಪಿತಗೊಂಡ ಪೋಷಕರು ಪೊಲೀಸ್ ಆಯುಕ್ತರೊಂದಿಗೆ ವಾಗ್ವಾದಕ್ಕಿಳಿದ ಘಟನೆಯೂ ನಡೆಯಿತು.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಬೆಂಗಳೂರು ದಕ್ಷಿಣ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಅವರು ಇಂದು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಶಾಲೆಗೆ ಮಾರ್ಗಸೂಚಿ ಪಾಲನೆ ಮಾಡುವಂತೆ ಎಚ್ಚರಿಕೆ ನೀಡಿದ್ದರೂ, ಶಾಲಾ ಆಡಳಿತ ಮಂಡಳಿ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ, ಮತ್ತು ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಒಂದು ದುರದೃಷ್ಟಕರ ಎಂದಿದ್ದಾರೆ.
ಮಂಗಳವಾರ ಶಾಲೆಗೆ ಹೋಗಿದ್ದ ಬಾಲಕಿ ಮನೆಗೆ ಬಂದಾಗ ಹೊಟ್ಟೆ ನೋವು ಎಂದು ಹೇಳಿದ್ದಳು. ಅಲ್ಲದೇ ಜ್ವರವೂ ಕಾಣಿಸಿಕೊಂಡಿತ್ತು. ಹೀಗಾಗಿ ಬುಧವಾರ ಬೆಳಗ್ಗೆ ಬಾಲಕಿಯನ್ನು ಪಾಲಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ವೈದ್ಯರು ತಿಳಿಸಿದ್ದಾರೆ. ಹೀಗಾಗಿ ಬಾಲಕಿ ಪಾಲಕರು ಎನ್‌ಜಿಒ ಸಾಹಯದೊಂದಿಗೆ ಗುರುವಾರ ಬೆಳಗ್ಗೆ ಠಾಣೆಗೆ ತೆರಲಿ ದೂರು ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಬಾಲಕಿ ನೀಡಿದ ಹೇಳಿಕೆ ಆಧಾರದ ಮೇಲೆ ಶಿಕ್ಷಕ ಜೈಶಂಕರನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಸದ್ಯ ಬಾಲಕಿಯನ್ನು ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು ತನಿಖೆ ಮುಂದುವರೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


