ಪ್ರಧಾನ ಸುದ್ದಿ

ಬಹುತೇಕ ಎಟಿಎಂಗಳು ಅಭದ್ರ

'ಕನ್ನಡಪ್ರಭ' ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ, ಕೇವಲ ಬೆಂಗಳೂರು ಮಾತ್ರವಲ್ಲ, ರಾಜ್ಯಾದ್ಯಂತ ಬಹುತೇಕ ಎಟಿಎಂಗಳಲ್ಲಿ...

Published On :

ಕನ್ನಡಪ್ರಭ ವಾರ್ತೆ, ಬೆಂಗಳೂರು, ನ.20-
ಕೇವಲ ಬೆಂಗಳೂರು ಮಾತ್ರವಲ್ಲ, ರಾಜ್ಯಾದ್ಯಂತ ಬಹುತೇಕ ಎಟಿಎಂಗಳಲ್ಲಿ ಭದ್ರತೆ ಕೊರತೆ ಕಾಡುತ್ತಿದೆ.
ಈ ಕುರಿತು 'ಕನ್ನಡಪ್ರಭ' ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ಇದು ಸ್ಪಷ್ಟವಾಗಿ ಗೋಚರಿಸಿದೆ.
ಎಟಿಎಂ ಕೇಂದ್ರಗಳಿಗೆ ಕೆಲವು ಕಡೆ ಭದ್ರತಾ ಸಿಬ್ಬಂದಿ ಇಲ್ಲ, ಸಿಸಿಟಿವಿ ಕ್ಯಾಮೆರಾ ಆಳವಡಿಸಿಲ್ಲ. ಇನ್ನೂ ಹಲವೆಡೆ ಆರ್‌ಬಿಐ ಮಾರ್ಗಸೂಚಿಯಲ್ಲಿನ ಯಾವುದೇ ಅಂಶಗಳು ಪಾಲನೆ ಆಗಿಲ್ಲ. ಎಟಿಎಂ ಕೇಂದ್ರಗಳಲ್ಲಿ ಅಪರಾಧ ಕೃತ್ಯಗಳು ಪದೇ ಪದೇ ಜರುಗುತ್ತಿದ್ದರೂ ಬ್ಯಾಂಕ್‌ಗಳ ಆಡಳಿತ ವರ್ಗ ಅಥವಾ ಪೊಲೀಸರು ತಲೆಕೆಡಿಸಿಕೊಂಡಿಲ್ಲ.
ಬಳ್ಳಾರಿ ಜಿಲ್ಲೆಯಾದ್ಯಂತ ಸುಮಾರು 155 ಎಟಿಎಂ ಕೇಂದ್ರಗಳಿವೆ. ಪಾಲಿಕೆ ವ್ಯಾಪ್ತಿಯಲ್ಲೇ 50 ಕೇಂದ್ರಗಳಿವೆ. ಆದರೆ ಖಾಸಗಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳು ಸೂಕ್ತ ಭದ್ರತಾ ವ್ಯವಸ್ಥೆ ಮಾಡಿಲ್ಲ. ಗಣಿ ವ್ಯವಹಾರ ಹೆಚ್ಚಿದ್ದ ಸಂದರ್ಭದಲ್ಲಿ ಖಾಸಗಿ ಬ್ಯಾಂಕ್ ಎಟಿಎಂ ಕೇಂದ್ರದಲ್ಲಿ ಭದ್ರತಾ ಸಿಬ್ಬಂದಿ ಕೊಲೆ ನಡೆದಿತ್ತು.
ಕೊಪ್ಪಳ ಜಿಲ್ಲೆಯಲ್ಲಿ 80 ಎಟಿಎಂ ಕೇಂದ್ರಗಳಿವೆ. ಈ ಪೈಕಿ ಗಂಗಾವತಿ ತಾಲೂಕು ಒಂದರಲ್ಲೇ 50 ಎಟಿಎಂಗಳಿವೆ. ಆದರೆ ನಗರ ಪ್ರದೇಶದ ಹೊರಗಿರುವ ಎಟಿಎಂ ಕೇಂದ್ರಕ್ಕೆ ಕಾವಲುಗಾರರೇ ಇಲ್ಲ. ಹುಬ್ಬಳ್ಳಿ- ಧಾರವಾಡ ಅವಳಿ ನಗರ ವ್ಯಾಪ್ತಿಯಲ್ಲಿ 160ಕ್ಕೂ ಹೆಚ್ಚು ಎಟಿಎಂ ಇವೆ. ಧಾರವಾಡದಲ್ಲಿ 65, ಹುಬ್ಬಳ್ಳಿಯಲ್ಲಿ 40 ಎಟಿಎಂ ಕೇಂದ್ರಗಳಿವೆ. ಕುಂದಗೋಳ, ಕಲಘಟಗಿ, ನವಲಗುಂದದಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಎಟಿಎಂ ಕೇಂದ್ರ ಹೆಚ್ಚಿದ್ದರೂ ಸೂಕ್ತ ಭದ್ರತೆ ಇಲ್ಲ.
ಗದಗದಲ್ಲಿ 23 ಎಟಿಎಂ ಕೇಂದ್ರಗಳಿದ್ದು, ಹೆಚ್ಚಿನ ಕಡೆಗಳಲ್ಲಿ ವೃದ್ಧರನ್ನು ಭದ್ರತೆಗೆ ನಿಯೋಜಿಸಲಾಗಿದೆ. ದುಷ್ಕರ್ಮಿಗಳು ದಾಳಿ ನಡೆಸಿದರೆ ಈ ಸಿಬ್ಬಂದಿಗೇ ರಕ್ಷಣೆ ಬೇಕು.

ವೃದ್ಧರ ಸಂಖ್ಯೆಯೇ ಹೆಚ್ಚು: ರಾಜ್ಯದ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಒಂದಾದ ಮಂಗಳೂರಿನ ಎಟಿಎಂಗಳಲ್ಲಿ ಶೇ.70ರಲ್ಲಿ ಭದ್ರತಾ ಸಿಬ್ಬಂದಿ ಇದ್ದಾರೆ. ಇವರಲ್ಲಿ ನಿವೃತ್ತರಾದ ಬಳಿಕ ಬಂದಿರುವ ವೃದ್ಧರ ಸಂಖ್ಯೆಯೇ ಹೆಚ್ಚು. ಇನ್ನು ಉಡುಪಿ ಹಾಗೂ ಮಣಿಪಾಲದ ಎಲ್ಲಾ ಎಟಿಎಂ ಕೇಂದ್ರಗಳಲ್ಲಿ ಭದ್ರತಾ ಸಿಬ್ಬಂದಿಯೂ ಇದ್ದಾರೆ. ಸಿಸಿ ಟಿವಿ ಕ್ಯಾಮೆರಾಗಳೂ ಇವೆ. ಆದರೆ, ರಾತ್ರಿ ವೇಳೆ ಬಹುತೇಕ ಕಡೆ ಇವರು ನಿದ್ರೆಗೆ ಜಾರಿರುತ್ತಾರೆ ಎಂಬ ಆರೋಪಗಳಿವೆ. ಸಾಂಸ್ಕೃತಿಕ ನಗರಿ ಮೈಸೂರು ಹಾಗೂ ಇತರ ತಾಲೂಕು ಕೇಂದ್ರಗಳಲ್ಲಿ ಹಲವೆಡೆ ಭದ್ರತಾ ಸಿಬ್ಬಂದಿ ಕೊರತೆ ಇದೆ. ಇತ್ತೀಚೆಗೆ ನಡೆಯುತ್ತಿರುವ ಕಳ್ಳತನಗಳ ಹಿನ್ನೆಲೆಯಲ್ಲಿ ಪೊಲೀಸರು ಎಟಿಎಂಗಳ ಮಾಹಿತಿ ಕಲೆಹಾಕುತ್ತಿದ್ದು, ಎಲ್ಲೆಡೆ ಭದ್ರತಾ ಸಿಬ್ಬಂದಿ ನೇಮಿಸುವಂತೆ ಸೂಚನೆ ನೀಡಿದ್ದಾರೆ. ಕೆ.ಆರ್. ನಗರದ ಎಲ್ಲಾ ಕೇಂದ್ರಗಳಲ್ಲಿ ಭದ್ರತಾ ಸಿಬ್ಬಂದಿ ಇದ್ದಾರೆ. ಪಿರಿಯಾಪಟ್ಟಣದ ಕೇಂದ್ರದಲ್ಲೂ ಭದ್ರತೆ ಒದಗಿಸಲಾಗಿದೆ. ಆದರೆ, ಅರ್ಧ ಕಿ.ಮೀ. ದೂರದ ಅಬ್ಬೂರು ಗ್ರಾಮದ ಎಟಿಎಂನಲ್ಲಿ ಭದ್ರತಾ ಸಿಬ್ಬಂದಿ ಇಲ್ಲ. ಟಿ.ನರಸೀಪರ, ಎಚ್.ಡಿ. ಕೋಟೆ ಮತ್ತು ಹುಣಸೂರಿನ ಎಲ್ಲಾ ಕೇಂದ್ರಗಳಲ್ಲೂ ಭದ್ರತೆ ಒದಗಿಸಲಾಗಿದೆ. ಬೆಳಗಾವಿ, ಬಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ಕಾರ್ಪೋರೇಶನ್ ಬ್ಯಾಂಕ್ ಎಟಿಎಂಗಳಲ್ಲಿ ಭದ್ರತಾ ಸಿಬ್ಬಂದಿ ಇಲ್ಲ. ಇನ್ನುಳಿದ ಬ್ಯಾಂಕ್‌ಗಳ ಬಹುತೇಕ ಎಟಿಎಂಗಳಿಗೆ ದಿನದ 24 ಗಂಟೆ ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಕೆಲವೆಡೆ ಇನ್ನು ಭದ್ರತೆ ಸಿಬ್ಬಂದಿ ನೇಮಿಸಿಲ್ಲ. ಬಹುತೇಕ ಕಡೆ ಸೈರನ್ ವ್ಯವಸ್ಥೆ ಇಲ್ಲ. ಸಿಸಿ ಟಿವಿ ಕ್ಯಾಮೆರಾಗಳು ಹಲವೆಡೆ ಇಲ್ಲ, ಇನ್ನು ಕೆಲವೆಡೆ ಇದ್ದರೂ ಕೆಲಸ ಮಾಡುತ್ತಿಲ್ಲ.

ಇದ್ದರೂ ಇಲ್ಲದಂತೆ: ಹಾಸನದ ಬಹುತೇಕ ಎಟಿಎಂಗಳು ಇದ್ದರೂ ಇಲ್ಲದಂತೆ ಇವೆ. ಅಲ್ಲಿ ಭದ್ರತೆಯೂ ಇಲ್ಲ, ಸುರಕ್ಷತೆಯೂ ಇಲ್ಲ. ಸಂಜೆಯಾದರೆ ಜನ ಓಡಾಡದ ರಸ್ತೆಗಳಲ್ಲಿ ಎಟಿಎಂಗಳಿವೆ. ಇದರಿಂದ ಮಹಿಳೆಯರು ಹೋಗಲು ಭಯಪಡುವ ಪರಿಸ್ಥಿತಿ ಇದೆ. ಕೆಲ ಎಟಿಎಂಗಳ ಬಳಿ ನೇಮಕ ಮಾಡಿರುವ ಸೆಕ್ಯೂರಿಟಿ ಗಾರ್ಡ್‌ಗಳು ಗಾಳಿ ಬಂದರೆ ತೂರಿ ಹೋಗುವಷ್ಟರ ಮಟ್ಟಿಗೆ ನಿಶಕ್ತರಾಗಿರುತ್ತಾರೆ. ನಾಮ್ ಕೇ ವಾಸ್ತೆಗೆ ಸೆಕ್ಯೂರಿಟಿ ಗಾರ್ಡ್‌ಗಳನ್ನು ನೇಮಕ ಮಾಡಲಾಗುತ್ತದೆ. ರಾಯಚೂರು ಜಿಲ್ಲೆಯ ಎಲ್ಲ ನಗರ, ಪಟ್ಟಣಗಳಲ್ಲಿ ಎಟಿಎಂಗಳಿವೆ. ಖಾಸಗಿ ಬ್ಯಾಂಕುಗಳ ಎಲ್ಲ ಎಟಿಎಂಗಳಿಗೆ ಭದ್ರತಾ ಸಿಬ್ಬಂದಿಯಿದ್ದು, ಗ್ರಾಹಕರಿಗೆ ಭದ್ರತೆಯ ವ್ಯವಸ್ಥೆ ಕಲ್ಪಿಸಲಾಗಿದೆ. ದಿನದ 24 ಗಂಟೆಗಳೂ ಈ ಸಿಬ್ಬಂದಿ ಕಾರ್ಯ ನಿರ್ವಹಿಸುವುದರಿಂದ ಎಟಿಎಂಗಳ ಮೇಲೆ ನಿಗಾ ನಿರಂತರ ಇದ್ದೇ ಇರುತ್ತದೆ. ಎಲ್ಲಾ ಕಡೆ ಸಿಸಿ ಟಿವಿ ಕ್ಯಾಮರಾಗಳಿವೆ. ಒಂದೆರಡು ಎಟಿಎಂಗಳು ಇದಕ್ಕೆ ಅಪವಾದ ಎನ್ನುವಂತಿವೆ. ಮಂಡ್ಯ ಜಿಲ್ಲಾ ಕೇಂದ್ರದಲ್ಲಿ ವಿವಿಧ ಬ್ಯಾಂಕ್‌ಗಳ ಸುಮಾರು 30 ರಿಂದ 40 ಎಟಿಎಂ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್‌ಗಳ 10 ರಿಂದ 12 ಎಟಿಎಂ ಘಟಕಗಳಲ್ಲಿ ಸಿ.ಸಿ. ಕ್ಯಾಮರಾ ಹಾಗೂ ಭದ್ರತಾ ಸಿಬ್ಬಂದಿಗಳಿಲ್ಲ. ಚಿಕ್ಕಮಗಳೂರು ಜಿಲ್ಲಾ ಕೇಂದ್ರದಲ್ಲಿರುವ 33 ಎಟಿಎಂಗಳ ಪೈಕಿ 6 ಎಟಿಎಂಗಳಲ್ಲಿ ಮಾತ್ರ ಭದ್ರತಾ ಸಿಬ್ಬಂದಿ ಇದ್ದಾರೆ. ದಾವಣಗೆರೆ ಜಿಲ್ಲೆಯ ಬ್ಯಾಂಕ್ ಶಾಖೆಗಳ ಸನಿಹದ ಎಟಿಎಂಗೆ ಒಂದಿಷ್ಟು ರಕ್ಷಣೆ ಒದಗಿಸಿದ್ದನ್ನು ಹೊರತುಪಡಿಸಿದರೆ ಉಳಿದೆಲ್ಲಾ ಎಟಿಎಂಗಳಲ್ಲಿ ಹೇಳಿಕೊಳ್ಳುವ ರಕ್ಷಣೆ ಇಲ್ಲ. ಬಹುತೇಕ ಕಡೆ ನಾಮ್‌ಕೇವಾಸ್ತೆ ಸಿಬ್ಬಂದಿ ಇದ್ದಾರೆ.

ತೀವ್ರ ನಿಗಾ: ಬೆಂಗಳೂರು ಎಟಿಎಂ ಪ್ರಕರಣದ ನಂತರ ಶಿವಮೊಗ್ಗದ ಎಲ್ಲಾ ಎಟಿಎಂಗಳ ಮೇಲೆ ತೀವ್ರ ನಿಗಾ ಇಡಲಾಗಿದೆ. ಬಹುತೇಕ ಎಲ್ಲಾ ಎಟಿಎಂಗಳಲ್ಲೂ ಸೆಕ್ಯುರಿಟಿ ಗಾರ್ಡ್‌ಗಳು ಕಾವಲು ಕಾಯುತ್ತಿದ್ದಾರೆ. ಬೆಂಗಳೂರಿನ ಮಗ್ಗುಲಲ್ಲೇ ಇರುವ ರಾಮನಗರ ಜಿಲ್ಲೆಯಲ್ಲಿರುವ ಎಟಿಎಂಗಳ ಪೈಕಿ ಶೇ.60ಕ್ಕೆ ಮಾತ್ರ ಭದ್ರತಾ ಸಿಬ್ಬಂದಿ ಇದ್ದಾರೆ. ಇನ್ನು ತುಮಕೂರಿನಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್‌ಗಳ ಎಟಿಎಂಗಳಲ್ಲಿ ಭದ್ರತಾ ಸಿಬ್ಬಂದಿ ಇಲ್ಲ. ನಗರದ ಹೊರ ವಲಯದಲ್ಲಿರುವ ಖಾಸಗಿ ಬ್ಯಾಂಕ್‌ಗಳು ಮಾತ್ರ ಸೆಕ್ಯುರಿಟಿ ಗಾರ್ಡ್‌ಗಳನ್ನು ನೇಮಕ ಮಾಡಿಕೊಂಡಿದ್ದಾರೆ.

ಎಟಿಎಂ ಕೇಂದ್ರಗಳಲ್ಲಿ ಅಪರಾಧ ಕೃತ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಬ್ಯಾಂಕ್‌ಗಳಿಗೆ ಕೆಲ ನಿರ್ದೇಶನ ನೀಡಲಾಗಿತ್ತು. ಪ್ರತಿ 3 ತಿಂಗಳಿಗೊಮ್ಮೆ ಸರ್ಕಾರ ಇಂಥ ಸಲಹೆ ನೀಡುತ್ತದೆ. ಆದರೆ ಬ್ಯಾಂಕ್‌ಗಳು ಈ ಸೂಚನೆ ಪಾಲನೆ ಮಾಡುತ್ತಿಲ್ಲ.
-ರಾಘವೇಂದ್ರ ಔರಾದ್ಕರ್, ಬೆಂಗಳೂರು ನಗರ ಪೊಲೀಸ್ ಆಯುಕ್ತ

-ಆರೋಪಿ ಪತ್ತೆಗೆ 8 ತಂಡ

ಕಾರ್ಪೋರೇಷನ್ ಬ್ಯಾಂಕ್ ಎಟಿಎಂ ಕೇಂದ್ರದಲ್ಲಿ ಜ್ಯೋತಿ ಅವರ ಮೇಲೆ ಹಲ್ಲೆ ನಡೆಸಿರುವ ದುಷ್ಕರ್ಮಿ ಬಂಧನಕ್ಕೆ 8 ವಿಶೇಷ ತಂಡ ರಚಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ತಿಳಿಸಿದ್ದಾರೆ.

ಎಟಿಎಂ ಕೇಂದ್ರಗಳಿಗೆ ಭದ್ರತಾ ವ್ಯವಸ್ಥೆ ಕಲ್ಪಿಸುವುದು ಬ್ಯಾಂಕ್‌ಗಳ ಕನಿಷ್ಠ ಜವಾಬ್ದಾರಿ. ಈ ಬಗ್ಗೆ ಆರ್‌ಬಿಐ ನೀಡಿರುವ ಮಾರ್ಗದರ್ಶಿ ಸೂತ್ರಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇದಕ್ಕಾಗಿ ಎಲ್ಲ ಬ್ಯಾಂಕ್‌ಗಳಿಗೆ 3 ದಿನಗಳ ಕಾಲಾವಕಾಶ ನೀಡುತ್ತೇವೆ. ಇಲ್ಲವಾದರೆ ಅಂಥ ಎಟಿಎಂ ಕೇಂದ್ರ ಮುಚ್ಚಬೇಕಾಗುತ್ತದೆ.
-ಕೆ.ಜೆ.ಜಾರ್ಜ್, ಗೃಹ ಸಚಿವ

-ಜ್ಯೋತಿ ಚೇತರಿಕೆ
ಎಟಿಎಂ ಕೇಂದ್ರದಲ್ಲಿ ಹಲ್ಲೆಗೊಳಗಾದ ಜ್ಯೋತಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಅದರೆ, ಅವರ ಬಲಗೈ ಮತ್ತು ಕಾಲು ಸ್ವಾಧೀನ ಕಳೆದುಕೊಂಡಿವೆ. ಅವರು ಗುಣಮುಖರಾಗಲು 3 ತಿಂಗಳಿನಿಂದ 2 ವರ್ಷ ಬೇಕಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ಭದ್ರತೆ ಬಲಗೊಳ್ಳಲಿ...
ಬೆಂಗಳೂರು:
ನಗರ ಹೃದಯ ಭಾಗದಲ್ಲೇ ಎಟಿಎಂ ಕೇಂದ್ರದಲ್ಲಿ ಮಂಗಳವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಮಹಿಳೆ  ಮೇಲೆ ನಡೆದಿರುವ ಹಲ್ಲೆ ಮುಖ್ಯಮಂತ್ರಿಗಳು, ಗೃಹ ಸಚಿವರಿಗೆ ಎಚ್ಚರಿಕೆ ಗಂಟೆ ಎಂದು ಸಂಸದ ರಾಜೀವ್ ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದಾರೆ.  ಬಿಬಿಎಂಪಿ ಪ್ರಧಾನ ಕಚೇರಿಯಿಂದ ಕೂಗಳತೆ ದೂರದ ಸ್ಥಳದಲ್ಲಿ ದುರ್ಘಟನೆ ನಡೆದಿರುವುದು ದುರದೃಷ್ಟಕರ. ನಗರದಲ್ಲಿ ನಾಗರಿಕರ ಭದ್ರತೆಗೆ ಪೊಲೀಸ್ ವ್ಯವಸ್ಥೆ ಮತ್ತಷ್ಟು ಬಲಪಡಿಸುವ ಅಗತ್ಯವಿದೆ. ದಾಳಿ ನಡೆಸಿದ ದುಷ್ಕರ್ಮಿಯನ್ನು ಪೊಲೀಸರು ಶೀಘ್ರ ಬಂಧಿಸಬೇಕು. ಕಠಿಣ ಕ್ರಮ ಕೈಗೊಳ್ಳುವ ಮೂಲಕ ಬೇರೆ ದುಷ್ಕರ್ಮಿಗಳು ಇಂತಹ ದುಸ್ಸಾಹಸಕ್ಕೆ ಕೈ ಹಾಕದಂತೆ ಎಚ್ಚರಿಕೆ ನೀಡಬೇಕು ಎಂದು ರಾಜೀವ್ ಚಂದ್ರಶೇಖರ್ ಟ್ವಿಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.