ಗುಟ್ಕಾ ನಿಷೇಧ ಜಾರಿ
ರಾಜ್ಯದಲ್ಲಿ ತಂಬಾಕು ಮತ್ತು ನಿಕೋಟಿನ್ಯುಕ್ತ ಗುಟ್ಕಾ ಉತ್ಪಾದನೆ, ಮಾರಾಟ, ದಾಸ್ತಾನು, ವಿತರಣೆ ನಿಷೇಧಿಸಿ ಸರ್ಕಾರ ಆದೇಶ...
ಕ.ಪ್ರ.ವಾರ್ತೆ , ಬೆಂಗಳೂರು , ಮೇ 31
ರಾಜ್ಯದಲ್ಲಿ ತಂಬಾಕು ಮತ್ತು ನಿಕೋಟಿನ್ಯುಕ್ತ ಗುಟ್ಕಾ ಉತ್ಪಾದನೆ, ಮಾರಾಟ, ದಾಸ್ತಾನು, ವಿತರಣೆ ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಆದೇಶ ಮೇ 31ರಿಂದಲೇ ಜಾರಿಯಾಗಿದೆ. ಆಹಾರ ಭದ್ರತೆ ಮತ್ತು ಗುಣಮಟ್ಟ ಕಾಯಿದೆಯನ್ವಯ ಆರೋಗ್ಯಕ್ಕೆ ಹಾನಿಕರವಾದ ನಿಕೋಟಿನ್ ಹಾಗೂ
ತಂಬಾಕು ಒಳಗೊಂಡಿರುವ ಆಹಾರವನ್ನು ನಿಷೇಧಿಸಲಾಗಿದೆ. ಗುಟ್ಕಾ ಮತ್ತು ಪಾನ್ಮಸಾಲಗಳು ಆಹಾರದ ವರ್ಗಗಳಾಗಿದ್ದು ಇದರಲ್ಲಿ ನಿಕೋಟಿನ್ ಹಾಗೂ ತಂಬಾಕನ್ನು ಅತಿಯಾಗಿ ಬಳಸಲಾಗುತ್ತದೆ. ಹೀಗಾಗಿ, ಗುಟ್ಕಾ ಮತ್ತು ಪಾನ್ಮಸಾಲಾವನ್ನು ರಾಜ್ಯಾದ್ಯಂತ ನಿಷೇಧಿಸಲಾಗಿದೆ ಎಂದು ಸರ್ಕಾರಿ ಆದೇಶದಲ್ಲಿ ತಿಳಿಸಲಾಗಿದೆ. ರಾಜ್ಯದಲ್ಲಿ ತಂಬಾಕು ಮತ್ತು ನಿಕೋಟಿನ್ ಬಳಸಲಾಗಿರುವ ಗುಟ್ಕಾ ಮತ್ತು ಪಾನ್ಮಸಾಲಾ ಯಾವುದೇ ಹೆಸರಿನಲ್ಲಾದರೂ ಉತ್ಪಾದಿಸುವುದು, ಮಾರಾಟ ಮಾಡುವುದು, ದಾಸ್ತಾನು ಮಾಡುವುದು, ವಿತರಣೆ ಮಾಡುವುದನ್ನು ನಿಷೇಧಿಸಲಾಗಿದೆ. ಯಾವುದೇ ರೀತಿಯಲ್ಲೂ ಈ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿರುವಂತಿಲ್ಲ.
ಕಾರ್ಯಾಚರಣೆ: ತಂಬಾಕು ಮತ್ತು ನಿಕೋಟಿನ್ಯುಕ್ತ ಗುಟ್ಕಾ ಮಾರಾಟ ನಿಷೇಧ ಜಾರಿಗೆ ಬಂದಿರುವುದರಿಂದ ಇದನ್ನು ಅನುಷ್ಠಾನಗೊಳಿಸಲು ಕಾರ್ಯಪಡೆ ಅನುವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಗುಟ್ಕಾ ಹಾಗೂ ಪಾನ್ಮಸಾಲಾವನ್ನು ಎಲ್ಲೂ ಮಾರಾಟ ಮಾಡುವಂತಿಲ್ಲ ಹಾಗೂ ಸಂಗ್ರಹಿಸಿಡುವಂತಿಲ್ಲ. ಈ ಬಗ್ಗೆ ದಾಳಿ ನಡೆಸುವುದು, ವಶಪಡಿಸಿಕೊಳ್ಳುವುದು, ಅದನ್ನು ನಾಶ ಮಾಡುವುದು ಸೇರಿದಂತೆ ಎಲ್ಲವನ್ನೂ ಕಾನೂನಿನಿಂತೆ ನಿರ್ವಹಿಸಲು ಆಹಾರ ಭದ್ರತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ತತ್ಕ್ಷಣದಿಂದ ಗುಟ್ಕಾ ಮಾರಾಟ ನಿಷೇಧವಾಗಿದ್ದು, ಮಾರಾಟ ಮಾಡುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸುದ್ದಿಗಾರರಿಗೆ ಶುಕ್ರವಾರ ಹೇಳಿದರು.
ಅಡಕೆ ಬೆಳೆಗಾರರಿಗೆ ಗುಟ್ಕಾ ನಿಷೇಧದಿಂದ ಯಾವುದೇ ರೀತಿಯಲ್ಲೂ ತೊಂದರೆಯಾಗುವುದಿಲ್ಲ. ಅವರ ಬೆಲೆ ರಕ್ಷಣೆ ಹಾಗೂ ಇತರೆ ಉತ್ಪನ್ನಗಳಿಗೆ ಪ್ರೋತ್ಸಾಹ ಸೇರಿದಂತೆ ಇತರೆ ವಿಷಯಗಳ ಬಗ್ಗೆ ಕೃಷಿ ಹಾಗೂ ತೋಟಗಾರಿಕೆ ಸಚಿವರು ಹಾಗೂ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುತ್ತದೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

