ಗುಟ್ಕಾ ನಿಷೇಧ
ರಾಜ್ಯದಲ್ಲಿ ಗುಟ್ಕಾ ನಿಷೇಧಿಸಲು ಸರ್ಕಾರ ನಿರ್ಧರಿಸಿದೆ. ಶುಕ್ರವಾರ ವಿಶ್ವ ತಂಬಾಕು ರಹಿತ ದಿನಾಚರಣೆ. ಈ ಹಿನ್ನೆಲೆಯಲ್ಲಿ ಗುಟ್ಕಾ ಬಳಕೆ ನಿಷೇಧಿಸುವ...

ಬೆಂಗಳೂರು: ರಾಜ್ಯದಲ್ಲಿ ಗುಟ್ಕಾ ನಿಷೇಧಿಸಲು ಸರ್ಕಾರ ನಿರ್ಧರಿಸಿದೆ.
ಶುಕ್ರವಾರ ವಿಶ್ವ ತಂಬಾಕು ರಹಿತ ದಿನಾಚರಣೆ. ಈ ಹಿನ್ನೆಲೆಯಲ್ಲಿ ಗುಟ್ಕಾ ಬಳಕೆ ನಿಷೇಧಿಸುವ ಆದೇಶ ಹೊರಡಿಸಲು ಸರ್ಕಾರ ತೀರ್ಮಾನಿಸಿದೆ. ಗುಟ್ಕಾ ಸೇವನೆಯಿಂದ ಜನರ ಆರೋಗ್ಯ ಹಾಳಾಗುವುದನ್ನು ತಪ್ಪಿಸುವ ಮತ್ತು ಸುಪ್ರೀಂಕೋರ್ಟ್ ಆದೇಶ ಪಾಲನೆ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.
ದೇಶದಲ್ಲಿ ಈಗಾಗಲೇ 20 ರಾಜ್ಯಗಳಲ್ಲಿ ಗುಟ್ಕಾ ನಿಷೇಧ ಜಾರಿಯಲ್ಲಿದೆ. ಇದೇ ರೀತಿಯ ನಿಷೇಧ ರಾಜ್ಯದಲ್ಲಿ ಜಾರಿಯಾಗಲಿದ್ದು, ಶುಕ್ರವಾರ ಅಧಿಕೃತ ಆದೇಶ ಹೊರಬೀಳುವ ನಿರೀಕ್ಷೆ ಇದೆ. ರಾಜ್ಯದಲ್ಲಿ ಅಡಿಕೆ ಬೆಳೆಗಾರರಿಗೆ ಇದರಿಂದ ತೊಂದರೆ ಉಂಟಾಗುತ್ತದೆ ಎಂಬ ವಾದಕ್ಕೆ ಯಾವುದೇ ರೀತಿಯ ತಳಹದಿ ಇಲ್ಲ ಎಂದೇ ಆರೋಗ್ಯ ಸಚಿವ ಯು.ಟಿ. ಖಾದರ್ ವಾದಿಸಿದ್ದಾರೆ. ಅಲ್ಲದೆ, ಈ ಗುಟ್ಕಾ ನಿಷೇಧದಲ್ಲಿ ಅನಗತ್ಯವಾಗಿ 'ಅಡಿಕೆ ಬೆಳೆಗಾರರ ರಾಜಕೀಯ' ಮಾಡಬಾರದು ಎಂದೂ ಹೇಳಿದ್ದಾರೆ. ಹೀಗಾಗಿ, ಗುಟ್ಕಾ ನಿಷೇಧ ಜಾರಿ ರಾಜ್ಯದಲ್ಲಿ ನಿಶ್ಚಿತವಾಗಿದೆ.
ಸುಪ್ರೀಂಕೋರ್ಟ್ ಆದೇಶದಂತೆ ರಾಜ್ಯದಲ್ಲಿ ಗುಟ್ಕಾ ನಿಷೇಧಿಸಬೇಕು ಎಂದು ಆರೋಗ್ಯ ಇಲಾಖೆಯಿಂದ ಮುಖ್ಯಮಂತ್ರಿ ಕಚೇರಿಗೆ ಒಂದು ವಾರದ ಹಿಂದೆಯೇ ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಮ್ಮತಿಸಿದ್ದಾರೆ. ಅದಕ್ಕೆ ಅವರು ಅಂಕಿತವನ್ನೂ ಹಾಕಿದ್ದು, ಸರ್ಕಾರಿ ಆದೇಶ ಹೊರಬೀಳುವುದಷ್ಟೇ ಬಾಕಿ ಉಳಿದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಮಂತ್ರಿಗಳ ಪರಿಷತ್ನಲ್ಲೂ ಗುಟ್ಕಾ ನಿಷೇಧ ಸಂಬಂಧ ಚರ್ಚೆ ಆಗಿದೆ. ಕೆಲವು ಸಚಿವರು ಇದಕ್ಕೆ ವಿರೋಧ ವ್ಯಕ್ತಪಡಿಸಿದರಾದರೂ, ಅಡಿಕೆ ಬೆಳೆಗಾರರಿಗೆ ಯಾವುದೇ ರೀತಿಯಲ್ಲಿ ತೊಂದರೆ ಉಂಟಾಗುವುದಿಲ್ಲ. ಅವರಿಗೆ ಇನ್ನಷ್ಟು ಅನುಕೂಲ ಮಾಡಿಕೊಡೋಣ ಎಂಬ ಮುಖ್ಯಮಂತ್ರಿಯವರ ಮಾತಿನಿಂದ ಎಲ್ಲರೂ ಸಮ್ಮತಿಸಿದ್ದಾರೆ ಎನ್ನಲಾಗಿದೆ.
ತಂಬಾಕು ಸತ್ಯ
10 ವರ್ಷ ಹೆಚ್ಚು ವಯಸ್ಸಾದವರಂತೆ ಕಾಣುವುದು
10 ವರ್ಷ ಬೇಗ ಸಾಯುವುದು
2 ಕೋಟಿ - ರಾಜ್ಯದಲ್ಲಿ ತಂಬಾಕು ಸೇವಿಸುವವರ ಪ್ರಮಾಣ
ಶೇ.11.9 - ರಾಜ್ಯದಲ್ಲಿ ಧೂಮಪಾನಿಗಳ ಸಂಖ್ಯೆ
5.9 ಕೋಟಿ - ರಾಜ್ಯದಲ್ಲಿ ಖರ್ಚು ಮಾಡುವ ಹಣ
2500
ತಂಬಾಕಿನಿಂದ ದಿನಕ್ಕೆ ಸಾವು
10ಲಕ್ಷ
ದೇಶದಲ್ಲಿ ವರ್ಷಕ್ಕೆ ಸಾಯುವವರ ಸಂಖ್ಯೆ
95% ಬಾಯಿಕ್ಯಾನ್ಸರ್ಗೆ ತಂಬಾಕು ಕಾರಣ
ಗುಟ್ಕಾದಲ್ಲಿ ನಿಕೋಟಿನ್ ಸೇರಿದಂತೆ ಹಲವು ರೀತಿಯ ರಾಸಾಯನಿಕಗಳನ್ನು ಬಳಸಲಾಗಿರುತ್ತದೆ. ಇದರಿಂದ ರಾಜ್ಯದ ಜನತೆಯ ಆರೋಗ್ಯಕ್ಕೆ ಹಾನಿಯಾಗುತ್ತದೆ. ಇದಕ್ಕೆ ಆಸ್ಪದ ನೀಡಲು ಸರ್ಕಾರ ಸಿದ್ಧ ಇಲ್ಲ. ಅಡಿಕೆ ಬೆಳೆಗಾರರಿಗೆ ಸುಪಾರಿ ಸೇರಿದಂತೆ ಇತರೆ ರೀತಿಯ ಪದಾರ್ಥಗಳಿಗೆ ಅನುಕೂಲ ಮಾಡಿಕೊಡಲಾಗುತ್ತದೆ.
- ಯು.ಟಿ. ಖಾದರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ
ಸದ್ಯಕ್ಕೆ ಸಿಗಲ್ಲ ಅಗ್ಗದ ಅಕ್ಕಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಸ್ವೀಕರಿಸಿದ ಮೊದಲೇ ದಿನವೇ ಘೋಷಿಸಿದ್ದ ಒಂದು ರುಪಾಯಿಗೆ ಒಂದು ಕೆಜಿ ಅಕ್ಕಿ ಬಡವರಿಗೆ ಲಭ್ಯವಾಗಲು ಇನ್ನೂ ಒಂದು ತಿಂಗಳು ಕಾಯಬೇಕು. ಹೌದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸೂಚಿಸಿದ್ದ ಪ್ರಕಾರ ಜೂನ್ ಒಂದರಿಂದಲೇ 'ಒಂದು ರುಪಾಯಿ ಅಕ್ಕಿ' ಯೋಜನೆ ಜಾರಿಯಾಗಬೇಕಿತ್ತು. ಆದರೆ ಕೇಂದ್ರ ಸರ್ಕಾರದಲ್ಲಿನ ಕೆಲವು ನೀತಿಯಿಂದ ಈ ಯೋಜನೆ ವಿಳಂಬವಾಗುವ ಸಾಧ್ಯತೆ ಇದೆ. 'ಒಂದು ರುಪಾಯಿ ಅಕ್ಕಿ' ಯೋಜನೆ ಬಗ್ಗೆ ಮಂತ್ರಿಗಳ ಪರಿಷತ್ ಸಭೆಯಲ್ಲಿ ಚರ್ಚೆಯಾಗಿದ್ದು, ಆರ್ಥಿಕ ಹೊರೆಯ ಬಗ್ಗೆ ಮಾತುಕತೆ ನಡೆದಿದೆ. ಕೇಂದ್ರ ಸರ್ಕಾರ ಅಕ್ಕಿಗೆ ಹೆಚ್ಚಿನ ಸಬ್ಸಿಡಿ ನೀಡುವ ಹಂತದಲ್ಲಿ ಇಲ್ಲದ ಕಾರಣ, 'ಒಂದು ರುಪಾಯಿ ಅಕ್ಕಿ' ಯೋಜನೆಯನ್ನು ಯಾವ ರೀತಿ ಜಾರಿ ಮಾಡಬೇಕು ಎಂಬ ಬಗ್ಗೆ ಮತ್ತಷ್ಟು ಚಿಂತನೆ ಅಗತ್ಯ ಎಂಬ ಅಭಿಪ್ರಾಯ ವ್ಯಕ್ತವಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


