ಸಿಡುಕಬೇಡ ಸಿದ್ರಾಮಣ್ಣ..!
ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ನೀವು ಗಡ್ಡದಲ್ಲಿ ಇರುವುದಕ್ಕಿಂತ, ಇಲ್ಲದಿರುವಾಗಲೇ...

ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲಹೆ ಕೊಡಿ ಎಂದು ಓದುಗರನ್ನು ಕೇಳಲಾಗಿತ್ತು. ಅದಕ್ಕೆ ಅಸಂಖ್ಯಾತ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು. ಅವುಗಳನ್ನು ಇಂದಿನಿಂದ ನಿಮ್ಮ ಮುಂದೆ ತೆರೆದಿಡಲಾಗುತ್ತಿದೆ. ಸ್ವೀಕರಿಸೋದು, ಬಿಡೋದು ಸಿಎಂಗೆ ಬಿಟ್ಟದ್ದು.
ಗಡ್ಡ ಬೇಡ, ಪ್ಲೀಸ್...
ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ನೀವು ಗಡ್ಡದಲ್ಲಿ ಇರುವುದಕ್ಕಿಂತ, ಇಲ್ಲದಿರುವಾಗಲೇ ಸುಂದರವಾಗಿ ಕಾಣುತ್ತೀರಿ. ನಿಮ್ಮ ಗಡಸು ವ್ಯಕ್ತಿತ್ವಕ್ಕೆ ಗಡ್ಡ ಸರಿಯಾಗಲ್ಲ. ಇದು ನಿಮ್ಮ ವ್ಯಕ್ತಿತ್ವವನ್ನು ಮತ್ತಷ್ಟು ಗಡಸು ಮಾಡುತ್ತದೆ. ಹಾಗಾಗಿ ಗಡ್ಡ ತೆಗೆಯಿರಿ, ಚೆನ್ನಾಗಿ ಕಾಣ್ತೀರಿ.
- ಕೃಷ್ಣಮೂರ್ತಿ, ಚಿಕ್ಕಲಸಂದ್ರ
ಪಕ್ಷಪಾತಿಯಾಗಲಿಲ್ಲವಲ್ಲ
ನಿಮಗೊಂದು ಥ್ಯಾಂಕ್ಸ್. ನೀವು ಅಧಿಕಾರಕ್ಕೆ ಬಂದ ತಕ್ಷಣ ಸಾರ್ವಜನಿಕ ವಲಯದಲ್ಲಿ ಒಂದು ಗುಲ್ಲು ಎದ್ದಿತ್ತು. ನೀವು ನಿಮ್ಮ ಸಮುದಾಯಕ್ಕೇ ಹೆಚ್ಚಿನ ಮಹತ್ವ ನೀಡುತ್ತೀರಿ.ಅವರನ್ನೇ ನಿಮ್ಮ ಸುತ್ತಲೂ ನೇಮಕ ಮಾಡಿಕೊಳ್ಳುತ್ತೀರಿ ಎಂದು. ಆದರೆ ಸಚಿವ ಸಂಪುಟ ರಚಿಸುವಾಗ ಇದನ್ನು ಅಕ್ಷರಶಃ ಸುಳ್ಳು ಮಾಡಿದ್ದೀರಿ. ನಿಮ್ಮ ಸಮುದಾಯಕ್ಕೆ ಸೇರಿದ ಒಬ್ಬರನ್ನೂ ಸಂಪುಟಕ್ಕೆ ಸೇರಿಸಿಕೊಳ್ಳದೇ ಹೊಸ ಮಾರ್ಗ ಹುಟ್ಟುಹಾಕಿದ್ದೀರಿ. ಈ ಹಿಂದೆ ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಅವರ ಸಮುದಾಯಕ್ಕೆ ಸೇರಿದವರಿಗೆ ಮಿತಿ ಮೀರಿದ ಪ್ರಾಧಾನ್ಯತೆ ಕೊಟ್ಟಿದ್ದರು. ನೀವೂ ಹಾಗೆಯೇ ಆಗಿಬಿಡುತ್ತೀರಾ ಎಂಬ ಗಾಬರಿಯಾಗಿತ್ತು. ಆದರೆ ಸುಳ್ಳಾಗಿದ್ದಕ್ಕೆ ನಮ್ಮ ಕಡೆಯಿಂದ ವಂದನೆಗಳು.
- ಶಿವಾನಂದ ಸಂಗಾಪುರ, ರಾಣೇಬೆನ್ನೂರು
ಕೋಪ ಬೇಡ ಸಿದ್ರಾಮಣ್ಣ...
ನಿಮಗೆ ತುಸುಕೋಪ ಎಂಬುದನ್ನು ಕೇಳಿದ್ದೇವೆ. ಯಾವಾಗಲೂ ಮೂಗಿನ ತುದಿಯಲ್ಲೇ ಸಿದ್ದರಾಮಯ್ಯನವರಿಗೆ ಕೋಪ ಅಂತೆಲ್ಲಾ ಮಾತನಾಡೋದನ್ನ ನಾವು ಆಲಿಸಿದ್ದೇವೆ. ಅಧಿಕಾರಿಗಳನ್ನ, ಪತ್ರಕರ್ತರನ್ನ ಉಡಾಫೆಯಾಗಿ ಮಾತನಾಡಿಸುತ್ತೀರಿ ಎಂಬುದನ್ನೂ ಕೇಳಿದ್ದೇವೆ. ಹೀಗಾದ್ರೆ ಹೇಗೆ ಅಲ್ವಾ? ಸಿಟ್ಟು ಬಿಟ್ಟು ಬಿಡಿ ಸಿದ್ರಾಮಣ್ಣ, ಇದು ನಿಮಗೆ ತರವಲ್ಲ. ಸಿದ್ರಾಮಣ್ಣಂಗೆ ಶುಭವಾಗಲಿ...
- ಹರಳಹಳ್ಳಿ ಪುಟ್ಟರಾಜು, ಪಾಂಡವಪುರ
ದಿನವೂ ರೇಷ್ಮೆ ಚಂದವಲ್ಲ
ಮುಖ್ಯಮಂತ್ರಿಯಾದ ಮೇಲೆ ನಿಮ್ಮ ವ್ಯಕ್ತಿತ್ವದಲ್ಲಿ ಬದಲಾವಣೆ ಕಾಣದಿದ್ದರೂ, ಡ್ರೆಸ್ಸಿಂಗ್ ಸೆನ್ಸ್ನಲ್ಲಿ ಒಂದಷ್ಟು ಬದಲಾವಣೆಯಾಗಿರುವುದಂತೂ ಸತ್ಯ. ಸಿಎಂ ಆದಮೇಲಂತೂ ತುಂಬಾನೇ ರೇಷ್ಮೆ ಧರಿಸುತ್ತಿದ್ದೀರಿ. ಹಿಂದೆ ನೀವೇ ಒಂದು ಬಾರಿ ಹೇಳಿದ್ದೀರಿ. ವಿಶೇಷ ಉಡುಪುಗಳನ್ನು ವಿಶೇಷ ಸಂದರ್ಭಗಳಲ್ಲಷ್ಟೇ ಹಾಕಬೇಕು, ಆವಾಗಲೇ ಆ ಡ್ರೆಸ್ಗಳಿಗೆ ಮಹತ್ವ ಅಂತ. ಆದರೆ ಯಾಕೋ ಇದನ್ನು ನೀವೇ ಮರೆತಿದ್ದೀರಿ ಅನ್ನಿಸುತ್ತೆ. ಮುಂಚಿನ ಹಾಗೆಯೇ ಹೆಚ್ಚೆಚ್ಚು ಬಾರಿ ಖಾದಿ ಉಡುಪು ಧರಿಸಿ. ಹಿಂದಿನ ಶೈಲಿಯನ್ನೇ ಮುಂದುವರಿಸಿಕೊಂಡು ಹೋಗಿ.
- ಎಂ.ಜಿ. ನಾಗರಾಜ್, ಶಿವಮೊಗ್ಗ
ಸಮಪಾಲು ಇರಲಿ
ಎಲ್ಲಾ ಪಕ್ಷದ ಶಾಸಕರನ್ನು ಒಂದೇ ಸಮನಾಗಿ ಕಾಣಿ. ಅಭಿವೃದ್ಧಿಯಲ್ಲಿ ಎಲ್ಲಾ ಜಿಲ್ಲೆಗಳಿಗೂ ಸಮಪಾಲು ಇರಲಿ. ಮುಂದಿನ 5 ವರ್ಷಗಳಲ್ಲಿ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ತೊಲಗಿಸಲು ಸಾಧ್ಯವಿಲ್ಲ. ಆದರೆ ತೊಲಗಿಸಲು ಬೇಕಾದ ಬುನಾದಿ ಹಾಕಿ. ಗುಮಾಸ್ತನಿಂದ ಹಿಡಿದು, ಹಿರಿಯ ಅಧಿಕಾರಿವರೆಗೂ ಎಲ್ಲರಲ್ಲೂ ಕರ್ತವ್ಯ ಪ್ರಜ್ಞೆ ಅರಳುವಂತೆ ಮಾಡಿ. ಮಾಹಿತಿ ಕಾಯ್ದೆಯಡಿ ಬರುವ ಅರ್ಜಿಗಳನ್ನು ಸ್ವೀಕರಿಸಿ, ಅದಕ್ಕೆ ಸರಿಯಾದ ಉತ್ತರ ಸಿಗುವಂತೆ ಮಾಡಿ.
- ಗೋಮಿನಿಪ್ರಿಯ, ಸುಬ್ರಮಣ್ಯಪುರ, ಬೆಂಗಳೂರು
THINK & ACT
ಅಧಿಕಾರ ವಹಿಸಿಕೊಂಡ ತಕ್ಷಣ ಅದ್ಯಾಕೋ ಅವಸರವಸರವಾಗಿ ಕೆಲವೊಂದು ಘೋಷಣೆಗಳನ್ನು ಮಾಡಿ ಬಿಟ್ಟಿರಿ. ಇದು ಸರಿಯಲ್ಲ ಎಂಬುದು ನನ್ನ ಅನಿಸಿಕೆ. ವಿವೇಚನಾರಹಿತ ನಿರ್ಧಾರಗಳು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿಬಿಡುತ್ತವೆ. ನಿರ್ಧಾರಗಳನ್ನು ವಿವೇಕಯುತವಾಗಿ ತೆಗೆದುಕೊಳ್ಳಬೇಕು. ACT AND THINK ಅನ್ನುವುದಕ್ಕಿಂತ, THINK AND ACT ಒಳ್ಳೆಯದಲ್ಲವೇ. ಇನ್ನು ಮುಂದೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಕ್ಕಿಂತ ಮುನ್ನ ಸಂಪುಟದ ಸಹೋದ್ಯೋಗಿಗಳ ಜೊತೆಗೆ ಸಾಧಕ ಬಾಧಕಗಳ ಬಗ್ಗೆ ಚರ್ಚೆ ಮಾಡಿ. ಬಳಿಕ ನಿರ್ಧಾರಗಳನ್ನು ಜಾರಿಗೆ ತನ್ನಿ.
- ವಿದ್ಯಾಧರ ಎಂ. ಹೆಗಡೆ, ಕೊರ್ಲಕೈ
ನಿಮ್ಮ ಅನಿಸಿಕೆಗಳನ್ನು ಈ ವಿಳಾಸಕ್ಕೆ ಕಳುಹಿಸಿ: ಕನ್ನಡಪ್ರಭ, ನಂ.1, ಕ್ವೀನ್ಸ್ ರಸ್ತೆ, ಬೆಂಗಳೂರು-560001. ಇ-ಮೇಲ್: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


