ಪ್ರಧಾನ ಸುದ್ದಿ

ರಾಮ್‌ಗೆ ಗೇಟ್‌ಪಾಸ್

ಪಕ್ಷದ ಕೆಲ ನಿರ್ಧಾರಗಳ ವಿರುದ್ಧ ಬಹಿರಂಗವಾಗಿಯೇ ಧ್ವನಿ ಎತ್ತಿದ್ದ ರಾಜ್ಯಸಭಾ ಸದಸ್ಯ, ಹಿರಿಯ ವಕೀಲ ರಾಮ್ ಜೇಠ್ಮಲಾನಿ ವಿರುದ್ಧ ...

Published On :

ನವದೆಹಲಿ: ಪಕ್ಷದ ಕೆಲ ನಿರ್ಧಾರಗಳ ವಿರುದ್ಧ ಬಹಿರಂಗವಾಗಿಯೇ ಧ್ವನಿ ಎತ್ತಿದ್ದ ರಾಜ್ಯಸಭಾ ಸದಸ್ಯ, ಹಿರಿಯ ವಕೀಲ ರಾಮ್ ಜೇಠ್ಮಲಾನಿ ವಿರುದ್ಧ ಬಿಜೆಪಿ ಕೊನೆಗೂ ಶಿಸ್ತುಕ್ರಮ ಕೈಗೊಂಡಿದೆ. ಜೇಠ್ಮಲಾನಿ ಅವರನ್ನು ಆರು ವರ್ಷಗಳ ಕಾಲ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಿದೆ.ಹಣಕಾಸು ಅಕ್ರಮ ಎದುರಿಸುತ್ತಿದ್ದ ಪಕ್ಷದ ಮಾಜಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ವಿರುದ್ಧ ಬಹಿರಂಗವಾಗಿಯೇ ಬಂಡೆದ್ದಿದ್ದ ಜೇಠ್ಮಲಾನಿ ಅವರನ್ನು ಕಳೆದ ನವೆಂಬರ್‌ನಲ್ಲಿ ಸದಸ್ಯತ್ವದಿಂದ ಅಮಾನತು ಮಾಡಿ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು.  ಇಷ್ಟಾದರೂ ಸುಮ್ಮನಿರದ ಜೇಠ್ಮಲಾನಿ ಸಿಬಿಐ ನಿರ್ದೇಶಕರಾಗಿ ರಂಜಿತ್ ಸಿನ್ಹಾ ಅವರನ್ನು ನೇಮಿಸುವ ಸರ್ಕಾರದ ನಿರ್ಧಾರ ವಿರೋಧಿಸಿದ್ದ ಬಿಜೆಪಿ ಮುಖಂಡರ ವಿರುದ್ಧ ಬಹಿರಂಗವಾಗಿಯೇ ಆಕ್ಷೇಪ ವ್ಯಕ್ತಪಡಿಸಿದ್ದರು.    
ಸಿನ್ಹಾರನ್ನು ಸಿಬಿಐ ಮುಖ್ಯಸ್ಥರನ್ನಾಗಿ ನೇಮಿಸಿದ್ದಕ್ಕೆ ಸರ್ಕಾರವನ್ನು ಬೆಂಬಲಿಸಿದ್ದರು. ಇತ್ತೀಚೆಗಷ್ಟೇ ಅವರು ದೆಹಲಿಯಲ್ಲಿ ನಡೆದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಅನುಮತಿಯಿಲ್ಲದೆ ಪ್ರವೇಶಿಸಿ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಶೋಕಾಸ್ ನೋಟಿಸ್ ನೀಡಿದರೂ ಪಕ್ಷದಿಂದ ಯಾಕೆ ಉಚ್ಚಾಟಿಸಿಲ್ಲ ಎಂದು ಪ್ರಶ್ನಿಸಿದ್ದರು. ಜೇಠ್ಮಲಾನಿಯ ಈ ನಡೆ ಸಭೆಯಲ್ಲಿ ನೆರೆದಿದ್ದ ಹಿರಿಯ ಮುಖಂಡರಿಗೆ ತೀವ್ರ ಇರುಸು ಮುರುಸು ಉಂಟು ಮಾಡಿತ್ತು. ಈ ಹಿನ್ನೆಲೆಯಲ್ಲಿ ಜೇಠ್ಮಲಾನಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕೆಂಬ ಬೇಡಿಕೆ ಹೆಚ್ಚಿತ್ತು.
ಈ ಹಿನ್ನೆಲೆಯಲ್ಲಿ ಸೋಮವಾರ ನಡೆದ ಪಕ್ಷದ ಸಂಸದೀಯ ಮಂಡಳಿ ಸಭೆಯಲ್ಲಿ ಜೇಠ್ಮಲಾನಿ ಅವರನ್ನು ಪಕ್ಷದ ಸದಸ್ಯತ್ವದಿಂದ ಉಚ್ಚಾಟನೆ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ವಿಚಾರವನ್ನು ಬಿಜೆಪಿ ಮುಖಂಡ ಅನಂತ್ ಕುಮಾರ್ ಅವರು ಜೇಠ್ಮಲಾನಿ ಅವರಿಗೆ ಪತ್ರ ಬರೆದು ತಿಳಿಸಿದ್ದಾರೆ. 'ನವೆಂಬರ್‌ನಲ್ಲಿ ನೀಡಲಾಗಿದ್ದ ಶೋಕಾಸ್ ನೋಟಿಸ್‌ಗೆ ನೀಡಿದ್ದ ಉತ್ತರವನ್ನು ಪರಿಶೀಲಿಸಿದ ಬಳಿಕ ನೀವು ಪಕ್ಷದ ಶಿಸ್ತು ಉಲ್ಲಂಘಿಸಿದ್ದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಸಂಸದೀಯ ಮಂಡಳಿ ನಿಮ್ಮನ್ನು ಪಕ್ಷದ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಲು ನಿರ್ಧರಿಸಿದೆ ಎಂದು ಅನಂತ್ ಕುಮಾರ್ ಹೇಳಿದ್ದಾರೆ. ಇನ್ನು ಮುಂದೆ ಜೇಠ್ಮಲಾನಿ ಅವರು ರಾಜ್ಯಸಭೆಯಲ್ಲಿ ಸ್ವತಂತ್ರ ಸದಸ್ಯರಾಗಿ ಮುಂದುವರಿಯಲಿದ್ದಾರೆ.

ಕ್ರಮ ಏಕೆ?
-  ಅಕ್ರಮದ ಆರೋಪ ಎದುರಿಸುತ್ತಿದ್ದ ಗಡ್ಕರಿ 2ನೇ ಅವಧಿಗೆ ರಾಷ್ಟ್ರಾಧ್ಯಕ್ಷರಾಗಿ ಮುಂದುವರಿಯುವುದಕ್ಕೆ ಬಹಿರಂಗ ವಿರೋಧ ವ್ಯಕ್ತಪಡಿಸಿದ್ದರು.
-  ಸಿಬಿಐ ನಿರ್ದೇಶಕರಾಗಿ ರಂಜಿತ್ ಸಿನ್ಹಾ ನೇಮಕವನ್ನು ವಿರೋಧಿಸಿದ್ದ ಪಕ್ಷದ ನಿರ್ಧಾರವನ್ನು ಟೀಕಿಸಿದ್ದರು.
-  ಸಂಸದೀಯ ಮಂಡಳಿ ಚುನಾವಣೆ ವೇಳೆ ವಿಪ್ ಉಲ್ಲಂಘನೆ
-  ಅನುಮತಿ ಇಲ್ಲದೆ ಬಿಜೆಪಿ ಸಂಸದೀಯ ಮಂಡಳಿ ಸಭೆಗೆ ಪ್ರವೇಶಿಸಿ ಪಕ್ಷದ ನಿರ್ಧಾರಗಳನ್ನು ಟೀಕಿಸಿ ಶಿಸ್ತು ಉಲ್ಲಂಘನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.