ಪ್ರಧಾನ ಸುದ್ದಿ

ಪಿರಿಯಾಪಟ್ಟಣದಲ್ಲಿ ಶೇ. 84 ಮತದಾನ

Published On :

ಮೈಸೂರು: ಬಿಜೆಪಿ ಅಭ್ಯರ್ಥಿಯಾಗಿದ್ದ ಸಣ್ಣಮೊಗೇಗೌಡ ಅವರ ನಿಧನದಿಂದಾಗಿ ಮುಂದೂಡಲಾಗಿದ್ದ ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ಚುನಾವಣೆ ಮಂಗಳವಾರ ಬಹುತೇಕ ಶಾಂತಿಯುತವಾಗಿ ನಡೆದಿದ್ದು, ಶೇ.83.84 ರಷ್ಟು ಮತದಾನವಾಗಿದೆ.
ಬೆಳಗ್ಗೆ 7ರಿಂದ ಆರಂಭವಾದ ಮತದಾನ ಸಂಜೆ 6ರವರೆಗೆ ನಡೆಯಿತು. ಬೆಳಗ್ಗೆಯಿಂದಲೇ ಮತದಾರರು ಸರತಿಯಲ್ಲಿ ನಿಂತು ಮತ ಚಲಾಯಿಸಿದರು. ಕೆಲವೆಡೆ ಬಿಸಿಲು,  ಮಧ್ಯಾಹ್ನದ ವೇಳೆಗೆ ಕೆಲವೆಡೆ ಸುರಿದ ಮಳೆಯ ಪರಿಣಾಮ ಕೊಂಚ ಅಡಚಣೆಯುಂಟಾಯಿತು.   
ಪಿರಿಯಾಪಟ್ಟಣ ಪೇಟೆ ಮತ್ತು ಬೈಲುಕುಪ್ಪೆಯಲ್ಲಿ ಮತಯಂತ್ರ ದೋಷದಿಂದ 45 ನಿಮಿಷಗಳ ಕಾಲ ವಿಳಂಬವಾಗಿ ಮತದಾನ ಆರಂಭವಾಯಿತು. ಉಳಿದಂತೆ ಕಿತ್ತೂರು, ಕಂಪ್ಲಾಪುರ, ಬೆಟ್ಟದಪುರ ಮುಂತಾದೆಡೆಗಳಲ್ಲಿ ಮತದಾರರ ಪಟ್ಟಿಯಿಂದ ತಮ್ಮ ಹೆಸರು ಕೈಬಿಟ್ಟಿದೆ ಎಂದು ಕೆಲವು ಮತದಾರರು ಆಕ್ರೋಶ ವ್ಯಕ್ತಪಡಿಸಿದರು. ಚುನಾವಣೆ ಹಿನ್ನೆಲೆಯಲ್ಲಿ ಮತಗಟ್ಟೆಗಳ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ರಾಜ್ಯ ಪೊಲೀಸರು ಮಾತ್ರವಲ್ಲದೆ ಬಿಎಸ್‌ಎಫ್ ಯೋಧರ ಸರ್ಪಗಾವಲು ಇತ್ತು. ಮತದಾನ ಕಾರ್ಯವನ್ನು ಸಂಪೂರ್ಣವಾಗಿ ಚಿತ್ರೀಕರಿಸಲಾಯಿತು.
ಮಾತಿನ ಚಕಮಕಿ: ಕಿತ್ತೂರು, ಕಲ್ಲೂರು ಮತ್ತು ಪಿರಿಯಾಪಟ್ಟಣ ಪೇಟೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆದ ಹಿನ್ನೆಲೆಯಲ್ಲಿ ಗುಂಪನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಇದನ್ನು ಹೊರತುಪಡಿಸಿದರೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಚುನಾವಣಾ ಕಣದಲ್ಲಿ ಬಿಎಸ್‌ಪಿಯ ಕೃಷ್ಣ, ಜೆಡಿಎಸ್‌ನ ಕೆ. ಮಹದೇವ್, ಕಾಂಗ್ರೆಸ್‌ನ ಕೆ. ವೆಂಕಟೇಶ್, ಬಿಜೆಪಿಯ ಆರ್.ಟಿ. ಸತೀಶ್, ಬಿಎಸ್‌ಆರ್ ಕಾಂಗ್ರೆಸ್‌ನ ಎಚ್.ಡಿ. ಗಣೇಶ್ ಮತ್ತು ಪಕ್ಷೇತರ ಅಭ್ಯರ್ಥಿ ಕೆ.ಎಸ್. ಶಿವಕುಮಾರ್ ಇದ್ದಾರೆ. ಕೆಜೆಪಿಯ ಎಚ್.ಸಿ. ಬಸವರಾಜು, ಎಸ್‌ಜೆಪಿಯ ನಾರಾಯಣ ಕಣದಿಂದ ಹಿಂದೆ ಸರಿದು ಕಾಂಗ್ರೆಸ್ ಬೆಂಬಲಿಸಿದ್ದಾರೆ. ಚುನಾವಣೆಯ ಮತ ಎಣಿಕೆ ಕಾರ್ಯ ಮೇ 31ರಂದು ಪಿರಿಯಾಪಟ್ಟಣದ ಪುಷ್ಪ ವಿದ್ಯಾ ಸಂಸ್ಥೆಯಲ್ಲಿ ನಡೆಯಲಿದೆ. ಜಿಲ್ಲಾಡಳಿತ ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಅಂದು ನಿಷೇಧಾಜ್ಞೆ ಜಾರಿಗೊಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.