ಪ್ರಧಾನ ಸುದ್ದಿ

ರಕ್ತಸಿಕ್ತ ಪರಿವರ್ತನೆ

ಛತ್ತೀಸ್‌ಗಡದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಪರಿವರ್ತನಾ ರ್ಯಾಲಿ ಅಕ್ಷರಶಃ ರಣರಂಗವಾಗಿದೆ. ರಕ್ತಪಿಪಾಸು ನಕ್ಸಲರು ರ್ಯಾಲಿಯನ್ನು..

ರಕ್ತಸಿಕ್ತ ಪರಿವರ್ತನೆ
Published On :

ರಾಯ್ಪುರ: ಛತ್ತೀಸ್‌ಗಡದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಪರಿವರ್ತನಾ ರ್ಯಾಲಿ ಅಕ್ಷರಶಃ ರಣರಂಗವಾಗಿದೆ.  ರಕ್ತಪಿಪಾಸು ನಕ್ಸಲರು ರ್ಯಾಲಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದು, ಹಿರಿಯ ಕಾಂಗ್ರೆಸ್ ಮುಖಂಡ ಮಹೇಂದ್ರ ಕರ್ಮಾ ಸೇರಿದಂತೆ 25 ಮಂದಿಯನ್ನು ಹತ್ಯೆಗೈದಿದ್ದಾರೆ. ಅಷ್ಟೇ ಅಲ್ಲದೆ, ಛತ್ತೀಸ್‌ಗಡ ಕಾಂಗ್ರೆಸ್ ಮುಖ್ಯಸ್ಥ ನಂದಕುಮಾರ್ ಪಟೇಲ್ ಮತ್ತು ಅವರ ಪುತ್ರನನ್ನೂ ನಕ್ಸಲೀಯರು ಅಪಹರಿಸಿದ್ದಾರೆ.
 ಇದೇ ವೇಳೆ, ಕೇಂದ್ರದ ಮಾಜಿ ಗೃಹ ಸಚಿವ ವಿ.ಸಿ. ಶುಕ್ಲಾ ಅವರ ದೇಹದೊಳಕ್ಕೆ 3 ಗುಂಡುಗಳು ಹೊಕ್ಕಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.
25 ಮಂದಿ ಸಾವು: ಛತ್ತೀಸ್‌ಗಡದ ಜಗದಲ್‌ಪುರ ಜಿಲ್ಲೆಯ ದರ್ಬಗಾಟಿ ಕಣಿವೆಯಲ್ಲಿ ಕಾಂಗ್ರೆಸ್ ಪರಿವರ್ತನ್ ರ್ಯಾಲಿ ನಡೆದಿತ್ತು. ರ್ಯಾಲಿ ಮುಗಿಸಿ ವಾಪಸ್ ಬರುತ್ತಿದ್ದ ವೇಳೆ ದಾರಿಯಲ್ಲಿ ಮರಗಳನ್ನು ಉರುಳಿಸಿದ್ದ ನಕ್ಸಲರು, ಅದೇ ಪ್ರದೇಶದಲ್ಲಿ ನೆಲಬಾಂಬ್ ಅನ್ನೂ ಹುದುಗಿಸಿಟ್ಟಿದ್ದರು. ಮರಗಳು ಬಿದ್ದಿದ್ದರಿಂದ ಕಾಂಗ್ರೆಸ್ ನಾಯಕರುಗಳಿದ್ದ ವಾಹನಗಳನ್ನು ನಿಲ್ಲಿಸಬೇಕಾಯಿತು.
ಈ ವೇಳೆ ನೆಲಬಾಂಬ್ ಸ್ಫೋಟಗೊಂಡಿದ್ದು, ಕೆಲ ವಾಹನಗಳಿಗೆ ಹಾನಿಯಾಗಿದೆ ಹಾಗೂ ಹಲವರಿಗೆ ಗಾಯಗಳಾಗಿವೆ. ಇದೇ ಸಂದರ್ಭವನ್ನು ಬಳಸಿಕೊಂಡ ಶಸ್ತ್ರಸಜ್ಜಿತ ನಕ್ಸಲರು ಒಂದೇ ಸಮನೆ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಿಂದಾಗಿ ಮಹೇಂದ್ರ ಕರ್ಮಾ ಹಾಗೂ ಮಾಜಿ ಶಾಸಕ ಉದಯ್ ಮುದಲಿಯಾರ್, ಕಾಂಗ್ರೆಸ್ ಕಾರ್ಯಕರ್ತರು, ಪೊಲೀಸರು ಸೇರಿದಂತೆ 25 ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಗೃಹ ಇಲಾಖೆ ತಿಳಿಸಿದೆ.
ಸಲ್ವಾ ಜುಡುಮ್‌ಗೆ ಪ್ರತೀಕಾರ: ನಕ್ಸಲ್ ದಾಳಿಗೆ ಬಲಿಯಾಗಿರುವ ಛತ್ತೀಸ್‌ಗಡದ ಮಾಜಿ ಗೃಹ ಸಚಿವರೂ ಆಗಿದ್ದ ಮಹೇಂದ್ರ ಕರ್ಮಾ ಅವರು ವಿವಾದಿತ ನಕ್ಸಲ್ ವಿರೋಧಿ ಚಳವಳಿಯಾದ ಸಲ್ವಾ ಜುಡುಮ್‌ನ ನೇತೃತ್ವ ವಹಿಸಿದ್ದರು. ಈ ಚಳವಳಿ ವೇಳೆ ಹಲವು ನಕ್ಸಲರನ್ನು ಹತ್ಯೆ ಮಾಡಲಾಗಿತ್ತು. ಇದರಿಂದಾಗಿ ಕರ್ಮಾ ಅವರು ನಕ್ಸಲರ ಹಿಟ್ ಲಿಸ್ಟ್‌ನಲ್ಲಿದ್ದರು. ಕರ್ಮಾ ಅವರನ್ನು ಸುತ್ತುವರಿದ 100ರಿಂದ 150 ಮಂದಿ ನಕ್ಸಲರು ಅವರ ದೇಹಕ್ಕೆ ಗುಂಡಿನ ಸುರಿಮಳೆಗೈದಿದ್ದಾರೆ. ಪರಿಣಾಮ ಕರ್ಮಾ ಅವರು ಸ್ಥಳದಲ್ಲೇ ಅಸುನೀಗಿದ್ದಾರೆ. ಜತೆಗೆ, ಕಾಂಗ್ರೆಸ್ ಮುಖ್ಯಸ್ಥ ನಂದಕುಮಾರ್ ಪಟೇಲ್ ಮತ್ತು ಅವರ ಪುತ್ರ ದಿನೇಶ್‌ನನ್ನೂ ನಕ್ಸಲೀಯರು ಅಪಹರಿಸಿದ್ದಾರೆ.


ತಂದೆ, ಸೋದರನ ಬಿಡುಗಡೆಗೆ ಮನವಿ
ತನ್ನ ತಂದೆ ಹಾಗೂ ಸೋದರನನ್ನು ಬಿಡುಗಡೆ ಮಾಡುವಂತೆ ಕಾಂಗ್ರೆಸ್ ನಾಯಕ ನಂದಕುಮಾರ್ ಪಟೇಲ್ ಅವರ ಮತ್ತೊಬ್ಬ ಪುತ್ರ ಉಮೇಶ್ ಪಟೇಲ್ ನಕ್ಸಲೀಯರಲ್ಲಿ ಮನವಿ ಮಾಡಿದ್ದಾರೆ. ಅಪ್ಪನಿಗಾಗಲೀ, ಸೋದರನಿಗಾಗಲೀ ಯಾವುದೇ ಹಾನಿ ಮಾಡದೇ ಅವರನ್ನು ಬಿಡುಗಡೆ ಮಾಡುವಂತೆ ಉಮೇಶ್ ಕೋರಿದ್ದಾರೆ.
ಪಡೆಗಳ ದೌಡು
ಅಪಹರಣಕ್ಕೀಡಾದವರನ್ನು ರಕ್ಷಿಸಲು ಕೂಂಬಿಂಗ್ ಕಾರ್ಯಾಚರಣೆಗಾಗಿ ಕೇಂದ್ರ ಗೃಹ ಸಚಿವಾಲಯ ಹೆಚ್ಚುವರಿ ಅರೆಸೇನಾ ಪಡೆಗಳನ್ನು ಛತ್ತೀಸ್‌ಗಡಕ್ಕೆ ಕಳುಹಿಸಿದೆ. ಘಟನೆ ಸ್ಥಳದಲ್ಲಿ ಸದ್ಯ 600ಕ್ಕೂ ಹೆಚ್ಚು ಸಿಆರ್‌ಪಿಎಫ್ ಸಿಬ್ಬಂದಿ ಕಾರ್ಯಾಚರಣೆಗಿಳಿದಿದ್ದಾರೆ.



ಪ್ರಧಾನಿ, ಸೋನಿಯಾ ತೀವ್ರ ಖಂಡನೆ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ಪ್ರಧಾನಿ ಮನಮೋಹನ್‌ಸಿಂಗ್ ನಕ್ಸಲೀಯರ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಛತ್ತೀಸ್‌ಗಡದ ಘಟನೆಯು ಪ್ರಜಾಪ್ರಭುತ್ವದ ಮೌಲ್ಯದ ಮೇಲೆ ನಡೆದ ದಾಳಿ. ಇದನ್ನು ಕೇವಲ ರಾಜಕೀಯ ಪಕ್ಷಗಳು ಮಾತ್ರವಲ್ಲ, ಇಡೀ ದೇಶಕ್ಕೆ ದೇಶವೇ ಖಂಡಿಸಬೇಕು ಎಂದು ಸೋನಿಯಾ ನುಡಿದಿದ್ದಾರೆ. ಇದೇ ವೇಳೆ, ಘಟನೆ ನಡೆದ ಬೆನ್ನಲ್ಲೇ ಛತ್ತೀಸ್‌ಗಡ ಸಿಎಂ ರಮಣ್‌ಸಿಂಗ್ ಅವರಿಗೆ ಕರೆ ಮಾಡಿದ ಪ್ರಧಾನಿ ಸಿಂಗ್, ರಾಜ್ಯಕ್ಕೆ ಬೇಕಾದಲ್ಲಿ ಕೇಂದ್ರದ ಪಡೆಗಳನ್ನು ಕಳುಹಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಅಷ್ಟೇ ಅಲ್ಲದೆ, ಅಪಹರಣ ಮಾಡಲಾದ ಎಲ್ಲರನ್ನೂ ತಕ್ಷಣವೇ ಬಿಡುಗಡೆ ಮಾಡುವಂತೆ ನಕ್ಸಲೀಯರಿಗೆ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


ರಕ್ತಸಿಕ್ತ ಪರಿವರ್ತನೆ