ಕೈಗೂಡದ ಆಸೆ.. ಮೂಡಿದ ನಿರಾಶೆ..
ಕ.ಪ್ರ. ವಾರ್ತೆ ಬೆಂಗಳೂರು ಮೇ 10
ಮುಖ್ಯಮಂತ್ರಿ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿದ್ದ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಶಾಸಕರ ಸಭೆಯಲ್ಲಿ ಸಿದ್ದರಾಮಯ್ಯ ಅವರ ಕೈ ಮೇಲಾಗುತ್ತಿದ್ದಂತೆ ಬೇಸರದಿಂದ ಹೊರ ನಡೆದರು.
ಕಳೆದ ಎರಡು ದಿನಗಳಿಂದ ಸಿಎಂ ರೇಸ್ನಲ್ಲಿ ಖರ್ಗೆ ಹಾಗೂ ಸಿದ್ದರಾಮಯ್ಯ ಅವರ ಹೆಸರು ಮಾತ್ರವಿತ್ತು. ಹೀಗಾಗಿ ಆ ಹುದ್ದೆಗೆ ಏರುವುದಕ್ಕೆ ಅಗತ್ಯವಾದ ಎಲ್ಲ ಚಟುವಟಿಕೆಗಳನ್ನು ಖರ್ಗೆ ನಡೆಸಿದ್ದರು.
ಎಲ್ಲರನ್ನೂ ಸಂಪರ್ಕಿಸಿದ್ದರು: ಚುನಾವಣೆ ಫಲಿತಾಂಶ ಪ್ರಕಟವಾಗುವುದಕ್ಕೆ ಎರಡು ದಿನ ಮೊದಲು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದ ಅವರು, ಬಹುತೇಕ ಶಾಸಕರ ಜತೆ ದೂರವಾಣಿಯಲ್ಲಿ ಚರ್ಚೆ ನಡೆಸಿದ್ದರು. ಶುಕ್ರವಾರ ಬೆಳಗ್ಗೆ ಕೆಪಿಸಿಸಿ ಕಚೇರಿಗೆ ವೀಕ್ಷಕರು ಬರುವುದಕ್ಕೆ ಮುನ್ನವೇ ಆಗಮಿಸಿದ ಖರ್ಗೆ ತಮ್ಮ ತಂತ್ರ ಯಶಸ್ವಿಯಾಗುತ್ತದೆ ಎಂಬ ವಿಶ್ವಾಸದಲ್ಲಿದ್ದರು. ಮಾತ್ರವಲ್ಲ ಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ, ಎಸ್.ಎಂ.ಕೃಷ್ಣ, ಡಿ.ಕೆ.ಶಿವಕುಮಾರ್ ಸೇರಿದಂತೆ ಹಿರಿಯ ಮುಖಂಡರ ಜತೆ ಚರ್ಚೆ ನಡೆಸಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಕೇಂದ್ರದ ಮೂವರು ಸಚಿವರು ಹಾಗೂ ಹೈಕಮಾಂಡ್ ತಮ್ಮ ನೆರವಿಗೆ ಧಾವಿಸಬಹುದು ಎಂಬ ವಿಶ್ವಾಸ ಅವರಲ್ಲಿ ಇತ್ತು.
ಕೈ ಕೊಟ್ಟರೇ ಹಾಲಿ ಶಾಸಕರು: ಶಾಸಕರ ಅಭಿಪ್ರಾಯ ಸಂಗ್ರಹಣೆ ಪೂರ್ಣ ಮುಕ್ತಾಯವಾಗುವುದಕ್ಕೆ ಮುನ್ನವೇ ಅವರಿಗೆ ತಮ್ಮ ಆಸೆಗೆ ವಿರುದ್ಧವಾದ ಚಟುವಟಿಕೆ ನಡೆಯುವುದು ದೃಢಪಟ್ಟಿತು. ಸಿದ್ದರಾಮಯ್ಯ ಪರ 78 ಶಾಸಕರು ಹಾಗೂ ಖರ್ಗೆ ಪರ 38 ಶಾಸಕರು ತಮ್ಮ ಒಲವು ವ್ಯಕ್ತಪಡಿಸಿದ್ದರು. ಇದಕ್ಕೆ ಮುಖ್ಯ ಕಾರಣ ಸಿದ್ದರಾಮಯ್ಯ ಪರವಾಗಿ ಕಳೆದ ವಿಧಾನಸಭೆಯಲ್ಲಿದ್ದು, ಈ ಬಾರಿ ಮತ್ತೆ ಗೆದ್ದ ಬಹುತೇಕ ಎಲ್ಲ ಶಾಸಕರು ಮತ ಚಲಾಯಿಸಿದ್ದು, ಕೇಂದ್ರ ಸಚಿವರಾದ ನಂತರ ಶಾಸಕರ ಸಂಪರ್ಕ ಕಳೆದುಕೊಂಡಿದ್ದ ಖರ್ಗೆ ಅವರಿಗೆ ಇದು ಮುಳುವಾಯಿತು.ಹೀಗಾಗಿ ಸ್ಪರ್ಧೆಯಲ್ಲಿ ಹಿಂದೆ ಬೀಳಬೇಕಾಯಿತು. ನಾಯಕತ್ವ ವಿಚಾರ ಸ್ಪಷ್ಟವಾಗುತ್ತಿದ್ದಂತೆ 3.15ರ ಸುಮಾರಿಗೆ ಅವರು ಸಭೆಯಿಂದ ಹೊರ ನಡೆದರು. ಮುಖದಲ್ಲಿ ನಗುವಿರಲಿಲ್ಲ. ಮಾಧ್ಯಮದವರು ಎಷ್ಟೇ ಮನವಿ ಮಾಡಿದರೂ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ಕೆಪಿಸಿಸಿ ಆವರಣದಲ್ಲಿದ್ದ ತಮ್ಮ ಬೆಂಬಲಿಗರ ಜತೆಯೂ ಮಾತನಾಡಲಿಲ್ಲ.
ಅಕ್ಕ-ಪಕ್ಕ ಕುಳಿತರೂ ಮಾತಿಲ್ಲ...
ಶಾಸಕರ ಸಭೆ ಸಂದರ್ಭದಲ್ಲಿ ಕೇಂದ್ರ ಸಚಿವರು, ಸಂಸದರು, ವಿಧಾನ ಪರಿಷತ್ ಸದಸ್ಯರು ಭಾಗವಹಿಸಿದ್ದರು. ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ ಹಾಗೂ ಆಂಟನಿ ನೇತೃತ್ವದ ವೀಕ್ಷಕರು ವೇದಿಕೆಯಲ್ಲಿದ್ದರು. ಆದರೆ ಮುಖ್ಯಮಂತ್ರಿ ಹುದ್ದೆಯ ಪ್ರಬಲ ಆಕಾಂಕ್ಷಿಗಳಾದ ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಅಕ್ಕ-ಪಕ್ಕ ಕುಳಿತಿದ್ದರು. ಆದರೆ, ಇಬ್ಬರ ನಡುವೆಯೂ ಮಾತುಕತೆ ಇರಲಿಲ್ಲ. ಕೇಂದ್ರದ ವೀಕ್ಷಕರ ಮಾತಿಗೆ ಮೌನವಾಗಿ ಕಿವಿಯಾದ ಇವರಿಬ್ಬರು, ಪರಸ್ಪರ ಮಾತನಾಡಲಿಲ್ಲ ಎಂದು ಶಾಸಕರೊಬ್ಬರು 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

