ಪ್ರಧಾನ ಸುದ್ದಿ

ಕೃಷ್ಣಗೆ ಬುಲಾವ್

ಟಿಕೆಟ್ ಹಂಚಿಕೆ ಸಂಬಂಧ ತಮ್ಮದೇ ಪಟ್ಟು ಹಿಡಿದು ಕುಳಿತಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಹಾಗೂ ಪ್ರತಿಪಕ್ಷ...

ಕೃಷ್ಣಗೆ ಬುಲಾವ್
Published On :

ಕನ್ನಡಪ್ರಭ ವಾರ್ತೆ ಬೆಂಗಳೂರು ಮಾ.29
ಟಿಕೆಟ್ ಹಂಚಿಕೆ ಸಂಬಂಧ ತಮ್ಮದೇ ಪಟ್ಟು ಹಿಡಿದು ಕುಳಿತಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮೇಲಿನ ವಿಶ್ವಾಸ ಕಳೆದುಕೊಂಡಿರುವ ಹೈಕಮಾಂಡ್ ಪರಿಸ್ಥಿತಿ ತಿಳಿಗೊಳಿಸಲು ರಕ್ಷಣಾ ಸಚಿವ ಎ.ಕೆ.ಆ್ಯಂಟನಿ ನೇತೃತ್ವದಲ್ಲಿ ತ್ರಿಸದಸ್ಯ ಸಮಿತಿ ರಚಿಸಿದೆ.
ವೈಯಕ್ತಿಕ ಹಿತಾಸಕ್ತಿ ಹೊತ್ತು ಕುಳಿತಿರುವ ಪರಮೇಶ್ವರ್, ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ಕೇಂದ್ರ ಚುನಾವಣಾ ಸಮಿತಿ ಸದಸ್ಯರಿಗೆ ಮೂಗುದಾರ ಹಾಕುವ ಜವಾಬ್ದಾರಿಯನ್ನು ಆ್ಯಂಟನಿ, ಅಂಬಿಕಾ ಸೋನಿ ಹಾಗೂ ವಯಲಾರ್ ರವಿ ನೇತೃತ್ವದ ಸಮಿತಿಗೆ ಒಪ್ಪಿಸಲಾಗಿದೆ. ಸಾಲದ್ದಕ್ಕೆ ಮಾಜಿ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರನ್ನೂ ದೆಹಲಿಗೆ ಕರೆಸಿಕೊಳ್ಳಲಾಗಿದ್ದು, ಸಭೆಯಲ್ಲಿ ಪಾಲ್ಗೊಳ್ಳುವಂತೆ ಸೂಚನೆ ನೀಡಲಾಗಿದೆ.
50-50 ಅನುಪಾತದ ಆಧಾರದ ಮೇಲೆ ಟಿಕೆಟ್ ಹಂಚಿಕೆ ಮಾಡಬೇಕು ಎಂಬ ಧೋರಣೆ ಪ್ರದರ್ಶಿಸುತ್ತಿರುವ ಸಿದ್ದರಾಮಯ್ಯ, ಪರಮೇಶ್ವರ್ ಇಬ್ಬರನ್ನೂ ಹೈಕಮಾಂಡ್ ತರಾಟೆಗೆ ತೆಗೆದುಕೊಂಡಿದ್ದು, ಇದೇನು ಖಾಸಗಿ ಆಸ್ತಿಯೇ ಎಂದು ಪ್ರಶ್ನಿಸಿದೆ. ಕೊನೆಗೆ ವಿಧಿ ಇಲ್ಲದೇ ನಿಗಾ ಸಮಿತಿಯ ಮೇಲೊಂದು ನಿಗಾಕ್ಕೆ ಸಮಿತಿ ರಚಿಸುವ ಮೂಲಕ ಕಾಂಗ್ರೆಸ್ ತೀವ್ರ ಅಪಹಾಸ್ಯಕ್ಕೆ ಗುರಿಯಾಗಿದೆ.
27ರ ಪಟ್ಟಿ: ವಿದೇಶಾಂಗ ಮಾಜಿ ಸಚಿವ ಎಸ್.ಎಂ. ಕೃಷ್ಣ ಅವರಿಗೆ ಹೈಕಮಾಂಡ್ ಶುಕ್ರವಾರ ಬುಲಾವ್ ನೀಡಿ ದೆಹಲಿಗೆ ಕರೆಸಿಕೊಂಡಿದೆ.                      
ಒಕ್ಕಲಿಗ ಜನಾಂಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವಂತೆ ಡಿ.ಕೆ. ಶಿವಕುಮಾರ್ ಹಾಗೂ ಬೆಂಬಲಿಗರು ಪಟ್ಟು ಹಿಡಿದಿರುವುದು ಹೈಕಮಾಂಡ್‌ನ್ನು ಇನ್ನಷ್ಟು ಚಿಂತೆಗೀಡು ಮಾಡಿದೆ. ಈ ಹಿನ್ನೆಲೆಯಲ್ಲಿ ಹಿರಿಯ ನಾಯಕರಾದ ಎಸ್.ಎಂ. ಕೃಷ್ಣ ಅವರನ್ನು ಕರೆಸಿಕೊಳ್ಳಲಾಗಿದ್ದು, ಅವರಿಂದ ಬೆಂಗಳೂರು ಸೇರಿದಂತೆ ಹಳೆ ಮೈಸೂರು ಭಾಗದ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆಯಲಾಗಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಎಸ್.ಎಂ. ಕೃಷ್ಣ 27 ಅಭ್ಯರ್ಥಿಗಳ ಪಟ್ಟಿಯನ್ನು ತಮ್ಮ ಜತೆ ದೆಹಲಿಗೆ ಕೊಂಡೊಯ್ದಿದ್ದಾರೆ. ಈ ಪಟ್ಟಿಗೆ ಹೈಕಮಾಂಡ್ ಹೆಚ್ಚೂ ಕಡಿಮೆ ಒಪ್ಪಿಗೆ ನೀಡಿದ್ದು, ಸದ್ದಿಲ್ಲದೇ ಕೃಷ್ಣ ಮೇಲುಗೈ ಸಾಧಿಸಿದ್ದಾರೆ.
ಅಂತಿಮ: ಇಷ್ಟೆಲ್ಲದರ ನಡುವೆಯೂ ಶನಿವಾರ ಸಾಯಂಕಾಲದ ವೇಳೆಗೆ 125 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲು ಹೈಕಮಾಂಡ್ ಸಿದ್ಧತೆ ನಡೆಸಿದೆ. ಬಹುಪಾಲು ಹಾಲಿ ಶಾಸಕರು ಹಾಗೂ ಪ್ರದೇಶ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆಯಲ್ಲಿ ತಯಾರಿಸಿದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಒಂದೇ ಹೆಸರು ಇರುವ ಕ್ಷೇತ್ರಗಳಿಗೆ ಟಿಕೆಟ್ ಘೋಷಣೆಯಾಗುವ ಸಾಧ್ಯತೆ ಇದೆ. ಒಟ್ಟು ಅಭ್ಯರ್ಥಿಗಳ ಪೈಕಿ ಒಂದೇ ಹೆಸರಿನ ಅಭ್ಯರ್ಥಿಗಳು ಶೇ.30ರಷ್ಟು ಇರುತ್ತಾರೆ ಎಂದು ಕಾಂಗ್ರೆಸ್ ನಾಯಕರು ಆರಂಭದಲ್ಲಿ ನಿರೀಕ್ಷಿಸಿದ್ದರು. ಆದರೆ ಅದು ಸಾಧ್ಯವಾಗಿಲ್ಲ. ಈ 125 ಕ್ಷೇತ್ರಗಳನ್ನು ಬಿಟ್ಟರೆ ಉಳಿದ ಕಡೆಗಳಿಗೆ ಟಿಕೆಟ್ ನೀಡುವುದಕ್ಕೆ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ನಡುವೆ ತೀವ್ರ ಭಿನ್ನಮತ ಸೃಷ್ಟಿಯಾಗಿದೆ ಎಂದು ತಿಳಿದು ಬಂದಿದೆ.

ಟಿಕೆಟ್ ಹಂಚಿಕೆ: ಸಿದ್ದರಾಮಯ್ಯಗೆ ಹಿನ್ನಡೆ
ಅಭ್ಯರ್ಥಿಗಳ ಪಟ್ಟಿಯಲ್ಲಿ ತಮ್ಮ ಬೆಂಬಲಿಗರ ಸಂಖ್ಯೆ ಹೆಚ್ಚಿರಬೇಕೆಂದು ಪಟ್ಟು ಹಿಡಿದಿದ್ದು ಮಾತ್ರವಲ್ಲ ತಮಗೆ ಎರಡು ಕ್ಷೇತ್ರಗಳಲ್ಲಿ ಟಿಕೆಟ್ ನೀಡಬೇಕು ಎಂದು ಸಿದ್ದರಾಮಯ್ಯ ಪಟ್ಟು ಹಿಡಿದಿರುವುದೇ ಪ್ರಕ್ರಿಯೆಯನ್ನು ಹೆಚ್ಚು ಜಟಿಲಗೊಳಿಸಿದೆ ಎನ್ನಲಾಗಿದೆ.
ವರುಣಾ ಹಾಗೂ ಚಾಮುಂಡೇಶ್ವರಿ ಎರಡೂ ಕ್ಷೇತ್ರಗಳಿಂದ ತಮಗೆ ಟಿಕೆಟ್ ಬೇಕು ಎಂದು ಸಿದ್ದರಾಮಯ್ಯ ಹಠ ಹಿಡಿದಿದ್ದರು. ಇದಕ್ಕೆ ಅವರು ನೀಡಿರುವ ಕಾರಣವನ್ನು ಒಪ್ಪಲು ಹೈಕಮಾಂಡ್ ಹಾಗೂ ರಾಜ್ಯ ಕಾಂಗ್ರೆಸ್‌ನ ಕೆಲ ಮುಖಂಡರು ಸಿದ್ದರಿರಲಿಲ್ಲ. ಬಿಜೆಪಿ ತೊರೆದು ಜೆಡಿಎಸ್ ಸೇರಿರುವ ಜಿ.ಟಿ. ದೇವೇಗೌಡ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಅವರನ್ನು ಸೋಲಿಸಲು ತನ್ನಿಂದ ಮಾತ್ರ ಸಾಧ್ಯ ಎಂದು ಅವರು ಹೈಕಮಾಂಡ್ ಮುಂದೆ ವಾದ ಮಂಡಿಸಿದ್ದರು.
ಹಾಗಾದರೆ ನೀವು ಚಾಮುಂಡೇಶ್ವರಿಯಿಂದಲೇ ಸ್ಪರ್ಧಿಸಿ ಎಂದು ಹೈಕಮಾಂಡ್ ಸೂಚಿಸಿತ್ತು. ಆದರೆ ವರುಣಾ ಕ್ಷೇತ್ರವನ್ನೂ ತಾವು ಬಿಡುವುದಿಲ್ಲ ಎಂದು ಹಠ ಹಿಡಿದಿದ್ದರೂ ಹೈಕಮಾಂಡ್ ಸೊಪ್ಪು ಹಾಕಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.