ಪ್ರಧಾನ ಸುದ್ದಿ

ಅಂದು ಬಂ ಇಂದು ಬಿಎಸ್‌ವೈ

ಅಂದು ಸಾರೆಕೊಪ್ಪ ಬಂಗಾರಪ್ಪ. ಇಂದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ. ಇಬ್ಬರೂ ಶಿವಮೊಗ್ಗ ಜಿಲ್ಲೆಯವರು. ಬಂಗಾರಪ್ಪ ಅವರು ಮೂಲತಃ ಶಿವಮೊಗ್ಗದವರಾಗಿದ್ದರೆ...

ಅಂದು ಬಂ ಇಂದು ಬಿಎಸ್‌ವೈ
Published On :

ಕನ್ನಡಪ್ರಭ ವಾರ್ತೆ ಬೆಂಗಳೂರು ಮಾ.29
ಅಂದು ಸಾರೆಕೊಪ್ಪ ಬಂಗಾರಪ್ಪ. ಇಂದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ.
ಇಬ್ಬರೂ ಶಿವಮೊಗ್ಗ ಜಿಲ್ಲೆಯವರು. ಬಂಗಾರಪ್ಪ ಅವರು ಮೂಲತಃ ಶಿವಮೊಗ್ಗದವರಾಗಿದ್ದರೆ, ಮಂಡ್ಯ ಮೂಲದ ಯಡಿಯೂರಪ್ಪ ಅವರು ತಮ್ಮ ರಾಜಕೀಯ ಮನ್ವಂತರ ಆರಂಭಿಸಿದ್ದು ಶಿವಮೊಗ್ಗ ಜಿಲ್ಲೆಯಲ್ಲಿ.
ತಮ್ಮನ್ನು ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿಸಿದ ಕಾಂಗ್ರೆಸ್ ಪಕ್ಷ 1994ರಲ್ಲಿ ಅಧಿಕಾರ ಕಳೆದುಕೊಳ್ಳುವಂತೆ ಮಾಡುವಲ್ಲಿ ಎಸ್. ಬಂಗಾರಪ್ಪ ಪ್ರಮುಖ ಪಾತ್ರ ವಹಿಸಿದ್ದರೆ, ಯಡಿಯೂರಪ್ಪ ಅವರು ತಮ್ಮನ್ನು ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತಗೊಳಿಸಿದ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಈಗ ಹೋರಾಡುತ್ತಿದ್ದಾರೆ.
ಬಂಗಾರಪ್ಪ ಪರಿಸ್ಥಿತಿ: 1989ರಲ್ಲಿ ವೀರೇಂದ್ರ ಪಾಟೀಲ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಆದರೆ, ನಂತರದಲ್ಲಿ ಪಾಟೀಲ್ ಅವರನ್ನು ಪದಚ್ಯುತಗೊಳಿಸಿ ಬಂಗಾರಪ್ಪ ಅವರನ್ನು 1990ರ ಅ.17ರಂದು ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ಆದರೆ, ಕ್ಲಾಸಿಕ್ ಕಂಪ್ಯೂಟರ್ ಹಗರಣ ಅವರ ಬೆನ್ನು ಹತ್ತಿತು. ಇದೇ ಅವಧಿಯಲ್ಲಿ ಕಾವೇರಿ ವಿವಾದವೂ ತಾರಕ್ಕೇರಿದ್ದರಿಂದ ಬಂಗಾರಪ್ಪ ಅವರನ್ನು 1992ರ ನವೆಂಬರ್‌ನಲ್ಲಿ ಅಧಿಕಾರದಿಂದ ಕೆಳಗಿಳಿಸಿ, ಮೊಯ್ಲಿ ಅವರನ್ನು ನೇಮಕ ಮಾಡಲಾಯಿತು.
ತನ್ನನ್ನು ಅಧಿಕಾರದಿಂದ ಕೆಳಗಿಳಿಸಿದ ಕಾಂಗ್ರೆಸ್‌ನ ಮೇಲೆ ಸೇಡು ತೀರಿಸಿಕೊಳ್ಳಲು ಬಂಗಾರಪ್ಪ ಅವರು 1994ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕರ್ನಾಟಕ ಕಾಂಗ್ರೆಸ್ ಪಕ್ಷ (ಕೆಸಿಪಿ) ಸ್ಥಾಪಿಸಿದರು. ಬಹಳ ಜೋರಿನಿಂದಲೇ ಆರಂಭವಾದ ಈ ಪಕ್ಷ ವಿಧಾನಸಭೆ ಚುನಾವಣೆಯಲ್ಲಿ 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಿತ್ತು.       
ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.
ಈ ಸಂದರ್ಭದಲ್ಲಿ ಬಂಗಾರಪ್ಪ ಅವರ ನೇತೃತ್ವದ ಕೆಸಿಪಿ ಎಷ್ಟು ಸ್ಥಾನ ಪಡೆಯಿತು ಎಂಬುದಕ್ಕಿಂತಲೂ ಕಾಂಗ್ರೆಸ್ ಪಕ್ಷ ಸೋಲಲು ಪ್ರಮುಖಪಾತ್ರ ವಹಿಸಿತ್ತು. ಕಾಂಗ್ರೆಸ್ ಮತ್ತು ಕೆಸಿಪಿ ನಡುವಿನ ಜಗಳದಲ್ಲಿ ಜೆಡಿಎಸ್ ಸುಲಭವಾಗಿ ಅಧಿಕಾರಕ್ಕೆ ಬರುವಂತಾಯಿತು.
ಯಡಿಯೂರಪ್ಪ ಪರಿಸ್ಥಿತಿ: ಇದೇ ಸ್ಥಿತಿ ಈಗ ಎದುರಾಗಿದೆ. ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ನಡೆದ ಹಗರಣಗಳು, ಅದರಲ್ಲೂ ಮುಖ್ಯವಾಗಿ ಗಣಿ ಹಗರಣದಿಂದಾಗಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕಾಯಿತು. ನಂತರ ಮತ್ತೆ ಅಧಿಕಾರ ಹಿಡಿಯಲು ಸಾಕಷ್ಟು ಪ್ರಯತ್ನ ನಡೆಸಿದರೂ ಅದು ಫಲಪ್ರದವಾಗಲಿಲ್ಲ. ಹೀಗಾಗಿ ಹೊಸ ಪಕ್ಷ ಕಟ್ಟಿ ಬಿಜೆಪಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅಂದು ಬಂಗಾರಪ್ಪ ಅವರು ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಪ್ರತಿಯಾಗಿ ಕರ್ನಾಟಕ ಕಾಂಗ್ರೆಸ್ ಪಕ್ಷ ಕಟ್ಟಿದ್ದರೆ, ಇಂದು ಯಡಿಯೂರಪ್ಪ ಅವರು ಭಾರತೀಯ ಜನತಾ ಪಕ್ಷಕ್ಕೆ ಪ್ರತಿಯಾಗಿ ಕರ್ನಾಟಕ ಜನತಾ ಪಕ್ಷ ಕಟ್ಟಿದ್ದಾರೆ. ಇಬ್ಬರ ಉದ್ದೇಶವೂ ತಮ್ಮನ್ನು ಅಧಿಕಾರದಿಂದ ಪದಚ್ಯುತಗೊಳಿಸಿದ ರಾಷ್ಟ್ರೀಯ ಪಕ್ಷದ ವಿರುದ್ಧ ಸೇಡು ತೀರಿಸಿಕೊಳ್ಳುವುದು.
ಬಂಗಾರಪ್ಪ ಅವರಂತೆಯೇ 'ಜನ ನಾಯಕ' ಎಂಬ ಹಣೆಪಟ್ಟಿ ಹೊಂದಿರುವ ಯಡಿಯೂರಪ್ಪ ಅವರು ಇದೀಗ ತನ್ನ ಮೊದಲ ವೈರಿ ತಮ್ಮನ್ನು ರಾಜಕೀಯವಾಗಿ ಬೆಳೆಸಿದ ರಾಷ್ಟ್ರೀಯ ಪಕ್ಷವೇ ಆಗಿದೆ. ಇದಕ್ಕಾಗಿ ಬಿಜೆಪಿಯನ್ನೇ ಇಬ್ಭಾಗ ಮಾಡಿದ್ದಾರೆ. ಜತೆಗೆ ಇತರೆ ಪಕ್ಷಗಳ ಅತೃಪ್ತರನ್ನು ಜತೆ ಸೇರಿಸಿಕೊಂಡು ಬಿಜೆಪಿ ವಿರುದ್ಧ ತೊಡೆ ತಟ್ಟಿ ನಿಂತಿದ್ದಾರೆ. ಫಲಿತಾಂಶ ಕಾದು ನೋಡಬೇಕಾಗಿದೆಯಾದರೂ ಅಂದು ಕಾಂಗ್ರೆಸ್ ಸೋಲನುಭವಿಸಿದಂತೆ ಇಂದು ಬಿಜೆಪಿ ಸೋಲುವ ಸಾಧ್ಯತೆಗಳು ದಟ್ಟವಾಗಿವೆ.
-ಪ್ರದೀಪ್ ಕುಮಾರ್ ಎಂ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.