ಸೈಬರ್ ಅಟ್ಯಾಕ್

ಲಂಡನ್: ಇಂಟರ್ನೆಟ್ ಮೇಲೆ ಹ್ಯಾಕರ್ಸ್ 'ಬಾಝೂಕಾ' ಎಂಬ 'ಬಾಂಬ್' ಪ್ರಯೋಗಿಸಿದ್ದಾರೆ. ಇತಿಹಾಸದಲ್ಲೇ ಇದೇ ಮೊಟ್ಟ ಮೊದಲ ಬಾರಿಗೆ ಇಂಟರ್ನೆಟ್ ಮೇಲೆ ಆಗಿರುವ ಅತಿದೊಡ್ಡ ದಾಳಿ ಇದು ಎಂದು ಬಣ್ಣಿಸಲಾಗಿದ್ದು ಆಗುವ ನಷ್ಟ ಹೇಳತೀರದಾಗಿದೆ ಎಂದು ಸೈಬರ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ವಾರದಿಂದ ಈ ದಾಳಿ ಆರಂಭವಾಗಿದೆ. ಮೇಲ್ಗಳಿಗೆ ಬರುವ 'ಸ್ಪ್ಯಾಮ್'ಗಳನ್ನು ನಿಯಂತ್ರಿಸುವ ಸ್ಪ್ಯಾಮ್ಹಾಸ್ ಎಂಬ ಎನ್ಜಿಓ ನಡೆಸುವ ಕ್ಲೌಡ್ಫೇರ್ ಎಂಬ ಇಂಟರ್ನೆಟ್ ರಕ್ಷಕ ವೆಬ್ಸೈಟ್ ಮೇಲೆ ಈ ದಾಳಿಯಾಗಿದೆ. ಇದರಿಂದಾಗಿ ಜಗತ್ತಿನಾದ್ಯಂತ ಇಂಟರ್ನೆಟ್ ಸ್ಲೋ ಆಗಿದ್ದು, ಈ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಬಿಗಡಾಯಿಸಲಿದೆ ಎಂದು ಸೈಬರ್ ತಜ್ಞರು ಹೇಳಿದ್ದಾರೆ.
ಇದೊಂದು ಸೇಡಿನ ದಾಳಿ: ಸೈಬರ್ಬಂಕರ್ ಎಂಬ ವೆಬ್ಸೈಟ್ ಅನ್ನು ಸ್ಪಾಮ್ಹಾಸ್ ಬ್ಲಾಕ್ ಮಾಡಿದ್ದೇ ಈ ದಾಳಿಗೆ ಕಾರಣ ಎಂದು ಹೇಳಲಾಗುತ್ತಿದೆ. ಇದರಿಂದ ಸಿಟ್ಟಿಗೆದ್ದ ಸೈಬರ್ಬಂಕರ್ ಈ ವೆಬ್ಸೈಟ್ ಮೇಲೆ ದಾಳಿಗೆ ನಿರ್ಧರಿಸಿತು ಎಂದು ಹೇಳಲಾಗುತ್ತಿದೆ. ಈ ಸಂಸ್ಥೆಯ ವಕ್ತಾರ ಎಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ನೆದರ್ಲೆಂಡ್ನ ಅರಣ್ಯವೊಂದರ ನೆಲದಾಳದಲ್ಲಿರುವ ನ್ಯಾಟೋ ಬಂಕರ್ವೊಂದರಿಂದ ಈ ಕೆಲಸ ಮಾಡಲಾಗಿದೆ ಎಂದೂ ಹೇಳಲಾಗುತ್ತಿದೆ.
ಪರಿಣಾಮ ಏನು?: ಈ ಸೈಬರ್ ದಾಳಿಯಿಂದಾಗಿ ಇಂಟರ್ನೆಟ್ ಸ್ಲೋ ಆಗಬಹುದು ಅಥವಾ ವೆಬ್ಸೈಟ್ಗಳೇ ಕ್ರಷ್ ಆಗಬಹುದು ಎಂದು ತಜ್ಞರು ಹೇಳುತ್ತಾರೆ. ಅಲ್ಲದೆ ಸ್ಪ್ಯಾಮ್ ನಿಯಂತ್ರಿಸುವ ಸ್ಪಾಮ್ಹಾಸ್ ಮೇಲೆಯೇ ದಾಳಿಯಾಗಿರುವುದರಿಂದ ಇನ್ಬಾಕ್ಸ್ಗಳಿಗೆ ಬರುವ ಬಿಟ್ಟಿ ಮೇಲ್ಗಳ ನಿಯಂತ್ರಣ ಕಷ್ಟವಾಗಿ ಜಾಮ್ ಆಗಲಿದೆ. ಇದರಿಂದ ಮುಂದಿನ ದಿನಗಳಲ್ಲಿ ಇಂಟರ್ನೆಟ್ ಇನ್ನಷ್ಟು ಸ್ಲೋ ಆಗಬಹುದು ಎಂದು ಹೇಳಲಾಗುತ್ತಿದೆ.
ಇದೇ ವೇಳೆ ಸೈಬರ್ ದಾಳಿಕೋರರು ಎಲ್ಲಿಂದ ಈ ಕೆಲಸ ಮಾಡುತ್ತಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿ ಗೊತ್ತಾಗಿಲ್ಲ. ನೆದರ್ಲೆಂಡ್ನ ನೆಲದಾಳದ ಜಾಗ ಎಂದು ಹೇಳಲಾಗುತ್ತಿದ್ದರೂ ಅವರು ಪದೇ ಪದೆ ಜಾಗ ಬದಲಾಯಿಸುತ್ತಿದ್ದಾರೆಎಂದು ಹೇಳಲಾಗುತ್ತಿದೆ. ಇದರಿಂದಾಗಿಯೇ ದುಷ್ಕರ್ಮಿಗಳ ಪತ್ತೆ ಗೊತ್ತಾಗುತ್ತಿಲ್ಲ ಎನ್ನಲಾಗುತ್ತಿದೆ.
ಇದು ಅಣು ದಾಳಿ ರೀತಿ: ಸೈಬರ್ ತಜ್ಞರು ಈ ದಾಳಿಯನ್ನು ಅಣು ಬಾಂಬ್ ಪ್ರಯೋಗಕ್ಕೆ ಹೋಲಿಕೆ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಈ ಪ್ರಮಾಣದ ದಾಳಿ ನಡೆಸಲಾಗಿದೆ. ಸೈಬರ್ ಯುಗದಲ್ಲೇ ಇದೊಂದು ದೊಡ್ಡ ದಾಳಿ ಎಂದು ಹೇಳಿದ್ದಾರೆ.
ಈ ದಾಳಿಗೆ ಸೈಬರ್ ತಜ್ಞರು ಬಾಝೂಕಾ ಹೆಸರಿನ ಜೊತೆಗೆ ಡಿಡಿಓಎಸ್ ಎಂದೂ ಕರೆದಿದ್ದಾರೆ. ಇದರ ತಾಂತ್ರಿಕ ರೂಪ ಡಿಸ್ಟ್ರಿಬ್ಯೂಟೆಡ್ ಡಿನಯಲ್ ಆಫ್ ಸರ್ವೀಸ್. ಇದು ಕಂಪ್ಯೂಟರ್ಗಳನ್ನು ಹಾಳು ಮಾಡುತ್ತೆ ಮತ್ತು ವೆಬ್ಸೈಟ್ಗಳನ್ನೇ ಇನ್ನಿಲ್ಲದಂತೆ ಮಾಡುತ್ತದೆ. ಡಿಡಿಓಎಸ್ನ ಮೊದಲ ದಾಳಿಯಾಗಿದ್ದು 1990ರಲ್ಲಿ. ಹಲವು ಜಿಬಿಗಳಲ್ಲಿ ನೆಟ್ವರ್ಕ್ ಕನೆಕ್ಷನ್ಗಳನ್ನು ಸೃಷ್ಟಿಸಿ ಇಂಟರ್ನೆಟ್ ಸ್ಲೋ ಮಾಡುವುದು ಅಥವಾ ಸಂಪರ್ಕಗಳನ್ನೇ ಹಾಳು ಮಾಡುವುದು ಇದರ ಉದ್ದೇಶ. ಕೆಲವೊಮ್ಮೆ ಇದರಿಂದಾಗಿ ರೌಟರ್ಗಳೂ ಹಾಳಾಗುವುದುಂಟು. ಇನ್ನೊಂದು ರೀತಿಯಲ್ಲೂ ಸೈಬರ್ ದಾಳಿಯಾಗುತ್ತದೆ. ಅದೆಂದರೆ, ನಿಗದಿತ ಗುರಿಗೆ ಸೆಕೆಂಡ್ಗೆ ಪ್ರವಾಹದೋಪಾದಿಯಲ್ಲಿ ರಿಕ್ವೆಸ್ಟ್ಗಳನ್ನು ಕಳುಹಿಸಿ ನೆಟ್ವರ್ಕ್ ಬ್ಯುಸಿ ಮಾಡುವುದು. ಇದರಿಂದ ಕೆಲವೊಮ್ಮೆ ಸರ್ವರ್ ಶಟ್ಡೌನ್ ಆಗುವ ಸಂಭವವೂ ಉಂಟು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


