ಪ್ರಧಾನ ಸುದ್ದಿ

ಅಕ್ಕಿ ಅಗ್ಗವಾಗಿ ಸಿಗಲ್ಲ, ಕರೆಂಟ್ ಶಾಕ್ ನೀಡಲ್ಲ

ರಾಜ್ಯದ ವಿದ್ಯುತ್ ಬಳಕೆದಾರರು ತಾತ್ಕಾಲಿಕವಾಗಿ ನಿಟ್ಟುಸಿರು ಬಿಡುವ ಸುದ್ದಿ ಇದು. ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ...

ಅಕ್ಕಿ ಅಗ್ಗವಾಗಿ ಸಿಗಲ್ಲ, ಕರೆಂಟ್ ಶಾಕ್ ನೀಡಲ್ಲ
Published On :

ಕನ್ನಡಪ್ರಭ ವಾರ್ತೆ ಬೆಂಗಳೂರು ಮಾ.28
ರಾಜ್ಯದ ವಿದ್ಯುತ್ ಬಳಕೆದಾರರು ತಾತ್ಕಾಲಿಕವಾಗಿ ನಿಟ್ಟುಸಿರು ಬಿಡುವ ಸುದ್ದಿ ಇದು.
ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ವಿದ್ಯುತ್ ದರ ಏರಿಕೆಗೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ.
ಅದೇ ರೀತಿ 2ಕ್ಕೆ ಕೆ.ಜಿ. ಅಕ್ಕಿ ವಿತರಣೆ ಕಾರ್ಯಕ್ರಮವನ್ನು ಆರಂಭಿಸದಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್‌ಕುಮಾರ್ ಝಾ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಇದು ಬಜೆಟ್‌ನಲ್ಲಿ ಘೋಷಣೆ ಮಾಡಿದ ಯೋಜನೆಯಾಗಿದ್ದರೂ ಈಗ ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಾಗಿ ಜಾರಿ ಅಸಾಧ್ಯ ಎಂದು ಅವರು ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ವಿದ್ಯುತ್ ದರ ಪರಿಷ್ಕರಣೆ ಕುರಿತಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಗುರುವಾರ ತನ್ನ ಆದೇಶ ಹೊರಡಿಸಬೇಕಿತ್ತಾದರೂ ಆದೇಶವನ್ನು ಸದ್ಯಕ್ಕೆ ತಡೆ ಹಿಡಿಯುವಂತೆ ಕೇಂದ್ರ ಚುನಾವಣಾ ಆಯೋಗ ಸೂಚನೆ ನೀಡಿದೆ.
ಈ ವಿಷಯ ತಿಳಿಸಿದ ಕೆಇಆರ್‌ಸಿ ಅಧ್ಯಕ್ಷ ಎಂ.ಆರ್. ಶ್ರೀನಿವಾಸ ಮೂರ್ತಿ ಅವರು, ಕೇಂದ್ರ ಚುನಾವಣಾ ಆಯೋಗದಿಂದ ಸಂದೇಶ ಬಂದ ಹಿನ್ನೆಲೆಯಲ್ಲಿ ವಿದ್ಯುತ್ ದರ ಪರಿಷ್ಕರಣೆ ಆದೇಶವನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ ಎಂದು ಹೇಳಿದರು. ಆದರೆ, ದರ ಪರಿಷ್ಕರಣೆ ಆದೇಶ ಯಾವಾಗ ಎಂಬುದನ್ನು ಅವರು ಸ್ಪಷ್ಟವಾಗಿ ಹೇಳಲಿಲ್ಲ. ದರ ಪರಿಷ್ಕರಣೆ ಆದೇಶವನ್ನು ಸದ್ಯಕ್ಕೆ ತಡೆಹಿಡಿಯುವಂತೆ ಚುನಾವಣಾ ಆಯೋಗ ಸಂದೇಶ ಕಳುಹಿಸಿದೆ. ಆಯೋಗದ ಸಲಹೆಯಂತೆ ನಡೆದುಕೊಂಡಿದ್ದೇವೆ. ದರ ಹೆಚ್ಚಳ ಯಾವಾಗಿನಿಂದ ಜಾರಿಯಾಗುತ್ತದೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎಂದರು.
ವಿಚಾರಣೆ ಪೂರ್ಣ: ವಿದ್ಯುತ್ ದರ ಏರಿಕೆ ಕುರಿತಂತೆ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳ ಪ್ರಸ್ತಾವನೆಗಳ ಬಗ್ಗೆ ವಿಚಾರಣೆ ಪೂರ್ಣಗೊಳಿಸಲಾಗಿದೆ.                  
ಮಾ.31ರೊಳಗೆ ವಿದ್ಯುತ್ ದರ ಪರಿಷ್ಕರಣೆ ಮಾಡಲೇ ಬೇಕಾದ ಅಗತ್ಯವಿದೆ ಎಂಬ ಅಂಶವನ್ನು ಚುನಾವಣಾ ಆಯೋಗದ ಗಮನಕ್ಕೆ ತರಲಾಗಿದೆ. ಆದರೆ, ದರ ಪರಿಷ್ಕರಣೆ ಆದೇಶ ಪ್ರಕಟಿಸಲು ಇನ್ನು ಕೆಲವೇ ನಿಮಿಷ ಬಾಕಿ ಇದೆ ಎನ್ನುವಾಗ ಅದನ್ನು ತಡೆಹಿಡಿಯುವಂತೆ ಚುನಾವಣಾ ಆಯೋಗದಿಂದ ಲಿಖಿತ ಸಂದೇಶ ಬಂದಿದೆ. ಅದರಂತೆ ನಡೆದುಕೊಳ್ಳಲಾಗುತ್ತಿದೆ ಎಂದರು. ಕೆಇಆರ್‌ಸಿ ಸರ್ಕಾರದ ಭಾಗವಲ್ಲದೇ ಇರುವುದರಿಂದ ಮತ್ತು ಅದೂ ಒಂದು ಪ್ರತ್ಯೇಕ ಆಯೋಗವಾಗಿರುವುದರಿಂದ ವಿದ್ಯುತ್ ದರ ಪರಿಷ್ಕರಣೆ ಕುರಿತಂತೆ ಚುನಾವಣಾ ಆಯೋಗದ ಸೂಚನೆಯನ್ನು ಪಾಲಿಸಬೇಕಾದ ಅಗತ್ಯವಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಈಗ ತಾನೇ ಚುನಾವಣಾ ಆಯೋಗದಿಂದ ಸಂದೇಶ ಬಂದಿದೆ. ಹೀಗಾಗಿ ದರ ಪರಿಷ್ಕರಣೆ ಆದೇಶ ತಡೆಹಿಡಿಯಲಾಗಿದೆ. ಮತ್ತೆ ಯಾವಾಗ ಈ ಆದೇಶ ಪ್ರಕಟಿಸಲಾಗುವುದು ಎಂಬ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡುತ್ತೇನೆ ಎಂದರು.
ಮೂರು ತಿಂಗಳಿಗೊಮ್ಮೆ ಪರಿಷ್ಕರಣೆ: ವರ್ಷಕ್ಕೊಮ್ಮೆ ವಿದ್ಯುತ್ ದರ ಏರಿಕೆ ಮಾಡುವ ಬದಲು ವಿದ್ಯುತ್ ಖರೀದಿ ಮತ್ತು ಉತ್ಪಾದನಾ ದರ ಹೆಚ್ಚಳವಾಗುವ ಸಂದರ್ಭದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ವಿದ್ಯುತ್ ದರ ಏರಿಕೆ ಮಾಡುವ ಕುರಿತಂತೆ ಕೆಇಆರ್‌ಸಿ (ಇಂಧನ ದರ ಮತ್ತು ಹೊಂದಾಣಿಕೆ ವೆಚ್ಚ) ನಿಯಂತ್ರಣ 2013 ಅಧಿಸೂಚನೆ ಹೊರಡಿಸಲಾಗಿದೆ. ಆದರೆ, ಈ ಸಂದರ್ಭದಲ್ಲಿ ಪ್ರತಿ ಯೂನಿಟ್‌ಗೆ 10 ಪೈಸೆಗಿಂತ ಹೆಚ್ಚು ದರ ಏರಿಕೆ ಮಾಡಬೇಕಿದ್ದರೆ ಕೆಇಆರ್‌ಸಿ ಅನುಮೋದನೆ ಪಡೆಯಬೇಕಾಗುತ್ತದೆ ಎಂದು ಹೇಳಿದರು. ಒಂದು ವೇಳೆ ಒಂದು ತ್ರೈಮಾಸಿಕದಲ್ಲಿ ಮಾಡಿದ ದರ ಹೆಚ್ಚಳ ಖರೀದಿ ಮತ್ತು ಉತ್ಪಾದನಾ ದರ ಹೆಚ್ಚಳಕ್ಕಿಂತ ಜಾಸ್ತಿಯಾಗಿದ್ದರೆ ನಂತರದ ತ್ರೈಮಾಸಿಕದಲ್ಲಿ ಕೆಇಆರ್‌ಸಿ ಮಧ್ಯೆ ಪ್ರವೇಶಿಸಿ ಏರಿಸಿರುವ ದರವನ್ನು ಕಡಿಮೆ ಮಾಡಲಿದೆ ಎಂದೂ ಅಧ್ಯಕ್ಷ ಶ್ರೀನಿವಾಸಮೂರ್ತಿ ಸ್ಪಷ್ಟಪಡಿಸಿದರು. ವರ್ಷಕ್ಕೆ ಒಮ್ಮೆ ಮಾತ್ರ ದರ ಪರಿಷ್ಕರಣೆ ಮಾಡುವ ಸಂದರ್ಭದಲ್ಲಿ ಈ ಮಧ್ಯೆ ವಿದ್ಯುತ್ ಖರೀದಿ ಮತ್ತು ಉತ್ಪಾದನಾ ದರ ಹೆಚ್ಚಳವಾದಾಗ ವಿದ್ಯುತ್ ವಿತರಣಾ ಕಂಪನಿಗಳು ಅನುಭವಿಸುವ ನಷ್ಟವನ್ನು ಸೇರಿಸಿ ದರ ಹೆಚ್ಚಳ ಮಾಡಬೇಕಾಗುತ್ತದೆ. ಇದು ಗ್ರಾಹಕರಿಗೆ ಹೊರೆಯಾಗುತ್ತದೆ. ಅದರ ಬದಲು ಪ್ರತಿ ಮೂರು ತಿಂಗಳಿಗೊಮ್ಮೆ ದರ ಏರಿಸಿದರೆ ಗ್ರಾಹಕರ ಮೇಲಿನ ಹೊರೆಯೂ ಕಡಿಮೆಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಕೆಇಆರ್‌ಸಿ ಸದಸ್ಯರಾದ ವಿ. ಹಿರೇಮಠ್ ಮತ್ತು ಕೆ. ಶ್ರೀನಿವಾಸ್ ರಾವ್, ವಿದ್ಯುತ್ ವಿತರಣಾ ಕಂಪನಿಗಳ ಮುಖ್ಯಸ್ಥರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಬಿಜೆಪಿ ಸರ್ಕಾರಕ್ಕೆ ಕೊಂಚ ನಿರಾಳ
ಬಿಪಿಎಲ್ ಕಾರ್ಡ್‌ದಾರರಿಗೆ ವಿತರಿಸುವ ಅಕ್ಕಿ ದರ ಇಳಿಕೆ, ಫಲಾನುಭವಿ ಆಧರಿತ ಯೋಜನೆಗಳಿಗೆ ತಡೆ ನೀಡಿರುವುದು ಸೇರಿದಂತೆ ನೀತಿ ಸಂಹಿತೆ ಹೆಸರಿನಲ್ಲಿ ಕೇಂದ್ರ ಚುನಾವಣಾ ಆಯೋಗ ಹಾಕಿರುವ ನಿರ್ಬಂಧಗಳಿಂದ ಕಂಗೆಟ್ಟಿದ್ದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ ವಿದ್ಯುತ್ ದರ ಏರಿಕೆಗೆ ಬ್ರೇಕ್ ಬಿದ್ದಿರುವುದರಿಂದ ಕೊಂಚ ನಿರಾಳವಾಗಿದೆ. ವಿದ್ಯುತ್ ದರ ಏರಿಕೆಗೂ ಸರ್ಕಾರಕ್ಕೂ ಸಂಬಂಧ ಇಲ್ಲದೇ ಇದ್ದರೂ ಬಿಜೆಪಿ ಸರ್ಕಾರದ ಅವಧಿಯಲ್ಲಿ ದರ ಹೆಚ್ಚಳವಾಗಿದೆ ಎಂಬ ಅಂಶ ಚುನಾವಣೆ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕ ಆಡಳಿತ ಪಕ್ಷಕ್ಕೆ ಇತ್ತು. ಈಗಾಗಲೇ ಆಂತರಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಬಿಜೆಪಿಗೆ ವಿದ್ಯುತ್ ದರ ಏರಿಕೆ ದೊಡ್ಡ ತಲೆನೋವಾಗಿತ್ತು. ಆದರೆ, ವಿದ್ಯುತ್ ದರ ಪರಿಷ್ಕರಣೆ ಕುರಿತ ಕೆಇಆರ್‌ಸಿ ನಿರ್ಧಾರವನ್ನು ಪ್ರಕಟಿಸದಂತೆ ಕೇಂದ್ರ ಚುನಾವಣಾ ಆಯೋಗ ನೀಡಿರುವ ಸೂಚನೆ ಆಡಳಿತ ಪಕ್ಷದ ಮುಖಂಡರಲ್ಲಿ ನೆಮ್ಮದಿ ತಂದಿದೆ. ಅದರಲ್ಲೂ ಮುಖ್ಯವಾಗಿ ಇಂಧನ ಇಲಾಖೆಯ ನಿರ್ವಹಣೆ ನೋಡಿಕೊಳ್ಳುತ್ತಿರುವ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನಿರಾಳರಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.