ಪ್ರಧಾನ ಸುದ್ದಿ

ಲೆವಿ ಲವ್!

ಅತ್ತ ಕೇಂದ್ರ ಸರ್ಕಾರ ಸಕ್ಕರೆ ಲೆವಿ ಪದ್ಧತಿ ರದ್ದು ಮಾಡಿದ್ದರೆ, ಇತ್ತ ಕರ್ನಾಟಕ ಸರ್ಕಾರ ಮೂರು ದಶಕಗಳಷ್ಟು ಹಿಂದೆ ರದ್ದಾಗಿದ್ದ ಪದ್ಧತಿಯನ್ನು ಮರು ಜಾರಿ ಮಾಡಲು...

ಲೆವಿ ಲವ್!
Published On :

ನವದೆಹಲಿ: ಅತ್ತ ಕೇಂದ್ರ ಸರ್ಕಾರ ಸಕ್ಕರೆ ಲೆವಿ ಪದ್ಧತಿ ರದ್ದು ಮಾಡಿದ್ದರೆ, ಇತ್ತ ಕರ್ನಾಟಕ ಸರ್ಕಾರ ಮೂರು ದಶಕಗಳಷ್ಟು ಹಿಂದೆ ರದ್ದಾಗಿದ್ದ ಪದ್ಧತಿಯನ್ನು ಮರು ಜಾರಿ ಮಾಡಲು ಪರಿಶೀಲಿಸುತ್ತಿದೆ!
ಒಂದು ರುಪಾಯಿಗೆ ಒಂದು ಕೆಜಿ ಅಕ್ಕಿ ನೀಡುವ ಯೋಜನೆ ಜಾರಿ ಮಾಡುತ್ತಿರುವ ರಾಜ್ಯ ಸರ್ಕಾರಕ್ಕೆ ಆರ್ಥಿಕ ಹೊರೆ ತಗ್ಗಿಸಿಕೊಳ್ಳಲು ಸದ್ಯಕ್ಕೆ ಸಿಕ್ಕಿರುವ ಪರಿಹಾರ 'ಲೆವಿ ಪದ್ಧತಿ' ಮರು ಜಾರಿ. ಎಲ್ಲಾ ಅಂದುಕೊಂಡಂತೆ ಆದರೆ, ಪ್ರಸಕ್ತ ಸುಗ್ಗಿಯಿಂದಲೇ ಲೆವಿ ಪದ್ಧತಿಜಾರಿ ಆಗಬಹುದು. ನೂತನ ಕಾಂಗ್ರೆಸ್ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಗೆ ಕೇಂದ್ರ ಸರ್ಕಾರದಿಂದ ನಿರೀಕ್ಷಿತ ನೆರವು ಬಾರದ ಹಿನ್ನೆಲೆಯಲ್ಲಿ ಲೆವಿ ಪದ್ಧತಿಗೆ ಮೊರೆ ಹೋಗಲಾಗುತ್ತಿದೆ.
ಲೆವಿ ಪದ್ಧತಿ ಜಾರಿಗೆ ಬಂದರೆ ಬತ್ತ ಬೆಳೆಯುವ ಪ್ರತಿಯೊಬ್ಬ ರೈತ ಇಂತಿಷ್ಟು ಪ್ರಮಾಣದಲ್ಲಿ ರಾಜ್ಯ ಸರ್ಕಾರಕ್ಕೆ ಕಡ್ಡಾಯವಾಗಿ ಬತ್ತವನ್ನು ನೀಡಲೇಬೇಕಾಗುತ್ತದೆ. ಬತ್ತಕ್ಕೆ ದರ ನಿಗದಿ ಮಾಡುವ ಅಧಿಕಾರ ರೈತರಿಗಿಲ್ಲ. ರಾಜ್ಯ ಸರ್ಕಾರ ನಿಗದಿ ಮಾಡದ ದರಕ್ಕೆ ಮಾರಾಟ ಮಾಡಲೇಬೇಕು. ಒಂದು ವೇಳೆ ರೈತ ಲೆವಿ ಬತ್ತ ನೀಡಲು ನಿರಾಕರಿಸಿದರೆ ಆತನ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಿ ಶಿಕ್ಷೆಗೆ ಒಳ ಪಡಿಸಬಹುದು.
ಒಂದು ರುಪಾಯಿಗೆ ಒಂದು ಕೆಜಿ ಅಕ್ಕಿ ವಿತರಿಸುವ ಯೋಜನೆಗಾಗಿ ಲೆವಿ ಪದ್ಧತಿಯನ್ನು ಮತ್ತೆ ಜಾರಿಗೆ ತರಲು ಪರಿಶೀಲಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಅಕ್ಕಿ ಯೋಜನೆ ಜಾರಿಗೆ ಈಗ ಛತ್ತೀಸ್‌ಗಡ ಸರ್ಕಾರದಿಂದ ಅಕ್ಕಿ ಖರೀದಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಉಭಯ ಸರ್ಕಾರಗಳು ಒಪ್ಪಂದ ಮಾಡಿಕೊಂಡಿವೆ. ಇದು ತಾತ್ಕಾಲಿಕ ವ್ಯವಸ್ಥೆ ಮಾತ್ರ. ದೀರ್ಘ ಕಾಲದಲ್ಲಿ ರಾಜ್ಯ ಸರ್ಕಾರ ಮುಕ್ತ ಮಾರುಕಟ್ಟೆಯಲ್ಲಿ ಖರೀದಿ ಮಾಡಿ ಒಂದು ರುಪಾಯಿಗೆ ಅಕ್ಕಿ ವಿತರಿಸುವುದು ಆರ್ಥಿಕವಾಗಿ ಭಾರಿ ಹೊರೆಯಾಗಲಿದೆ. ಹೀಗಾಗಿ ರಾಜ್ಯದಲ್ಲೇ ಬೆಳೆಯುವ ಬತ್ತವನ್ನೇ ಖರೀದಿಸಿ ಸಂಸ್ಕರಿಸಿ ವಿತರಿಸಲು ಲೆವಿ ಪದ್ಧತಿ ಜಾರಿ ಮಾಡಲು ಯೋಚಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಕಾರ, ಲೆವಿ ಪದ್ದತಿ ಜಾರಿ ಇನ್ನೂ ಪರಿಶೀಲನೆ ಹಂತದಲ್ಲಿದೆ. ಆದರೆ, ಆರ್ಥಿಕ ಹೊರೆ ತಗ್ಗಿಸಿಕೊಳ್ಳಲು ಲೆವಿ ಪದ್ಧತಿ ಜಾರಿಗೆ ಅಧಿಕಾರಿಗಳು ಸಲಹೆ ನೀಡಿದ್ದಾರೆಎನ್ನಲಾಗಿದೆ.

ಸಕ್ಕರೆ ಲೆವಿ ರದ್ದು ಮಾಡಿರುವ ಕೇಂದ್ರ: ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಸಕ್ಕರೆ ಮಾರಾಟ ಮಾಡಲು ಇದುವರೆಗೆ ಕೇಂದ್ರ ಸರ್ಕಾರ ಸಕ್ಕೆರೆಯನ್ನು ಕಾರ್ಖಾನೆಗಳಿಂದ ಲೆವಿ ಪದ್ಧತಿಯಡಿ ಖರೀದಿಸುತ್ತಿತ್ತು. ಆದರೆ, ಕೇಂದ್ರ ಸರ್ಕಾರ ಸಕ್ಕರೆ ಮೇಲಿನ ನಿಯಂತ್ರಣ ಸಡಿಲಿಸಿದೆ. ಜತೆಗೆ ಲೆವಿ ಪದ್ಧತಿಯನ್ನು ರದ್ದು ಮಾಡಿದೆ.
ಏಪ್ರಿಲ್ 4ರಂದು ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಕ್ಕರೆ ಮೇಲಿನ ನಿಯಂತ್ರಣ ಸಡಿಲಿಸಲು ಶಿಫಾರಸು ಮಾಡಿತ್ತು. ಸಂಪುಟವು ಅದನ್ನು ಒಪ್ಪಿತ್ತು. ಮೇ 2 ರಂದು ಕೇಂದ್ರ ಸರ್ಕಾರ ಸಕ್ಕರೆ ಮೇಲಿನ ನಿಯಂತ್ರಣ ಸಡಿಲಿಸಿದ ಆದೇಶದ ಅಧಿಸೂಚನೆ ಪ್ರಕಟಿಸಿದೆ.  ಆದೇಶದ ಎರಡು ಪ್ರಮುಖ ಅಂಶ ಎಂದರೆ- ಲೆವಿ ಪದ್ಧತಿಯನ್ನು ಪೂರ್ಣ ರದ್ದು ಮಾಡುವುದು. ಅಂದರೆ ಇನ್ನು ಮುಂದೆ ಸಕ್ಕರೆ ಕಾರ್ಖಾನೆಗಳು ತಾವು ಉತ್ಪಾದಿಸಿದ ಸಕ್ಕರೆಯ ಶೇ.10ರಷ್ಟನ್ನು (ಲೆವಿ) ಕೇಂದ್ರ ಸರ್ಕಾರಕ್ಕೆ ರಿಯಾಯ್ತಿ ದರದಲ್ಲಿ ನೀಡಬೇಕಿಲ್ಲ. ಸಕ್ಕರೆ ಕಾರ್ಖಾನೆಗಳು ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡಬೇಕಾದ ಸಕ್ಕರೆ ಪ್ರಮಾಣವನ್ನು ಕೇಂದ್ರ ಸರ್ಕಾರ ನಿಯಂತ್ರಿಸುವಂತಿಲ್ಲ. ಇದುವರೆಗೆ ಅಗತ್ಯ ವಸ್ತುಗಳ ಕಾಯ್ದೆ ಹಾಗೂ ಸಕ್ಕರೆ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಕೇಂದ್ರ ಸರ್ಕಾರ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತಿತ್ತು.

ಹೆಗಡೆ ರದ್ದು ಮಾಡಿದ್ದ ಲೇವಿ ಪದ್ಧತಿ:
ಲೆವಿ ಪದ್ಧತಿಯು ರೈತ ವಿರೋಧಿ ಪದ್ಧತಿ. ಇದನ್ನು ರೈತರು ಕಾಲಕಾಲಕ್ಕೆ ವಿರೋಧಿಸುತ್ತಲೇ ಇದ್ದರು. ಆದರೆ, ಕರ್ನಾಟಕ ರಾಜ್ಯ ರೈತ ಸಂಘ ರೂಪುಗೊಂಡ ನಂತರ ಸಂಘಟಿತ ಹೋರಾಟ ಆರಂಭವಾಗಿತ್ತು.
ಲೆವಿ ಚೀಟಿಗಳನ್ನು ಸುಡುವ, ಲೆವಿ ಗೇಟ್ಗಳನ್ನು ಮುರಿದು ಹಾಕುವ ಮೂಲಕ ರೈತ ಸಂಘ ಲೆವಿ ಪದ್ಧತಿಗೆ ತನ್ನ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ರೈತರ ಹೋರಾಟಕ್ಕೆ ಮಣಿದ ರಾಮಕೃಷ್ಣ ಹೆಗ್ಗಡೆ ಸರ್ಕಾರ ಲೆವಿ ಪದ್ಧತಿಯನ್ನು ರದ್ದು ಮಾಡಿತ್ತು. ಆದಾದ ದಶಕಗಳ ನಂತರ ಈಗ ಹೊಸ ಸರ್ಕಾರ ರಾಜ್ಯದಲ್ಲಿ ಲೆವಿ ಪದ್ಧತಿ ಜಾರಿ ಮಾಡುವ ಬಗ್ಗೆ ಪರಿಶೀಲನೆ ಮಾಡುತ್ತಿದೆ.

- ರೇಣುಕಾಪ್ರಸಾದ್ ಹಾಡ್ಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.