ಪ್ರಧಾನ ಸುದ್ದಿ

ಆಫ್ರಿಕಾ ಕಾಡು ನೋಡುವುದೇ ಅಂದ

ಒಂದೊಂದು ಮರಕ್ಕೂ ಅಂದಾಜು 125 ವರ್ಷ, ಸೂರ್ಯನ ಬೆಳಕು ಪ್ರವೇಶವೇ ಅಸಾಧ್ಯ! ಕಿಗಾಲಿ, ರವಾಂಡಾ: ಅದು ನರಮಾನವರು...

ಆಫ್ರಿಕಾ ಕಾಡು ನೋಡುವುದೇ ಅಂದ
Published On :

ಒಂದೊಂದು ಮರಕ್ಕೂ ಅಂದಾಜು 125 ವರ್ಷ, ಸೂರ್ಯನ ಬೆಳಕು ಪ್ರವೇಶವೇ ಅಸಾಧ್ಯ!
ಕಿಗಾಲಿ, ರವಾಂಡಾ: ಅದು ನರಮಾನವರು ಕಾಲಿಡುವಂಥ ಕಾಡಲ್ಲ. ಆಫ್ರಿಕಾದ ಕಾಡುಗಳು ಹೇಗಿರುತ್ತವೆಂಬುದನ್ನು ಕಾದಂಬರಿಗಳ ವರ್ಣನೆಯಲ್ಲಷ್ಟೇ ದಕ್ಕಿದ್ದವು. ಇಂಗ್ಲಿಷ್ ಸಿನಿಮಾಗಳಲ್ಲಷ್ಟೇ ನೋಡಿ ಗೊತ್ತಿತ್ತು. ಆದರೆ ರವಾಂಡಾ ಹಾಗೂ ಕಾಂಗೋ ಗಡಿಯಲ್ಲಿನ ಕಿನಿಗಿ ಎಂಬ ಪ್ರಾಂತದಲ್ಲಿರುವ ಆ ಕಾಡಿನ ಗರ್ಭದಿಂದ ಹೊರಬಂದಾಗ, ಬೇರೆಯದೇ ಒಂದು ಅದ್ಭುತ, ಹಿಂದೆಂದೂ ನೋಡದ ಒಂದು ರೋಚಕ ಜಗತ್ತಿಗೆ ಹೋಗಿ ಬಂದ ಅನುಭವವಾಯಿತು.
ಕಾಡು ನನಗೆ ಹೊಸತೇನಲ್ಲ. ಮಲೆನಾಡಿನಲ್ಲಿ ಬೆಳೆದವರಿಗೆ ಕಾಡು ಪ್ರೀತಿ ಹುಟ್ಟಿರಬಹುದೇ ಹೊರತು ಭೀತಿ, ಬೆರಗನ್ನು ಮೂಡಿಸುವುದಿಲ್ಲ. ನಮ್ಮ ನಾಗರಹೊಳೆ, ಬಂಡೀಪುರದ ಕಾಡಿನಲ್ಲಿ ತಿರುಗಿದವರಿಗೆ ಕಾಡಿನ ವಿಸ್ಮಯವೇನೆಂಬುದು ಗೊತ್ತು. ಆದರೆ ನಾವು ಕಾಲಿಟ್ಟ ಆ ಕಾಡಿದೆಯಲ್ಲ ಅದು ಕಾಡಾ? ಗೊಂಡಾರಣ್ಯವಾ? ಕತ್ತಲೆಯ ಕಾನನವಾ? ಜೀವವೈವಿಧ್ಯಗಳ ಸಾಗರವಾ?
ಸೂರ್ಯ ಮರ - ಗಿಡಗಳನ್ನು ' ಹೋಳು ' ಮಾಡಿಕೊಂಡು ಒಳಗೆ ನುಸುಳಲು ಹರಸಾಹಸ ಮಾಡುತ್ತಿದ್ದ. ಆ ಕಾಡಿನಲ್ಲಿ ಆತ ಒಳಗೆ ಕಾಲಿಡದೇ ಅವೆಷ್ಟೋ ವರ್ಷಗಳು ಆಗಿರಬೇಕು. ಅಂಥ ದಟ್ಟ ಅರಣ್ಯ! ಒಂದೊಂದು ಮರಕ್ಕೆ ಏನಿಲ್ಲವೆಂದರೂ ನೂರು- ನೂರಿಪ್ಪತ್ತೈದು ವರ್ಷಗಳಾಗಿರಬಹುದು. 'ಇದು ನೋಡಿ ಇನ್ನೂರ ನಲವತ್ತು ವರ್ಷದ ಮರ. ಇಂಥ ಕನಿಷ್ಠ ಐದು ಸಾವಿರ ಮರಗಳು ಇಲ್ಲಿವೆ. ಈ ಮರದ ಮೈದಡವಿ ನೋಡಿ. ಹತ್ತು ಜನ ಸೇರಿದರೂ ಇದನ್ನು ಆಲಂಗಿಸಿಕೊಳ್ಳಲು ಆಗೊಲ್ಲ. ಮೈಮೇಲೆ ಹರಡಿಕೊಂಡ ಉಣ್ಣೆಯಂಥ ಹುಲ್ಲನ್ನು ಗಮನಿಸಿದರೆ ಇದು ಎಷ್ಟು ನೀರು ಕುಡಿದಿರಬಹುದೆಂಬುದನ್ನು ಅಂದಾಜು ಹಾಕಬಹುದು ' ಎಂದು ಫಾರೆಸ್ಟ್ ಗೈಡ್ ಒಂದೊಂದೇ ಮರದ ಕತೆಗಳನ್ನು ರಸವತ್ತಾಗಿ ಬಣ್ಣಿಸುತ್ತಿದ್ದರೆ, ಚಂದಮಾಮ ಕತೆಗಳಿಗೆ ಕಿವಿಯರಳಿಸಿಕೊಂಡ ಪುಟ್ಟ ಮಗುವಿನಂತಾಗಿದ್ದೆ.
ಒಂದು ಕಾಡು ಹೀಗೂ ಇರಲು ಸಾಧ್ಯವಾ ಎಂಬ ನನ್ನ ಎಲ್ಲ ಕಲ್ಪನೆ, ಊಹೆಗಳನ್ನು ರಾಶಿ ಮಾಡಿಕೊಂಡರೂ ಇಂಥದೊಂದು ಕಾಡನ್ನು ಮನಸ್ಸಿನಲ್ಲಿ ಕಟ್ಟಿಕೊಳ್ಳಲು ಸಾಧ್ಯವಿರಲಿಲ್ಲ. ಅಂಥ ಕಾಡಿನಲ್ಲಿ ಸುಮಾರು ಹತ್ತು ತಾಸು ಕಳೆದು, ಹತ್ತಾರು ಕಿಮೀ ಕ್ರಮಿಸಿ ಬಂದಾಗ ಕನಸಿನ ಲೋಕದಲ್ಲಿ ಕಲ್ಪನೆಯನ್ನು ಮೊಗೆದು ಬಂದ ಅನುಭವ!

ಗೊರಿಲ್ಲಾಗಳ ದೂರದ ಸಂಬಂಧಿಯಂತಿರುವ ಮತ್ತು ಹಾಗೇ ಕಾಣುವ ಫಾರೆಸ್ಟ್ ಗೈಡ್, ಮರವೇರಿ ಅದರ ಟೊಂಗೆ ಮುರಿದು, ಎಲೆಗಳನ್ನು ಕುಯ್ದು ಕಚಕಚ ಅಗಿದು ಅವುಗಳನ್ನು ತಿನ್ನುತ್ತಾ, ' ಇದೊಂದನ್ನೇ ಸೇವಿಸಿ, ಈ ಜನ್ಮದಲ್ಲಿ ಯಾವ ರೋಗವೂ ಬರೊಲ್ಲ, ಅದಕ್ಕೆ ನಾನೇ ಸಾಕ್ಷಿ' ಎಂದು ಅದರ ಮಹಿಮೆಯನ್ನು ಬಣ್ಣಿಸುತ್ತಿದ್ದರೆ, ಆ ದುರ್ಗಮ ಕಾಡಿನಲ್ಲಿ ನನ್ನ ಮೊಬೈಲ್ ಫೋನ್ ಒಂದೇ ಸಮನೆ ಕಿರುಚಿಕೊಳ್ಳುತ್ತಿತ್ತು. ' ಸಾರ್ ಆಗಲೇ ಇಲ್ಲಿ ರಾತ್ರಿ ಎಂಟೂವರೆಆಯಿತು. ಇನ್ನೂ ನಿಮ್ಮ ರವಾಂಡಾ ಡೈರಿ ಬಂದಿಲ್ಲ ' ಎಂದು ತ್ಯಾಗರಾಜ್ ಹೇಳುತ್ತಿದ್ದರೆ, ವಾಚನ್ನು ನೋಡಿಕೊಂಡೆ, ಸಾಯಂಕಾಲ ಐದು ಗಂಟೆ. ಆ ಕಾಡಿನಲ್ಲಿ ಕುಳಿತು ಎಲ್ಲಿ ಬರೆಯೋದು? ಹೇಳಲು ವಿಷಯಗಳು ಸಾಕಷ್ಟಿದ್ದವು. ಬರೆದಿದ್ದನ್ನು ಕಳಿಸಲು ಆ ದಟ್ಟ ಅರಣ್ಯದಲ್ಲಿ ತ್ರೀಜಿ ಇಂಟರ್‌ನೆಟ್ ಸಂಪರ್ಕವೂ ಇತ್ತು. ಆದರೆ ಕುಳಿತು ಬರೆಯಲು ಆಗುತ್ತಿರಲಿಲ್ಲ. ಹೀಗಾಗಿ ನಿನ್ನೆಯ 'ರವಾಂಡಾ ಡೈರಿ' ಪ್ರಕಟವಾಗಲಿಲ್ಲ.
ಈ ಕಾಡಿನ ಬಗ್ಗೆ ಪುಸ್ತಕ ಬರೆಯುವಷ್ಟು ವಿಷಯಗಳಿವೆ. ಸಾವಿರಾರು ಫೋಟೋಗಳು ಕೆಮರಾದಲ್ಲಿವೆ. ಕಳೆದ ನಲವತ್ತೆಂಟು ಗಂಟೆಗಳ ಪೈಕಿ ಸುಮಾರು ಇಪ್ಪತ್ತು ತಾಸನ್ನು ರವಾಂಡಾ - ಕಾಂಗೋ ಅರಣ್ಯದಲ್ಲಿ ಕಳೆದಿದ್ದೇನೆ. ನನ್ನ ಮೊಬೈಲು, ಐಪ್ಯಾಡ್, ಲ್ಯಾಪ್‌ಟಾಪ್‌ಗಳೂ ಈ ಕಾಡಿನಲ್ಲಿ ನನ್ನೊಂದಿಗೆ ಸಲೀಸಾಗಿ ಕೆಲಸ ಮಾಡುತ್ತಿವೆ. ನೀವು ರವಾಂಡಾದ ಯಾವುದೇ ಮೂಲೆಗೆ ಹೋಗಿ, ಕಾಡಿನ ಮಧ್ಯದಲ್ಲಿರಿ, ಪರ್ವತದ ತುದಿಯಲ್ಲಿರಿ, ನಿಮ್ಮೊಂದಿಗೆ ಮೊಬೈಲ್, ತ್ರೀಜಿ ಸಂಪರ್ಕವೂ ಹಿಂದಕ್ಕೆ ಬರುತ್ತಿರುತ್ತದೆ. ಬೆಂಗಳೂರಿನಿಂದ ನಲವತ್ತು ಕಿಮೀ ದೂರ ನಡೆದರೆ ತ್ರೀಜಿ ಬಾಲ ಮುದುಡಿಕೊಳ್ಳುತ್ತದೆ. ಇನ್ನು ಮೊಬೈಲ್ ಸಂಪರ್ಕದ ಬಗ್ಗೆ ಮಾತಾಡುವುದೇ ಬೇಡ. ಒಳಮನೆಯಲ್ಲಿದ್ದಾಗ ಫೋನ್ ಬಂದರೆ ಬೀದಿಯಲ್ಲಿ ನಿಂತು ಕಿರುಚಿದರೆ ಕೇಳೋದು. ನಮ್ಮ ನೆಟ್‌ವರ್ಕ್ ಯಾವಾಗ ನೆಟ್ಟಗಾಗುತ್ತೋ ಗೊತ್ತಿಲ್ಲ. ಆದರೆ ಇಲ್ಲಿನ ಮೊಬೈಲ್, ಇಂಟರ್‌ನೆಟ್ ಸಂಪರ್ಕವಂತೂ ಸಿಂಪ್ಲಿ ಅದ್ಭುತ!
ರವಾಂಡಾದ ಕಿಗಾಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಾಗ ಇಪ್ಪತ್ತು ಸಾವಿರ ರವಾಂಡಾ ಶಿಲ್ಲಿಂಗ್ ಕೊಟ್ಟು ಲೋಕಲ್ ಸಿಮ್ ಕಾರ್ಡ್ ಹಾಕಿಕೊಂಡಿದ್ದೆ. ಇಪ್ಪತ್ತು ಸಾವಿರ ಶಿಲ್ಲಿಂಗ್ ಅಂದ್ರೆ 32 ಅಮೆರಿಕನ್ ಡಾಲರ್. ಅಂದ್ರೆ ಸುಮಾರು ಸಾವಿರದ ಒಂಬೈನೂರು ರುಪಾಯಿ. ಕಳೆದ ಐದು ದಿನಗಳಿಂದ ದಿನಕ್ಕೆ ಹತ್ತಾರು ಅಂತಾರಾಷ್ಟ್ರೀಯ ಕರೆಗಳನ್ನು ಮಾಡುತ್ತಿದ್ದೇನೆ. ಆದರೂ ಕರಗಿಲ್ಲ. ಇನ್ನೂ ಎರಡು ದಿನಗಳಿಗೆ ಸಾಕಾಗುವಷ್ಟು ಬ್ಯಾಲೆನ್ಸ್ ಇದೆ. ಮೊಬೈಲ್ ರೇಟು ಅಷ್ಟು ಚೀಪ್.
ರವಾಂಡಾ ಸೇರಿದಂತೆ ಆಫ್ರಿಕಾದ ಬಹುತೇಕ ದೇಶಗಳು ಮೊಬೈಲ್ ತಂತ್ರಜ್ಞಾನದಲ್ಲಿ ಅಸಾಧಾರಣ ಪ್ರಗತಿ ಸಾಧಿಸಿವೆ. ಸುಮಾರು ಹದಿನೈದು ವರ್ಷಗಳ ಹಿಂದೆ, ಮೈಕ್ರೋಸಾಫ್ಟ್ ಮುಖ್ಯಸ್ಥ ಬಿಲ್‌ಗೇಟ್ಸ್ ಬರೆದ “ THE ROAD AHEAD ’ ಎಂಬ ಪುಸ್ತಕ ಓದಿದ್ದೆ. ಆ ಪುಸ್ತಕದಲ್ಲಿನ ಕೆಲವು ಸಾಲುಗಳ ಸಾರಾಂಶ ಏನಂದ್ರೆ - ' ತೀರಾ ಹಿಂದುಳಿಯುವುದರಲ್ಲೂ ಸಾಕಷ್ಟು ಲಾಭವಿದೆ. ಹಿಂದುಳಿಯುವಿಕೆಯನ್ನು ಶಾಪ ಎಂದು ಭಾವಿಸಬೇಕಿಲ್ಲ. ಉದಾಹರಣೆಗೆ ಮುಂದುವರಿದ ದೇಶಗಳು ಟೆಲಿಫೋನ್ ಸಂಪರ್ಕಕ್ಕಾಗಿ, ಕಂಬಗಳಿಗಾಗಿ ಕೋಟಿ ಕೋಟಿ ಮರಗಳನ್ನು ಕಡಿದಿವೆ. ತಾಮ್ರದ ತಂತಿಗಳಿಗಾಗಿ (ಆಗ ಅದೇ ತಂತಿಗಳನ್ನು ಬಳಸುತ್ತಿದ್ದರು) ಅದೆಷ್ಟು ಭೂಮಿ ಬಗೆದರೋ ಗೊತ್ತಿಲ್ಲ. ಆದರೆ ಈಗ ಮೊಬೈಲ್ ತಂತ್ರಜ್ಞಾನ ಸಾಕಷ್ಟು ಮುಂದುವರಿದಿದೆ. ಈಗ ಹಿಂದುಳಿದ ರಾಷ್ಟ್ರಗಳು ತಂತ್ರಜ್ಞಾನವನ್ನು ಯಥಾವತ್ತಾಗಿ ಅಳವಡಿಸಿಕೊಳ್ಳಲು ಸಾಧ್ಯವಿದೆ. ಇದರಿಂದ ಒಂದೂ ಮರ ಕಡಿಯದೇ, ಒಂದಂಗುಲ ಭೂಮಿಯನ್ನು ಅಗೆಯದೇ, ತನ್ನೆಲ್ಲಾ ನೈಸರ್ಗಿಕ ಸಂಪತ್ತನ್ನು ಕಾಪಾಡಿಕೊಂಡು ಆಧುನಿಕ ತಂತ್ರಜ್ಞಾನದ ಪ್ರಯೋಜನವನ್ನು ಪಡೆಯುವುದು ಸಾಧ್ಯವಿದೆ '. ಬಿಲ್‌ಗೇಟ್ಸ್ ಅಂದು ಹೇಳಿದ ಮಾತು ಇಂದು ರವಾಂಡಾದಲ್ಲಿ ಅಕ್ಷರಶಃ ಕೃತಿರೂಪದಲ್ಲಿ ಸಾಕಾರವಾಗಿದೆ. ಎಲ್ಲೆಂದರಲ್ಲಿ ಬಿಕರಿಯಾಗುವ ಸಿಮ್‌ಕಾರ್ಡನ್ನು ಜತೆಯಲ್ಲಿಟ್ಟುಕೊಂಡರೆ ನೀವು ಸಹಾ ' ಹೊರಜಗತ್ತಿನ 'ಸಂಪರ್ಕದಲ್ಲಿ ಇದ್ದಂತೆ. ಡಾಟಾಕಾರ್ಡನ್ನು ಲ್ಯಾಪ್‌ಟಾಪ್‌ನಲ್ಲಿ ಚುಚ್ಚಿಕೊಂಡರೆ ಅಂಗೈಯಲ್ಲೇ ಪ್ರಪಂಚ! ಮೊಬೈಲ್ ಕ್ಷೇತ್ರದಲ್ಲಿ ರವಾಂಡಾ ನಮಗಿಂತ ಹೆಚ್ಚಿನ ಸಾಧ್ಯತೆ ಮಾಡಿದೆಯೇನೋ ಎನಿಸುತ್ತಿದೆ. ಎಂಥಾ ಕುಗ್ರಾಮಕ್ಕೆ ಹೋದರೂ ಅಲ್ಲಿ ಸಿಮ್ ಕಾರ್ಡ್ ಮಾರುವ ಹತ್ತಾರು ಅಂಗಡಿಗಳು, ಎರಡು ನಿಮಿಷದೊಳಗಾಗಿ activation ಶಾಸ್ತ್ರ ಮುಗಿಸಿ ಮಾತಿಗಿಳಿಯಬಹುದು. ' ನೆಟ್‌ವರ್ಕ್ ಹೋಯ್ತು, ಕ್ಷೀಣಿಸಿತು, ಕಡ್ಡಿ ಬರ್ತಾ ಇಲ್ಲ ' ಎಂಬ ಮಾತೇ ಇಲ್ಲ. ದೇಶದ ಯಾವ ಮೂಲೆಗೆ ಹೋದರೂ ' ಐದೂ ಕಡ್ಡಿ 'ಗಳು ಭದ್ರ.
' ಸಾರ್, ಕಾಡಿನಲ್ಲಿ ತೆಗೆದ ನನ್ನ ಫೋಟೊಗಳನ್ನು ದಯವಿಟ್ಟು ಮೇಲ್ ಮಾಡಿ, ಇದು ನನ್ನ ಇಮೇಲ್ ಐಡಿ, ತೆಗೊಳ್ಳಿ ' ಎಂದು ಆ ಆದಿವಾಸಿ ಫಾರೆಸ್ಟ್ ಗೈಡ್ ಹೇಳಿದ. ನನ್ನ ಐಫೋನಿನಲ್ಲಿ ಅವನೊಂದಿಗೆ ತೆಗೆದ ಫೋಟೊಗಳನ್ನು ಅಲ್ಲಿಯೇ ಅವನಿಗೆ ವರ್ಗಾಯಿಸಿದೆ. ಕ್ಷಣಾರ್ಧದಲ್ಲಿ ಅವು ಅವನ ಮೊಬೈಲ್‌ನಲ್ಲಿ ಹೋಗಿ ಕುಳಿತುಕೊಂಡಿದ್ದವು.
ಅವನ ಮುಖದಲ್ಲಿ ನಗು ಅರಳಿತು.

- ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.