ಪ್ರಧಾನ ಸುದ್ದಿ

ಸಾವಿನ ಬಾಗಿಲು ತಟ್ಟಿ ಬಂದವರು!

Published On :

ನವದೆಹಲಿ: ನಮ್ಮ ಮುಂದೆಯೇ ನೀರಿನಲ್ಲಿ ಜನರು ಕೊಚ್ಚಿ ಹೋದರು. ನೂರಾರು ಕುದುರೆಗಳೂ ತೇಲಿ ಹೋದವು. ನಮ್ಮ ಎಡಬದಿಯಿದ್ದ ಗುಡ್ಡ ಕುಸಿಯುತ್ತಿತ್ತು. ಬಲ ಬದಿಯಿಂದ ನದಿ ನೀರು ರಸ್ತೆಗೆ ಅಪ್ಪಳಿಸುತ್ತಿತ್ತು ಜತೆಗೆ ಧಾರಕಾರ ಮಳೆ. ನಾವು ಹಿಂದಿಗುರುತ್ತೇವೋ... ಇಲ್ಲವೋ ಎಂಬ ಆತಂಕವೂ ಇತ್ತು. ಆದರೆ, ದೇವರು ದೊಡ್ಡವನು...
- ಇವು ಸಾವಿನ ಕಣಿವೆಯಿಂದ ಪಾರಾಗಿ ಬಂದ ಹೊನ್ನಾವರದ ಜಗದೀಶ್ ಪಿ. ಮೇಸ್ತ ಅವರು ನಿಟ್ಟಿಸಿರು ಮಾತುಗಳು. ಇನ್ನೂ ಸಾವಿನಕಣಿವೆಯಲ್ಲಪ್ಪಳಿಸಿದ ರೌದ್ರ ಪ್ರವಾಹದ ಆಘಾತದ ಕರಿನೆರಳಿನಲ್ಲೇ ಇರುವ ಜಗದೀಶ್ ಇದು ತಮ್ಮ ಪುನರ್ಜನ್ಮ ಎನ್ನುತ್ತಾರೆ. ಹೊನ್ನಾವರದಿಂದ ತೆರಳಿದ್ದ ಒಂಭತ್ತು ಜನರ ತಂಡದ ಸದಸ್ಯರಲ್ಲೊಬ್ಬರಾದ ಜಗದೀಶ್, ಸಾವಿನ ಕಣಿವೆ ಕರಾಳತೆ ಮತ್ತು ಘೋರತೆಯನ್ನು 'ಕನ್ನಡಪ್ರಭ'ದೊಂದಿಗೆ ಹಂಚಿಕೊಂಡರು. ಕೇದಾರನಾಥದಿಂದ ಸೋಮ ಪ್ರಯಾಗದವರೆಗೆ ಕ್ರಮಿಸಿದ ಹಾದಿ, ಕಳೆದ ಕ್ಷಣಗಳು ರೋಮಾಂಚನಕಾರಿಯೂ ಹೌದು. ನರಕಯಾತನೆಯೂ ಹೌದೆನ್ನುತ್ತಾರೆ.

ರಸ್ತೆ ಕುಸಿಯಿತು: ಸುರಿಯುವ ಮಳೆಯಲ್ಲೇ ನಾವು ಕೇದಾರನಾಥದಿಂದ ಹೊರಟೆವು. ಅದಾಗಲೇ ಅಪಾಯದ ಮುನ್ಸೂಚನೆ ಸಿಕ್ಕಿತ್ತು. ಧಾರಾಕಾರ ಮಳೆ ಸುರಿಯುತ್ತಿತ್ತು. ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿತ್ತು. ತಡ ಮಾಡುವುದು ತರವಲ್ಲವೆಂದು ನಾವು ಕೇದಾರನಾಥದಿಂದ ನಡೆದೇ ಸಾಗಿದೆವು. ನಮ್ಮ ಅದೃಷ್ಟ ಚೆನ್ನಾಗಿತ್ತು. ನಾವು ದಾಟಿ ಮುಂದಡಿ ಇಟ್ಟ ನಂತರ ರಸ್ತೆ ಕುಸಿದು ಹೋಯ್ತು! ನಮ್ಮ ಹಿಂದೆ ಬರುತ್ತಿದ್ದವರು ಅಲ್ಲೇ ಉಳಿದರು. ಅಷ್ಟೊತ್ತಿಗಾಗಲೇ ರಸ್ತೆಯಲ್ಲಿ ಹಲವೆಡೆ ಗುಡ್ಡ ಕುಸಿದವು. ಹೀಗಾಗಿ ಸ್ಥಳೀಯರ ಸೂಚನೆಯಂತೆ ನಾವು ಕಡಿದಾದ ಹಾದಿಯಲ್ಲೇ ಹೆಜ್ಜೆ ಹಾಕಿದೆವು. ಅಲ್ಲೊಂದು ಜಲಪಾತ. ಅದರ ಮೇಲ್ಬಾಗದಿಂದಲೇ ಹೇಗೋ ದಾಟಿಕೊಂಡು ಮುಂದಡಿ ಇಟ್ಟೆವು. ಕೆಲವೇ ಕ್ಷಣಗಳಲ್ಲಿ ಜಲಪಾತಕ್ಕೆ ಹರಿದುಬರುತ್ತಿದ್ದ ನೀರಿನ ಪ್ರಮಾಣ ಏಕಾಏಕಿ ಏರಿಬಿಟ್ಟಿತ್ತು! ಇನ್ನು ಕೆಲವು ಕ್ಷಣಗಳು ತಡೆದಿದ್ದರೆ ನಾವು ಅಲ್ಲಿಯೇ ಉಳಿಯಬೇಕಿತ್ತೇನೋ? ಎಂದು ನೆನೆದು ನಿಟ್ಟುಸಿರು ಬಿಡುತ್ತಾರೆ ಜಗದೀಶ್.

ಕುದುರೆಗಳು ತೇಲಿ ಹೋದವು:
ಕೇದಾರನಾಥದಿಂದ ಗೌರಿಕುಂಡದವರೆಗೆ ನೆನೆಯುತ್ತಲೇ ಸಾಗಿದೆವು. ಅಷ್ಟರಲ್ಲಾಗಲೇ ಪ್ರವಾಹದ ತೀವ್ರತೆ ಹೆಚ್ಚಿತ್ತು. ಜನ ರಕ್ಷಣೆಗಾಗಿ ಪರದಾಡುತ್ತಿದ್ದರು. ನಾವು ನೋಡು ನೋಡುತ್ತಿದ್ದಂತೆ ಜನರು ನೀರಿನಲ್ಲಿ ಕೊಚ್ಚಿ ಹೋದರು. ಕುದುರೆಗಳೂ ತೇಲಿ ಹೋದವು! ಕೊಚ್ಚಿ ಹೋಗುತ್ತಿದ್ದ ಜನರ ಆಕ್ರಂದನಕ್ಕಿಂತ ಪ್ರವಾಹದ ಅಬ್ಬರವೇ ಹೆಚ್ಚಿತ್ತು. ನೀರು ಅಳೆತ್ತರಕ್ಕೆ ಚಿಮ್ಮುತ್ತಿತ್ತು.
ನಮ್ಮ ಮುಂದೆಯೇ ಕೊಚ್ಚಿ ಹೋಗುತ್ತಿದ್ದ, ರಕ್ಷಣೆಗಾಗಿ ಕೈಯೊಡ್ಡಿದವರಿಗೆ ನಾವು ಆಸರೆಯಾಗುವ ಸ್ಥಿತಿಯಲ್ಲಿರಲಿಲ್ಲ. ರಕ್ಷಿಸಲು ಮುಂದಾಗಿದ್ದರೆ ನಾವು ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದೆವು. ಆದರೆ, ರಕ್ಷಣೆಗೆ ಕೈ ಚಾಚಿದವರೆಲ್ಲ ಮತ್ತೊಂದು ಕ್ಷಣದಲ್ಲಿ ಜಲಸಮಾಧಿಯಾಗಿ ಕಣ್ಮರೆಯಾಗಿ ಬಿಟ್ಟಿದ್ದರು. ಆ ದೃಶ್ಯ ನೆನೆಪಿಸಿಕೊಂಡರೆ ಈಗಲೂ ನನಗೆ ಭಯವಾಗುತ್ತದೆ ಎನ್ನುತ್ತಾರೆ ಜಗದೀಶ್. ಎರಡು ದಿನಗಳ ಕಾಲ ಕುಡಿಯಲು ನೀರಿಲ್ಲದೇ, ತಿನ್ನಲೂ ಏನೂ ಇಲ್ಲದೆ ಸಂಕಟ ಪಟ್ಟಿದ್ದನ್ನು ನೆನಪಿಸಿಕೊಳ್ಳುತ್ತಾರವರು.

ಪ್ರವಾಹ ರೌದ್ರನರ್ತನ:
ನಾವು ತೆರಳಿದ್ದ  ವಾಹನವೂ ನೀರಿನಲ್ಲಿ ಕೊಚ್ಚಿ ಹೋಗಿತ್ತು. ಹೀಗಾಗಿ  ಉಟ್ಟ ಬಟ್ಟೆ ಬಿಟ್ಟರೆ ಬೇರೇನೂ ನಮ್ಮ ಬಳಿ ಇರಲಿಲ್ಲ. ಉಟ್ಟ ಬಟ್ಟೆಯಲ್ಲೇ ನಾವು ಐದಾರು ದಿನ ಕಾಲ ಕಳೆದಿದ್ದೇವೆ. ಗೌರಿಕುಂಡದಲ್ಲಿ ಉಳಿಯುವ ಪ್ರಯತ್ನ ಮಾಡಿದೆವು. ಆದರೆ, ಗೌರಿಕುಂಡದಲ್ಲಾಗಲೇ ಪ್ರವಾಹ  ರೌದ್ರಾರೂಪತಾಳಿದ್ದರಿಂದ ಅಲ್ಲಿ ಉಳಿಯುವ ಧೈರ್ಯ ಮಾಡಲಿಲ್ಲ. ಅಲ್ಲಿಂದ ಮುಂದೆ ಹಲವು ಕಿ.ಮೀ. ದೂರದ ಹಾದಿ ಸೆವೆಸಿದ ನಾವು ಸೋಮ ಪ್ರಯಾಗಕ್ಕೆ ತಲುಪಿದೆವು. ಅಲ್ಲಿಯೇ ಉಳಿದುಕೊಂಡೆವು. ಛತ್ರಿಯನ್ನು ಉಲ್ಟಾ ಹಿಡಿದು ಮಳೆ ನೀರು ಸಂಗ್ರಹಿಸಿ ಅದನ್ನೇ ಕುಡಿಯುತ್ತಿದ್ದೆವು. ಊಟಕ್ಕೇನೂ ಇರಲಿಲ್ಲ. ಹಾದಿಯಲ್ಲಿ ಸಿಕ್ಕವರು ಕೊಟ್ಟ ಬಿಸ್ಕತ್ತುಗಳಿಂದಲೇ ನಮ್ಮ ಹೊಟ್ಟೆಗಿಳಿಯುತ್ತಿತ್ತು. ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಸೈನಿಕರು ಕೊಟ್ಟ ಬಿಸ್ಕತ್ತು ಪ್ಯಾಕ್ಗಳು ನಮಗೆ ದಕ್ಕಿದ್ದು ಎರಡು ದಿನ ಹಸಿವಿನಿಂದ ಬಳಲಿ ಹೋದ ನಂತರವಷ್ಟೆ... ರಕ್ಷಣೆಯಲ್ಲಿ ತೊಡಗಿದ್ದ ಸೈನಿಕರು ನಮ್ಮನ್ನು ಕಡಿದಾದ ಬೆಟ್ಟದಿಂದ ಹಗ್ಗದ ಸಹಾಯದಿಂದ ದಾಟಿಸಿದರು. ಸೈನಿಕರು ಕೂಡ ಅಸಹಾಯಕರಾಗುವಂಥ ಪರಿಸ್ಥಿತಿ ಅಲ್ಲಿತ್ತು ಎನ್ನುತ್ತಾರೆ ಅವರು.
ಎಷ್ಟು ಜನರು ಕೊಚ್ಚಿ ಹೋಗಿರಬಹುದು ಎಂಬ ಪ್ರಶ್ನೆಗೆ ಜಗದೀಶ್ ಹೇಳಿದ್ದು- ಸಾವಿರಾರು ಜನರು ಕೊಚ್ಚಿ ಹೋಗಿರಬಹುದು. ನಾವು ನೋಡು ನೋಡುತ್ತಲೇ ಜನರು ಪ್ರವಾಹದಲ್ಲಿ ಕೊಚ್ಚಿ ಹೋಗಿ ಕಣ್ಮರೆಯಾಗಿದ್ದಾರೆ. ಅಲ್ಲೆಲ್ಲೋ ಜನರು ಮುಳುಗೇಳುತ್ತಿದ್ದುದು, ಹೆಣವಾಗಿ ತೇಲುತ್ತಿದ್ದುದು ಕಂಡಿದ್ದೇವೆ.
ಸೋಮ ಪ್ರಯಾಗದಿಂದ ಹರಿದ್ವಾರಕ್ಕೆ ಬಂದ ಜಗದೀಶ್ ಮತ್ತವರ ತಂಡದವರು ರೈಲು ಮೂಲಕ ದೆಹಲಿಗೆ ತಲುಪಿದ್ದಾರೆ. ಶನಿವಾರ ರೈಲಿನಲ್ಲಿ ಊರಿನತ್ತ ಪ್ರಯಾಣ ಬೆಳೆಸಲಿದ್ದಾರೆ. ಈ ಬಾರಿಯ ಯಾತ್ರೆ ನಮ್ಮ ಪಾಲಿಗೆ ದುಃಸ್ವಪ್ನವೂ ಹೌದು ಪುನರ್ಜನ್ಮವೂ ಹೌದು. ದೇವರ ದಯೆ ನಾವು ಬದುಕಿ ಹಿಂತಿರುಗುತ್ತಿದ್ದೇವೆ ಎನ್ನುತ್ತಾರವರು.

ಉತ್ತರಾಖಂಡದಲ್ಲಿನ ಜಲಪ್ರಳಯ ಸಂತ್ರಸ್ತರಿಗೆ ರಾಜ್ಯದಿಂದ ಅಗತ್ಯ ನೆರವು ನೀಡಲಾಗುವುದು.  ಮೈಸೂರಿನ ಡಿಎಎಫ್ಆರ್ಎಲ್, ಸಿಎಫ್ಟಿಆರ್ಐನಿಂದ ಅಗತ್ಯ ಆಹಾರ ಪೊಟ್ಟಣಗಳನ್ನು ಪೂರೈಸಲು ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಲಾಗುವುದು. ಯುದ್ಧ ಸಂದರ್ಭಗಳಲ್ಲಿ ಮಾತ್ರ ಪೂರೈಸುವ ಈ ಆಹಾರ ಪೊಟ್ಟಣಗಳನ್ನು ಇಂಥ ನೈಸರ್ಗಿಕ ವಿಕೋಪಗಳ ವೇಳೆಯಲ್ಲಿಯೂ ಬಳಸಿಕೊಳ್ಳಬಹುದು.
- ವಿ. ಶ್ರೀನಿವಾಸಪ್ರಸಾದ್, ಕಂದಾಯ ಸಚಿವ

 ರೇಣುಕಾಪ್ರಸಾದ್ ಹಾಡ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.