ಪ್ರಧಾನ ಸುದ್ದಿ

ನೋವೇ ಪ್ರವಾಹ

ನಮ್ಮ ಮುಂದೆಯೇ ಜನರು ಕೊಚ್ಚಿ ಹೋದರು. ಕುದುರೆಗಳೂ ತೇಲಿ ಹೋದವು. ನಮ್ಮ ಎಡಬದಿಯಿದ್ದ ಗುಡ್ಡ ಕುಸಿಯುತ್ತಿತ್ತು....

Published On :

ಉತ್ತರಾಖಂಡದ ಪ್ರವಾಹದ ನೋವಿನ ಕಥೆ ಇನ್ನೂ ಮುಗಿದಿಲ್ಲ. ಶುಕ್ರವಾರದ ವರದಿ ಪ್ರಕಾರ ಅಧಿಕೃತ ಸಾವಿನ ಸಂಖ್ಯೆ 500 ಮೀರಿದೆ. ಲೆಕ್ಕಕ್ಕೆ ಸಿಗದ ಲೆಕ್ಕ ಇನ್ನೂ ಇದೆ. ಇದರ ನಡುವೆಯೇ ಜಲಪ್ರಳಯಕ್ಕೆ ಸಿಕ್ಕಿ ಮರುಜನ್ಮ ಪಡೆದು ಬಂದವರ ಕಥೆ ಇಲ್ಲಿದೆ.

ಇದು ನಮ್ಮ ಪುನರ್ಜನ್ಮ!
ನವದೆಹಲಿ: ನಮ್ಮ ಮುಂದೆಯೇ ಜನರು ಕೊಚ್ಚಿ ಹೋದರು. ಕುದುರೆಗಳೂ ತೇಲಿ ಹೋದವು. ನಮ್ಮ ಎಡಬದಿಯಿದ್ದ ಗುಡ್ಡ ಕುಸಿಯುತ್ತಿತ್ತು. ಬಲಕ್ಕೆ ನದಿ ನೀರು ರಸ್ತೆಗೆ ಅಪ್ಪಳಿಸುತ್ತಿತ್ತು. ನಾವು ಹಿಂದಿರುಗುತ್ತೇವೋ? ಇಲ್ಲವೋ ಎಂಬ ಆತಂಕವೂ ಇತ್ತು. ಆದರೆ, ದೇವರು ದೊಡ್ಡವನು... ಎನ್ನುತ್ತಾರೆ ಸಾವಿನ ಕಣಿವೆಯಿಂದ ಪಾರಾಗಿ ಬಂದ ಹೊನ್ನಾವರದಿಂದ ತೆರಳಿದ್ದ 9 ಜನರ ಪೈಕಿ ಜಗದೀಶ್ ಮೇಸ್ತ. ಆಘಾತದ ಕರಿನೆರಳಿನಲ್ಲೇ ಇರುವ ಜಗದೀಶ್ ಇದು ತಮ್ಮ ಪುನರ್ಜನ್ಮ ಎನ್ನುತ್ತಾರೆ.
'ಮಳೆಯಲ್ಲೇ ಕೇದಾರನಾಥದಿಂದ ಹೊರಟೆವು. ನದಿ ಅಪಾಯಮಟ್ಟ ಮೀರಿತ್ತು. ನಡೆದೇ ಸಾಗಿದೆವು. ನಾವು ದಾಟಿ ಮುಂದಡಿ ಇಟ್ಟ ನಂತರ ರಸ್ತೆ ಕುಸಿಯಿತು. ನಮ್ಮ ಹಿಂದೆ ಬರುತ್ತಿದ್ದವರು ಅಲ್ಲೇ ಉಳಿದರು. ರಸ್ತೆಯಲ್ಲಿ ಹಲವೆಡೆ ಗುಡ್ಡ ಕುಸಿದವು. ಎದುರಾದ ಜಲಪಾತದ ಮೇಲ್ಬಾಗದಿಂದ ದಾಟಿದೆವು. ಕೆಲವೇ ಕ್ಷಣಗಳಲ್ಲಿ ಜಲಪಾತಕ್ಕೆ ನೀರಿನ ಪ್ರಮಾಣ ಏಕಾಏಕಿ ಏರಿತು! ಸ್ವಲ್ಪ ತಡ ಮಾಡಿದ್ದರೆ ನಾವು ಅಲ್ಲೇ ಉಳಿಯಬೇಕಿತ್ತೇನೋ?' ಎಂದು ನಿಟ್ಟುಸಿರು ಬಿಟ್ಟರು ಜಗದೀಶ್. ತಿನ್ನುವುದಕ್ಕೆ ಏನೂ ಇರಲಿಲ್ಲ. ಮಳೆ ನೀರನ್ನು ಕುಡಿದೆವು ಎಂದು ಆ ಕರಾಳ ನೆನಪನ್ನು ಬಿಚ್ಚಿಟ್ಟರು. ಜಗದೀಶ್ ಹಾಗೂ ಅವರ ತಂಡ ಶನಿವಾರ ವಾಪಸ್ಸಾಗಲಿದೆ.

ಅಸಹಾಯಕರಾಗಿದ್ದೆವು!
ಬೆಂಗಳೂರು: ನಮಗೆ ಹೊರಡುವ ಮನಸ್ಸಿರಲಿಲ್ಲ. ಬೇರೆಯವರು ಬರುತ್ತಾರೆ ಎಂಬ ಕಾರಣಕ್ಕೆ ಕೇದಾರನಾಥದಲ್ಲಿ ಉಳಿದುಕೊಂಡಿದ್ದ ಅತಿಥಿಗೃಹ ಬಿಟ್ಟು ಜೋಷಿಮಠಕ್ಕೆ ಹೊರಟೆವು. ನಾವು ಹೊರಟ 2 ಗಂಟೆಯಲ್ಲೇ ನಾವು ಉಳಿದುಕೊಂಡಿದ್ದ ಅತಿಥಿಗೃಹ ಪೂರ್ತಿ ಕೊಚ್ಚಿಕೊಂಡು ಹೋಯ್ತು.
ನಮ್ಮ ಕಣ್ಣೆದುರಲ್ಲೇ ಒಂದು ಸಿಖ್ ಕುಟುಂಬ ನೀರಿನಲ್ಲಿ ಕೊಚ್ಚಿಕೊಂಡು ಹೋಯ್ತು. ಈಗಲೂ ಆ ದೃಶ್ಯ ಕಣ್ಮುಂದೆ ಬರುತ್ತಿದೆ. ನಾವೆಲ್ಲ ಅಸಹಾಯಕರಾಗಿ ನೋಡುತ್ತಿದ್ದೆವು.
ಉತ್ತರಾಖಂಡದ ಮೇಘಸ್ಫೋ ಟದಿಂದ ಉಂಟಾದ ಅನಾಹುತಗಳನ್ನು ಕಣ್ಣಾರೆ ಕಂಡು, ಅದೆಲ್ಲದರಿಂದ ಪಾರಾಗಿ ಬಂದ ಬೆಂಗಳೂರಿನ ಎಂ.ಸಿ. ಕುಸುಮಾದೇವಿ ಅವರ ಮಾತುಗಳಿವು. ಉತ್ತರಾಖಂಡದ ಗಡ್ವಾಲ್ ಮಂಡಲ್ ವಿಕಾಸ್ ನಿಗಮದಿಂದ ಜೂನ್ 7ರಂದು ನಾವು ಬದರಿನಾಥ ಪ್ರವಾಸಕ್ಕೆ ಬೆಂಗಳೂರಿನಿಂದ ಹೊರಟಿದ್ದೆವು. ಮಳೆ, ಪ್ರವಾಹ ಆರಂಭವಾಗಿದ್ದು ಕೇದಾರನಾಥಕ್ಕೆ ಹೋದ ನಂತರ. ಅಲ್ಲಿ ಮಳೆ ಬರುವ ಸೂಚನೆ ಕಾಣುತ್ತಿತ್ತು. ಆದರೆ ಅದು ಇಷ್ಟು ದೊಡ್ಡ ಪ್ರಮಾಣದಲ್ಲಿ ಇರುತ್ತದೆ ಎಂಬ ಊಹೆ ಕೂಡ ನಮ್ಮಲ್ಲಿರಲಿಲ್ಲ.

ಹಿಂತಿರುಗಿದ್ದೇ ಸಂತಸ
ಬೆಂಗಳೂರು:
ಮನೆಗೆ ಹಿಂತಿರುಗಿ ಬರುವುದೇ ಇಲ್ಲ ಎಂದು ತಿಳಿದವರು ಹಿಂತಿರುಗಿದ್ದೇವೆ ಎನ್ನುವುದೇ ಸಂತೋಷ. ನಮ್ಮ ಅದೃಷ್ಟ ಎಲ್ಲಿವರೆಗೆ ಇತ್ತೆಂದರೆ ನಮ್ಮ ಹತ್ತಿರದಲ್ಲೇ ಕರ್ಣಪ್ರಯಾಗದಲ್ಲಿದ್ದ ಇನ್ನೊಂದು ಗೆಸ್ಟ್ ಹೌಸ್ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿತ್ತು. ಅಲ್ಲಿ ಅಳಿದುಳಿದವರನ್ನೆಲ್ಲಾ ಬೇರೆ ಕಡೆಗೆ ಸ್ಥಳಾಂತರಿಸಿದರು. ಆದರೆ ನಾವು ಉಳಿದುಕೊಂಡ ಗೆಸ್ಟ್‌ಹೌಸ್‌ಗೆ ಏನೂ ಆಗಲಿಲ್ಲ. ನಮ್ಮ ಗೆಸ್ಟ್‌ಹಾಸ್ ಕಲ್ಲಿನಿಂದ ನಿರ್ಮಾಣವಾದ ಕಾರಣ ಬಹಳ ಗಟ್ಟಿಯಾಗಿ ಉಳಿದಿತ್ತು. ಆದರೆ ವಿದ್ಯುತ್ ಸಂಪರ್ಕ ಇರಲಿಲ್ಲ. ದೆಹಲಿಗೆ ಬರುವುದು ತುಂಬಾ ಕಷ್ಟ ಆಯ್ತು. ಇದು ದೇವಿಕಾ ರಾಣಿ ಎಸ್ಟೇಟ್‌ನ ಶಾರದಾ ಅವರ ಮಾತು. ಶೋಭಾ ಕರಂದ್ಲಾಜೆ ಅವರು ಕೂಡ ನಮ್ಮ ಜತೆಗೇ ಇದ್ದರು. ನಾವು ಹಿಂದೆ ಬರುವ ದಾರಿಯಲ್ಲಿ ಪ್ರತೀ ಹತ್ತು ನಿಮಿಷಕ್ಕೆ ಮೆಸೇಜ್ ಮಾಡಿ ದಾರಿಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು.  ನಂತರ ದೇವ್ ಪ್ರಯಾಗ್‌ನಲ್ಲಿ ಬರುವಾಗ ನಾವು ಅವರು ಬೇರೆ ಬೇರೆಯಾದೆವು. ಅವರು ಮುಂದೆ ಬಂದರು. ಕರ್ಣ ಪ್ರಯಾಗದಿಂದ ರುದ್ರಪ್ರಯಾಗಕ್ಕೆ ಬರುವ ದಾರಿಗೆ ಸುಮಾರು 1 ಗಂಟೆ ಪ್ರಯಾಣ, 30 ಕಿ.ಮೀ ಅಂತರ ಅಷ್ಟೆ. ಆದರೆ ಅಲ್ಲಿ 8 ಗಂಟೆಗಳ ಕಾಲ ಟ್ರಾಫಿಕ್‌ನಲ್ಲೇ ನಿಂತಿದ್ದೆವು. ಸಾಲ್ಸೂರಿನಿಂದ ಗೌರಿಕುಂಡಕ್ಕೆ ಹೋಗುವಾಗ 9 ಗಂಟೆ ಟ್ರಾಫಿಕ್‌ನಲ್ಲೇ ನಿಂತಿದ್ದೆವು.

ನಾಳೆ ಹೇಗೋ ಗೊತ್ತಿಲ್ಲ
ಬೆಂಗಳೂರು:
ಸರ್ಕಾರದ ಯಾವುದೇ ಸೌಲಭ್ಯಗಳು ಇನ್ನೂ ನಮ್ಮನ್ನು ತಲುಪಿಲ್ಲ. ಸಂಗ್ರಹಿಸಿ ತಂದಿದ್ದ ಆಹಾರ ಪದಾರ್ಥಗಳೆಲ್ಲ ಖಾಲಿಯಾಗಿವೆ. ಇವತ್ತು ಉಡುಪಿ ಪೇಜಾವರ ಮಠದ ವತಿಯಿಂದ ಊಟ ಒದಗಿಸಲಾಗಿದೆ. ನಾಳೆ ಏನೋ ಗೊತ್ತಿಲ್ಲ. ಬದ್ರಿನಾಥದಲ್ಲೇ ಸಿಕ್ಕಿಬಿದ್ದಿರುವ ರಾಜ್ಯದ 125 ಪ್ರವಾಸಿಗರ ಗುಂಪಿನಲ್ಲಿರುವ ಶ್ಯಾಮಸುಂದರ ಜೋಷಿ ಅವರ ಮಾತಿದು. ಉತ್ತರಕರ್ನಾಟಕದಿಂದ ಹೋದ ಸುಮಾರು 125 ಜನ ಪ್ರವಾಸಿಗರು ಇನ್ನೂ ಕೂಡ ಬದರಿಯಲ್ಲೇ ಉಳಿದುಕೊಂಡಿದ್ದೇವೆ. ನಮಗೆ ಪ್ರವಾಹದ ಸುಳಿಯಿಂದ ಇನ್ನೂ ಕೂಡ ಹೊರ ಬರಲು ಆಗಲೇ ಇಲ್ಲ. 5 ದಿನಗಳಿಂದ ವಿದ್ಯುತ್ ಇಲ್ಲ. ತಿನ್ನಲು ಸರಿಯಾದ ಆಹಾರವಿಲ್ಲ. ನಮ್ಮ ಗುಂಪಿನಲ್ಲಿರುವ ಎಲ್ಲರೂ ಕೂಡ ನಿವೃತ್ತಿ ವಯಸ್ಸಿನಲ್ಲಿರುವವರು. ಬದರಿಯಿಂದ ಹೊರಡಬೇಕು ಎನ್ನುವಾಗ ಈ ಪರಿಸ್ಥಿತಿ ಉಂಟಾಗಿದೆ. ನಾವು ಧರ್ಮಶಾಲಾ ಗೆಸ್ಟ್ ಹೌಸ್‌ನಲ್ಲಿದ್ದೇವೆ. ನಮ್ಮ ಹತ್ತಿರದಲ್ಲೇ ಗೋವಿಂದ ಗೆಸ್ಟ್‌ಹೌಸ್‌ನಲ್ಲೂ ಉತ್ತರಕರ್ನಾಟಕದ ಕನ್ನಡಿಗರು ಇದ್ದಾರೆ. ಸಚಿವ ಸಂತೋಷ್‌ಲಾಡ್ ಸ್ವತಃ ಬಂದು ನಮ್ಮನ್ನು ನಾಳೆ ಕರೆದುಕೊಂಡು ಹೋಗುವ ಭರವಸೆ ನೀಡಿದ್ದಾರೆ.

- ಅನುರಾಧಾ ತೆಳ್ಳಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.